ನ್ಯಾಯಸಭೆಯ ಮುಂದೆ ಪೇತ್ರ ಮತ್ತು ಯೋಹಾನ
4
ಪೇತ್ರ ಮತ್ತು ಯೋಹಾನ ಜನರೊಂದಿಗೆ ಮಾತಾಡುತ್ತಿದ್ದಾಗ, ಕೆಲವು ಜನರು ಅವರ ಬಳಿಗೆ ಬಂದರು. ಅಲ್ಲಿ ಕೆಲವು ಯೆಹೂದ್ಯ ಯಾಜಕರಿದ್ದರು. ಕೆಲವು ಸದ್ದುಕಾಯರಿದ್ದರು ಮತ್ತು ದೇವಾಲಯ ಕಾಯುವ ಸಿಪಾಯಿಗಳ ಅಧಿಪತಿಯೂ ಇದ್ದನು. ಈ ಇಬ್ಬರು ಅಪೊಸ್ತಲರು ಜನರಿಗೆ ಉಪದೇಶ ಮಾಡುತ್ತಿರುವುದನ್ನು ಕಂಡು ಅವರು ಸಿಟ್ಟುಗೊಂಡರು. ಯೇಸುವಿನ ಶಕ್ತಿಯ ಮೂಲಕವಾಗಿ ಜನರು ಪುನರುತ್ಥಾನ ಹೊಂದುತ್ತಾರೆ ಎಂದು ಪೇತ್ರ ಮತ್ತು ಯೋಹಾನ ಬೋಧಿಸುತ್ತಿದ್ದರು. ಯೆಹೂದ್ಯ ನಾಯಕರು ಪೇತ್ರ ಮತ್ತು ಯೋಹಾನರನ್ನು ಬಂಧಿಸಿ ಸೆರೆಮನೆಗೆ ಹಾಕಿದರು. ಆಗಲೇ ಕತ್ತಲಾಗಿತ್ತು. ಆದ್ದರಿಂದ ಅವರು ಪೇತ್ರ ಮತ್ತು ಯೋಹಾನರನ್ನು ಮರುದಿನದವರೆಗೆ ಸೆರೆಯಲ್ಲಿಟ್ಟರು. ಆದರೆ ಪೇತ್ರ ಮತ್ತು ಯೋಹಾನರ ಬೋಧನೆಯನ್ನು ಕೇಳಿ ಅನೇಕರು ನಂಬಿಕೊಂಡರು. ಆಗ ಆ ಸಮುದಾಯದಲ್ಲಿ ವಿಶ್ವಾಸಿಗಳ ಸಂಖ್ಯೆ ಐದು ಸಾವಿರಕ್ಕೆ ಏರಿತ್ತು.
ಮರುದಿನ ಯೆಹೂದ್ಯನಾಯಕರು, ಯೆಹೂದ್ಯರ ಹಿರಿಯನಾಯಕರು ಮತ್ತು ಧರ್ಮೋಪದೇಶಕರು ಜೆರುಸಲೇಮಿನಲ್ಲಿ ಸಭೆಸೇರಿದರು. ಅಲ್ಲಿ ಅನ್ನನು (ಪ್ರಧಾನ ಯಾಜಕ), ಕಾಯಫ, ಯೋಹಾನ ಮತ್ತು ಅಲೆಕ್ಸಾಂಡರ್ ಇದ್ದರು. ಪ್ರಧಾನಯಾಜಕನ ಕುಟುಂಬಕ್ಕೆ ಸೇರಿದ ಪ್ರತಿಯೊಬ್ಬರು ಅಲ್ಲಿದ್ದರು. ಅವರು ಪೇತ್ರ ಯೋಹಾನರನ್ನು ಅಲ್ಲಿದ್ದ ಎಲ್ಲಾ ಜನರ ಮುಂದೆ ನಿಲ್ಲಿಸಿದರು. ಯೆಹೂದ್ಯನಾಯಕರು ಅವರನ್ನು “ನೀವು ಈ ಕುಂಟನನ್ನು ಹೇಗೆ ಗುಣಪಡಿಸಿದಿರಿ? ನೀವು ಯಾವ ಶಕ್ತಿಯನ್ನು ಉಪಯೋಗಿಸಿದಿರಿ? ಇದನ್ನು ಯಾರ ಅಧಿಕಾರದಿಂದ ಮಾಡಿದಿರಿ?” ಎಂದು ಅನೇಕ ಸಲ ಕೇಳಿದರು.
ಆಗ ಪೇತ್ರನು ಪವಿತ್ರಾತ್ಮಭರಿತನಾದನು. ಅವನು ಅವರಿಗೆ, “ಜನನಾಯಕರೇ ಮತ್ತು ಹಿರಿಯನಾಯಕರೇ, ಈ ಕುಂಟನಿಗಾದ ಒಳ್ಳೆಯದರ ಬಗ್ಗೆ ನೀವು ನಮ್ಮನ್ನು ಕೇಳುತ್ತಿದ್ದೀರಿ. 10 ನಜರೇತಿನ ಯೇಸು ಕ್ರಿಸ್ತನ ಹೆಸರಿನಿಂದ ಈ ಮನುಷ್ಯನಿಗೆ ಗುಣವಾಯಿತೆಂಬುದನ್ನು ನೀವು ಮತ್ತು ಯೆಹೂದ್ಯರೆಲ್ಲರು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ! ನೀವು ಯೇಸುವನ್ನು ಶಿಲುಬೆಗೇರಿಸಿದಿರಿ. ದೇವರು ಆತನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು. ಈ ಮನುಷ್ಯನು ಕುಂಟನಾಗಿದ್ದನು, ಆದರೆ ಈಗ ಇವನು ಗುಣಹೊಂದಿದ್ದಾನೆ ಮತ್ತು ಯೇಸುವಿನ ಹೆಸರಿನಿಂದ ನಿಮ್ಮ ಮುಂದೆ ನಿಂತುಕೊಳ್ಳಲು ಶಕ್ತನಾಗಿದ್ದಾನೆ!
11 ‘ಕಟ್ಟುವವರಾದ ನೀವು ಬೇಡವೆಂದು ಬಿಟ್ಟ ಕಲ್ಲೇ (ಯೇಸು)
ಮುಖ್ಯವಾದ ಮೂಲೆಗಲ್ಲಾಯಿತು.’ ಕೀರ್ತನೆ 118:22
12 ರಕ್ಷಣೆಯು ಯೇಸುವಿನಿಂದಲ್ಲದೆ ಬೇರೆ ಯಾರಲ್ಲಿಯೂ ಸಿಕ್ಕುವುದಿಲ್ಲ. ಆತನ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರೊಳಗೆ ಕೊಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವುದಿಲ್ಲ” ಎಂದು ಹೇಳಿದನು.
13 ಪೇತ್ರ ಮತ್ತು ಯೋಹಾನರಿಗೆ ವಿಶೇಷವಾದ ಯಾವ ತರಬೇತಿಯಾಗಲಿ ವಿದ್ಯೆಯಾಗಲಿ ಇಲ್ಲವೆಂಬುದು ಯೆಹೂದ್ಯನಾಯಕರಿಗೆ ಗೊತ್ತಿತ್ತು. ಅಲ್ಲದೆ ಅವರು ಹೆದರದೆ ಮಾತಾಡುವುದನ್ನು ಸಹ ನಾಯಕರು ಗಮನಿಸಿದರು. ಆದ್ದರಿಂದ ಆ ನಾಯಕರಿಗೆ ಬಹಳ ಆಶ್ಚರ್ಯವಾಯಿತು. ಪೇತ್ರ ಮತ್ತು ಯೋಹಾನರು ಯೋಸುವಿನೊಂದಿಗೆ ಇದ್ದರೆಂಬುದನ್ನು ಅವರು ಆ ಬಳಿಕ ಗ್ರಹಿಸಿಕೊಂಡರು. 14 ಈ ಇಬ್ಬರು ಅಪೊಸ್ತಲರ ಪಕ್ಕದಲ್ಲೇ ನಿಂತುಕೊಂಡಿದ್ದ ಕುಂಟನನ್ನು ಅವರು ನೋಡಿದರು. ಅವನಿಗೆ ಗುಣವಾಗಿರುವುದನ್ನು ಅವರು ಕಂಡರು. ಆದ್ದರಿಂದ ಅಪೊಸ್ತಲರ ಮಾತಿಗೆ ವಿರುದ್ಧವಾಗಿ ಅವರೇನೂ ಹೇಳಲಾಗಲಿಲ್ಲ.
15 ಯೆಹೂದ್ಯನಾಯಕರು ಅಪೊಸ್ತಲರನ್ನು ಸಭೆಯಿಂದ ಹೊರಗೆ ಕಳುಹಿಸಿ, 16 “ಇವರಿಗೆ ನಾವೇನು ಮಾಡೋಣ? ಇವರು ದೊಡ್ಡ ಅದ್ಭುತಕಾರ್ಯ ಮಾಡಿರುವುದು ಜೆರುಸಲೇಮಿನಲ್ಲಿರುವ ಪ್ರತಿಯೊಬ್ಬರಿಗೂ ಗೊತ್ತಿದೆ. ಈ ಅದ್ಭುತಕಾರ್ಯವು ಸ್ಪಷ್ಟವಾಗಿರುವುದರಿಂದ ಅದನ್ನು ಅಸತ್ಯವೆಂದು ಹೇಳಲಾಗದು. 17 ಆದರೆ ಈ ಮನುಷ್ಯನ (ಯೇಸುವಿನ) ಬಗ್ಗೆ ಜನರಿಗೆ ಹೇಳದಂತೆ ನಾವು ಅವರನ್ನು ಬೆದರಿಸಬೇಕು. ಆಗ ಈ ಸಮಾಚಾರ ಜನರ ಮಧ್ಯದಲ್ಲಿ ಹರಡುವುದಿಲ್ಲ” ಎಂದು ಅವರು ಮಾತಾಡಿಕೊಂಡರು.
18 ಆದ್ದರಿಂದ ಯೆಹೂದ್ಯನಾಯಕರು ಪೇತ್ರ ಮತ್ತು ಯೋಹಾನರನ್ನು ಮತ್ತೆ ಒಳಗೆ ಕರೆಸಿ, ಯೇಸುವಿನ ಹೆಸರಿನಲ್ಲಿ ಏನೂ ಹೇಳಬಾರದೆಂದೂ, ಏನೂ ಬೋಧಿಸಬಾರದೆಂದೂ ಎಚ್ಚರಿಕೆ ಕೊಟ್ಟರು. 19 ಆದರೆ ಪೇತ್ರ ಮತ್ತು ಯೋಹಾನ ಅವರಿಗೆ, “ನಾವು ನಿಮಗೆ ವಿಧೇಯರಾಗಬೇಕೇ ಅಥವಾ ದೇವರಿಗೆ ವಿಧೇಯರಾಗಬೇಕೇ? ಇದರಲ್ಲಿ ಯಾವುದು ದೇವರಿಗೆ ಅಪೇಕ್ಷೆಯಾದದು? ನೀವೇ ಹೇಳಿ. 20 ನಾವಂತೂ ಸುಮ್ಮನಿರಲಾರೆವು. ನಾವು ಕಂಡ ಮತ್ತು ಕೇಳಿದ ಸಂಗತಿಗಳ ಬಗ್ಗೆ ಜನರಿಗೆ ಹೇಳಲೇಬೇಕು” ಎಂದು ಉತ್ತರಕೊಟ್ಟರು.
21-22 ಯೆಹೂದ್ಯನಾಯಕರಿಗೆ ಅಪೊಸ್ತಲರನ್ನು ದಂಡಿಸಲು ಯಾವ ಮಾರ್ಗವೂ ತೋಚಲಿಲ್ಲ, ಯಾಕೆಂದರೆ ಸಂಭವಿಸಿದ ಕಾರ್ಯಕ್ಕಾಗಿ ಜನರೆಲ್ಲರೂ ದೇವರನ್ನು ಕೊಂಡಾಡುತ್ತಿದ್ದರು. (ಈ ಸೂಚಕಕಾರ್ಯದಿಂದ ಗುಣಹೊಂದಿದ ವ್ಯಕ್ತಿಗೆ ನಲವತ್ತು ವರ್ಷಕ್ಕಿಂತಲೂ ಹೆಚ್ಚು ವಯಸ್ಸಾಗಿತ್ತು.) ಆದ್ದರಿಂದ ಯೆಹೂದ್ಯನಾಯಕರು ಅಪೊಸ್ತಲರನ್ನು ಮತ್ತೆ ಎಚ್ಚರಿಸಿ ಕಳುಹಿಸಿಬಿಟ್ಟರು.
ಪೇತ್ರ ಮತ್ತು ಯೋಹಾನರು ಹಿಂತಿರುಗಿದರು
23 ಪೇತ್ರ ಮತ್ತು ಯೋಹಾನರು ಯೆಹೂದ್ಯನಾಯಕರ ಸಭೆಯಿಂದ ಹೊರಟು ತಮ್ಮ ಸಮುದಾಯಕ್ಕೆ ಹೋದರು. ಮಹಾಯಾಜಕರು ಮತ್ತು ಯೆಹೂದ್ಯರ ಹಿರಿಯ ನಾಯಕರು ತಮಗೆ ಹೇಳಿದ ಪ್ರತಿಯೊಂದನ್ನು ಅವರು ತಮ್ಮ ಸಮುದಾಯದವರಿಗೆ ತಿಳಿಸಿದರು. 24 ಇದನ್ನು ಕೇಳಿದಾಗ ವಿಶ್ವಾಸಿಗಳು ಏಕಮನಸ್ಸಿನಿಂದ ದೇವರಲ್ಲಿ ಪ್ರಾರ್ಥಿಸಿದರು: ಅವರೆಲ್ಲರಲ್ಲಿ ಒಂದೇ ಮನಸ್ಸಿತ್ತು. “ಒಡೆಯನೇ, ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಮತ್ತು ಲೋಕದಲ್ಲಿರುವ ಪ್ರತಿಯೊಂದನ್ನೂ ನಿರ್ಮಿಸಿದಾತನು ನೀನೇ. 25 ನಮ್ಮ ಪಿತೃವಾದ ದಾವೀದನು ನಿನ್ನ ಸೇವಕನಾಗಿದ್ದನು. ಅವನು ಪವಿತ್ರಾತ್ಮನ ಸಹಾಯದಿಂದ ಈ ಮಾತುಗಳನ್ನು ಬರೆದನು:
‘ಜನಾಂಗಗಳು ಕೂಗಾಡುವುದೇಕೆ?
ಈ ಲೋಕದ ಜನರು ದೇವರಿಗೆ ವಿರೋಧವಾಗಿ ಕಾರ್ಯಗಳನ್ನು ಯೋಚಿಸುತ್ತಿರುವುದೇಕೆ? ಇದರಿಂದ ಪ್ರಯೋಜನವೇನೂ ಇಲ್ಲ!
26 ‘ಭೂಲೋಕದ ರಾಜರು ಹೋರಾಡಲು ಸಿದ್ಧರಾಗಿದ್ದಾರೆ;
ಪ್ರಭುವಿಗೂ ಆತನ ಕ್ರಿಸ್ತನಿಗೂ ವಿರೋಧವಾಗಿ ಅಧಿಪತಿಗಳೆಲ್ಲರೂ ಒಟ್ಟಾಗಿ ಸೇರಿದ್ದಾರೆ.’ ಕೀರ್ತನೆ 2:1-2
27 ಹೆರೋದರಾಜನು, ಪೊಂತಿಯಸ್ ಪಿಲಾತನು, ಜನಾಂಗಗಳು ಮತ್ತು ಯೆಹೂದ್ಯರು ಈ ಪಟ್ಟಣದಲ್ಲಿ ಒಟ್ಟಾಗಿ ಸೇರಿಕೊಂಡು ಯೇಸುವನ್ನು ವಿರೋಧಿಸಿದಾಗ ಈ ಸಂಗತಿಗಳು ನಿಜವಾಗಿಯೂ ನೆರವೇರಿದವು. ಯೇಸು ನಿನ್ನ ಪವಿತ್ರ ಸೇವಕನಾಗಿದ್ದಾನೆ. ನೀನು ಆತನನ್ನು ಅಭಿಷೇಕಿಸಿದೆ. 28 ಯೇಸುವಿನ ವಿರುದ್ಧ ಒಟ್ಟಾಗಿ ಬಂದ ಈ ಜನರು ನಿನ್ನ ಯೋಜನೆ ನೆರವೇರುವಂತೆ ಮಾಡಿದರು. ನಿನ್ನ ಶಕ್ತಿಯಿಂದಲೂ ನಿನ್ನ ಚಿತ್ತದಿಂದಲೂ ಇದು ನೆರವೇರಿತು. 29 ಪ್ರಭುವೇ, ಈಗ ಅವರು ಹೇಳುತ್ತಿರುವುದನ್ನು ಕೇಳು. ಅವರು ನಮ್ಮನ್ನು ಹೆದರಿಸಲು ಪ್ರಯತ್ನಿಸುತ್ತಿದ್ದಾರೆ! ಪ್ರಭುವೇ ನಾವು ನಿನ್ನ ಸೇವಕರು. ನಿನ್ನ ವಾಕ್ಯವನ್ನು ಭಯವಿಲ್ಲದೆ ಹೇಳಲು ನೀನೇ ಸಹಾಯ ಮಾಡು. 30 ನಿನ್ನ ಕೈಚಾಚಿ ಯೇಸುವಿನ ಹೆಸರಿನ ಮೂಲಕ ರೋಗಿಗಳನ್ನು ಗುಣಪಡಿಸು; ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡು” ಎಂದು ಅವರು ಪ್ರಾರ್ಥಿಸಿದರು.
31 ಹೀಗೆ ವಿಶ್ವಾಸಿಗಳು ಪ್ರಾರ್ಥಿಸುತ್ತಿದ್ದಾಗ, ಅವರು ಸಭೆ ಸೇರಿದ್ದ ಸ್ಥಳವು ನಡುಗಿತು. ಅವರೆಲ್ಲರೂ ಪವಿತ್ರಾತ್ಮಭರಿತರಾದರು ಮತ್ತು ದೇವರ ವಾಕ್ಯವನ್ನು ಭಯವಿಲ್ಲದೆ ಪ್ರಕಟಿಸಿದರು.
ವಿಶ್ವಾಸಿಗಳ ಅನ್ಯೋನ್ಯ ಜೀವನ
32 ವಿಶ್ವಾಸಿಗಳ ಹೃದಯವೂ ಪ್ರಾಣವೂ ಒಂದೇ ಆಗಿತ್ತು. ಸಮುದಾಯದಲ್ಲಿದ್ದ ಯಾವನಾಗಲಿ ತನ್ನಲ್ಲಿರುವವುಗಳನ್ನು ತನ್ನದೆಂದು ಹೇಳುತ್ತಿರಲಿಲ್ಲ. ಬದಲಾಗಿ, ಅವರು ಪ್ರತಿಯೊಂದನ್ನು ಹಂಚಿಕೊಳ್ಳುತ್ತಿದ್ದರು. 33 ಪ್ರಭುವಾದ ಯೇಸು ನಿಜವಾಗಿಯೂ ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದನೆಂದು ಅಪೊಸ್ತಲರು ಬಹುಬಲವಾಗಿ ಜನರಿಗೆ ಹೇಳುತ್ತಿದ್ದರು. ದೇವರು ವಿಶ್ವಾಸಿಗಳೆಲ್ಲರನ್ನು ಬಹಳವಾಗಿ ಆಶೀರ್ವದಿಸಿದನು. 34 ಅವರೆಲ್ಲರ ಅವಶ್ಯಕತೆಗಳನ್ನು ಪೂರೈಸಲಾಗುತ್ತಿತ್ತು. ಜಮೀನುಗಳನ್ನು ಮತ್ತು ಮನೆಗಳನ್ನು ಹೊಂದಿದ್ದ ಪ್ರತಿಯೊಬ್ಬರು ಅವುಗಳನ್ನು ಮಾರಿ, 35 ಬಂದ ಹಣವನ್ನು ಅಪೊಸ್ತಲರ ಪಾದಗಳ ಬಳಿ ಇಡುತ್ತಿದ್ದರು. ಬಳಿಕ ಅದನ್ನು ಪ್ರತಿಯೊಬ್ಬರಿಗೂ ಅವರವರ ಅಗತ್ಯತೆಗಳಿಗನುಸಾರವಾಗಿ ಹಂಚಲಾಗುತ್ತಿತ್ತು.
36 ಆ ವಿಶ್ವಾಸಿಗಳಲ್ಲಿ ಯೋಸೇಫ ಎಂಬವನೂ ಇದ್ದನು. ಅಪೊಸ್ತಲರು ಅವನನ್ನು ಬಾರ್ನಬ ಎಂದು ಕರೆಯುತ್ತಿದ್ದರು. (ಬಾರ್ನಬ ಅಂದರೆ “ಧೈರ್ಯದಾಯಕ.”) ಸೈಪ್ರಸ್‌ನಲ್ಲಿ ಹುಟ್ಟಿದ ಇವನು ಲೇವಿಯನಾಗಿದ್ದನು.* 37 ಯೋಸೇಫನಿಗೆ ಒಂದು ಹೊಲವಿತ್ತು. ಅವನು ಅದನ್ನು ಮಾರಿ ಬಂದ ಹಣವನ್ನು ಅಪೊಸ್ತಲರ ಪಾದಗಳ ಬಳಿ ಇಟ್ಟನು.

* 4:36: ಲೇವಿಯ ಲೇವಿ ಕುಲದವನು. ಈ ಕುಲದವರು ದೇವಾಲಯದಲ್ಲಿ ಯಾಜಕರಿಗೆ ಸಹಾಯಕರಾಗಿದ್ದರು.