27
1 ಆ ಸಮಯದಲ್ಲಿ ಯೆಹೋವನು ವಂಚನೆಯ ಸರ್ಪವಾದ ಲಿವ್ಯಾತಾನನಿಗೆ ನ್ಯಾಯತೀರಿಸುವನು.
ಯೆಹೋವನು ಕಠಿಣವೂ ಮಹತ್ವವೂ ಬಲವೂ ಆಗಿರುವ ತನ್ನ ಖಡ್ಗದಿಂದ
ಸುತ್ತಿಕೊಂಡಿರುವ ಸರ್ಪವಾದ ಲಿವ್ಯಾತಾನನನ್ನು ಕೊಲ್ಲುವನು.
ಯೆಹೋವನು ಸಮುದ್ರದಲ್ಲಿರುವ ಘಟಸರ್ಪವನ್ನು ಕೊಲ್ಲುವನು.
2 ಆ ಸಮಯದಲ್ಲಿ ಜನರು ಮನೋಹರವಾದ ದ್ರಾಕ್ಷಿತೋಟದ ವಿಷಯವಾಗಿ ಹಾಡುವರು.
3 “ಯೆಹೋವನಾದ ನಾನು ಆ ತೋಟವನ್ನು ಚೆನ್ನಾಗಿ ನೋಡಿಕೊಳ್ಳುವೆನು;
ಸರಿಯಾದ ಕಾಲದಲ್ಲಿ ತೋಟಕ್ಕೆ ನೀರು ಹೊಯ್ಯುವೆನು.
ಹಗಲಿರುಳು ತೋಟವನ್ನು ಕಾಯುವೆನು.
ಆ ತೋಟವನ್ನು ಯಾರೂ ಹಾಳುಮಾಡುವದಿಲ್ಲ.
4 ನಾನು ಕೋಪಗೊಂಡಿಲ್ಲ.
ಆದರೆ ಯುದ್ಧ ನಡೆಯುತ್ತಿರುವಾಗ ಯಾರಾದರೂ ಮುಳ್ಳುಬೇಲಿಯನ್ನು ಹಾಕಿದರೆ,
ನಾನು ಮುನ್ನುಗ್ಗಿ ಅದನ್ನು ಸುಟ್ಟುಹಾಕುವೆನು.
5 ಆದರೆ ಯಾವನಾದರೂ ಆಶ್ರಯಕ್ಕಾಗಿ ನನ್ನ ಬಳಿಗೆ ಬಂದು ನನ್ನೊಡನೆ ಸಮಾಧಾನ ಮಾಡಿಕೊಳ್ಳುವುದಾದರೆ
ಅವನು ನನ್ನ ಬಳಿಗೆ ಬಂದು ಸಮಾಧಾನದಲ್ಲಿರಲಿ.
6 ಜನರು ನನ್ನ ಬಳಿಗೆ ಬರುವರು. ಆ ಜನರು ಮುಂದಿನ ಕಾಲದಲ್ಲಿ ಯಾಕೋಬನನ್ನು ಆಳವಾದ ಬೇರುಳ್ಳ ಗಿಡದಂತೆ ಬಲಶಾಲಿಯನ್ನಾಗಿ ಮಾಡುವರು.
ಬೆಳೆದು ಹೂಬಿಡುವ ಗಿಡದಂತೆ ಅವರು ಇಸ್ರೇಲಿಗೆ ಮಾಡುವರು.
ಹಣ್ಣುಗಳಂತೆ ಇಸ್ರೇಲರ ಮಕ್ಕಳು ಭೂಮಿಯ ಮೇಲೆ ತುಂಬಿಹೋಗುವರು.”
ದೇವರು ಇಸ್ರೇಲರನ್ನು ಕಳುಹಿಸಿ ಬಿಡುವನು
7 ಯೆಹೋವನು ತನ್ನ ಜನರನ್ನು ಹೇಗೆ ಶಿಕ್ಷಿಸುವನು? ಹಿಂದಿನ ಕಾಲದಲ್ಲಿ ಶತ್ರುಗಳು ಜನರನ್ನು ಗಾಯಪಡಿಸಿದರು. ಯೆಹೋವನೂ ಹಾಗೆ ಮಾಡುವನೇ? ಹಿಂದಿನ ಕಾಲದಲ್ಲಿ ಅನೇಕ ಮಂದಿ ಕೊಲ್ಲಲ್ಪಟ್ಟರು. ಹಾಗೆಯೇ ಯೆಹೋವನು ಜನರನ್ನು ಕೊಲ್ಲುವನೇ?
8 ಯೆಹೋವನು ತನ್ನ ಜನರನ್ನು ದೂರದೇಶಕ್ಕೆ ಕಳುಹಿಸುವದರ ಮೂಲಕ ಅವರನ್ನು ಶಿಕ್ಷಿಸುವನು. ಇಸ್ರೇಲರೊಂದಿಗೆ ಯೆಹೋವನು ಕಟುವಾಗಿ ಮಾತನಾಡುವನು. ಆತನ ಮಾತುಗಳು ಮರುಭೂಮಿಯ ಬಿಸಿಗಾಳಿಯಂತೆ ಸುಡುವವು.
9 ಯಾಕೋಬನ ದೋಷವು ಹೇಗೆ ಕ್ಷಮಿಸಲ್ಪಡುವದು? ಅವನ ಪಾಪಗಳು ನಿವಾರಣೆಯಾಗುವದಕ್ಕೆ ಏನು ಮಾಡಬೇಕಾಗುವದು? ಇತರ ದೇವತೆಗಳ ಪೂಜಾಸ್ಥಳಗಳೂ ವೇದಿಕೆಯ ಕಲ್ಲುಗಳೂ ಪುಡಿಪುಡಿಯಾಗಿ ನಾಶವಾಗುವವು.
10 ಆ ಸಮಯದಲ್ಲಿ ಆ ಮಹಾನಗರವು ನಿರ್ಜನವಾಗಿರುವದು. ಅದು ಮರುಭೂಮಿಯಂತಿರುವದು. ಜನರೆಲ್ಲರೂ ಹೊರಟುಹೋಗಿರುವರು. ಅವರು ಪಲಾಯನಗೈದಿದ್ದಾರೆ. ನಗರವು ತೆರೆದ ಹುಲ್ಲುಗಾವಲಿನಂತಿರುವುದು. ಪಶುಗಳು ಅಲ್ಲಿ ಹುಲ್ಲನ್ನು ಮೇಯುತ್ತವೆ. ದನಗಳು ದ್ರಾಕ್ಷಾಲತೆಯ ಚಿಗುರೆಲೆಗಳನ್ನು ತಿನ್ನುವವು.
11 ದ್ರಾಕ್ಷಿಬಳ್ಳಿ ಒಣಗಿಹೋಗುವದು. ಅದರ ಕೊಂಬೆಗಳು ಮುರಿದುಬೀಳುವವು. ಹೆಂಗಸರು ಆ ಕೊಂಬೆಗಳನ್ನು ಸೌದೆಯಾಗಿ ಉಪಯೋಗಿಸುವರು.
ಜನರು ತಿಳಿದುಕೊಳ್ಳುವದಕ್ಕೆ ಮನಸ್ಸು ಕೊಡುವದಿಲ್ಲ. ಆದ್ದರಿಂದ ಅವರ ನಿರ್ಮಾಣಿಕನಾದ ದೇವರು ಅವರನ್ನು ಸಂತೈಸುವದಿಲ್ಲ. ಅವರ ನಿರ್ಮಾಣಿಕನು ಅವರಿಗೆ ದಯೆ ತೋರುವದಿಲ್ಲ.
12 ಆ ಸಮಯದಲ್ಲಿ, ಯೆಹೋವನು ತನ್ನ ಜನರನ್ನು ಬೇರೆಯವರಿಂದ ಬೇರ್ಪಡಿಸುವನು. ಆತನು ಯೂಫ್ರೇಟೀಸ್ ನದಿಯಿಂದ ಪ್ರಾರಂಭಿಸಿ ಈಜಿಪ್ಟಿನ ನದಿಯತನಕ ಎಲ್ಲಾ ಜನರನ್ನು ಒಟ್ಟುಗೂಡಿಸುವನು.
ಇಸ್ರೇಲ್ ಜನರೇ, ನೀವು ಒಬ್ಬೊಬ್ಬರಾಗಿಯೇ ಒಟ್ಟುಗೂಡಿಸಲ್ಪಡುವಿರಿ.
13 ನನ್ನ ಜನರಲ್ಲಿ ಹೆಚ್ಚಿನವರು ಅಶ್ಶೂರದಲ್ಲಿ ಈಗ ಕಳೆದುಹೋಗಿರುತ್ತಾರೆ; ಕೆಲವರು ಈಜಿಪ್ಟಿಗೆ ಓಡಿಹೋಗಿದ್ದಾರೆ. ಆ ಸಮಯದಲ್ಲಿ ಮಹಾದೊಡ್ಡ ತುತ್ತೂರಿಯ ಶಬ್ದವು ಕೇಳಿಸುವದು. ಆಗ ಆ ಜನರೆಲ್ಲರೂ ಜೆರುಸಲೇಮಿಗೆ ಹಿಂತಿರುಗುವರು. ಆ ಜನರು ಪರಿಶುದ್ಧ ಪರ್ವತದ ಮೇಲೆ ಯೆಹೋವನ ಮುಂದೆ ಅಡ್ಡಬೀಳುವರು.