23
1 “ಬೇರೆಯವರ ವಿರುದ್ಧವಾಗಿ ಸುಳ್ಳು ಹೇಳಬೇಡಿರಿ. ನೀವು ನ್ಯಾಯಾಲಯದಲ್ಲಿ ದುಷ್ಟರ ಸಹಾಯಕ್ಕಾಗಿ ಸುಳ್ಳುಸಾಕ್ಷಿ ಹೇಳದಿರಿ.
2 “ದುಷ್ಕೃತ್ಯವನ್ನು ಮಾಡುವವರು ಬಹಳ ಮಂದಿಯೆಂದು ಅವರ ಜೊತೆಯಲ್ಲಿ ಸೇರಿಕೊಳ್ಳಬೇಡಿ. ಬಹಳ ಮಂದಿಯ ಮಾತಿಗೆ ಒಪ್ಪಿ ನ್ಯಾಯವನ್ನು ಕೆಡಿಸುವ ಸಾಕ್ಷಿಯನ್ನು ಹೇಳದಿರಿ.
3 “ಇದಲ್ಲದೆ ಬಡವನೆಂದು ಕರುಣಿಸಿ ಪಕ್ಷಪಾತದ ತೀರ್ಪನ್ನು ನೀಡಬಾರದು.
4 “ನೀವು ಕಳೆದುಹೋದ ಎತ್ತನ್ನಾಗಲಿ ಕತ್ತೆಯನ್ನಾಗಲಿ ನೋಡಿದರೆ, ಆಗ ನೀವು ಅದನ್ನು ಅದರ ಮಾಲಿಕನಿಗೆ ಹಿಂತಿರುಗಿಸಬೇಕು. ಒಂದುವೇಳೆ ಆ ಮಾಲಿಕನು ನಿಮ್ಮ ವೈರಿಯಾಗಿದ್ದರೂ ನೀವು ಈ ಕಾರ್ಯವನ್ನು ಮಾಡಬೇಕು.
5 “ಬಹು ತೂಕದ ಹೊರೆಯಿಂದ ನಡೆಯಲಾಗದೆ ಬಿದ್ದಿರುವ ಕತ್ತೆಯನ್ನು ನೀವು ನೋಡಿದರೆ ಅದನ್ನು ಎಬ್ಬಿಸಲು ನೀವು ನಿಂತು ಸಹಾಯ ಮಾಡಬೇಕು. ಆ ಕತ್ತೆಯು ನಿಮ್ಮ ವೈರಿಯದಾಗಿದ್ದರೂ ನೀವು ಅದಕ್ಕೆ ಸಹಾಯ ಮಾಡಬೇಕು.
6 “ಬಡವರು ವ್ಯಾಜ್ಯವಾಡುವಾಗ ನೀವು ಅನ್ಯಾಯವಾದ ತೀರ್ಪನ್ನು ನೀಡಕೂಡದು.
7 “ನೀವು ಮೋಸದ ಕಾರ್ಯದಿಂದ ದೂರವಾಗಿರಬೇಕು. ನಿರಪರಾಧಿಯೂ ನೀತಿವಂತನೂ ಆಗಿರುವ ವ್ಯಕ್ತಿಗೆ ಮರಣದಂಡನೆ ವಿಧಿಸಲೇಬಾರದು. ಅಂಥ ದುಷ್ಟತ್ವವನ್ನು ಮಾಡಿದವನಿಗೆ ನಾನು ದಂಡನೆಯನ್ನು ವಿಧಿಸದೆ ಬಿಡುವುದಿಲ್ಲ.
8 “ಲಂಚವನ್ನು ತೆಗೆದುಕೊಳ್ಳಕೂಡದು; ಲಂಚವು ಕಣ್ಣುಳ್ಳವರನ್ನು ಕುರುಡರನ್ನಾಗಿ ಮಾಡುತ್ತದೆ; ನಿರಪರಾಧಿಗೆ ಅನ್ಯಾಯವನ್ನು ಬರಮಾಡುತ್ತದೆ.
9 “ನೀವು ಪರದೇಶಸ್ಥರಿಗೆ ತೊಂದರೆ ಕೊಡಬಾರದು. ನೀವು ಈಜಿಪ್ಟಿನಲ್ಲಿ ಪರದೇಶಸ್ಥರಾಗಿದ್ದಿರೆಂಬುದನ್ನು ಜ್ಞಾಪಕಮಾಡಿಕೊಳ್ಳಿರಿ.
ವಿಶೇಷ ವಿಶ್ರಾಂತಿ ದಿನಗಳು
10 “ಆರು ವರ್ಷ ನಿಮ್ಮ ಭೂಮಿಯಲ್ಲಿ ಬೀಜಬಿತ್ತಿ ಬೆಳೆಯನ್ನು ಬೆಳೆಯಿರಿ.
11 ಆದರೆ ಏಳನೆಯ ವರ್ಷದಲ್ಲಿ ನಿಮ್ಮ ಭೂಮಿಯನ್ನು ಬೀಳುಬಿಡಿರಿ; ಬೀಜಬಿತ್ತಬೇಡಿರಿ. ಏಳನೆಯ ವರ್ಷ ನೀವು ಏನನ್ನೂ ಬೆಳೆಸಬಾರದು. ನಿಮ್ಮ ಭೂಮಿಯಲ್ಲಿ ಏನಾದರೂ ಬೆಳೆದರೆ ಅದನ್ನು ಬಡವರು ತಿನ್ನಲಿ. ಉಳಿದದ್ದನ್ನು ಪ್ರಾಣಿಗಳು ಮೇಯಲಿ. ನಿಮ್ಮ ದ್ರಾಕ್ಷಿತೋಟಗಳ ವಿಷಯದಲ್ಲಿಯೂ ಆಲಿವ್ ಮರಗಳ ತೋಪಿನ ವಿಷಯದಲ್ಲಿಯೂ ಇದೇ ನಿಯಮವನ್ನು ಪಾಲಿಸಬೇಕು.
12 “ಆರು ದಿನಗಳಲ್ಲಿ ನಿಮ್ಮ ಕೆಲಸ ಮಾಡಿರಿ. ಏಳನೆಯ ದಿನದಲ್ಲಿ ವಿಶ್ರಮಿಸಿಕೊಳ್ಳಿರಿ. ಏಳನೆಯ ದಿನದಲ್ಲಿ ನಿಮ್ಮ ಗುಲಾಮರೂ ಎತ್ತುಗಳೂ ಕತ್ತೆಗಳೂ ವಿದೇಶಿಯರೂ ವಿಶ್ರಮಿಸಿಕೊಳ್ಳಲಿ.
13 “ನೀವು ಈ ಆಜ್ಞೆಗಳಿಗೆಲ್ಲಾ ಜಾಗರೂಕತೆಯಿಂದ ವಿಧೇಯರಾಗಬೇಕು. ಸುಳ್ಳುದೇವರುಗಳನ್ನು ಆರಾಧಿಸಬೇಡಿರಿ. ನೀವು ಅವುಗಳ ಹೆಸರುಗಳನ್ನು ಉಚ್ಚರಿಸಲೂ ಕೂಡದು.
14 “ಪ್ರತಿವರ್ಷ ನೀವು ಮೂರುಜಾತ್ರೆಗಳನ್ನು ಮಾಡಬೇಕು.
15 ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕಾದ ಹಬ್ಬ ಅವುಗಳಲ್ಲಿ ಒಂದಾಗಿದೆ. ನಾನು ನಿಮಗೆ ಆಜ್ಞಾಪಿಸಿದಂತೆ ಈ ಜಾತ್ರೆಯಲ್ಲಿ ಏಳು ದಿನ ಹುಳಿಯಿಲ್ಲದ ರೊಟ್ಟಿಯನ್ನು ನೀವು ತಿನ್ನಬೇಕು. ಈ ಹಬ್ಬವು ಏಳು ದಿನಗಳವರೆಗೆ ನಡೆಯುವುದು. ನೀವು ಇದನ್ನು ಅಬೀಬ್ ತಿಂಗಳಲ್ಲಿ ಮಾಡಬೇಕು. ಯಾಕೆಂದರೆ ಈ ತಿಂಗಳಲ್ಲಿಯೇ ನೀವು ಈಜಿಪ್ಟಿನಿಂದ ಹೊರಗೆ ಬಂದಿರಿ! ಈ ಹಬ್ಬದಲ್ಲಿ ಪ್ರತಿಯೊಬ್ಬನೂ ನನಗೆ ಕಾಣಿಕೆಯನ್ನು ಅರ್ಪಿಸಬೇಕು.
16 “ಇದಲ್ಲದೆ ನೀವು ಸುಗ್ಗಿಯ ಜಾತ್ರೆಯನ್ನು ಆಚರಿಸಬೇಕು. ನೀವು ಬಿತ್ತಿದ ಹೊಲಗಳಲ್ಲಿ ಬೆಳೆಗಳನ್ನು ಕೊಯ್ಯುವ ಕಾಲದಲ್ಲಿ ಈ ಜಾತ್ರೆಯು ಆರಂಭವಾಗುವುದು.
“ಇದಲ್ಲದೆ ಫಲಸಂಗ್ರಹ ಜಾತ್ರೆಯನ್ನೂ ನೀವು ಆಚರಿಸಬೇಕು. ವರ್ಷಾಂತ್ಯದಲ್ಲಿ ನೀವು ಹೊಲತೋಟಗಳ ಬೆಳೆಗಳನ್ನೆಲ್ಲಾ ಒಟ್ಟುಗೂಡಿಸುವ ಕಾಲದಲ್ಲಿ ಇದು ಆರಂಭವಾಗುವುದು.
17 “ಹೀಗೆ ಪ್ರತಿವರ್ಷ ಮೂರು ಸಲ ಗಂಡಸರೆಲ್ಲರೂ ಒಂದು ವಿಶೇಷ ಸ್ಥಳಕ್ಕೆ ದೇವರಾದ ಯೆಹೋವನ ಸನ್ನಿಧಿಗೆ ಬರಬೇಕು.
18 “ನೀವು ನನಗೆ ಯಜ್ಞವನ್ನು ಅರ್ಪಿಸುವಾಗ ಯಜ್ಞಪಶುವಿನ ರಕ್ತದೊಡನೆ ಹುಳಿಬೆರಸಿದ ಏನನ್ನೂ ಸಮರ್ಪಿಸಬಾರದು. ಅಲ್ಲದೆ ಅದರ ಮಾಂಸವನ್ನು ಒಂದೇ ದಿನದಲ್ಲಿ ತಿಂದು ಮುಗಿಸಬೇಕು; ಮರುದಿನದವರೆಗೂ ಇಟ್ಟುಕೊಳ್ಳಬಾರದು.
19 “ಸುಗ್ಗಿ ಕಾಲದಲ್ಲಿ ನಿಮ್ಮ ಬೆಳೆಯ ಫಲವನ್ನು ನಿಮ್ಮ ದೇವರಾದ ಯೆಹೋವನ ಆಲಯಕ್ಕೆ ತರಬೇಕು.
“ಆಡುಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು.”
20 “ಇಗೋ, ನಿಮ್ಮ ಮುಂದೆ ನಾನು ಒಬ್ಬ ದೂತನನ್ನು ಕಳುಹಿಸುತ್ತಿದ್ದೇನೆ. ನಾನು ನಿಮಗಾಗಿ ಸಿದ್ಧಮಾಡಿದ ಸ್ಥಳಕ್ಕೆ ಈ ದೂತನು ನಿಮ್ಮನ್ನು ಮುನ್ನಡೆಸುವನು; ದಾರಿಯುದ್ದಕ್ಕೂ ಸಂರಕ್ಷಿಸುವನು.
21 ದೂತನಿಗೆ ವಿಧೇಯರಾಗಿ ಆತನನ್ನು ಹಿಂಬಾಲಿಸಿರಿ. ಆತನಿಗೆ ವಿರೋಧವಾಗಿ ದಂಗೆಯೇಳಬೇಡಿರಿ. ನೀವು ಅವಿಧೇಯರಾದರೆ ಆತನು ನಿಮ್ಮನ್ನು ಕ್ಷಮಿಸುವುದಿಲ್ಲ. ಆತನಲ್ಲಿ ನನ್ನ ಶಕ್ತಿಯು ಇರುತ್ತದೆ.
22 ಆತನು ಹೇಳುವ ಪ್ರತಿಯೊಂದಕ್ಕೆ ನೀವು ವಿಧೇಯರಾಗಬೇಕು. ನನ್ನ ಆಜ್ಞೆಗಳನ್ನೆಲ್ಲಾ ನೀವು ಅನುಸರಿಸಬೇಕು. ಆಗ ನಾನು ನಿಮ್ಮ ಸಂಗಡ ಇರುವೆನು. ನಾನು ನಿಮ್ಮ ಶತ್ರುಗಳಿಗೆ ಶತ್ರುವಾಗಿರುವೆನು; ನಿಮಗೆ ಕೇಡುಮಾಡುವವರಿಗೆಲ್ಲಾ ಕೇಡುಮಾಡುವೆನು.
23 “ನನ್ನ ದೂತನು ನಿಮ್ಮ ಮುಂದೆ ನಡೆದು ಅಮೋರಿಯರು, ಹಿತ್ತಿಯರು, ಪೆರಿಜೀಯರು, ಕಾನಾನ್ಯರು, ಹಿವ್ವಿಯರು ಮತ್ತು ಯೆಬೂಸಿಯರು ಇರುವ ದೇಶಕ್ಕೆ ನಿಮ್ಮನ್ನು ನಡಿಸುವನು. ನಾನು ಅವರನ್ನೆಲ್ಲಾ ಸೋಲಿಸುವೆನು.
24 “ಅವರ ದೇವರುಗಳನ್ನು ಪೂಜಿಸಬೇಡಿರಿ. ಆ ದೇವರುಗಳಿಗೆ ನಮಸ್ಕರಿಸಬೇಡಿರಿ. ಅವರ ಆಚರಣೆಗಳನ್ನು ಅನುಸರಿಸಬೇಡಿರಿ. ನೀವು ಅವರ ವಿಗ್ರಹಗಳನ್ನು ನಾಶಮಾಡಬೇಕು. ಅವರ ಸ್ಮಾರಕ ಸ್ತಂಭಗಳನ್ನು ಕೆಡವಿಹಾಕಬೇಕು.
25 ನೀವು ನಿಮ್ಮ ದೇವರಾದ ಯೆಹೋವನನ್ನೇ ಆರಾಧಿಸಬೇಕು. ಆಗ ಆತನು ನಿಮ್ಮ ಅನ್ನಪಾನಗಳನ್ನು ಆಶೀರ್ವದಿಸುವನು. ನಾನು ನಿಮ್ಮೊಳಗಿಂದ ಎಲ್ಲಾ ವ್ಯಾಧಿಯನ್ನು ತೆಗೆದುಬಿಡುವೆನು.
26 ನಿಮ್ಮ ಸ್ತ್ರೀಯರು ಮಕ್ಕಳನ್ನು ಪಡೆಯಲು ಶಕ್ತರಾಗುವರು. ನಿಮ್ಮ ಮಕ್ಕಳು ಹುಟ್ಟುವಾಗಲೇ ಸಾಯುವುದಿಲ್ಲ; ನಿಮಗೆ ದೀರ್ಘಾಯುಷ್ಯವನ್ನು ಅನುಗ್ರಹಿಸುವೆನು.
27 “ನೀವು ನಿಮ್ಮ ವೈರಿಗಳ ವಿರುದ್ಧ ಯುದ್ಧ ಮಾಡುವಾಗ, ನಿಮ್ಮ ವೈರಿಗಳನ್ನೆಲ್ಲಾ ಸೋಲಿಸುವಂತೆ ನಾನು ನಿಮಗೆ ನನ್ನ ಮಹಾಶಕ್ತಿಯಿಂದ ಸಹಾಯ ಮಾಡುವೆನು. ನಿಮ್ಮ ವೈರಿಗಳು ಯುದ್ಧದಲ್ಲಿ ಭಯದಿಂದಲೂ ಗಲಿಬಿಲಿಯಿಂದಲೂ ಓಡಿಹೋಗುವರು.
28 ನಾನು ನಿಮ್ಮ ಮುಂದೆ ಹೆದ್ದುಂಬಿಯನ್ನು ಕಳುಹಿಸುವೆನು. ನಿಮ್ಮ ವೈರಿಗಳಾದ ಹಿವ್ವಿಯರನ್ನು ಕಾನಾನ್ಯರನ್ನು ಮತ್ತು ಹಿತ್ತಿಯರನ್ನು ಅದು ಬಲವಂತದಿಂದ ಅಟ್ಟಿಬಿಡುವುದು.
29 ಆದರೆ ನಾನು ಒಂದೇ ವರ್ಷದಲ್ಲಿ ಅವರೆಲ್ಲರನ್ನೂ ಅಲ್ಲಿಂದ ಹೊರಡಿಸುವುದಿಲ್ಲ. ಯಾಕೆಂದರೆ ದೇಶದಲ್ಲಿ ಜನರು ಕಡಿಮೆಯಾಗುವುದರಿಂದ ಕ್ರೂರ ಪ್ರಾಣಿಗಳೆಲ್ಲಾ ಹೆಚ್ಚಾಗಿ ನಿಮಗೆ ಬಹಳ ತೊಂದರೆಯಾಗಬಹುದು.
30 ಆದ್ದರಿಂದ ನೀವು ಅಭಿವೃದ್ಧಿಯಾಗಿ ದೇಶದಲ್ಲೆಲ್ಲಾ ತುಂಬಿಕೊಳ್ಳುವತನಕ ಅವರನ್ನು ಸ್ವಲ್ಪ ಸ್ವಲ್ಪವಾಗಿ ಹೊರದೂಡುವೆನು.
31 “ಕೆಂಪುಸಮುದ್ರದಿಂದ ಯೂಫ್ರೇಟೀಸ್ ನದಿಯವರೆಗೆ ಇರುವ ಪ್ರದೇಶವನ್ನೆಲ್ಲಾ ಕೊಡುವೆನು. ಪಶ್ಚಿಮ ಗಡಿಯು ಫಿಲಿಷ್ಟಿಯ ಸಮುದ್ರವಾಗಿರುವುದು (ಮೆಡಿಟರೇನಿಯನ್ ಸಮುದ್ರ) ಮತ್ತು ಪೂರ್ವ ಗಡಿಯು ಅರೇಬಿಯಾ ಮರುಭೂಮಿಯಾಗಿರುವುದು. ನೀವು ಅಲ್ಲಿ ವಾಸಿಸುವ ಜನರನ್ನು ಸೋಲಿಸುವಂತೆ ನಾನು ಮಾಡುವೆನು; ಅವರೆಲ್ಲರನ್ನು ನೀವು ಬಲವಂತವಾಗಿ ಹೊರಗಟ್ಟುವಿರಿ.
32 “ನೀವು ಆ ಜನರೊಡನೆಯಾಗಲಿ ಅವರ ದೇವರುಗಳೊಡನೆಯಾಗಲಿ ಯಾವ ಒಡಂಬಡಿಕೆಯನ್ನೂ ಮಾಡಿಕೊಳ್ಳಬಾರದು.
33 ನಿಮ್ಮ ದೇಶದಲ್ಲಿ ವಾಸಿಸಲು ಅವರನ್ನು ಬಿಡಬೇಡಿರಿ. ಇಲ್ಲವಾದರೆ ಅವರು ನಿಮ್ಮಲ್ಲಿ ದ್ರೋಹ ಬುದ್ಧಿಯನ್ನು ಹುಟ್ಟಿಸಬಹುದು. ನೀವು ಅವರ ದೇವರುಗಳನ್ನು ಪೂಜಿಸಿದರೆ ಆ ಪೂಜೆಯೂ ನಿಮಗೆ ಉರುಲಾಗುವುದು.”