ಯಾಜಕರ ಮತ್ತು ಲೇವಿಯರ ಜೀವನಾಧಾರ
18
“ಇಸ್ರೇಲ್ ದೇಶದೊಳಗೆ ಲೇವಿಕುಲದವರಿಗೆ ಸ್ವಾಸ್ತ್ಯವು ಇರುವುದಿಲ್ಲ. ಅವರು ಯಾಜಕರಾಗಿ ಸೇವೆ ಸಲ್ಲಿಸುವರು. ದೇವರಿಗೆ ಸಮರ್ಪಿಸಿದ ಕಾಣಿಕೆಗಳಲ್ಲಿ ಬೆಂಕಿಯಲ್ಲಿ ಬೇಯಿಸಿದ ಯಜ್ಞಶೇಷವೇ ಅವರ ಆಹಾರ. ಬೇರೆ ಕುಲದವರಂತೆ ಅವರಿಗೆ ಭೂಮಿ ದೊರೆಯುವುದಿಲ್ಲ. ದೇವರು ಹೇಳಿದ ಪ್ರಕಾರ ಅವರ ಪಾಲು ಯೆಹೋವನೇ.
“ನೀವು ಯಜ್ಞಕ್ಕಾಗಿ ಒಂದು ದನವನ್ನಾಗಲಿ ಕುರಿಯನ್ನಾಗಲಿ ಕೊಯ್ದಾಗ ಯಾಜಕರಿಗೆ ಭುಜವನ್ನು, ಎರಡು ದವಡೆಗಳನ್ನು ಮತ್ತು ಉದರ ಭಾಗವನ್ನು ಕೊಡಬೇಕು. ನಿಮ್ಮ ಯಾಜಕರಿಗೆ ನಿಮ್ಮ ಬೆಳೆಯ ಪ್ರಥಮ ಫಲವನ್ನು ಕೊಡಬೇಕು. ನಿಮ್ಮ ಧಾನ್ಯಗಳ ಪ್ರಥಮ ಫಲವನ್ನು, ದ್ರಾಕ್ಷಾರಸದಲ್ಲಿ, ಎಣ್ಣೆಯಲ್ಲಿ ಮತ್ತು ನಿಮ್ಮ ಉಣ್ಣೆಯಲ್ಲಿ ಪ್ರಥಮ ಫಲವನ್ನು ಕೊಡಬೇಕು. ಯಾಕೆಂದರೆ ನಿಮ್ಮ ದೇವರಾದ ಯೆಹೋವನು ಇಸ್ರೇಲ್ ಕುಲದವರಿಂದ ಲೇವಿಕುಲದವರನ್ನು ನಿರಂತರವಾಗಿ ಆತನ ಸೇವೆಮಾಡುವುದಕ್ಕೆ ಆರಿಸಿಕೊಂಡಿರುತ್ತಾನೆ.
“ಪ್ರತಿಯೊಬ್ಬ ಲೇವಿಯನಿಗೂ ದೇವಾಲಯದಲ್ಲಿ ಸೇವೆಮಾಡಲು ಒಂದು ನಿರ್ಧಿಷ್ಟ ಸಮಯವನ್ನು ಗೊತ್ತುಪಡಿಸಲಾಗಿದೆ. ಆದರೆ ಬೇರೆ ಸಮಯದಲ್ಲಿಯೂ ಸಹ ಅವನು ಅಲ್ಲಿ ಸೇವೆಮಾಡಲು ಇಷ್ಟಪಟ್ಟರೆ, ಅವನು ತನಗೆ ಇಷ್ಟಬಂದ ಸಮಯದಲ್ಲಿ ಸೇವೆ ಮಾಡಬಹುದು. ಇಸ್ರೇಲಿನ ಯಾವದೇ ಭಾಗದಲ್ಲಿರುವ ಯಾವುದೇ ಊರಿನಲ್ಲಿರುವ ಲೇವಿಯನು ತನ್ನ ಸ್ವಂತ ಸ್ಥಳವನ್ನು ಬಿಟ್ಟು ಯೆಹೋವನ ವಿಶೇಷ ಸ್ಥಳಕ್ಕೆ ಬರಬಹುದು. ಅವನು ತನಗೆ ಇಷ್ಟಬಂದ ಯಾವುದೇ ಸಮಯದಲ್ಲಿ ಬೇಕಾದರೂ ಹೀಗೆ ಮಾಡಬಹುದು. ಯೆಹೋವನ ಸನ್ನಿಧಿಯಲ್ಲಿ ಸೇವೆಮಾಡತ್ತಿರುವ ತನ್ನ ಎಲ್ಲಾ ಸಹೋದರರಾದ ಲೇವಿಯರಂತೆ ಈ ಲೇವಿಯನು ಸಹ ತನ್ನ ದೇವರಾದ ಯೆಹೋವನ ಹೆಸರಿನಲ್ಲಿ ಸೇವೆಮಾಡಬಹುದು. ಆ ಲೇವಿಯನು ಇತರ ಲೇವಿಯರೊಂದಿಗೆ ಸಮಾನ ಪಾಲನ್ನು ಹೊಂದುವನು. ಇದಲ್ಲದೆ ಅವನ ಕುಟುಂಬದವರು ಯಥಾಪ್ರಕಾರ ತಮಗೆ ಬರತಕ್ಕ ಪಾಲನ್ನೂ ಹೊಂದುವರು.
ಇತರ ಜನಾಂಗಗಳವರಂತೆ ಇಸ್ರೇಲರು ಜೀವಿಸಬಾರದು
“ನೀವು ನಿಮ್ಮ ವಾಗ್ದತ್ತ ದೇಶಕ್ಕೆ ಬಂದಾಗ ಸುತ್ತಮುತ್ತಲಿನ ಜನರು ನಡೆಯುವ ರೀತಿಯಲ್ಲಿ ನೀವು ನಡೆಯಬಾರದು. ಅವರ ಅಸಹ್ಯವಾದ ಪದ್ದತಿಗಳನ್ನು ಅನುಸರಿಸಬಾರದು. 10 ನಿಮ್ಮ ಗಂಡುಮಕ್ಕಳನ್ನಾಗಲಿ ಹೆಣ್ಣಮಕ್ಕಳನ್ನಾಗಲಿ ನಿಮ್ಮ ಯಜ್ಞವೇದಿಕೆಯ ಬೆಂಕಿಯ ಮೇಲೆ ಬಲಿಯನ್ನಾಗಿ ಅರ್ಪಿಸಬೇಡಿ. ನಿಮ್ಮ ಭವಿಷ್ಯವನ್ನು ತಿಳಿದುಕೊಳ್ಳುವುದಕ್ಕಾಗಿ ಕಣಿಹೇಳುವವರ ಬಳಿಗಾಗಲಿ, ಮಂತ್ರಗಾರರ ಬಳಿಗಾಗಲಿ ಬೇತಾಳಿಕರ ಬಳಿಗಾಗಲಿ ಮಾಟಗಾರರ ಬಳಿಗಾಗಲಿ ಹೋಗಬೇಡಿ. 11 ಬೇರೆಯವರ ಮೇಲೆ ಮಂತ್ರ ಮಾಡಲು ಯಾರಿಗೂ ಅವಕಾಶ ಕೊಡಬೇಡಿ. ಬೇತಾಳಿಕರಾಗುವುದಕ್ಕಾಗಲಿ ಮಾಟಗಾರರಾಗುವುದಕ್ಕಾಗಲಿ ನಿಮ್ಮಲ್ಲಿ ಯಾರಿಗೂ ಅವಕಾಶ ಕೊಡಬೇಡಿ. ಸತ್ತುಹೋದವನೊಡನೆ ನಿಮ್ಮಲ್ಲಿ ಯಾರೂ ಮಾತಾಡಕೂಡದು. 12 ಇಂಥ ಕಾರ್ಯಗಳನ್ನು ಮಾಡುವ ಜನರನ್ನು ದೇವರು ದ್ವೇಷಿಸುತ್ತಾನೆ. ಆದ್ದರಿಂದಲೇ ಆ ಜನಾಂಗಗಳವರನ್ನು ನಿಮಗೋಸ್ಕರವಾಗಿ ಈ ದೇಶದಿಂದ ಹೊರಡಿಸುವನು. 13 ನಿಮ್ಮ ದೇವರಾದ ಯೆಹೋವನಿಗೆ ನೀವು ನಂಬಿಗಸ್ತರಾಗಿರಬೇಕು.
ಯೆಹೋವನ ಮಾತುಗಳನ್ನು ತಿಳಿಸುವ ಪ್ರವಾದಿ
14 “ನಿಮ್ಮ ದೇಶದೊಳಗಿಂದ ಇತರ ಜನಾಂಗದವರನ್ನು ನಾಶಮಾಡಬೇಕು. ಆ ಜನರು ಮಾಟಮಂತ್ರಗಳ ಮೂಲಕ ಮತ್ತು ಕಣಿ ಹೇಳುವವರಿಂದ ತಮ್ಮ ಭವಿಷ್ಯವನ್ನು ವಿಚಾರಿಸುವರು. ಆದರೆ ನಿಮ್ಮ ದೇವರಾದ ಯೆಹೋವನು ಅಂಥಾ ಕೆಲಸವನ್ನು ಮಾಡಲು ನಿಮ್ಮನ್ನು ಬಿಡುವುದಿಲ್ಲ. 15 ನಿಮ್ಮ ದೇವರು ನಿಮ್ಮ ಬಳಿಗೆ ಪ್ರವಾದಿಯನ್ನು ಕಳುಹಿಸುವನು. ಆ ಪ್ರವಾದಿಯು ನಿಮ್ಮ ಕುಲದವರಲ್ಲಿ ಒಬ್ಬನಾಗಿರುವನು. ಅವನು ನನ್ನ ಹಾಗೆ ಇರುವನು ಮತ್ತು ನೀವು ಅವನ ಮಾತುಗಳನ್ನು ಕೇಳಬೇಕು. 16 ನೀವು ಕೇಳಿದ ಪ್ರಕಾರ ದೇವರು ನಿಮಗೊಬ್ಬ ಪ್ರವಾದಿಯನ್ನು ಕಳುಹಿಸುವನು. ನೀವು ಹೋರೇಬ್ ಎಂಬ ಸೀನಾಯಿ ಪರ್ವತದಲ್ಲಿ ಒಟ್ಟಾಗಿ ಸೇರಿದಾಗ ದೇವರ ಸ್ವರಕ್ಕೆ ಭಯಪಟ್ಟಿರಿ; ಪರ್ವತದಲ್ಲಿದ್ದ ಬೆಂಕಿಯನ್ನು ನೋಡಿಯೂ ತತ್ತರಿಸಿದಿರಿ. ಆಗ ನೀವು, ‘ನಮ್ಮ ದೇವರಾದ ಯೆಹೋವನ ಸ್ವರವನ್ನು ನಾವು ತಿರುಗಿ ಕೇಳದ ಹಾಗೆ ಮಾಡು. ನಾವು ತಿರುಗಿ ಆ ಮಹಾ ಬೆಂಕಿಯ ಜ್ವಾಲೆಯನ್ನು ನೋಡದ ಹಾಗೆ ಮಾಡು; ಇಲ್ಲವಾದರೆ ನಾವು ಸಾಯುತ್ತೇವೆ!’ ಎಂದು ನನ್ನನ್ನು ಕೇಳಿಕೊಂಡಿರಿ.
17 “ಆಗ ಯೆಹೋವನು ನನಗೆ ಹೇಳಿದ್ದೇನೆಂದರೆ: ‘ಅವರು ಕೇಳುವ ವಿಷಯವು ಒಳ್ಳೆಯದೇ. 18 ನಾನು ಅವರಿಗಾಗಿ ನಿನ್ನ ತರಹದ ಒಬ್ಬ ಪ್ರವಾದಿಯನ್ನು ಕಳುಹಿಸುವೆನು. ಅವನು ಅವರ ಜನರಲ್ಲಿ ಒಬ್ಬನಾಗಿರುವನು. ಅವನು ಜನರಿಗೆ ತಿಳಿಸಬೇಕಾದ ವಿಷಯವನ್ನು ನಾನೇ ಅವನಿಗೆ ತಿಳಿಸುವೆನು. ನಾನು ಆಜ್ಞಾಪಿಸುವುದೆಲ್ಲವನ್ನು ಅವನು ಜನರಿಗೆ ತಿಳಿಸುವನು. 19 ಈ ಪ್ರವಾದಿಯು ನನ್ನ ಪ್ರತಿನಿಧಿಯಾಗಿ ಮಾತನಾಡುವನು. ಅವನು ಮಾತಾಡುವಾಗ ಯಾವನಾದರೂ ನನ್ನ ಆಜ್ಞೆಗಳನ್ನು ಕೇಳದೆಹೋದರೆ ನಾನು ಅವನನ್ನು ಶಿಕ್ಷಿಸುವೆನು.’
ಸುಳ್ಳು ಪ್ರವಾದಿಗಳನ್ನು ಕಂಡುಹಿಡಿಯುವ ಬಗ್ಗೆ
20 “ಒಬ್ಬ ಪ್ರವಾದಿಯು ನಾನು ಹೇಳದ ಸಂಗತಿಯನ್ನು ನಿಮಗೆ ಹೇಳಿದರೂ ಹೇಳಬಹುದು. ದೇವರಿಂದ ಬಂದ ಸಂದೇಶವನ್ನು ನಿಮಗೆ ತಿಳಿಸುತ್ತಿರುವೆನು ಎಂದು ಅವನು ಹೇಳಬಹುದು. ಇಂಥಾ ಸಂದರ್ಭಗಳು ಬಂದಲ್ಲಿ ಆ ಪ್ರವಾದಿಯನ್ನು ಸಾಯಿಸಬೇಕು. ಇಷ್ಟು ಮಾತ್ರವಲ್ಲ ಇತರ ದೇವರುಗಳ ಸಂದೇಶವನ್ನು ಕೊಡುವ ಪ್ರವಾದಿಗಳೂ ಬರಬಹುದು. ಅವರನ್ನೂ ನೀವು ಸಾಯಿಸಬೇಕು. 21 ‘ಆ ಪ್ರವಾದಿಯು ಹೇಳಿದ್ದು ದೇವರ ಮಾತಲ್ಲವೆಂದು ತಿಳಿದುಕೊಳ್ಳುವುದು ಹೇಗೆ?’ ಎಂದು ನೀವು ಅಂದುಕೊಳ್ಳಬಹುದು. 22 ಒಬ್ಬ ಪ್ರವಾದಿಯು ತಾನು ಯೆಹೋವನಿಂದ ಕಳುಹಿಸಲ್ಪಟ್ಟವನು ಎಂದು ಹೇಳಿಕೊಂಡರೆ ಮತ್ತು ಅವನು ಹೇಳಿದ ಮಾತುಗಳು ನೆರವೇರದೆ ಹೋದರೆ ಆಗ ಆ ವಿಷಯಗಳನ್ನು ಯೆಹೋವನು ಹೇಳಲಿಲ್ಲವೆಂದು ನಿಮಗೆ ಗೊತ್ತಾಗುವುದು. ಆ ಪ್ರವಾದಿಯು ತನ್ನದೆ ಆದ ಆಲೋಚನೆಯನ್ನು ನಿಮಗೆ ಹೇಳುತ್ತಿದ್ದಾನೆಂದು ನಿಮಗೆ ತಿಳಿಯುವುದು. ನೀವು ಅವನಿಗೆ ಭಯಪಡಬೇಡಿರಿ.