ಒಡಂಬಡಿಕೆ ಪೆಟ್ಟಿಗೆ
37
ಬೆಚಲೇಲನು ಜಾಲೀಮರದಿಂದ ಪವಿತ್ರ ಪೆಟ್ಟಿಗೆಯನ್ನು ಮಾಡಿದನು. ಪೆಟ್ಟಿಗೆಯು ಎರಡೂವರೆ ಮೊಳ ಉದ್ದ ಒಂದೂವರೆ ಮೊಳ ಅಗಲ ಮತ್ತು ಒಂದೂವರೆ ಮೊಳ ಎತ್ತರವಿತ್ತು. ಪೆಟ್ಟಿಗೆಯ ಹೊರಗಿನ ಮತ್ತು ಒಳಗಿನ ಭಾಗವನ್ನು ಅಪ್ಪಟ ಬಂಗಾರದಿಂದ ಹೊದಿಸಿದನು. ಬಳಿಕ ಪೆಟ್ಟಿಗೆಯ ಸುತ್ತಲೂ ಚಿನ್ನದ ಗೋಟು ಕಟ್ಟಿಸಿದನು. ಅವನು ಚಿನ್ನದ ನಾಲ್ಕು ಬಳೆಗಳನ್ನು ಮಾಡಿಸಿ ಪೆಟ್ಟಿಗೆಯ ನಾಲ್ಕು ಮೂಲೆಗಳಲ್ಲಿ ಇರಿಸಿದನು. ಈ ಬಳೆಗಳು ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗಲು ಉಪಯೋಗಿಸಲ್ಪಡುತ್ತಿದ್ದವು. ಪ್ರತಿಯೊಂದು ಬದಿಯಲ್ಲೂ ಎರಡು ಬಳೆಗಳಿದ್ದವು. ಬಳಿಕ ಪೆಟ್ಟಿಗೆಯನ್ನು ಹೊರುವುದಕ್ಕಾಗಿ ಕೋಲುಗಳನ್ನು ಜಾಲೀಮರದಿಂದ ಮಾಡಿಸಿದನು. ಅದನ್ನು ಅಪ್ಪಟ ಬಂಗಾರದಿಂದ ಹೊದಿಸಿದನು. ಪೆಟ್ಟಿಗೆಯ ಪಾರ್ಶ್ವಗಳಲ್ಲಿರುವ ಬಳೆಗಳಲ್ಲಿ ಅವನು ಕೋಲುಗಳನ್ನು ಸೇರಿಸಿದನು. ಬಳಿಕ ಅವನು ಅಪ್ಪಟ ಬಂಗಾರದ ಕೃಪಾಸನವನ್ನು ಮಾಡಿಸಿದನು. ಅದು ಎರಡೂವರೆ ಮೊಳ ಉದ್ದ ಮತ್ತು ಒಂದೂವರೆ ಮೊಳ ಅಗಲ ಇತ್ತು. ಬಳಿಕ ಬೆಚಲೇಲನು ಬಂಗಾರವನ್ನು ಸುತ್ತಿಗೆಯಿಂದ ಕೆತ್ತಿ ಎರಡು ಕೆರೂಬಿಗಳ ಆಕಾರಗಳನ್ನು ಮಾಡಿದನು. ಅವನು ಕೆರೂಬಿದೂತರನ್ನು ಕೃಪಾಸನದ ಕೊನೆಗಳಲ್ಲಿ ಇಟ್ಟನು. ಒಂದು ಕೆರೂಬಿಯನ್ನು ಕೃಪಾಸನದ ಒಂದು ಕೊನೆಯಲ್ಲೂ ಇನ್ನೊಂದನ್ನು ಮತ್ತೊಂದು ಕೊನೆಯಲ್ಲೂ ಇಟ್ಟನು. ಅವುಗಳನ್ನು ಒಟ್ಟಾಗಿ ಕೃಪಾಸನಕ್ಕೆ ಜೋಡಿಸಿ ಒಂದೇ ವಸ್ತುವನ್ನಾಗಿ ಮಾಡಿದನು. ಕೆರೂಬಿಗಳ ರೆಕ್ಕೆಗಳು ಆಕಾಶದ ಕಡೆಗೆ ಚಾಚಿದ್ದವು. ಅವುಗಳು ಕೃಪಾಸನವನ್ನು ತಮ್ಮ ರೆಕ್ಕೆಗಳಿಂದ ಮುಚ್ಚಿದ್ದವು. ಅವುಗಳ ಮುಖಗಳು ಎದುರುಬದುರಾಗಿ ಕೃಪಾಸನವನ್ನು ನೋಡುತ್ತಿದ್ದವು.
ವಿಶೇಷ ಮೇಜು
10 ತರುವಾಯ, ಅವನು ಜಾಲೀಮರದಿಂದ ಮೇಜನ್ನು ಮಾಡಿದನು. ಮೇಜು ಎರಡು ಮೊಳ ಉದ್ದ, ಒಂದು ಮೊಳ ಅಗಲ ಮತ್ತು ಒಂದೂವರೆ ಮೊಳ ಎತ್ತರ ಇತ್ತು. 11 ಅವನು ಮೇಜನ್ನು ಅಪ್ಪಟ ಬಂಗಾರದಿಂದ ಹೊದಿಸಿದನು; ಮೇಜಿನ ಸುತ್ತಲೂ ಚಿನ್ನದ ಗೋಟನ್ನು ಕಟ್ಟಿಸಿದನು. 12 ಬಳಿಕ ಅವನು ಮೇಜಿನ ಸುತ್ತಲೂ ಮೂರು ಇಂಚು ಅಗಲದ ಚೌಕಟ್ಟನ್ನು ಮಾಡಿದನು; ಆ ಚೌಕಟ್ಟಿಗೆ ಚಿನ್ನದ ಗೋಟನ್ನು ಕಟ್ಟಿಸಿದನು. 13 ಬಳಿಕ ಅವನು ನಾಲ್ಕು ಚಿನ್ನದ ಬಳೆಗಳನ್ನು ಮಾಡಿಸಿ ಮೇಜಿನ ನಾಲ್ಕು ಕಾಲುಗಳಿರುವ ನಾಲ್ಕು ಮೂಲೆಗಳಲ್ಲಿ ಅವುಗಳನ್ನು ಇರಿಸಿದನು. 14 ಅವನು ಬಳೆಗಳನ್ನು ಮೇಜಿನ ತುದಿಯಲ್ಲಿರುವ ಚೌಕಟ್ಟಿಗೆ ಹತ್ತಿರವಾಗಿ ಇರಿಸಿದನು. ಕೋಲುಗಳಿಂದ ಮೇಜನ್ನು ಹೊರುವುದಕ್ಕಾಗಿ ಈ ಬಳೆಗಳು ಇದ್ದವು. 15 ಬಳಿಕ ಮೇಜನ್ನು ಹೊರುವುದಕ್ಕಾಗಿ ಉಪಯೋಗಿಸಲ್ಪಡುತ್ತಿದ್ದ ಕೋಲುಗಳನ್ನು ಜಾಲೀಮರದಿಂದ ಮಾಡಿದನು. ಕೋಲುಗಳನ್ನು ಅಪ್ಪಟ ಬಂಗಾರದಿಂದ ಹೊದಿಸಿದನು. 16 ಬಳಿಕ ಅವನು ಮೇಜಿನಲ್ಲಿ ಉಪಯೋಗಿಸಲ್ಪಡುತ್ತಿದ್ದ ಎಲ್ಲಾ ವಸ್ತುಗಳನ್ನು ಮಾಡಿದನು. ಅವನು ಅಪ್ಪಟ ಬಂಗಾರದ ತಟ್ಟೆ, ಚಮಚ, ಬೋಗುಣಿ ಮತ್ತು ಹೂಜೆಗಳನ್ನು ಮಾಡಿದನು. ಬೋಗುಣಿ ಮತ್ತು ಹೂಜೆಗಳು ಪಾನದ್ರವ್ಯ ಸಮರ್ಪಣೆಗಳನ್ನು ಅರ್ಪಿಸುವುದಕ್ಕೆ ಉಪಯುಕ್ತವಾಗಿದ್ದವು.
ದೀಪಸ್ತಂಭ
17 ಬಳಿಕ ಅವನು ದೀಪಸ್ತಂಭವನ್ನು ಮಾಡಿದನು. ಅವನು ಅಪ್ಪಟ ಬಂಗಾರದಿಂದ ಕಂಬವನ್ನು ಮಾಡಿದನು. ತರುವಾಯ ಹೂವು, ಮೊಗ್ಗು ಮತ್ತು ದಳಗಳನ್ನು ಮಾಡಿ ಜೋಡಿಸಿದನು. ಹೀಗೆ ಅವು ಪುಷ್ಪಾಲಂಕಾರವಾದ ಒಂದೇ ವಸ್ತುವಾಯಿತು. 18 ದೀಪಸ್ತಂಭಕ್ಕೆ ಆರು ಕೊಂಬೆಗಳಿದ್ದವು. ಮೂರು ಕೊಂಬೆಗಳು ಒಂದು ಕಡೆಯಲ್ಲೂ ಇನ್ನು ಮೂರು ಕೊಂಬೆಗಳು ಇನ್ನೊಂದು ಕಡೆಯಲ್ಲಿಯೂ ಇದ್ದವು. 19 ಪ್ರತಿಯೊಂದು ಕೊಂಬೆಗಳಲ್ಲಿ ಮೂರುಮೂರು ಹೂವುಗಳಿದ್ದವು. ಈ ಹೂವುಗಳು ಮೊಗ್ಗು, ದಳಗಳಿಂದ ಕೂಡಿದ ಬಾದಾಮಿಹೂವುಗಳಂತೆ ಮಾಡಲ್ಪಟ್ಟವು. 20 ದೀಪಸ್ತಂಭದ ಕಂಬದಲ್ಲಿ ಇನ್ನೂ ನಾಲ್ಕು ಹೂವುಗಳಿದ್ದವು. ಅವುಗಳು ಸಹ ಮೊಗ್ಗು, ದಳಗಳಿಂದ ಕೂಡಿದ ಬಾದಾಮಿಯ ಹೂವುಗಳಂತೆ ಮಾಡಲ್ಪಟ್ಟವು. 21 ಕಂಬದ ಪ್ರತಿಯೊಂದು ಕಡೆಯಲ್ಲಿ ಮೂರುಮೂರು ಕೊಂಬೆಗಳಂತೆ ಆರು ಕೊಂಬೆಗಳಿದ್ದವು. ಕೊಂಬೆಗಳು ಕವಲೊಡೆದಿರುವ ಮೂರು ಸ್ಥಳಗಳಲ್ಲೂ ಒಂದೊಂದು ಹೂವು ಇತ್ತು. ಆ ಹೂವಿಗೆ ಮೊಗ್ಗುಗಳು ಮತ್ತು ದಳಗಳು ಇದ್ದವು. 22 ಹೂವು ಮತ್ತು ಕೊಂಬೆಗಳಿಂದ ಕೂಡಿದ ಇಡೀ ದೀಪಸ್ತಂಭವು ಅಪ್ಪಟ ಬಂಗಾರದಿಂದ ಅಖಂಡವಾಗಿ ಮಾಡಲ್ಪಟ್ಟಿತ್ತು. 23 ಅವನು ಈ ದೀಪಸ್ತಂಭಕ್ಕೆ ಏಳು ಹಣತೆಗಳನ್ನು ಮಾಡಿದನು; ಬಳಿಕ ಅಪ್ಪಟ ಬಂಗಾರದಿಂದ ಬತ್ತಿಗಳನ್ನು ಸರಿಪಡಿಸುವ ಕತ್ತರಿಗಳನ್ನೂ ಹರಿವಾಣಗಳನ್ನೂ ಮಾಡಿದನು. 24 ದೀಪಸ್ತಂಭವನ್ನು ಮತ್ತು ಅದರ ಉಪಕರಣಗಳನ್ನು ಮಾಡಲು ಎಪ್ಪತ್ತೈದು ಪೌಂಡು ಅಪ್ಪಟ ಬಂಗಾರವನ್ನು ಉಪಯೋಗಿಸಿದನು.
ಧೂಪವೇದಿಕೆ
25 ಅವನು ಧೂಪವೇದಿಕೆಯನ್ನು ಜಾಲೀಮರದಿಂದ ಮಾಡಿದನು. ಧೂಪವೇದಿಕೆಯು ಚೌಕವಾಗಿತ್ತು. ಅದು ಒಂದು ಮೊಳ ಉದ್ದ, ಒಂದು ಮೊಳ ಅಗಲ ಮತ್ತು ಎರಡು ಮೊಳ ಎತ್ತರ ಇತ್ತು. ಧೂಪವೇದಿಕೆಯಲ್ಲಿ ನಾಲ್ಕು ಕೊಂಬುಗಳಿದ್ದವು. ಪ್ರತಿ ಮೂಲೆಯಲ್ಲಿಯೂ ಒಂದೊಂದು ಕೊಂಬುಗಳಿದ್ದವು. ಈ ಕೊಂಬುಗಳು ಒಟ್ಟಾಗಿ ಧೂಪವೇದಿಕೆಗೆ ಜೋಡಿಸಲ್ಪಟ್ಟು ಅವಿಭಾಜ್ಯವಾಗಿತ್ತು. 26 ಅವನು ಅಪ್ಪಟ ಬಂಗಾರದಿಂದ ಮೇಲ್ಭಾಗವನ್ನೂ ಎಲ್ಲಾ ಪಾರ್ಶ್ವಗಳನ್ನೂ ಕೊಂಬುಗಳನ್ನೂ ಹೊದಿಸಿದನು. ಬಳಿಕ ಅವನು ಧೂಪವೇದಿಕೆಯ ಸುತ್ತಲೂ ಚಿನ್ನದ ಗೋಟನ್ನು ಕಟ್ಟಿಸಿದನು. 27 ಅವನು ಧೂಪವೇದಿಕೆಗೆ ಎರಡು ಚಿನ್ನದ ಬಳೆಗಳನ್ನು ಮಾಡಿಸಿ ಗೋಟಿನ ಕೆಳಗೆ ವೇದಿಕೆಯ ಪ್ರತಿಯೊಂದು ಬದಿಯಲ್ಲಿ ಇರಿಸಿದನು. ಈ ಚಿನ್ನದ ಬಳೆಗಳು ವೇದಿಕೆಯನ್ನು ಕೋಲುಗಳ ಮೂಲಕ ಹೊರುವುದಕ್ಕೆ ಉಪಯುಕ್ತವಾಗಿದ್ದವು. 28 ಅವನು ಜಾಲೀಮರದಿಂದ ಕೋಲುಗಳನ್ನು ಮಾಡಿಸಿ ಚಿನ್ನದಿಂದ ಅವುಗಳನ್ನು ಹೊದಿಸಿದನು.
29 ತರುವಾಯ ಅವನು ಪವಿತ್ರವಾದ ಅಭಿಷೇಕತೈಲವನ್ನು ಮಾಡಿದನು. ಅವನು ಶುದ್ಧವಾದ ಪರಿಮಳಧೂಪವನ್ನು ಮಾಡಿದನು. ಸುಗಂಧದ್ರವ್ಯಕಾರರ ವಿದ್ಯೆಯ ಮೇರೆಗೆ ಈ ವಸ್ತುಗಳನ್ನು ಮಾಡಲಾಯಿತು.