ಹೊರಗಿನ ದ್ವಾರ
44
ಆ ಬಳಿಕ ನನ್ನನ್ನು ಆ ಮನುಷ್ಯನು ಆಲಯದ ಪೂರ್ವದ್ವಾರಕ್ಕೆ ತಂದನು. ನಾವು ದ್ವಾರದ ಹೊರಗಿದ್ದೆವು. ದ್ವಾರವು ಮುಚ್ಚಿತ್ತು. ಆಗ ಯೆಹೋವನು ನನಗೆ ಹೀಗೆಂದನು, “ಈ ದ್ವಾರವು ಮುಚ್ಚಿಯೇ ಇರಬೇಕು. ಇದು ತೆರೆಯಲ್ಪಡುವದಿಲ್ಲ. ಇದರ ಮೂಲಕ ಯಾರೂ ಪ್ರವೇಶ ಮಾಡುವದಿಲ್ಲ. ಯಾಕೆಂದರೆ ಇಸ್ರೇಲಿನ ದೇವರಾದ ಯೆಹೋವನು ಈ ದ್ವಾರದ ಮೂಲಕ ಪ್ರವೇಶಿಸಿದ್ದನು. ಆದ್ದರಿಂದ ಇದು ಮುಚ್ಚಿಯೇ ಇರಬೇಕು. ಜನರ ಅಧಿಪತಿಯು ಯೆಹೋವನ ಸನ್ನಿಧಿಯಲ್ಲಿ ಊಟಮಾಡಲು ಬರುವಾಗ ಅವನು ಮಾತ್ರ ಈ ದ್ವಾರದ ಬಳಿ ಕುಳಿತುಕೊಳ್ಳಬಹುದು. ಅಧಿಪತಿಯು ದ್ವಾರದ ಮಂಟಪದ ಮೂಲಕ ಪ್ರವೇಶಿಸಬೇಕು ಮತ್ತು ಅದೇ ಮಾರ್ಗದಲ್ಲಿ ಹೊರ ಬರಬೇಕು.”
ಆಲಯದ ಪವಿತ್ರತೆ
ಆ ಬಳಿಕ ನನ್ನನ್ನು ಉತ್ತರದ ದ್ವಾರದ ಮೂಲಕ ಆಲಯದ ಮುಂಭಾಗಕ್ಕೆ ಅವನು ಕರೆದುಕೊಂಡು ಹೋದನು. ನಾನು ನೋಡಿದಾಗ ಯೆಹೋವನ ತೇಜಸ್ಸು ಆತನ ಆಲಯವನ್ನು ತುಂಬುತ್ತಿತ್ತು. ನಾನು ಸಾಷ್ಟಾಂಗವೆರಗಿದೆನು. ಆಗ ಯೆಹೋವನು ಹೇಳಿದ್ದೇನೆಂದರೆ, “ನರಪುತ್ರನೇ, ಕಿವಿಯಾರೆ ಕೇಳು, ಕಣ್ಣಾರೆ ನೋಡಿ ಅರ್ಥಮಾಡಿಕೊ. ಪವಿತ್ರಾಲಯದ ಎಲ್ಲಾ ವಿಧಿನಿಯಮಗಳನ್ನು ಗಮನವಿಟ್ಟು ಕೇಳು. ಆಲಯದೊಳಕ್ಕೆ ಬರುವ ಪ್ರವೇಶ ದ್ವಾರಗಳನ್ನೂ ಪವಿತ್ರಸ್ಥಳದಿಂದ ಹೊರ ಹೋಗುವ ಪ್ರವೇಶ ದ್ವಾರಗಳನ್ನೂ ಗಮನವಿಟ್ಟು ನೋಡು. ಅನಂತರ ನನ್ನ ಮಾತಿಗೆ ವಿಧೇಯರಾಗಲು ನಿರಾಕರಿಸುವ ಎಲ್ಲಾ ಇಸ್ರೇಲರಿಗೆ ಹೀಗೆ ಹೇಳು: ‘ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, ಇಸ್ರೇಲ್ ಜನಾಂಗವೇ, ನೀವು ಮಾಡಿರುವ ಭಯಂಕರ ಕೃತ್ಯಗಳು ನನಗೆ ಸಾಕಾಗಿವೆ. ನೀವು ನನ್ನ ಆಲಯದೊಳಗೆ ಅನ್ಯರನ್ನು ತಂದಿರುತ್ತೀರಿ. ಅವರು ಸುನ್ನತಿಯಾದವರಾಗಿರಲಿಲ್ಲ. ಅವರು ಸಂಪೂರ್ಣವಾಗಿ ನನ್ನನ್ನು ನಂಬಿರಲಿಲ್ಲ. ಈ ರೀತಿಯಾಗಿ ನೀವು ನನ್ನ ಆಲಯವನ್ನು ಹೊಲೆ ಮಾಡಿರುತ್ತೀರಿ. ನೀವು ನಾವು ಮಾಡಿಕೊಂಡ ಒಡಂಬಡಿಕೆಯನ್ನು ಮುರಿದುಬಿಟ್ಟಿರಿ. ಭಯಂಕರ ಕೃತ್ಯಗಳನ್ನು ಮಾಡಿ ಆಮೇಲೆ ನನಗೆ ರೊಟ್ಟಿ, ಕೊಬ್ಬು, ರಕ್ತಗಳ ಕಾಣಿಕೆ ಅರ್ಪಿಸುತ್ತೀರಿ. ಆದರೆ ಇವೆಲ್ಲಾ ನನ್ನ ಆಲಯವನ್ನು ಅಶುದ್ಧಗೊಳಿಸುತ್ತಿವೆ. ನೀವು ನನ್ನ ಪವಿತ್ರ ವಸ್ತುಗಳನ್ನು ಅಲಕ್ಷ್ಯಮಾಡಿದಿರಿ. ನನ್ನ ಪವಿತ್ರಸ್ಥಳದ ಜವಾಬ್ದಾರಿಕೆಯನ್ನು ನೀವು ಅನ್ಯರ ವಶಮಾಡಿದ್ದೀರಿ.’”
ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ಇಸ್ರೇಲರೊಂದಿಗೆ ವಾಸವಾಗಿರುವ ಅನ್ಯಜನರೊಳಗೆ ತನುಮನಗಳಲ್ಲಿ ಸುನ್ನತಿಯಾಗಿಲ್ಲದವನು ನನ್ನ ಪವಿತ್ರಾಲಯವನ್ನು ಪ್ರವೇಶಿಸಕೂಡದು. 10 ಗತಕಾಲದಲ್ಲಿ ಇಸ್ರೇಲರು ನನ್ನನ್ನು ತ್ಯಜಿಸಿದಾಗ ಲೇವಿಯರು ನನ್ನನ್ನು ಬಿಟ್ಟುಹೋದರು. ಇಸ್ರೇಲರು ನನ್ನನ್ನು ಬಿಟ್ಟು ವಿಗ್ರಹಗಳನ್ನು ಪೂಜಿಸಿದರು. ಲೇವಿಯರು ಮಾಡಿದ ಪಾಪಕ್ಕಾಗಿ ಶಿಕ್ಷಿಸಲ್ಪಡುವರು. 11 ನನ್ನ ಪವಿತ್ರಸ್ಥಳದಲ್ಲಿ ಸೇವೆಮಾಡಲು ಲೇವಿಯರು ಆರಿಸಲ್ಪಟ್ಟಿರುತ್ತಾರೆ. ಅವರು ಆಲಯದ ಪ್ರವೇಶ ದ್ವಾರವನ್ನು ಕಾವಲು ಕಾಯ್ದರು. ಆಲಯದೊಳಗೆ ಸೇವೆಮಾಡಿದರು. ಜನರು ಅರ್ಪಿಸುವ ಪ್ರಾಣಿಗಳನ್ನು ವಧಿಸಿ ಯಜ್ಞಕ್ಕಾಗಿ ಅವುಗಳನ್ನು ತಯಾರುಮಾಡಿ ಸರ್ವಾಂಗಹೋಮ ಯಜ್ಞಗಳನ್ನು ಸಮರ್ಪಿಸಿದರು. ಜನರಿಗೆ ಸಹಾಯ ಮಾಡಿ, ಅವರ ಸೇವೆಮಾಡಲು ಅವರು ಆರಿಸಲ್ಪಟ್ಟಿದ್ದಾರೆ. 12 ಆದರೆ ಆ ಲೇವಿಯರು, ಜನರು ನನಗೆ ವಿರುದ್ಧವಾಗಿ ಪಾಪ ಮಾಡುವಂತೆ ಸಹಾಯಮಾಡಿದರು. ಜನರು ತಮ್ಮ ವಿಗ್ರಹಗಳನ್ನು ಪೂಜಿಸುವಂತೆ ಅವರಿಗೆ ಸಹಾಯ ಮಾಡಿದರು. ಆದ್ದರಿಂದ ನಾನು ವಾಗ್ದಾನ ಮಾಡುವದೇನೆಂದರೆ, ‘ಅವರು ಮಾಡಿದ ಪಾಪಗಳಿಗಾಗಿ ಅವರು ಶಿಕ್ಷಿಸಲ್ಪಡುವರು.’” ಇದು ನನ್ನ ಒಡೆಯನಾದ ಯೆಹೋವನ ನುಡಿ.
13 “ಆದ್ದರಿಂದ ಯಾಜಕರಂತೆ ಲೇವಿಯರು ನನಗೆ ಕಾಣಿಕೆಗಳನ್ನು ತರಕೂಡದು. ಅವರು ನನ್ನ ಪವಿತ್ರ ವಸ್ತುಗಳ ಬಳಿಗೂ, ಅತೀ ಪವಿತ್ರ ವಸ್ತುಗಳ ಬಳಿಗೂ ಬರಬಾರದು. ಅವರು ಮಾಡಿದ ಭಯಂಕರ ಕೃತ್ಯಗಳಿಗಾಗಿ ಅವರು ಅವಮಾನಿತರಾಗಬೇಕು. 14 ಆದರೆ ನಾನು ನನ್ನ ಆಲಯದಲ್ಲಿ ಸೇವೆಮಾಡಲು ಅವರಿಗೆ ಬಿಡುವೆನು. ಅವರು ಅದರೊಳಗೆ ಮಾಡಬೇಕಾದ ಸೇವೆಯನ್ನು ಮಾಡುವರು.
15 “ಯಾಜಕರೆಲ್ಲರೂ ಲೇವಿ ಕುಲಕ್ಕೆ ಸಂಬಂಧಪಟ್ಟವರು. ಆದರೆ ಲೇವಿಯರು ನನ್ನನ್ನು ಬಿಟ್ಟು ತೊಲಗಿದಾಗ ಚಾದೋಕನ ಸಂತತಿಯವರಾದ ಯಾಜಕರು ನನ್ನ ಪವಿತ್ರ ಸ್ಥಳವನ್ನು ಪರಾಂಬರಿಸಿದರು. ಆದ್ದರಿಂದ ಚಾದೋಕನ ಸಂತತಿಯವರು ಮಾತ್ರ ನನಗೆ ಕಾಣಿಕೆಗಳನ್ನು ಸಮರ್ಪಿಸುವರು. ಅವರು ನನ್ನ ಸನ್ನಿಧಿಯಲ್ಲಿ ನಿಂತು ಯಜ್ಞಮಾಡಲ್ಪಡುವ ಪ್ರಾಣಿಗಳ ಕೊಬ್ಬು ಮತ್ತು ರಕ್ತವನ್ನು ನನಗೆ ಸಮರ್ಪಿಸುವರು.” ಇದು ನನ್ನ ಒಡೆಯನಾದ ಯೆಹೋವನ ನುಡಿ. 16 “ಅವರು ನನ್ನ ಪವಿತ್ರಸ್ಥಳವನ್ನು ಪ್ರವೇಶಿಸುವರು. ನನ್ನ ಮೇಜಿನ ಬಳಿಗೆ ನನಗೆ ಸೇವೆಮಾಡಲು ಬರುವರು. ನಾನು ಅವರಿಗೆ ವಹಿಸಿರುವ ವಸ್ತುಗಳನ್ನು ಪರಾಂಬರಿಸುವರು. 17 ಒಳಗಿನ ಪ್ರಾಕಾರದ ಪ್ರವೇಶ ದ್ವಾರವನ್ನು ಹೊಕ್ಕುವಾಗ ಅವರು ನಾರುಮಡಿ ಬಟ್ಟೆಯನ್ನು ಧರಿಸುವರು. ಅವರು ಒಳಗಿನ ಪ್ರಾಕಾರದ ಪ್ರವೇಶ ದ್ವಾರದಲ್ಲಾಗಲಿ ಆಲಯದೊಳಗಾಗಲಿ ಸೇವೆಮಾಡುವಾಗ ಉಣ್ಣೆಯಿಂದ ಮಾಡಿದ ಬಟ್ಟೆಯನ್ನು ಧರಿಸಿಕೊಳ್ಳುವದಿಲ್ಲ. 18 ಅವರು ನಾರುಮಡಿಯ ಮುಂಡಾಸನ್ನು ಧರಿಸಿಕೊಳ್ಳುವರು. ಅದೇ ಬಟ್ಟೆಯ ಚಡ್ಡಿಯನ್ನೂ ಧರಿಸುವರು. ಅವರಿಗೆ ಬೆವರು ಬರಿಸುವ ಯಾವ ಬಟ್ಟೆಯಾಗಲಿ ಅವರು ಧರಿಸುವದಿಲ್ಲ. 19 ಹೊರಗಿನ ಪ್ರಾಕಾರದಲ್ಲಿರುವ ಜನರ ಬಳಿಗೆ ಅವರು ಹೋಗುವಾಗ, ನನ್ನ ಸೇವೆಮಾಡಲು ಅವರು ಧರಿಸಿಕೊಂಡಿದ್ದ ವಸ್ತ್ರಗಳನ್ನು ತೆಗೆದಿಡುವರು. ಒಳಗಿನ ಪ್ರಾಕಾರದಲ್ಲಿರುವ ವಿಶೇಷವಾದ ಉಗ್ರಾಣ ಕೋಣೆಯಲ್ಲಿ ಅವರು ಆ ವಸ್ತ್ರಗಳನ್ನು ಇಡುವರು ಮತ್ತು ಹೊರಗಿನ ಪ್ರಾಕಾರದಲ್ಲಿರುವ ಜನರ ಬಳಿಗೆ ಹೋಗುವಾಗ ಬೇರೆ ಬಟ್ಟೆಗಳನ್ನು ಧರಿಸಿಕೊಳ್ಳುವರು. ಹೀಗೆ ಅವರು ಮಾಡುವದರಿಂದ ಸಾಮಾನ್ಯ ಜನರು ಆ ವಿಶೇಷವಾದ ಬಟ್ಟೆಗಳನ್ನು ಮುಟ್ಟಿದಂತಾಗುವುದು.
20 “ಆ ಯಾಜಕರು ತಮ್ಮ ತಲೆಯನ್ನು ಬೋಳಿಸುವದೂ ಇಲ್ಲ ಮತ್ತು ತಲೆಕೂದಲನ್ನು ಉದ್ದವಾಗಿ ಬೆಳೆಸುವದೂ ಇಲ್ಲ. ಇದು ಅವರಲ್ಲಿರುವ ಶೋಕವನ್ನು ಸೂಚಿಸುತ್ತದೆ. ಯಾಜಕರು ಯೆಹೋವನ ಸೇವೆಮಾಡುವಾಗ ಸಂತೋಷದಿಂದಿರಬೇಕು. ಅವರು ತಮ್ಮ ತಲೆಕೂದಲನ್ನು ಸಣ್ಣದಾಗಿರಿಸುವದಕ್ಕೆ ಕತ್ತರಿಸಬಹುದು. 21 ಯಾಜಕರು ಒಳಗಿನ ಪ್ರಾಕಾರವನ್ನು ಪ್ರವೇಶಿಸುವಾಗ ದ್ರಾಕ್ಷಾರಸವನ್ನು ಕುಡಿದಿರಬಾರದು. 22 ಯಾಜಕರು ವಿಧವೆಯರನ್ನಾಗಲಿ ವಿವಾಹವಿಚ್ಛೇದನಗೊಂಡ ಸ್ತ್ರೀಯರನ್ನಾಗಲಿ ಮದುವೆಯಾಗಕೂಡದು. ಇಸ್ರೇಲ್ ಸಂತತಿಯವಳೇ ಆಗಿರುವ ಕನ್ನಿಕೆಯನ್ನಾಗಲಿ ಅಥವಾ ಯಾಜಕನಾಗಿದ್ದ ತನ್ನ ಗಂಡನನ್ನು ಕಳೆದುಕೊಂಡ ವಿಧವೆಯನ್ನಾಗಲಿ ಮದುವೆಯಾಗಬೇಕು.
23 “ಯಾಜಕರು ಜನರಿಗೆ ಪವಿತ್ರ ವಸ್ತುಗಳ ಮತ್ತು ಪವಿತ್ರವಲ್ಲದ ವಸ್ತುಗಳ ಬಗ್ಗೆ ಉಪದೇಶಿಸಬೇಕು. ಒಬ್ಬನನ್ನು ಅಶುದ್ಧನನ್ನಾಗಿ ಮಾಡುವಂಥವುಗಳ ಬಗ್ಗೆ ಇರುವ ನಿಯಮಗಳನ್ನು ಅವರು ಜನರಿಗೆ ಉಪದೇಶಿಸಬೇಕು. 24 ವ್ಯಾಜ್ಯಗಳಿಗೆ ತೀರ್ಪು ನೀಡುವ ನ್ಯಾಯಾಧಿಶರಾಗಿ ಯಾಜಕರು ಸೇವೆಮಾಡಬೇಕು ಮತ್ತು ನನ್ನ ಆಡಳಿತವನ್ನು ಆಧರಿಸಿ ಅವರು ತೀರ್ಪು ನೀಡಬೇಕು. ಅವರು ವಿಶೇಷವಾದ ಕೂಟಗಳನ್ನು ಏರ್ಪಡಿಸುವಾಗ ನನ್ನ ವಿಧಿನಿಯಮಗಳನ್ನು ಅನುಸರಿಸುವರು ಮತ್ತು ವಿಶೇಷವಾದ ಎಲ್ಲಾ ರಜಾದಿನಗಳನ್ನು ಮತ್ತು ಸಬ್ಬತ್ ದಿನಗಳನ್ನು ಅವರು ಗೌರವಿಸುವರು. 25 ಸತ್ತ ಹೆಣದ ಬಳಿಗೆ ಹೋಗಿ ಅವರು ತಮ್ಮನ್ನು ಅಪವಿತ್ರ ಮಾಡಿಕೊಳ್ಳಬಾರದು. ಆದರೆ ಸತ್ತವರು ತಮ್ಮ ಹೆತ್ತವರಾಗಲಿ ಮಕ್ಕಳಾಗಲಿ ಅಥವಾ ಮದುವೆಯಾಗದಿದ್ದ ಸಹೋದರ ಸಹೋದರಿಯರಾಗಲಿ ಆಗಿದ್ದಲ್ಲಿ ಅವರು ತಮ್ಮನ್ನು ಅಪವಿತ್ರ ಮಾಡಿಕೊಳ್ಳಬೇಕಾಗುತ್ತದೆ. 26 ಆ ಯಾಜಕನು ತನ್ನನ್ನು ಶುದ್ಧ ಮಾಡಿಕೊಂಡ ತರುವಾಯ ತಾನು ಏಳು ದಿವಸ ಕಾಯಬೇಕು. 27 ಅನಂತರ ಅವನು ಪವಿತ್ರಸ್ಥಳಕ್ಕೆ ತಿರುಗಿ ಹೋಗಬಹುದು. ಆದರೆ ಒಳಗಿನ ಪ್ರಾಕಾರದೊಳಗೆ ಹೋಗುವ ದಿನದಂದು ಯಾಜಕನು ಮೊದಲು ತನಗಾಗಿ ಪಾಪಪರಿಹಾರಕಯಜ್ಞವನ್ನು ಸಮರ್ಪಿಸಿಕೊಳ್ಳಬೇಕು.” ಇದು ನನ್ನ ಒಡೆಯನಾದ ಯೆಹೋವನ ನುಡಿ.
28 “ಲೇವಿಯರ ಆಸ್ತಿಯು ನಾನೇ, ಇಸ್ರೇಲರೊಳಗೆ ಅವರಿಗೆ ಯಾವ ಆಸ್ತಿಯೂ ಇರುವದಿಲ್ಲ. ನಾನೇ ಅವರ ಸಾಬಸ್ತ್ಯ. 29 ಜನರು ಧಾನ್ಯಸಮರ್ಪಣೆ, ಪಾಪಪರಿಹಾರಕಯಜ್ಞ, ದೋಷಪರಿಹಾರಕಯಜ್ಞಕ್ಕೆ ತಂದ ಕಾಣಿಕೆಯೇ ಅವರ ಆಹಾರವಾಗಿರುವದು. 30 ಎಲ್ಲಾ ಪ್ರಥಮಫಲವು ಯಾಜಕರಿಗೆ ಸಲ್ಲತಕ್ಕದ್ದು. ಅಲ್ಲದೆ ನೀವು ನಾದುವ ಮೊದಲನೆ ರೊಟ್ಟಿಯ ಹಿಟ್ಟು ಯಾಜಕರಿಗೆ ಕೊಡಬೇಕು. ಹೀಗೆ ಮಾಡಿದ್ದಲ್ಲಿ ನೀವು ಆಶೀರ್ವದಿಸಲ್ಪಡುತ್ತೀರಿ. 31 ಯಾಜಕರು ಸಾಬಭಾವಿಕವಾಗಿ ಸತ್ತು ಅಥವಾ ವನ್ಯಜಂತುಗಳು ಕೊಂದಿರುವ ಯಾವ ಪ್ರಾಣಿಯಾಗಲಿ ಪಕ್ಷಿಯಾಗಲಿ ಅದರ ಮಾಂಸವನ್ನು ತಿನ್ನಬಾರದು.