ಮೋಶೆಯ ಗೀತೆ
15
ಬಳಿಕ ಮೋಶೆ ಮತ್ತು ಇಸ್ರೇಲರು ಯೆಹೋವನಿಗೆ ಈ ಗೀತೆಯನ್ನು ಹಾಡತೊಡಗಿದರು:
“ನಾನು ಯೆಹೋವನಿಗೆ ಹಾಡುವೆನು.
ಆತನು ಮಹಾಕಾರ್ಯಗಳನ್ನು ಮಾಡಿದ್ದಾನೆ.
ಆತನು ಕುದುರೆಯನ್ನೂ ಸವಾರನನ್ನೂ
ಸಮುದ್ರದೊಳಗೆ ಮುಳುಗಿಸಿದನು.
ಯೆಹೋವನೇ ನನ್ನ ಬಲ,
ಆತನು ನನ್ನನ್ನು ರಕ್ಷಿಸುತ್ತಾನೆ.
ನನ್ನ ಬಲವೂ ಕೀರ್ತನೆಯೂ ಯಾಹುವೇ; ಆತನಿಂದ ನಮಗೆ ರಕ್ಷಣೆ ಉಂಟಾಯಿತು.
ಯೆಹೋವನು ನನ್ನ ದೇವರು.
ಮತ್ತು ನಾನು ಆತನನ್ನು ಸ್ತುತಿಸುತ್ತೇನೆ.
ಯೆಹೋವನೇ ನಮ್ಮ ಪೂರ್ವಿಕರ ದೇವರು.
ನಾನು ಆತನನ್ನು ಸನ್ಮಾನಿಸುತ್ತೇನೆ.
ಯೆಹೋವನೇ ಯುದ್ಧವೀರನು.
ಆತನ ನಾಮಧೇಯವು ಯೆಹೋವನೇ.
ಆತನು ಫರೋಹನ ರಥಗಳನ್ನೂ
ಸೈನಿಕರನ್ನೂ ಸಮುದ್ರದೊಳಗೆ ಕೆಡವಿದನು;
ಫರೋಹನ ಮಹಾವೀರರನ್ನು
ಕೆಂಪು ಸಮುದ್ರದಲ್ಲಿ ಮುಳುಗಿಸಿಬಿಟ್ಟನು.
ಸಾಗರವು ಅವರನ್ನು ಮುಚ್ಚಿಕೊಂಡಿತು;
ಆಳವಾದ ನೀರಿನಲ್ಲಿ ಅವರು ಬಂಡೆಗಳಂತೆ ಮುಳುಗಿದರು.
“ನಿನ್ನ ಭುಜಬಲವು ಎಷ್ಟೋ ಶಕ್ತಿಯುಳ್ಳದ್ದಾಗಿದೆ.
ಯೆಹೋವನೇ, ನಿನ್ನ ಭುಜಬಲವು ವೈರಿಯನ್ನು ನುಚ್ಚುನೂರು ಮಾಡಿತು.
ನೀನು ಅತ್ಯಧಿಕ ಮಹತ್ವವುಳ್ಳವನಾಗಿ,
ನನಗೆದುರು ನಿಲ್ಲುವವರನ್ನು ನಾಶಗೊಳಿಸಿದೆ.
ಬೆಂಕಿಯು ಹುಲ್ಲನ್ನು ಸುಡುವಂತೆ
ನಿನ್ನ ಕೋಪವು ಅವರನ್ನು ನಾಶಮಾಡಿತು.
ನೀನು ಊದಿದ ಮಹಾಗಾಳಿಯಿಂದ
ನೀರು ಒತ್ತಟ್ಟಿಗೆ ಸೇರಿತು.
ವೇಗವಾಗಿ ಹರಿಯುವ ನೀರು ಗಟ್ಟಿಯಾದ ಗೋಡೆಯಾಯಿತು.
ಸಾಗರಗರ್ಭದೊಳಗಿನ ಜಲವು ಗಟ್ಟಿಯಾಯಿತು.
“‘ನಾವು ಅವರನ್ನು ಬೆನ್ನಟ್ಟಿ ಹಿಡಿಯುವೆವು;
ನಾವು ಅವರ ಸಂಪತ್ತನ್ನೆಲ್ಲಾ ತೆಗೆದುಕೊಳ್ಳುವೆವು.
ನಾವು ಖಡ್ಗದಿಂದ ಅವರನ್ನು ಸಂಹರಿಸುವೆವು.
ನಮ್ಮ ಭುಜಬಲದಿಂದ ಅವರ ಸ್ವತ್ತುಗಳನ್ನೆಲ್ಲಾ ವಶಪಡಿಸಿಕೊಳ್ಳುವೆವು’
ಎಂದುಕೊಂಡರು ವೈರಿಗಳು.
10 ಆದರೆ ನೀನು ಅವರ ಮೇಲೆ ಊದಿದ ಗಾಳಿಯಿಂದ
ಸಮುದ್ರವು ಅವರನ್ನು ಮುಚ್ಚಿಕೊಂಡಿತು;
ಅವರು ಸೀಸದಂತೆ
ಅಗಾಧವಾದ ಸಮುದ್ರದಲ್ಲಿ ಮುಳುಗಿದರು.
11 “ಯೆಹೋವನೇ, ದೇವರುಗಳಲ್ಲಿ ನಿನಗೆ ಸಮಾನರು ಯಾರು?
ಪರಿಶುದ್ಧತೆಯಲ್ಲಿ ನೀನೇ ಸರ್ವೋತ್ತಮನು.
ಭಯಂಕರ ಕಾರ್ಯಗಳನ್ನು ಮಾಡಿ ಪ್ರಖ್ಯಾತಿಹೊಂದಿದವನೂ ನೀನೇ.
ಅದ್ಭುತಕಾರ್ಯಗಳನ್ನು ಮಾಡುವಾತನೂ ನೀನೇ.
12 ನೀನು ನಿನ್ನ ಬಲಗೈಯನ್ನು ಚಾಚಿದಾಗ
ಭೂಮಿಯು ಶತ್ರುಗಳನ್ನು ನುಂಗಿಬಿಟ್ಟಿತು!
13 ನೀನು ಬಿಡುಗಡೆ ಮಾಡಿದ ನಿನ್ನ ಜನರನ್ನು
ಪ್ರೀತಿಯಿಂದ ನಡೆಸುವೆ.
ನಿನ್ನ ಬಲದಿಂದ ನೀನು ಈ ಜನರನ್ನು
ನಿನ್ನ ಪವಿತ್ರವಾದ ದೇಶಕ್ಕೆ ನಡಿಸುವೆ.
14 “ಬೇರೆ ಜನಾಂಗಗಳವರು ಇದನ್ನು ಕೇಳಿ ಭಯಭೀತರಾಗುವರು;
ಫಿಲಿಷ್ಟಿಯರು ಭಯದಿಂದ ತಲ್ಲಣಿಸುವರು.
15 ಆಗ ಎದೋಮಿನ ಕುಟುಂಬಗಳು ಭಯಭೀತರಾಗುವರು.
ಮೋವಾಬಿನ ನಾಯಕರು ಭಯದಿಂದ ನಡುಗುವರು.
ಕಾನಾನಿನ ಜನರು ತಮ್ಮ ಧೈರ್ಯವನ್ನು ಕಳೆದುಕೊಳ್ಳುವರು.
16 ನಿನ್ನ ಭುಜಬಲವನ್ನು ಅವರು ಕಂಡು
ಭಯಭೀತರಾಗುವರು.
ಯೆಹೋವನ ಜನರು ದಾಟಿ ಹೋಗುವವರೆಗೆ,
ನೀನು ರೂಪಿಸಿದ ಜನರು ದಾಟಿ ಹೋಗುವವರೆಗೆ, ಅವರು ಬಂಡೆಯಂತೆ ಮೌನವಾಗಿರುವರು.
17 ನೀನು ನಿನ್ನ ಜನರನ್ನು
ನಿನ್ನ ಬೆಟ್ಟದ ಸೀಮೆಗೂ
ನಿನ್ನ ಸಿಂಹಾಸನಕ್ಕಾಗಿ ನೀನು ಸಿದ್ಧಮಾಡಿದ ಸ್ಥಳಕ್ಕೂ ನಡಿಸುವೆ.
ಯೆಹೋವನೇ, ಒಡೆಯನೇ, ನಿನ್ನ ಕೈಗಳಿಂದ ನಿನ್ನ ಆಲಯವನ್ನು ಕಟ್ಟು.
18 “ಯೆಹೋವನು ಎಂದೆಂದಿಗೂ ಆಳುವನು!”
19 ಫರೋಹನ ಕುದುರೆಗಳು, ಸವಾರರು, ರಥಗಳು ಸಮುದ್ರದೊಳಕ್ಕೆ ಹೋದಾಗ ಸಮುದ್ರದ ನೀರು ಅವರನ್ನು ಆವರಿಸಿಕೊಳ್ಳುವಂತೆ ಯೆಹೋವನು ಮಾಡಿದನು. ಇಸ್ರೇಲರಾದರೊ ಸಮುದ್ರದೊಳಗಿನ ಒಣನೆಲದಲ್ಲಿ ಸಮುದ್ರವನ್ನು ದಾಟಿಹೋದರು.
20 ಆರೋನನ ಅಕ್ಕ ಮಿರ್ಯಾಮಳು ಪ್ರವಾದಿನಿಯಾಗಿದ್ದು ದಮ್ಮಡಿಯನ್ನು ಕೈಯಲ್ಲಿ ತೆಗೆದುಕೊಂಡಳು. ಮಿರ್ಯಾಮಳು ಮತ್ತು ಸ್ತ್ರೀಯರು ಹಾಡುವುದಕ್ಕೂ ಕುಣಿಯುವುದಕ್ಕೂ ಪ್ರಾರಂಭಿಸಿದರು. 21 ಮಿರ್ಯಾಮಳು ಅವರ ಹಾಡಿಗೆ ಹೀಗೆ ಪಲ್ಲವಿ ಹಾಡಿದಳು:
“ಯೆಹೋವನಿಗೆ ಗಾನಮಾಡಿರಿ;
ಆತನು ಮಹಾಜಯಶಾಲಿಯಾದನು.
ಕುದುರೆಗಳನ್ನೂ ರಾಹುತರನ್ನೂ
ಸಮುದ್ರದೊಳಗೆ ಮುಳುಗಿಸಿ ನಾಶಮಾಡಿದನು…”
ಅರಣ್ಯದಲ್ಲಿ ಕಹಿನೀರು ಸಿಹಿಯಾದದ್ದು
22 ಮೋಶೆಯು ಇಸ್ರೇಲರನ್ನು ಕೆಂಪುಸಮುದ್ರದಿಂದ ಮುನ್ನಡೆಸಿದನು. ಅವರು ಶೂರಿನ ಅರಣ್ಯದೊಳಗೆ ಹೋದರು. ಅವರು ಅರಣ್ಯದಲ್ಲಿ ಮೂರು ದಿನಗಳವರೆಗೆ ಪ್ರಯಾಣ ಮಾಡಿದರು. ಜನರಿಗೆ ಎಲ್ಲಿಯೂ ನೀರು ಸಿಕ್ಕಲಿಲ್ಲ. 23 ಆ ಬಳಿಕ ಅವರು ಮಾರಾ ಎಂಬ ಸ್ಥಳವನ್ನು ತಲುಪಿದರು. ಅಲ್ಲಿ ನೀರಿತ್ತು. ಆದರೆ ಅವರು ಆ ನೀರನ್ನು ಕುಡಿಯಲಾಗಲಿಲ್ಲ. ಯಾಕೆಂದರೆ ಅದು ಬಹು ಕಹಿಯಾಗಿತ್ತು. (ಆದಕಾರಣವೇ ಆ ಸ್ಥಳಕ್ಕೆ “ಮಾರಾ” ಎಂಬುದಾಗಿ ಹೆಸರು ಕೊಡಲ್ಪಟ್ಟಿತ್ತು.)
24 ಅವರು ಮೋಶೆಗೆ ದೂರು ಹೇಳತೊಡಗಿದರು. “ಈಗ, ನಾವೇನು ಕುಡಿಯೋಣ?” ಎಂದು ಅವರು ಕೇಳಿದರು.
25 ಮೋಶೆಯು ಯೆಹೋವನಿಗೆ ಪ್ರಾರ್ಥಿಸಲು ಆತನು ಅವನಿಗೆ ಒಂದು ಗಿಡವನ್ನು ತೋರಿಸಿದನು. ಮೋಶೆಯು ಆ ಗಿಡವನ್ನು ನೀರಿನಲ್ಲಿ ಹಾಕಿದಾಗ ಕಹಿನೀರು ಸಿಹಿ ನೀರಾಯಿತು.
ಆ ಸ್ಥಳದಲ್ಲಿ ಯೆಹೋವನು ಅವರಿಗಾಗಿ ನಿಯಮವನ್ನು ಮಾಡಿದನು. ಯೆಹೋವನು ಅವರ ನಂಬಿಕೆಯನ್ನು ಸಹ ಪರೀಕ್ಷಿಸಿದನು. 26 ಆತನು ಅವರಿಗೆ, “ನೀವು ನಿಮ್ಮ ದೇವರಾದ ಯೆಹೋವನ ಮಾತನ್ನು ಶ್ರದ್ಧೆಯಿಂದ ಕೇಳಿ ಆತನ ದೃಷ್ಟಿಗೆ ಯೋಗ್ಯವಾದವುಗಳನ್ನು ಮಾಡಬೇಕು; ಆತನ ಆಜ್ಞೆಗಳಿಗೆ ವಿಧೇಯರಾಗಿದ್ದು ಆತನ ಕಟ್ಟಳೆಗಳನ್ನೆಲ್ಲಾ ಅನುಸರಿಸಬೇಕು. ಆಗ ನಾನು ಈಜಿಪ್ಟಿನವರಿಗೆ ಉಂಟುಮಾಡಿದ ಕಾಯಿಲೆಗಳಲ್ಲಿ ಒಂದನ್ನೂ ನಿಮಗೆ ಬರಗೊಡಿಸುವುದಿಲ್ಲ. ಯೆಹೋವನೆಂಬ ನಾನೇ ನಿಮಗೆ ಆರೋಗ್ಯದಾಯಕನಾಗಿದ್ದೇನೆ” ಎಂದು ಹೇಳಿದನು.
27 ಬಳಿಕ ಜನರು ಏಲೀಮಿಗೆ ಪ್ರಯಾಣ ಮಾಡಿದರು. ಏಲೀಮಿನಲ್ಲಿ ನೀರಿನ ಹನ್ನೆರಡು ಬುಗ್ಗೆಗಳಿದ್ದವು; ಅಲ್ಲಿ ಎಪ್ಪತ್ತು ಖರ್ಜೂರದ ಮರಗಳಿದ್ದವು. ಆದ್ದರಿಂದ ಅವರು ನೀರಿನ ಹತ್ತಿರ ತಮ್ಮ ಪಾಳೆಯ ಹಾಕಿದರು.