ವಿಗ್ರಹಾರಾಧಕರ ವಿರುದ್ಧ ಎಚ್ಚರಿಕೆ
14
1 ಇಸ್ರೇಲರ ಹಿರಿಯರಲ್ಲಿ ಕೆಲವರು ನನ್ನ ಬಳಿಗೆ ಬಂದು ನನ್ನೊಂದಿಗೆ ಮಾತಾಡಲು ಕುಳಿತುಕೊಂಡರು.
2 ಆಗ ಯೆಹೋವನ ವಾಕ್ಯವು ನನಗೆ ಬಂತು. ಆತನು ನನಗೆ ಹೇಳಿದ್ದೇನೆಂದರೆ,
3 “ನರಪುತ್ರನೇ, ಈ ಜನರು ತಮ್ಮ ವಿಗ್ರಹಗಳಿಗೆ ಪ್ರತಿಷ್ಠಿತರಾಗಿದ್ದಾರೆ ಮತ್ತು ಪಾಪಕ್ಕೆ ಬೀಳಲು ತಮಗೆ ತಾವೇ ಅವಕಾಶಮಾಡಿಕೊಡುತ್ತಾರೆ. ಸಹಾಯಕ್ಕಾಗಿ ನನ್ನನ್ನು ಕೇಳಿಕೊಳ್ಳಲು ಅವರಿಗೆ ಅವಕಾಶ ಕೊಡಬೇಕೇ? ಇಲ್ಲ.
4 ಆದರೆ ನಾನು ಅವರಿಗೆ ಉತ್ತರಕೊಡುವೆನು. ಅವರಿಗೆ ನೀನು ಹೀಗೆ ಹೇಳಬೇಕು: ‘ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ: ಇಸ್ರೇಲರಲ್ಲಿ ಯಾರಾದರೂ ಪ್ರವಾದಿಯ ಬಳಿಗೆ ಬಂದು ನನ್ನ ಸಲಹೆಯನ್ನು ಕೇಳಿದರೆ, ನಾನೇ ಆ ಮನುಷ್ಯನಿಗೆ ಉತ್ತರ ಕೊಡುವೆನು. ಅವನ ಬಳಿಯಲ್ಲಿ ಹೊಲಸು ವಿಗ್ರಹಗಳಿದ್ದರೂ, ಅವನನ್ನು ಪಾಪದಲ್ಲಿ ಬೀಳುವಂತೆ ಮಾಡಿದ ವಸ್ತುಗಳನ್ನು ಅವನು ಇಟ್ಟುಕೊಂಡಿದ್ದರೂ, ಅವನು ಆ ವಿಗ್ರಹಗಳನ್ನು ಇನ್ನೂ ಪೂಜೆ ಮಾಡುತ್ತಿದ್ದರೂ ನಾನು ಅವನೊಂದಿಗೆ ಮಾತನಾಡುವೆನು. ಅವನ ವಿಗ್ರಹಾರಾಧನೆಗೆ ತಕ್ಕ ಉತ್ತರವನ್ನೆ ಕೊಡುವೆನು.
5 ಯಾಕೆಂದರೆ ನಾನು ಅವರ ಹೃದಯಗಳನ್ನು ಪರಿವರ್ತಿಸಬೇಕು. ಅವರು ನನ್ನನ್ನು ತೊರೆದು ಹೊಲಸು ವಿಗ್ರಹಗಳನ್ನು ಪೂಜಿಸಿದರೂ ನಾನು ಅವರನ್ನು ಪ್ರೀತಿಸುತ್ತೇನೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು. ಇದೇ ನನ್ನ ಉದ್ದೇಶ’
6 “ಆದ್ದರಿಂದ ಇಸ್ರೇಲ್ ಜನರಿಗೆ ಈ ವಿಷಯವನ್ನು ತಿಳಿಸು. ಅವರಿಗೆ ಹೀಗೆ ಹೇಳು: ‘ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, ನಿಮ್ಮ ಹೊಲಸು ವಿಗ್ರಹಗಳನ್ನು ತೊರೆದುಬಿಟ್ಟು ನನ್ನ ಬಳಿಗೆ ಹಿಂತಿರುಗಿರಿ. ಆ ಭಯಂಕರ ಸುಳ್ಳು ದೇವರಿಂದ ತೊಲಗಿರಿ.
7 ಯೆಹೋವನಾದ ನಾನೇ ಸಬತಃ ಪ್ರತಿಯೊಬ್ಬನಿಗೂ ಉತ್ತರಿಸುವೆನು ಅಂದರೆ ಅವನು ತನ್ನನ್ನು ಪಾಪಕ್ಕೆ ಬೀಳಿಸುವ ವಿಗ್ರಹಗಳನ್ನು ಹೊಂದಿದ್ದರೂ ಆ ವಿಗ್ರಹಗಳನ್ನು ಪೂಜಿಸುತ್ತಿದ್ದರೂ ಮತ್ತು ನನ್ನಿದ ತನ್ನನ್ನು ಬೇರ್ಪಡಿಸಿಕೊಳ್ಳುತ್ತಿದ್ದರೂ ನನ್ನ ಉಪದೇಶಕ್ಕಾಗಿ ನನ್ನ ಬಳಿಗೆ ಬಂದರೆ ಅವನು ಇಸ್ರೇಲನಾಗಿದ್ದರೂ ಇಸ್ರೇಲಿನಲ್ಲಿ ವಾಸವಾಗಿರುವ ಪರದೇಶಿಯಾಗಿದ್ದರೂ ನಾನು ಶಾಪವೆಂಬ ಉತ್ತರ ಕೊಡುವೆನು.
8 ನಾನು ಅವನ ವಿರುದ್ಧವಾಗಿ ತಿರುಗಿ ಅವನನ್ನು ನಾಶಮಾಡುವೆನು. ಅವನು ಇಸ್ರೇಲರಿಗೆ ನಿದರ್ಶನವಾಗಿರಬೇಕು, ಜನರು ಅವನನ್ನು ನೋಡಿ ನಗಾಡುವರು. ನಾನು ಅವನನ್ನು ನನ್ನ ಜನರ ಮಧ್ಯದಿಂದ ತೆಗೆದು ಬಿಡುವೆನು. ಆಗ ನೀವು ನಾನೇ ಯೆಹೋವನೆಂದು ತಿಳಿಯುವಿರಿ.
9 ಆದರೆ ಒಬ್ಬ ಪ್ರವಾದಿಯು ಅವನಿಗೆ ತನ್ನದೇ ಆದ ಉತ್ತರವನ್ನು ಕೊಡುವಷ್ಟು ಮೂರ್ಖನಾಗಿದ್ದರೆ, ಆಗ ನಾನು, ಅವನು ಎಂಥಾ ಮೂರ್ಖನಾಗಿದ್ದಾನೆಂದು ತೋರಿಸುವೆನು. ಅವನ ಮೇಲೆ ನನ್ನ ಸಾಮರ್ಥ್ಯವನ್ನು ಪ್ರಯೋಗಿಸುವೆನು. ಅವನನ್ನು ನಾಶಮಾಡಿ ನನ್ನ ಜನರ ಮಧ್ಯದಿಂದ ಅವನನ್ನು ತೆಗೆದುಬಿಡುವೆನು.
10 ಹೀಗೆ, ಸಲಹೆ ಕೇಳಲು ಬಂದ ಮನುಷ್ಯನೂ ಅವನಿಗೆ ಉತ್ತರಕೊಟ್ಟ ಪ್ರವಾದಿಯೂ ಒಂದೇ ಶಿಕ್ಷೆಯನ್ನು ಹೊಂದುವರು.
11 ಆಗ ಇಸ್ರೇಲಿನ ಜನರು ಇನ್ನೆಂದಿಗೂ ನನ್ನ ನಾಯಕತಬವನ್ನು ತೊರೆದು ಅಲೆದಾಡುವದಿಲ್ಲ. ಹೀಗೆ, ಅವರು ತಮ್ಮ ದಂಗೆಕೋರತನದ ಮಾರ್ಗಗಳಿಂದ ಇನ್ನೆಂದಿಗೂ ತಮ್ಮನ್ನು ಅಪವಿತ್ರರನ್ನಾಗಿ ಮಾಡಿಕೊಳ್ಳುವುದಿಲ್ಲ. ಆಗ ಅವರು ನಿಜವಾಗಿಯೂ ನನ್ನ ಜನರಾಗಿರುವರು ಮತ್ತು ನಾನು ಅವರ ದೇವರಾಗಿರುವೆನು.’” ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದ್ದಾನೆ.
ಜೆರುಸಲೇಮ್ ದಂಡಿಸಲ್ಪಡುವುದು
12 ಆಗ ಯೆಹೋವನ ನುಡಿ ನನಗೆ ಬಂತು. ಆತನು ಹೀಗೆ ಹೇಳಿದನು,
13 “ನರಪುತ್ರನೇ, ನನಗೆ ಅಪನಂಬಿಗಸ್ತರಾಗಿದ್ದು ನನ್ನ ವಿರುದ್ಧ ಪಾಪಮಾಡುವ ಯಾವ ದೇಶವನ್ನಾದರೂ ನಾನು ದಂಡಿಸುತ್ತೇನೆ. ನಾನು ಅವರ ಆಹಾರ ಸರಬರಾಜನ್ನು ನಿಲ್ಲಿಸುತ್ತೇನೆ. ನಾನು ಕ್ಷಾಮವನ್ನು ಕಳುಹಿಸಿ ಅವರ ಜನರನ್ನೂ ಪ್ರಾಣಿಗಳನ್ನೂ ನಾಶಮಾಡುವೆ.
14 ಆ ದೇಶದಲ್ಲಿ ನೋಹ, ದಾನಿಯೇಲ, ಯೋಬ ಜೀವಿಸಿದ್ದರೂ ಆ ಮೂವರು ತಮ್ಮ ಸತ್ಕಾರ್ಯಗಳಿಂದ ತಮ್ಮ ಪ್ರಾಣಗಳನ್ನು ಉಳಿಸಿಕೊಳ್ಳುತ್ತಿದ್ದರೇ ಹೊರತು ಇಡೀ ದೇಶವನ್ನು ರಕ್ಷಿಸಲಾಗುತ್ತಿರಲಿಲ್ಲ.” ಇವುಗಳನ್ನು ನನ್ನ ಒಡೆಯನಾದ ಯೆಹೋವನೇ ಹೇಳಿದ್ದಾನೆ.
15 ದೇವರು ಹೇಳಿದ್ದೇನೆಂದರೆ: “ಒಂದುವೇಳೆ, ನಾನು ಕ್ರೂರಪ್ರಾಣಿಗಳನ್ನು ದೇಶದೊಳಗೆ ಕಳುಹಿಸಿ ಜನರನ್ನು ಕೊಂದರೆ, ಅವುಗಳ ದೆಸೆಯಿಂದ ಯಾವನೂ ದೇಶದಲ್ಲಿ ಪ್ರಯಾಣಮಾಡಲಾಗುತ್ತಿರಲಿಲ್ಲ.
16 ನನ್ನ ಜೀವದಾಣೆ, ನೋಹನಾಗಲಿ ದಾನಿಯೇಲನಾಗಲಿ ಯೋಬನಾಗಲಿ ತಮ್ಮ ಪುತ್ರಪುತ್ರಿಯರನ್ನು ರಕ್ಷಿಸಲಾಗುತ್ತಿರಲಿಲ್ಲ. ಅವರು ತಮ್ಮನ್ನು ಮಾತ್ರ ರಕ್ಷಿಸಿಕೊಳ್ಳಬಹುದಾಗಿತ್ತು. ಆದರೆ ದೇಶವು ನಿರ್ಜನವಾಗುತ್ತಿತ್ತು.” ಇವುಗಳನ್ನು ನನ್ನ ಒಡೆಯನಾದ ಯೆಹೋವನೇ ಹೇಳಿದ್ದಾನೆ.
17 ದೇವರು ಹೇಳಿದ್ದೇನೆಂದರೆ, “ಒಂದುವೇಳೆ, ಅವರ ವಿರುದ್ಧ ಹೋರಾಡಲು ನಾನು ಶತ್ರುಸೈನ್ಯವೊಂದನ್ನು ಕಳುಹಿಸಿದರೆ, ಎಲ್ಲಾ ಜನರು ಮತ್ತು ಎಲ್ಲಾ ಪ್ರಾಣಿಗಳು ನಾಶವಾಗುತ್ತಿದ್ದವು.
18 ದೇವರಾದ ಯೆಹೋವನಾಣೆ, ನೋಹನಾಗಲಿ ದಾನಿಯೇಲನಾಗಲಿ ಯೋಬನಾಗಲಿ ತಮ್ಮ ಪುತ್ರಪುತ್ರಿಯರನ್ನು ರಕ್ಷಿಸಿಕೊಳ್ಳಲಾಗುತ್ತಿರಲಿಲ್ಲ. ಅವರು ತಮ್ಮನ್ನು ಮಾತ್ರ ರಕ್ಷಿಸಿಕೊಳ್ಳಬಹುದಾಗಿತ್ತು.” ಇವುಗಳನ್ನು ನನ್ನ ಒಡೆಯನಾದ ಯೆಹೋವನೇ ಹೇಳಿದ್ದಾನೆ.
19 ದೇವರು ಹೇಳಿದ್ದೇನೆಂದರೆ, “ಒಂದುವೇಳೆ, ನಾನು ದೇಶದ ಮೇಲೆ ರೋಗಗಳನ್ನು ಬರಮಾಡಿದರೆ, ಅಥವಾ ನನ್ನ ಕೋಪವನ್ನು ಸುರಿದು ಜನರನ್ನು ಕೊಂದುಹಾಕಿದರೆ ಮತ್ತು ಪ್ರಾಣಿಗಳನ್ನು ನಾಶಮಾಡಿದರೆ,
20 ದೇವರಾದ ಯೆಹೋವನಾಣೆ, ನೋಹನಾಗಲಿ ದಾನಿಯೇಲನಾಗಲಿ ಯೋಬನಾಗಲಿ ತಮ್ಮ ಪುತ್ರಪುತ್ರಿಯರನ್ನು ರಕ್ಷಿಸಿಕೊಳ್ಳಲಾಗುತ್ತಿರಲಿಲ್ಲ. ಅವರು ತಮ್ಮನ್ನು ಮಾತ್ರ ರಕ್ಷಿಸಿಕೊಳ್ಳಬಹುದಾಗಿತ್ತು.” ಇದು ನನ್ನ ಒಡೆಯನಾದ ಯೆಹೋವನ ನುಡಿ.
21 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಭಯಂಕರವಾದ ನಾಲ್ಕು ದಂಡನೆಗಳನ್ನು ನಾನು ಜೆರುಸಲೇಮ್ ಪಟ್ಟಣದ ಮೇಲೆ ಕಳುಹಿಸುವೆನು. ಆದ್ದರಿಂದ ಜೆರುಸಲೇಮಿಗೆ ಇನ್ನೂ ಎಷ್ಟು ಹೆಚ್ಚಾಗಿ ಕಷ್ಟಕರವಾಗಬಹುದೆಂದು ಯೋಚಿಸಿರಿ. ನಾನು ಆ ನಗರದ ವಿರುದ್ಧವಾಗಿ ಶತ್ರು ಸೈನಿಕರನ್ನು, ಹಸಿವೆ, ರೋಗ ಮತ್ತು ಕ್ರೂರಜಂತುಗಳನ್ನು ಕಳುಹಿಸುತ್ತೇನೆ. ದೇಶದಲ್ಲಿರುವ ಎಲ್ಲಾ ಜನರನ್ನೂ ಪಶುಗಳನ್ನೂ ನಿರ್ಮೂಲ ಮಾಡುವೆನು.
22 ಆದರೆ ಆಶ್ಚರ್ಯಕರವಾಗಿ, ಕೆಲವರು ಅದರಲ್ಲಿ ಉಳಿದುಕೊಳ್ಳುವರು, ಪುತ್ರಪುತ್ರಿಯರನ್ನು ನಿಮ್ಮ ಬಳಿಗೆ ಜೀವಂತವಾಗಿ ತರಲಾಗುವುದು. ಆ ಜನರು ಎಷ್ಟು ದುಷ್ಟರೆಂಬುದನ್ನು ಸಬತಃ ನೀವೇ ಅರ್ಥಮಾಡಿಕೊಳ್ಳುವಿರಿ. ನಾನು ಜೆರುಸಲೇಮಿನ ಮೇಲೆ ಬರಮಾಡಿದ ಇಡೀ ಆಪತ್ತಿನ ಬಗ್ಗೆ ನೀವು ಬಹಳವಾಗಿ ನೊಂದುಕೊಳ್ಳುವಿರಿ.
23 ಅವರು ಜೀವಿಸುವ ರೀತಿ, ದುಷ್ಟತನವನ್ನು ನಡಿಸುವ ರೀತಿಯನ್ನು ನೀವು ನೋಡುವಿರಿ. ಆಗ ನಾನು ಯಾಕೆ ಅವರನ್ನು ಶಿಕ್ಷಿಸುತ್ತೇನೆಂದು ನಿಮಗೆ ಗೊತ್ತಾಗುವದು.” ಇದು ನನ್ನ ಒಡೆಯನಾದ ಯೆಹೋವನ ನುಡಿ.