ಯೆಹೋಶುವನು ನಿಮ್ಮ ಹೊಸ ನಾಯಕನಾಗಿದ್ದಾನೆ
31
1 ಮೋಶೆಯು ಇಸ್ರೇಲರ ಸಮೂಹಕ್ಕೆ ಹೇಳಿದ್ದೇನೆಂದರೆ:
2 “ನಾನು ಈಗ ನೂರಿಪ್ಪತ್ತು ವರ್ಷದವನಾಗಿದ್ದೇನೆ. ನನಗೆ ನಿಮ್ಮನ್ನು ಇನ್ನೂ ನಡೆಸಲು ಸಾಧ್ಯವಿಲ್ಲ. ಯೆಹೋವನು, ‘ನೀನು ಜೋರ್ಡನ್ ಹೊಳೆಯನ್ನು ದಾಟಕೂಡದು’ ಎಂದು ಹೇಳಿರುತ್ತಾನೆ.
3 ಆದರೆ ನಿಮ್ಮನ್ನು ಯೆಹೋವನೇ, ಆಚೆ ಕಡೆಗೆ ನಡೆಸುವನು. ಆ ದೇಶದ ಜನರನ್ನು ಯೆಹೋವನು ನಾಶಮಾಡುವನು. ಅವರ ಕೈಯಿಂದ ನೀವು ಆ ದೇಶವನ್ನು ವಶಪಡಿಸಿಕೊಳ್ಳುವಿರಿ. ಯೆಹೋಶುವನು ನಿಮ್ಮನ್ನು ಇನ್ನು ಮುಂದೆ ನಡಿಸುವನು ಎಂದು ಯೆಹೋವನು ಹೇಳಿದ್ದಾನೆ.
4 “ಯೆಹೋವನು ಸೀಹೋನನನ್ನು ಮತ್ತು ಓಗನನ್ನು ನಾಶಮಾಡಿದನು. ಅಮೋರಿಯ ಅರಸರನ್ನು ನಾಶಮಾಡಿದನು; ಅದೇ ರೀತಿಯಾಗಿ ನೀವು ಹೋಗುವ ದೇಶದಲ್ಲಿಯೂ ಮಾಡುವನು.
5 ಯೆಹೋವನು ಆ ಜನಾಂಗಗಳನ್ನು ಸೋಲಿಸಲು ಸಹಾಯ ಮಾಡುವನು. ಆದರೆ ನಾನು ಹೇಳಿದ ಪ್ರಕಾರ ನೀವು ಅವರಿಗೆ ಮಾಡಬೇಕು.
6 ಧೈರ್ಯವಾಗಿರಿ, ಶಕ್ತಿಹೊಂದಿದವರಾಗಿರಿ, ಆ ಜನರಿಗೆ ಹೆದರಬೇಡಿರಿ. ಯಾಕೆಂದರೆ ದೇವರಾದ ಯೆಹೋವನು ನಿಮ್ಮ ಸಂಗಡ ಇರುವನು. ಆತನು ನಿಮ್ಮ ಕೈ ಬಿಡುವುದಿಲ್ಲ, ನಿಮ್ಮನ್ನು ತೊರೆಯುವುದಿಲ್ಲ.”
7 ಆಮೇಲೆ ಮೋಶೆಯು ಯೆಹೋಶುವನನ್ನು ಕರೆದು ಎಲ್ಲಾ ಇಸ್ರೇಲರ ಎದುರಿನಲ್ಲಿ, “ಶಕ್ತಿಶಾಲಿಯಾಗಿದ್ದು ಧೈರ್ಯಗೊಂಡಿರು. ನೀನು ಈ ಜನರನ್ನು ಯೆಹೋವನು ನಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದಂಥ ದೇಶಕ್ಕೆ ನಡೆಸು. ಆ ದೇಶವನ್ನು ಸ್ವಾಧೀನ ಮಾಡಿಕೊಳ್ಳಲು ಇಸ್ರೇಲರಿಗೆ ಸಹಾಯ ಮಾಡು.
8 ಯೆಹೋವನು ನಿನ್ನನ್ನು ನಡೆಸುತ್ತಾನೆ, ಆತನು ತಾನೇ ನಿನ್ನೊಂದಿಗಿರುವನು. ಆತನು ನಿನ್ನ ಕೈಬಿಡುವುದಿಲ್ಲ, ನಿನ್ನನ್ನು ತೊರೆಯುವುದಿಲ್ಲ. ಆದ್ದರಿಂದ ಚಿಂತಿಸಬೇಡ, ಭಯಪಡಬೇಡ” ಎಂದು ಹೇಳಿದನು.
ಮೋಶೆಯು ಬೋಧನೆಗಳನ್ನೆಲ್ಲಾ ಬರೆದದ್ದು
9 ಆಮೇಲೆ ಮೋಶೆಯು ಬೋಧನೆಗಳನ್ನೆಲ್ಲಾ ಬರೆದು ಯಾಜಕರ ಕೈಯಲ್ಲಿ ಅದನ್ನು ಕೊಟ್ಟನು. ಯಾಜಕರು ಲೇವಿಯ ಕುಲದವರು. ಅವರ ಕರ್ತವ್ಯ ಏನಾಗಿತ್ತೆಂದರೆ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊರುವುದು. ಮೋಶೆಯು ಇಸ್ರೇಲರ ಎಲ್ಲಾ ಹಿರಿಯರಿಗೂ ಬೋಧನೆಯ ಪುಸ್ತಕವನ್ನು ಕೊಟ್ಟನು.
10 ಆಮೇಲೆ ಮೋಶೆಯು ನಾಯಕರೊಂದಿಗೆ ಮಾತನಾಡುತ್ತಾ, “ಪ್ರತಿ ಏಳನೆಯ ವರ್ಷದ ಕೊನೆಯಲ್ಲಿ ಅಂದರೆ ಬಿಡುಗಡೆಯ ವರ್ಷದಲ್ಲಿ ನಡೆಯುವ ಪರ್ಣಶಾಲೆಗಳ ಹಬ್ಬದ ಸಮಯದಲ್ಲಿ ಈ ಬೋಧನಾಪುಸ್ತಕವನ್ನು ಓದಬೇಕು.
11 ಆ ಹಬ್ಬದ ಸಮಯದಲ್ಲಿ ಇಸ್ರೇಲರೆಲ್ಲರು ತಮ್ಮ ದೇವರಾದ ಯೆಹೋವನು ಆರಿಸುವ ವಿಶೇಷ ಸ್ಥಳದಲ್ಲಿ ಕೂಡಿಬರುವಾಗ ಈ ಬೋಧನೆಯ ಪುಸ್ತಕವನ್ನು ಎಲ್ಲರಿಗೂ ಕೇಳಿಸುವಂತೆ ಓದಬೇಕು.
12 ಎಲ್ಲರನ್ನು ಅಂದರೆ ಗಂಡಸರನ್ನೂ ಹೆಂಗಸರನ್ನೂ ಚಿಕ್ಕಮಕ್ಕಳನ್ನೂ ಮತ್ತು ನಿಮ್ಮನಿಮ್ಮ ಊರಿನಲ್ಲಿ ವಾಸಿಸುವ ಪರದೇಶಸ್ಥರನ್ನೂ ಒಟ್ಟಾಗಿ ಸೇರಿಸಬೇಕು. ಅವರು ಬೋಧನೆಯನ್ನು ಕೇಳಿ ತಮ್ಮ ದೇವರಾದ ಯೆಹೋವನನ್ನು ಸನ್ಮಾನಿಸಲು ಕಲಿಯುವರು ಮತ್ತು ಬೋಧನೆಯಲ್ಲಿ ತಿಳಿಸಿರುವ ಪ್ರಕಾರ ಮಾಡುವರು.
13 ಅವರ ಸಂತತಿಯವರಿಗೆ ಯೆಹೋವನ ಕಟ್ಟಳೆಯ ಬಗ್ಗೆ ಗೊತ್ತಿಲ್ಲದಿದ್ದರೆ ಅವರು ಬೋಧನಾಪುಸ್ತಕ ಓದುವಾಗ ತಿಳಿದುಕೊಳ್ಳುವರು. ನಿಮ್ಮ ದೇವರಾದ ಯೆಹೋವನನ್ನು ಗೌರವಿಸಲು ಅವರು ಅದರಿಂದ ಕಲಿತುಕೊಳ್ಳುವರು; ನೀವು ಜೋರ್ಡನ್ ನದಿ ದಾಟಿಹೋಗಿ ವಶಪಡಿಸಿಕೊಳ್ಳಲಿರುವ ದೇಶದಲ್ಲಿ ನೀವು ವಾಸವಾಗಿರುವ ತನಕ ಅವರು ಗೌರವಿಸುವರು.”
ದೇವರು ಯೆಹೋಶುವನನ್ನೂ ಮೋಶೆಯನ್ನೂ ಒಟ್ಟಿಗೆ ಕರೆದದ್ದು
14 ಯೆಹೋವನು ಮೋಶೆಗೆ, “ನೀನು ಸಾಯುವ ಸಮಯವು ಹತ್ತಿರವಾಗುತ್ತಾ ಬಂತು. ಯೆಹೋಶುವನನ್ನು ದೇವದರ್ಶನ ಗುಡಾರಕ್ಕೆ ಕರೆದುಕೊಂಡು ಬಾ. ಅವನು ಮಾಡಬೇಕಾದ ವಿಷಯಗಳನ್ನು ನಾನು ಯೆಹೋಶುವನಿಗೆ ತಿಳಿಸುವೆನು” ಎಂದು ಹೇಳಿದನು. ಮೋಶೆಯೂ ಯೆಹೋಶುವನೂ ದೇವದರ್ಶನ ಗುಡಾರದೊಳಗೆ ಹೋದರು.
15 ಯೆಹೋವನು ಒಂದು ಮೇಘಸ್ತಂಭದಲ್ಲಿ ಪ್ರತ್ಯಕ್ಷನಾದನು. ಆ ಮೋಡವು ಗುಡಾರದ ಬಾಗಿಲಲ್ಲಿ ಬಂದು ನಿಂತಿತು.
16 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ನೀನು ಬೇಗನೇ ಸಾಯುವೆ. ನಿನ್ನ ಪೂರ್ವಿಕರ ಬಳಿಗೆ ನೀನು ಸೇರಿದಾಗ ಈ ಜನರು ನನಗೆ ನಂಬಿಗಸ್ತರಾಗಿರುವುದಿಲ್ಲ. ನಾನು ಅವರೊಡನೆ ಮಾಡಿರುವ ಒಡಂಬಡಿಕೆಯನ್ನು ಅವರು ಮುರಿಯುವರು. ಅವರು ನನ್ನನ್ನು ತೊರೆದು ತಾವು ಸ್ವಾಧೀನಮಾಡಿಕೊಳ್ಳುವ ದೇಶದ ಅನ್ಯದೇವತೆಗಳನ್ನು ಪೂಜಿಸುವರು.
17 ಆಗ ನಾನು ಅವರ ಮೇಲೆ ತುಂಬಾ ಕೋಪವುಳ್ಳವನಾಗಿರುವೆನು. ಅವರಿಗೆ ಸಹಾಯ ಮಾಡದೆ ಅವರನ್ನು ಬಿಟ್ಟುಬಿಡುವೆನು; ಅವರು ನಾಶವಾಗುವರು; ಅವರಿಗೆ ಭಯಂಕರ ಸಂಗತಿಗಳು ಸಂಭವಿಸುವವು; ಅನೇಕ ಕೇಡುಗಳಾಗುವುವು; ಆಗ, ‘ನಮ್ಮ ದೇವರು ನಮ್ಮ ಮಧ್ಯದಲ್ಲಿ ಇಲ್ಲದಿರುವ ಕಾರಣ ಇವೆಲ್ಲಾ ನಮಗೆ ಸಂಭವಿಸುತ್ತವೆ’ ಎಂದು ಅವರು ಹೇಳುವರು.
18 ಆಗಲೂ ನಾನು ಅವರಿಗೆ ಸಹಾಯ ಮಾಡುವುದಿಲ್ಲ. ಅವರು ಕೆಟ್ಟಕಾರ್ಯಗಳನ್ನು ಮಾಡಿ ಅನ್ಯದೇವರುಗಳನ್ನು ಅವಲಂಭಿಸಿದ್ದಾರಲ್ಲಾ!
19 “ಆದ್ದರಿಂದ ನೀನು ಈ ಹಾಡನ್ನು ಬರೆ, ಇಸ್ರೇಲರಿಗೆ ಇದನ್ನು ಕಲಿಸು. ಈ ಹಾಡನ್ನು ಹಾಡಲು ಅವರಿಗೆ ಕಲಿಸು. ಆಗ ಇದು ಇಸ್ರೇಲ್ ಜನರ ವಿರುದ್ಧವಾಗಿ ಸಾಕ್ಷಿಯಾಗುವುದು.
20 ನಾನು ಅವರ ಪೂರ್ವಿಕರಿಗೆ ವಾಗ್ದಾನ ಮಾಡಿದ ದೇಶಕ್ಕೆ ಅವರನ್ನು ಕರೆದುಕೊಂಡು ಹೋಗುವೆನು. ಆ ದೇಶವು ಹಾಲೂಜೇನೂ ಹರಿಯುವ ದೇಶವಾಗಿರುತ್ತದೆ. ಅವರಿಗೆ ಇಷ್ಟ ಬಂದದ್ದನ್ನೆಲ್ಲಾ ತಿನ್ನಲು ಅವರಿಗೆ ಸಿಗುವುದು. ಅವರಿಗೆ ಸಮೃದ್ಧಿಯಾದ ಜೀವಿತವು ಇರುವುದು. ಆದರೆ ಅವರು ಸುಳ್ಳುದೇವರ ಕಡೆಗೆ ತಿರುಗಿ ಅವುಗಳನ್ನು ಪೂಜಿಸುವರು. ಅವರು ನನ್ನಿಂದ ತೊಲಗಿ ನನ್ನ ಒಡಂಬಡಿಕೆಯನ್ನು ಮುರಿದುಬಿಡುವರು.
21 ಆಗ ಭಯಂಕರವಾದ ಸಂಗತಿಗಳು ಅವರಿಗೆ ಉಂಟಾಗುವವು. ಅವರಿಗೆ ಅನೇಕ ಸಂಕಟಗಳು ಉಂಟಾಗುವವು. ಆಗ ಆ ಜನರಿಗೆ ಈ ಹಾಡು ತಿಳಿದಿರುವುದರಿಂದ ತಾವು ಎಷ್ಟು ತಪ್ಪಿತಸ್ಥರು ಎಂದು ತಿಳಿಯುವುದು. ನಾನು ಕೊಡುವುದಾಗಿ ವಾಗ್ದಾನ ಮಾಡಿರುವ ದೇಶಕ್ಕೆ ಅವರನ್ನು ಇನ್ನೂ ಕರೆದುಕೊಂಡು ಹೋಗಿಲ್ಲ. ಆದರೆ ಅವರು ಅಲ್ಲಿ ಏನು ಮಾಡುತ್ತಾರೆಂಬುದು ನನಗೆ ಆಗಲೇ ಗೊತ್ತಿದೆ.”
22 ಅದೇ ದಿವಸದಲ್ಲಿ ಮೋಶೆಯು ಹಾಡನ್ನು ಬರೆದಿಟ್ಟನು. ಇಸ್ರೇಲ್ ಜನರಿಗೆ ಆ ಹಾಡನ್ನು ಕಲಿಸಲಾಯಿತು.
23 ನೂನನ ಮಗನಾದ ಯೆಹೋಶುವನೊಂದಿಗೆ ಯೆಹೋವನು ಮಾತನಾಡಿ ಹೇಳಿದ್ದೇನೆಂದರೆ: “ಧೈರ್ಯವಂತನಾಗಿದ್ದು ಬಲಗೊಳ್ಳು, ನೀನು ಜನರನ್ನು ವಾಗ್ದಾನದ ದೇಶಕ್ಕೆ ನಡೆಸಬೇಕು. ನಾನು ನಿನ್ನೊಂದಿಗಿರುವೆನು.”
ಮೋಶೆ ಇಸ್ರೇಲರನ್ನು ಎಚ್ಚರಿಸಿದ್ದು
24 ಯೆಹೋವನ ಕಟ್ಟಳೆ, ವಿಧಿನಿಯಮಗಳ ಬೋಧನೆಯನ್ನೆಲ್ಲಾ ಮೋಶೆಯು ಪುಸ್ತಕದಲ್ಲಿ ಜಾಗ್ರತೆಯಾಗಿ ಬರೆದಿಟ್ಟನು.
25 ಬಳಿಕ ಮೋಶೆಯು
26 ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡಿದ್ದ ಲೇವಿಯರಿಗೆ “ಈ ಪುಸ್ತಕವನ್ನು ತೆಗೆದುಕೊಂಡು ದೇವದರ್ಶನಗುಡಾರದೊಳಗಿರುವ ಪೆಟ್ಟಿಗೆಯ ಪಕ್ಕದಲ್ಲಿಡಿರಿ. ಅದು ನಿಮಗೆ ವಿರುದ್ಧವಾದ ಸಾಕ್ಷಿಯಾಗಿರುವುದು.
27 ನೀವು ಹಠಮಾರಿಗಳೆಂದು ನಾನು ಬಲ್ಲೆನು. ನಾನು ನಿಮ್ಮೊಂದಿಗೆ ಇದ್ದಾಗಲೇ ನೀವು ಯೆಹೋವನಿಗೆ ವಿಧೇಯರಾಗಲಿಲ್ಲ. ಆದ್ದರಿಂದ ನಾನು ಸತ್ತ ಬಳಿಕ ಆತನ ಮಾತುಗಳನ್ನು ನೀವು ಕೇಳುವುದಿಲ್ಲ ಎಂದು ನನಗೆ ಚೆನ್ನಾಗಿ ಗೊತ್ತು.
28 ಎಲ್ಲಾ ಕುಲಾಧಿಪತಿಗಳವರನ್ನು ಮತ್ತು ಗೋತ್ರಪ್ರಧಾನರನ್ನು ನನ್ನ ಬಳಿಗೆ ಕರೆದುತನ್ನಿರಿ; ಅವರಿಗೆ ನಾನಿದನ್ನು ತಿಳಿಸುವೆನು. ನಾನು ಆಕಾಶವನ್ನೂ ಭೂಮಿಯನ್ನೂ ಅದಕ್ಕೆ ಸಾಕ್ಷಿಯಾಗಿ ಮಾಡುವೆನು.
29 ನನ್ನ ಮರಣದ ಬಳಿಕ ನೀವು ಕೆಟ್ಟಕಾರ್ಯಗಳನ್ನು ಮಾಡುವಿರೆಂದು ನನಗೆ ಗೊತ್ತಿದೆ; ನನ್ನ ಅಪ್ಪಣೆಗಳನ್ನು ಮೀರುವಿರಿ. ನಿಮಗೆ ಭಯಂಕರ ಸಂಗತಿಗಳು ಸಂಭವಿಸುವವು. ಯಾಕೆಂದರೆ ಯೆಹೋವನನ್ನು ನೀವು ಸಿಟ್ಟಿಗೆಬ್ಬಿಸುವಿರಿ” ಎಂದು ಹೇಳಿದನು.
ಮೋಶೆಯ ಹಾಡು
30 ಇಸ್ರೇಲ್ ಸಮೂಹವು ಒಟ್ಟಾಗಿ ಸೇರಿದಾಗ ಮೋಶೆಯು ಹೀಗೆ ಹಾಡಿದನು: