ತಾನು ದೇವರಂತೆ ಎಂದು ತೂರ್ ನೆನಸಿತು
28
ಯೆಹೋವನ ನುಡಿಯು ನನಗೆ ಬಂತು. ಆತನು ಹೇಳಿದ್ದೇನೆಂದರೆ, “ನರಪುತ್ರನೇ, ತೂರಿನ ರಾಜನಿಗೆ ಹೀಗೆ ಹೇಳು, ‘ನನ್ನ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ:
“‘ನೀನು ಬಹಳ ಹೆಮ್ಮೆಯುಳ್ಳವನು.
“ನಾನು ದೇವರು ಎಂದು ಹೇಳುವೆ.
ಸಾಗರದ ಮಧ್ಯದಲ್ಲಿ ದೇವರುಗಳ ಸಿಂಹಾಸನದಲ್ಲಿ
ನಾನು ಕೂತಿರುತ್ತೇನೆ ಎಂದು ಅನ್ನುವೆ.”
“‘ಆದರೆ ನೀನು ಮನುಷ್ಯನು, ದೇವರಲ್ಲ.
ನೀನು ದೇವರೆಂದು ನೀನೇ ನೆನಸಿಕೊಳ್ಳುವೆ.
ನೀನು ದಾನಿಯೇಲನಿಗಿಂತ ಜಾಣನು ಎಂಬುದಾಗಿ ಭಾವಿಸುತ್ತಿ.
ಎಲ್ಲಾ ರಹಸ್ಯಗಳು ನನಗೆ ಗೊತ್ತು ಎಂದು ನೀನು ನೆನಸುವೆ.
ನಿನ್ನ ಜ್ಞಾನ ಮತ್ತು ತಿಳುವಳಿಕೆಯಿಂದ ನೀನು ಐಶಬರ್ಯವನ್ನು ಕೂಡಿಹಾಕಿದ್ದೀ.
ನಿನ್ನ ಖಜಾನೆಯಲ್ಲಿ ಬೆಳ್ಳಿಬಂಗಾರವನ್ನು ಶೇಖರಿಸಿದ್ದೀ.
ನಿನ್ನ ವ್ಯಾಪಾರದ ಜಾಣತನದಿಂದ ನಿನ್ನ ಐಶಬರ್ಯವು ಬೆಳೆಯುವಂತೆ ಮಾಡಿದ್ದೀ.
ಆ ಐಶಬರ್ಯದ ಕಾರಣದಿಂದ ನೀನು ಹೆಮ್ಮೆಯಿಂದ ತುಂಬಿರುತ್ತೀ.
“‘ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ:
ತೂರ್, ನೀನು ದೇವರೆಂದು ನೆನಸಿಕೊಂಡಿಯಲ್ಲಾ?
ನಿನಗೆ ವಿರುದ್ಧವಾಗಿ ಯುದ್ಧ ಮಾಡಲು ಅಪರಿಚಿತರನ್ನು ಕರೆತರುವೆನು.
ಅವರು ಎಲ್ಲಾ ಜನಾಂಗಗಳವರಿಗಿಂತ ಕ್ರೂರರು,
ಅವರು ತಮ್ಮ ಖಡ್ಗವನ್ನು ಎಳೆದು
ನಿನ್ನ ಜ್ಞಾನದಿಂದ ಕೊಂಡುಕೊಂಡಿದ್ದ ಎಲ್ಲಾ ಬೆಲೆಬಾಳುವ
ಅಪೂರ್ವ ವಸ್ತುಗಳನ್ನು ನಾಶಮಾಡುವರು.
ನಿನ್ನ ಬನತೆಯನ್ನು ಕೆಡಿಸಿಬಿಡುವರು. ಸಮಾಧಿಗೆ ನಿನ್ನನ್ನು ತರುವರು.
ಸಮುದ್ರದಲ್ಲಿ ಸತ್ತ ನಾವಿಕನ ಸ್ಥಿತಿಯು ನಿನ್ನದಾಗುವದು.
ಆ ಮನುಷ್ಯನು ನಿನ್ನನ್ನು ಕೊಂದುಹಾಕುವನು.
ಆಗಲೂ ನೀನು “ನಾನು ದೇವರು” ಎಂದು ಹೇಳುವಿಯಾ?
ಇಲ್ಲ. ಅವನು ನಿನ್ನನ್ನು ತನ್ನ ಅಧಿಕಾರದಲ್ಲಿರಿಸುವನು.
ಆಗ ನೀನು “ಕೇವಲ ಮನುಷ್ಯನೇ” ಎಂದು ತಿಳಿಯುವಿ.
10 ಪರದೇಶಸ್ಥರು ನಿನ್ನನ್ನು ಪರದೇಶಿಯಂತೆ ನೋಡುವರು ಮತ್ತು ಕೊಲೆ ಮಾಡುವರು.
ನಾನು ಆ ರೀತಿಯಾಗಿ ಮಾಡಬೇಕೆಂದು ಆಜ್ಞಾಪಿಸುವದರಿಂದ ನಿನಗೆ ಹಾಗೆ ಆಗುವದು.’”
ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದ್ದಾನೆ.
11 ಯೆಹೋವನ ಮಾತುಗಳು ನನಗೆ ಬಂದವು. ಆತನು ಹೇಳಿದ್ದೇನೆಂದರೆ, 12 “ನರಪುತ್ರನೇ, ತೂರ್ ದೇಶದ ರಾಜನಿಗೆ ಈ ಶೋಕಗೀತೆಯನ್ನು ಹಾಡು. ಅವನಿಗೆ ಹೀಗೆ ಹೇಳು: ‘ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದ್ದಾನೆ:
“‘ನೀನೊಬ್ಬ ಆದರ್ಶ ಮನುಷ್ಯನಾಗಿದ್ದೆ.
ಸರ್ವಾಂಗಸುಂದರನೂ ಜ್ಞಾನದಿಂದ ತುಂಬಿದವನೂ ಆಗಿದ್ದೆ.
13 ದೇವರ ಉದ್ಯಾನವನವಾಗಿದ್ದ ಏದೆನಿನಲ್ಲಿ ನೀನಿದ್ದೆ.
ನಿನ್ನ ಬಳಿಯಲ್ಲಿ ಬಂಗಾರದ ಚೌಕಟ್ಟಿನಲ್ಲಿ ಕುಳ್ಳಿರಿಸಿದ
ವಜ್ರ, ವೈಢೂರ್ಯ, ನವರತ್ನಗಳ ಆಭರಣಗಳಿದ್ದವು.
ನೀನು ಸೃಷ್ಟಿಸಲ್ಪಟ್ಟ ದಿನದಲ್ಲಿ ಈ ಸೌಂದರ್ಯವು ನಿನಗೆ ಕೊಡಲ್ಪಟ್ಟಿತು.
ದೇವರು ನಿನ್ನನ್ನು ಬಲಾಢ್ಯನನ್ನಾಗಿ ಮಾಡಿದನು.
14 ನೀನು ಆರಿಸಲ್ಪಟ್ಟ ಕೆರೂಬಿಯರಲ್ಲಿ ಒಬ್ಬನಾಗಿದ್ದೆ.
ನಿನ್ನ ರೆಕ್ಕೆಗಳು ನನ್ನ ಸಿಂಹಾಸನದ ಮೇಲೆ ಚಾಚಿದ್ದವು.
ನಾನು ನಿನ್ನನ್ನು ದೇವರ ಪವಿತ್ರ ಪರ್ವತದಲ್ಲಿಟ್ಟೆನು.
ನೀನು ಬೆಂಕಿಯಂತೆ ಹೊಳೆಯುವ ರತ್ನಗಳ ಮೇಲೆ ನಡೆದಾಡಿದೆ.
15 ನಾನು ನಿನ್ನನ್ನು ಸೃಷ್ಟಿಸಿದಾಗ ನೀನು ಸದ್ಗುಣಿಯಾಗಿ ನಿರ್ದೋಷಿಯಾಗಿದ್ದಿ.
ಆದರೆ ನೀನು ದುಷ್ಟನಾಗುತ್ತಾ ಬಂದೆ.
16 ನಿನ್ನ ವ್ಯಾಪಾರವು ನಿನಗೆ ಐಶಬರ್ಯವನ್ನು ತಂದಿತು.
ಆದರೆ ಅದರೊಂದಿಗೆ ನಾನಾ ದುಷ್ಟತ್ವಗಳು ನಿನ್ನೊಳಗೆ ಬಂದು ನೀನು ಪಾಪ ಮಾಡಿದೆ.
ಆಗ ನಾನು ನಿನ್ನನ್ನು ಅಶುದ್ಧನೆಂದು ಪರಿಗಣಿಸಿ
ನಿನ್ನನ್ನು ದೇವರ ಪರ್ವತದಿಂದ ದಬ್ಬಿಬಿಟ್ಟೆನು.
ನೀನು ನನ್ನ ಕೆರೂಬಿಯರಲ್ಲಿ ವಿಶೇಷವಾದವನಾಗಿದ್ದೆ.
ನಿನ್ನ ರೆಕ್ಕೆಗಳು ನನ್ನ ಸಿಂಹಾಸನದ ಮೇಲೆ ಚಾಚಿರುತ್ತಿದ್ದವು.
ಆದರೆ ಬೆಂಕಿಯಂತೆ ಹೊಳೆಯುವ ರತ್ನಾಭರಣಗಳನ್ನೆಲ್ಲಾ
ತೆಗೆದಿಡಲು ನಿನ್ನನ್ನು ಬಲವಂತಪಡಿಸಿದೆ.
17 ನಿನ್ನ ಸೌಂದರ್ಯವು ನಿನಗೆ ಹೆಮ್ಮೆ ಏರುವಂತೆ ಮಾಡಿತು.
ನಿನ್ನ ಬನತೆಯು ನಿನ್ನ ಜ್ಞಾನವನ್ನು ಕೆಡಿಸಿತು.
ಆದ್ದರಿಂದ ನಿನ್ನನ್ನು ನೆಲಕ್ಕೆ ದಬ್ಬಿದೆ.
ಈಗ ಬೇರೆ ರಾಜರುಗಳು ನಿನ್ನನ್ನೆ ಎವೆಯಿಕ್ಕದೆ ನೋಡುತ್ತಾರೆ.
18 ನೀನು ಅನೇಕ ತಪ್ಪುಗಳನ್ನು ಮಾಡಿದೆ.
ನೀನು ಮೋಸಗಾರನಾದ ವ್ಯಾಪಾರಿ.
ಇದರಿಂದಾಗಿ ನೀನು ಪವಿತ್ರಸ್ಥಳವನ್ನು ಹೊಲೆ ಮಾಡಿರುವಿ.
ಆದ್ದರಿಂದ ನಿನ್ನೊಳಗೆ ಬೆಂಕಿಯನ್ನುಟು ಮಾಡಿ
ಅದು ನಿನ್ನನ್ನು ದಹಿಸುವಂತೆ ಮಾಡಿದೆನು.
ನೀನು ಸುಟ್ಟ ಬೂದಿಯಾದೆ.
ಈಗ ಎಲ್ಲರೂ ನಿನ್ನ ಲಜ್ಜಾತನವನ್ನು ನೋಡುವರು.
19 “‘ಬೇರೆ ಜನಾಂಗಗಳ ಜನರು
ನಿನಗೆ ಆದದ್ದನ್ನು ನೋಡಿ ಬೆಚ್ಚಿಬೆರಗಾದರು.
ನಿನಗಾದ ದುಸ್ಥಿತಿಯು ಜನರನ್ನು ಭಯಪಡಿಸಿತು.
ನಿನ್ನ ಅಂತ್ಯವಾಯಿತು!’”
ಚೀದೋನಿನ ವಿರುದ್ಧ ಸಂದೇಶ
20 ಯೆಹೋವನ ಸಂದೇಶ ನನಗೆ ಬಂದಿತು. ಆತನು ಹೀಗೆ ಹೇಳಿದನು: 21 “ನರಪುತ್ರನೇ, ಚೀದೋನಿನ ಕಡೆಗೆ ನೋಡಿ ನನ್ನ ಪರವಾಗಿ ನೀನೇ ಅದರ ವಿರುದ್ಧವಾಗಿ ಮಾತನಾಡು. 22 ನನ್ನ ಒಡೆಯನಾದ ಯೆಹೋವನು ಈ ಮಾತುಗಳನ್ನು ಹೇಳಿದನೆಂದು ಅವನಿಗೆ ತಿಳಿಸು:
“‘ಚೀದೋನೇ, ನಾನು ನಿನಗೆ ವಿರುದ್ಧವಾಗಿದ್ದೇನೆ.
ನಿನ್ನ ಜನರು ನನ್ನನ್ನು ಗೌರವಿಸಲು ಕಲಿಯುವರು.
ನಾನು ಚೀದೋನನ್ನು ಶಿಕ್ಷಿಸಿದಾಗ
ನಾನೇ ಯೆಹೋವನೆಂದು ಜನರಿಗೆ ಗೊತ್ತಾಗುವದು.
ನಾನು ಪವಿತ್ರನು ಎಂದು ಅವರು ತಿಳಿದು ಆ ರೀತಿಯಾಗಿ ಅವರು ನನ್ನೊಂದಿಗೆ ವರ್ತಿಸುವರು.
23 ಚೀದೋನಿಗೆ ನಾನು ರೋಗಮರಣಗಳನ್ನು ಕಳುಹಿಸುವೆನು.
ನಗರದೊಳಗೆ ವಾಸಿಸುವ ಅನೇಕ ಮಂದಿ ಸಾಯುವರು.
ನಗರದ ಹೊರಗೆ ಖಡ್ಗವು ಅನೇಕರನ್ನು ಕೊಲ್ಲುವದು,
ಆಗ ಅವರು ನಾನು ಯೆಹೋವನೆಂದು ತಿಳಿಯುವರು.’”
ರಾಜ್ಯಗಳು ಇಸ್ರೇಲಿಗೆ ಹಾಸ್ಯ ಮಾಡುವದನ್ನು ನಿಲ್ಲಿಸುವರು
24 “‘ಇಸ್ರೇಲಿನ ಸುತ್ತಲಿರುವ ರಾಜ್ಯಗಳು ಅದನ್ನು ಹಗೆ ಮಾಡಿದರು. ಆ ರಾಜ್ಯಗಳಿಗೆ ಬಹು ದೊಡ್ಡ ಕಂಟಕವು ಬಂದೊದಗುವದು. ಆಗ ಹರಿತವಾದ ಮುಳ್ಳಾಗಲಿ ಮುಳ್ಳಿನ ಪೊದೆಗಳಾಗಲಿ ಇಸ್ರೇಲಿನ ಜನರನ್ನು ಬಾಸಿ ಮಾಡಲು ಇರುವದಿಲ್ಲ. ಆಗ ನಾನು ಅವರ ಒಡೆಯನಾದ ಯೆಹೋವನು ಎಂದು ಅವರು ತಿಳಿಯುವರು.’”
25 ನನ್ನ ಒಡೆಯನಾದ ಯೆಹೋವನು ಹೀಗೆ ಹೇಳಿದನು: “ಬೇರೆ ದೇಶಗಳಿಗೆ ನಾನು ಇಸ್ರೇಲರನ್ನು ಚದರಿಸಿದೆನು. ಆದರೆ ತಿರುಗಿ ಇಸ್ರೇಲರನ್ನೆಲ್ಲಾ ಒಟ್ಟುಗೂಡಿಸುವೆನು. ಆಗ ಆ ದೇಶದವರು ನಾನು ಪವಿತ್ರವಾದ ದೇವರೆಂದು ತಿಳಿದು ಆ ರೀತಿಯಾಗಿ ನನ್ನನ್ನು ನೋಡುವರು. ಆಗ ಇಸ್ರೇಲರು ತಮ್ಮ ದೇಶದಲ್ಲಿ ವಾಸಮಾಡುವರು. ಆ ದೇಶವನ್ನು ನನ್ನ ಸೇವಕನಾದ ಯಾಕೋಬನಿಗೆ ನಾನು ಕೊಟ್ಟಿದ್ದೆನು. 26 ಆ ದೇಶದಲ್ಲಿ ಅವರು ಸುರಕ್ಷಿತವಾಗಿ ವಾಸಿಸುವರು; ಮನೆಗಳನ್ನು ಕಟ್ಟಿ ದ್ರಾಕ್ಷಿತೋಟಗಳನ್ನು ಮಾಡುವರು. ಅವರನ್ನು ದೆಬಷೀಸಿದ ರಾಜ್ಯಗಳನ್ನು ದಂಡಿಸುವೆನು. ಆಗ ಇಸ್ರೇಲ್ ಜನರು ಸುರಕ್ಷಿತವಾಗಿ ಜೀವಿಸುವರು; ನಾನೇ ದೇವರಾದ ಯೆಹೋವನು ಎಂದು ತಿಳಿದುಕೊಳ್ಳುವರು.”