ಜ್ಞಾನೋಪದೇಶಗಳ ಭಂಡಾರ
7
1 ಸುಗಂಧತೈಲಕ್ಕಿಂತಲೂ ಒಳ್ಳೆಯ ಹೆಸರೇ ಉತ್ತಮ.
ಜನನ ದಿನಕ್ಕಿಂತಲೂ ಮರಣ ದಿನವೇ ಉತ್ತಮ.
2 ಔತಣಕೂಟಕ್ಕೆ ಹೋಗುವುದಕ್ಕಿಂತ ಶವಸಂಸ್ಕಾರಕ್ಕೆ ಹೋಗುವುದು ಇನ್ನೂ ಉತ್ತಮ.
ಯಾಕೆಂದರೆ ಎಲ್ಲರೂ ಒಂದು ದಿನ ಸಾಯಲೇಬೇಕು.
ಸಾವನ್ನು ಕಂಡ ಪ್ರತಿಯೊಬ್ಬನು ಇದನ್ನು ಸ್ಮರಿಸಿಕೊಳ್ಳುವನು.
3 ನಗುವಿಗಿಂತ ವ್ಯಸನವು ಇನ್ನೂ ಉತ್ತಮ.
ಯಾಕೆಂದರೆ ನಮ್ಮ ಮುಖವು ವ್ಯಸನದಿಂದಿರುವಾಗ ನಮ್ಮ ಹೃದಯಕ್ಕೆ ಒಳ್ಳೆಯದಾಗುವುದು.
4 ಜ್ಞಾನಿಯು ಮರಣದ ಬಗ್ಗೆ ಆಲೋಚಿಸುವನು;
ಮೂಢನಾದರೋ ಉಲ್ಲಾಸ ಸಮಯದ ಬಗ್ಗೆ ಆಲೋಚಿಸುವನು.
5 ಮೂಢನ ಹೊಗಳಿಕೆಗಿಂತ
ಜ್ಞಾನಿಯ ಗದರಿಕೆಯೇ ಉತ್ತಮ.
6 ಮೂಢರ ನಗು ಉಪಯೋಗವಿಲ್ಲದ್ದು.
ಅದು ಮಡಕೆಯ ಕೆಳಗೆ ಚಟಪಟನೆ ಉರಿದುಹೋಗುವ ಮುಳ್ಳುಕಡ್ಡಿಯಂತಿದೆ.
7 ಹಣವು ಜ್ಞಾನಿಯನ್ನೂ ಮೂರ್ಖನನ್ನಾಗಿ ಮಾಡುವುದು.
ಲಂಚವು ಅವನ ವಿವೇಕವನ್ನು ಕೆಡಿಸುವುದು.
8 ಆರಂಭಿಸುವ ಸಮಯಕ್ಕಿಂತಲೂ
ಪೂರ್ಣಗೊಳಿಸುವ ಸಮಯವೇ ಮೇಲು.
ಗರ್ವಕ್ಕಿಂತಲೂ ತಾಳ್ಮೆಯೇ ಉತ್ತಮ.
9 ಮುಂಗೋಪಿಯಾಗಿರಬೇಡ.
ಯಾಕೆಂದರೆ ಕೋಪವು ಕೇವಲ ಮೂಢತನ.
10 “ಈ ಕಾಲಕ್ಕಿಂತ ‘ಹಿಂದಿನ ಕಾಲವೇ’ ಚೆನ್ನಾಗಿತ್ತಲ್ಲವೇ?” ಎನ್ನಬೇಡ.
ಅದು ಜ್ಞಾನವುಳ್ಳವರ ಪ್ರಶ್ನೆಯಲ್ಲ.
11 ನಿನಗೆ ಆಸ್ತಿಯಿದ್ದರೆ ಜ್ಞಾನವು ಮತ್ತಷ್ಟು ಉಪಯುಕ್ತವಾಗಿದೆ. ನಿಜವಾಗಿಯೂ ಜ್ಞಾನಿಗಳು ಐಶ್ವರ್ಯವನ್ನು ಹೇರಳವಾಗಿ ಪಡೆದುಕೊಳ್ಳುವರು.
12 ಜ್ಞಾನಿಯು ಐಶ್ವರ್ಯವಂತನಾಗುವನು; ಜ್ಞಾನವು ತನ್ನ ಯಜಮಾನನನ್ನು ನೋಡಿಕೊಳ್ಳುವುದು.
13 ದೇವರ ಕಾರ್ಯಗಳನ್ನು ನೋಡು. ಆತನು ಸೊಟ್ಟಗೆ ಮಾಡಿದ್ದನ್ನು ನೆಟ್ಟಗೆ ಮಾಡಲು ಯಾರಿಗೆ ಸಾಧ್ಯ?
14 ಸುಖದ ದಿನಗಳಲ್ಲಿ ಸಂತೋಷಿಸು. ದುಃಖದ ದಿನಗಳಲ್ಲಿ, ಸುಖದುಃಖಗಳನ್ನು ಕೊಡುವವನು ದೇವರೇ ಎಂಬುದನ್ನು ಜ್ಞಾಪಿಸಿಕೊ. ಮುಂದೆ ಏನಾಗುವುದೊ ಯಾರಿಗೂ ಗೊತ್ತಿಲ್ಲ.
ಪಾಪವನ್ನೇ ಮಾಡದವರಿಲ್ಲ
15 ನನ್ನ ಅಲ್ಪಕಾಲದ ಜೀವನದಲ್ಲಿ ನಾನು ಪ್ರತಿಯೊಂದನ್ನೂ ನೋಡಿದ್ದೇನೆ. ನೀತಿವಂತರು ಯೌವನ ಪ್ರಾಯದಲ್ಲಿ ಸಾಯುವುದನ್ನೂ ನೋಡಿದ್ದೇನೆ. ದುಷ್ಟರು ಬಹುಕಾಲ ಬದುಕುವುದನ್ನೂ ನೋಡಿದ್ದೇನೆ.
16-17 ಆದ್ದರಿಂದ ನೀನು ನಿನ್ನನ್ನೇ ಯಾಕೆ ನಾಶಮಾಡಿಕೊಳ್ಳುವೆ? ಬಹಳ ನೀತಿವಂತನಾಗಿಯೂ ಇರಬೇಡ; ಬಹಳ ಕೆಟ್ಟವನಾಗಿಯೂ ಇರಬೇಡ. ಬಹು ಜ್ಞಾನಿಯಾಗಿಯೂ ಇರಬೇಡ; ಬಹು ಮೂಢನಾಗಿಯೂ ಇರಬೇಡ. ನಿನ್ನ ಕಾಲಕ್ಕಿಂತ ಮೊದಲೇ ನೀನು ಯಾಕೆ ಸಾಯಬೇಕು?
18 ಇವೆರಡರಲ್ಲಿಯೂ ಮಿತವಾಗಿರಬೇಕು. ದೇವಭಕ್ತರಲ್ಲಿ ಇವೆರಡೂ ಅತಿಯಾಗಿರುವುದಿಲ್ಲ.
19-20 ಒಳ್ಳೆಯದನ್ನೇ ಮಾಡುವ ಮತ್ತು ಪಾಪವನ್ನೇ ಮಾಡದ ನೀತಿವಂತನು ಭೂಮಿಯ ಮೇಲೆ ಇಲ್ಲವೇ ಇಲ್ಲ. ಜ್ಞಾನವು ಒಬ್ಬನಿಗೆ ಶಕ್ತಿಯನ್ನು ಕೊಡುತ್ತದೆ. ಒಬ್ಬ ಜ್ಞಾನಿಯು ನಗರದಲ್ಲಿರುವ ಹತ್ತುಮಂದಿ ಮೂಢ ನಾಯಕರುಗಳಿಗಿಂತಲೂ ಬಲಶಾಲಿ.
21 ಜನರ ಮಾತಿಗೆಲ್ಲಾ ಕಿವಿಗೊಡಬೇಡ. ನಿನ್ನ ಸ್ವಂತ ಸೇವಕನೇ ನಿನ್ನನ್ನು ಶಪಿಸಬಹುದು.
22 ನೀನು ಸಹ ಅನೇಕಸಲ ಬೇರೆಯವರನ್ನು ಶಪಿಸಿರುವುದಕ್ಕೆ ನಿನ್ನ ಮನಸ್ಸೇ ಸಾಕ್ಷಿಯಾಗಿದೆ.
23 ನನ್ನ ಜ್ಞಾನದಿಂದ ಇವೆಲ್ಲವುಗಳ ಕುರಿತಾಗಿ ಆಲೋಚಿಸಿದೆನು; ಜ್ಞಾನಿಯಾಗುವೆನು ಎಂದುಕೊಂಡೆನು; ಆದರೆ ಅದು ಅಸಾಧ್ಯವಾಗಿತ್ತು.
24 ಪ್ರತಿಯೊಂದು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಅದನ್ನು ಅರ್ಥಮಾಡಿಕೊಳ್ಳುವುದಕ್ಕೂ ಕಷ್ಟ.
25 ನಿಜವಾದ ಜ್ಞಾನವನ್ನು ಕಂಡುಕೊಳ್ಳಲು ನಾನು ವ್ಯಾಸಂಗ ಮಾಡಿದೆ ಮತ್ತು ತುಂಬ ಕಷ್ಟಪಟ್ಟು ಪ್ರಯತ್ನಿಸಿದೆ. ಪ್ರತಿಯೊಂದಕ್ಕೂ ಕಾರಣವನ್ನು ಕಂಡುಕೊಳ್ಳಲು ನಾನು ಪ್ರಯತ್ನಿಸಿದೆ.
ನಾನು ಕಲಿತಿದ್ದೇನು? ಕೆಡುಕನಾಗಿರುವುದು ಮೂಢತನ ಮತ್ತು ಮೂಢನಂತೆ ವರ್ತಿಸುವುದು ಹುಚ್ಚುತನ ಎಂಬುದನ್ನು ನಾನು ಕಲಿತುಕೊಂಡೆ.
26 ಇದಲ್ಲದೆ ಕೆಲವು ಸ್ತ್ರೀಯರು ಅಪಾಯಕರವಾದ ಬೋನುಗಳಂತಿರುವರು ಎಂಬುದನ್ನು ನಾನು ಕಂಡುಕೊಂಡೆ. ಅವರ ಹೃದಯಗಳು ಬಲೆಗಳಂತಿವೆ; ಅವರ ಕೈಗಳು ಸರಪಣಿಗಳಂತಿವೆ. ಆ ಸ್ತ್ರೀಯರಿಗೆ ಸಿಕ್ಕಿಬೀಳುವುದು ಮರಣಕ್ಕಿಂತಲೂ ಅಪಾಯಕರ. ದೇವರ ಭಕ್ತನು ಆ ಸ್ತ್ರೀಯರ ಬಳಿಯಿಂದ ಓಡಿ ಹೋಗುವನು; ಪಾಪಿಯಾದರೋ ಅವರಿಗೆ ಸಿಕ್ಕಿಕೊಳ್ಳುವನು.
27-28 ಪ್ರಸಂಗಿಯು ಹೀಗೆನ್ನುತ್ತಾನೆ: “ಒಂದು ತೀರ್ಮಾನಕ್ಕೆ ಬರಬೇಕೆಂದು ಇವೆಲ್ಲವುಗಳನ್ನು ಒಟ್ಟಾಗಿ ಸೇರಿಸಿದೆ. ಆದರೂ ಒಂದು ತೀರ್ಮಾನಕ್ಕೆ ಬರಲಾಗುತ್ತಿಲ್ಲ. ಆದರೆ ನಾನು ಒಂದನ್ನು ಕಂಡುಕೊಂಡೆ. ಅದೇನೆಂದರೆ, ಸಾವಿರ ಪುರುಷರಲ್ಲಿ ಒಬ್ಬ ನೀತಿವಂತನು ಇದ್ದರೂ ಇರಬಹುದು; ಆದರೆ ಸಾವಿರ ಸ್ತ್ರೀಯರಲ್ಲಿ ಒಬ್ಬ ನೀತಿವಂತಳನ್ನೂ ನಾನು ಕಾಣಲಿಲ್ಲ.
29 “ನಾನು ಮತ್ತೊಂದು ವಿಷಯವನ್ನು ತಿಳಿದುಕೊಂಡೆನು. ಅದೇನೆಂದರೆ, ದೇವರು ಮನುಷ್ಯರನ್ನು ನೀತಿವಂತರನ್ನಾಗಿ ಸೃಷ್ಟಿಸಿದನು. ಆದರೆ ಜನರು ಕೆಟ್ಟವರಾಗಿರಲು ಅನೇಕ ದಾರಿಗಳನ್ನು ಕಂಡುಕೊಂಡರು.”