35
1 ಎಲೀಹು ಮಾತನ್ನು ಮುಂದುವರಿಸಿ,
2 “ಯೋಬನೇ, ‘ನಾನು ದೇವರಿಗಿಂತ ನೀತಿವಂತನೆಂದು’
ನೀನು ಹೇಳುವುದು ನ್ಯಾಯವಲ್ಲ.
3 ಅಲ್ಲದೆ ನೀನು ದೇವರಿಗೆ,
‘ಮನುಷ್ಯನು ಪಾಪ ಮಾಡದೆ ದೇವರನ್ನು ಮೆಚ್ಚಿಸುವುದರಿಂದ ಅವನಿಗೆ ಪ್ರಯೋಜನವೇನು?
ನಾನು ಪಾಪಮಾಡದಿದ್ದರೆ ನನಗೇನು ಒಳಿತಾಗುವುದು’ ಎಂದು ಕೇಳು.
4 “ಯೋಬನೇ, ನಾನು ನಿನಗೂ ನಿನ್ನೊಂದಿಗಿರುವ ಸ್ನೇಹಿತರಿಗೂ ಉತ್ತರಕೊಡುವೆ.
5 ಕಣ್ಣೆತ್ತಿ ಆಕಾಶವನ್ನು ನೋಡು.
ಮೋಡಗಳನ್ನು ದೃಷ್ಟಿಸು, ಅವು ನಿನಗಿಂತ ಎಷ್ಟೋ ಎತ್ತರವಾಗಿವೆ.
6 ಯೋಬನೇ, ನೀನು ಪಾಪಮಾಡಿದರೆ, ಅದರಿಂದ ದೇವರಿಗೇನೂ ಕೇಡಾಗುವುದಿಲ್ಲ.
ನೀನು ಅನೇಕ ಪಾಪಗಳನ್ನು ಮಾಡಿದ್ದರೂ ಅದರಿಂದ ದೇವರಿಗೇನೂ ಆಗುವುದಿಲ್ಲ.
7 ಯೋಬನೇ, ನೀನು ಒಳ್ಳೆಯವನಾಗಿದ್ದರೆ, ಅದರಿಂದ ದೇವರಿಗೇನೂ ಸಹಾಯವಾಗುವುದಿಲ್ಲ.
ದೇವರಿಗೆ ನಿನ್ನಿಂದೇನೂ ಲಾಭವಾಗುವುದಿಲ್ಲ.
8 ಯೋಬನೇ, ನಿನ್ನ ದುಷ್ಟತನದಿಂದ ನಿನ್ನಂಥವನಿಗೇ ಕೇಡಾಗುವುದು;
ನಿನ್ನ ಒಳ್ಳೆಯ ಕಾರ್ಯಗಳಿಂದ ನಿನ್ನಂಥವನಿಗೇ ಒಳ್ಳೆಯದಾಗುವುದು.
9 “ಹಿಂಸೆಗೂ ಅನ್ಯಾಯಕ್ಕೂ ಒಳಗಾಗಿರುವವರು
ತಮ್ಮನ್ನು ಬಲಿಷ್ಠರಿಂದ ಬಿಡಿಸಬಲ್ಲ ಯಾರಿಗಾದರೂ ಮೊರೆಯಿಡುವರು.
10 ಆದರೆ ಆ ಕೆಟ್ಟ ಜನರು ಸಹಾಯಕ್ಕಾಗಿ ದೇವರನ್ನು ಕೇಳಿಕೊಳ್ಳುವುದಿಲ್ಲ.
ಅವರು, ‘ನನ್ನನ್ನು ಸೃಷ್ಟಿಸಿದ ದೇವರೆಲ್ಲಿ?’ ಎಂದು ಕೇಳುವುದಿಲ್ಲ.
‘ಕುಗ್ಗಿಹೋದವರಿಗೆ ಸಹಾಯಮಾಡುವ ದೇವರೆಲ್ಲಿ?’ ಎಂದು ಕೇಳುವುದಿಲ್ಲ.
11 ‘ನಮ್ಮನ್ನು ಪಕ್ಷಿಗಳಿಗಿಂತಲೂ ಪ್ರಾಣಿಗಳಿಗಿಂತಲೂ
ಜ್ಞಾನಿಗಳನ್ನಾಗಿ ಮಾಡುವ ದೇವರೆಲ್ಲಿ?’ ಎಂದು ಅವರು ಕೇಳುವುದಿಲ್ಲ.
12 “ಅಲ್ಲದೆ ಆ ಕೆಟ್ಟವರು ದೇವರನ್ನು ಸಹಾಯಕ್ಕಾಗಿ ಕೇಳಿಕೊಂಡರೂ ಆತನು ಅವರಿಗೆ ಉತ್ತರಿಸುವುದಿಲ್ಲ.
ಯಾಕೆಂದರೆ ಅವರು ದುಷ್ಟರೂ ದುರಾಭಿಮಾನಿಗಳೂ ಆಗಿದ್ದಾರೆ.
13 ಹೌದು, ದೇವರು ಅವರ ಬೆಲೆಯಿಲ್ಲದ ಬೇಡಿಕೆಯನ್ನು ಕೇಳುವುದಿಲ್ಲ;
ಸರ್ವಶಕ್ತನಾದ ದೇವರು ಅವರಿಗೆ ಗಮನ ಕೊಡುವುದಿಲ್ಲ.
14 ಯೋಬನೇ, ನೀನು, ‘ದೇವರನ್ನು ಕಾಣಲಾರೆನು’ ಎಂದು ಹೇಳುವಾಗ
ಆತನು ನಿನಗೆ ಕಿವಿಗೊಡುವುದಿಲ್ಲ.
ನಿನ್ನ ವ್ಯಾಜ್ಯವು ಆತನ ಮುಂದೆ ಇರುವುದರಿಂದ
ನೀನು ಆತನಿಗಾಗಿ ಕಾದುಕೊಂಡಿರಬೇಕು.
15 “ದೇವರು ಕೆಟ್ಟಜನರನ್ನು ದಂಡಿಸುವುದಿಲ್ಲ;
ಪಾಪವನ್ನು ಗಮನಿಸುವುದಿಲ್ಲ ಎಂಬುದು ಯೋಬನ ಆಲೋಚನೆ.
16 ಆದ್ದರಿಂದ ಯೋಬನು ತನ್ನ ನಿಷ್ಪ್ರಯೋಜಕ ಮಾತನ್ನು ಮುಂದುವರಿಸುತ್ತಿದ್ದಾನೆ;
ದುರಾಭಿಮಾನದಿಂದ ವರ್ತಿಸುತ್ತಿದ್ದಾನೆ; ತಿಳುವಳಿಕೆಯಿಲ್ಲದೆ ಮಾತಾಡುತ್ತಿದ್ದಾನೆ.”