ಯೆಫ್ತಾಹನು ಮತ್ತು ಎಫ್ರಾಯೀಮ್
12
ಎಫ್ರಾಯೀಮ್ಯರು ತಮ್ಮ ಸೈನಿಕರೆಲ್ಲರನ್ನು ಒಂದು ಕಡೆ ಸೇರಿಸಿದರು. ಆಮೇಲೆ ಅವರು ನದಿಯನ್ನು ದಾಟಿ ಝಾಫೋನ್ ನಗರಕ್ಕೆ ಬಂದರು. ಅವರು ಯೆಫ್ತಾಹನಿಗೆ, “ನೀನು ಅಮ್ಮೋನಿಯರ ಸಂಗಡ ಯುದ್ಧ ಮಾಡುವಾಗ ಸಹಾಯಕ್ಕಾಗಿ ನಮ್ಮನ್ನು ಏಕೆ ಕರೆಯಲಿಲ್ಲ? ನಿನ್ನನ್ನು ಮನೆಯೊಳಗೆ ಹಾಕಿ ನಿನ್ನ ಮನೆಯನ್ನು ಸುಟ್ಟುಬಿಡುತ್ತೇವೆ” ಅಂದರು.
ಯೆಫ್ತಾಹನು ಅವರಿಗೆ, “ಅಮ್ಮೋನಿಯರು ನಮಗೆ ಅನೇಕ ತೊಂದರೆಗಳನ್ನು ಕೊಡುತ್ತಿದ್ದರು. ಆದ್ದರಿಂದ ನಾನು ಮತ್ತು ನನ್ನ ಜನರು ಅವರ ವಿರುದ್ಧ ಹೋರಾಡಿದೆವು. ನಾನು ನಿಮ್ಮನ್ನು ಕರೆದೆ. ಆದರೆ ನೀವು ನಮಗೆ ಸಹಾಯಮಾಡಲು ಬರಲಿಲ್ಲ. ನೀವು ನಮ್ಮ ಸಹಾಯಕ್ಕೆ ಬರುವುದಿಲ್ಲವೆಂದು ತಿಳಿದಾಗ ನಾನು ನನ್ನ ಜೀವವನ್ನೇ ಗಂಡಾಂತರಕ್ಕೆ ಒಡ್ಡಿದೆ. ಅಮ್ಮೋನಿಯರ ವಿರುದ್ಧ ಯುದ್ಧಮಾಡಲು ನಾನು ನದಿಯನ್ನು ದಾಟಿಹೋದೆ. ಅವರನ್ನು ಸೋಲಿಸಲು ಯೆಹೋವನು ನನಗೆ ಸಹಾಯ ಮಾಡಿದನು. ಈಗ ನೀವು ನನ್ನ ಸಂಗಡ ಯುದ್ಧ ಮಾಡುವುದಕ್ಕಾಗಿ ಏಕೆ ಬಂದಿದ್ದೀರಿ?” ಎಂದು ಕೇಳಿದನು.
ಆಗ ಯೆಫ್ತಾಹನು ಗಿಲ್ಯಾದಿನ ಜನರನ್ನು ಒಂದೆಡೆ ಸೇರಿಸಿದನು. ಅವರು ಎಫ್ರಾಯೀಮ್ಯರ ವಿರುದ್ಧ ಯುದ್ಧ ಮಾಡಿದರು. ಏಕೆಂದರೆ ಎಫ್ರಾಯೀಮ್ಯರು ಗಿಲ್ಯಾದ್ಯರನ್ನು ಅವಮಾನ ಮಾಡಿದ್ದರು. ಅವರು, “ಗಿಲ್ಯಾದಿನವರಾದ ನೀವು ಎಫ್ರಾಯೀಮ್ಯರಲ್ಲಿ ಬದುಕಿ ಉಳಿದವರೇ ಹೊರತು ಬೇರೆಯವರಲ್ಲ. ನಿಮಗೆ ನಿಮ್ಮ ಸ್ವಂತ ಪ್ರದೇಶವೂ ಇಲ್ಲ. ನಿಮ್ಮ ಒಂದು ಭಾಗವು ಎಫ್ರಾಯೀಮ್ ಕುಲಕ್ಕೆ ಸೇರಿದೆ; ಇನ್ನೊಂದು ಭಾಗವು ಮನಸ್ಸೆ ಕುಲಕ್ಕೆ ಸೇರಿದೆ” ಎಂದಿದ್ದರು. ಅವರು ಹೀಗೆ ಅಂದದ್ದರಿಂದ ಗಿಲ್ಯಾದಿನ ಜನರು ಎಫ್ರಾಯೀಮ್ ಜನರನ್ನು ಸೋಲಿಸಿದರು.
ಗಿಲ್ಯಾದಿನ ಜನರು ಜೋರ್ಡನ್ ನದಿಯನ್ನು ದಾಟಲು ಅನುಕೂಲವಾದ ಸ್ಥಳಗಳನ್ನೆಲ್ಲಾ ವಶಪಡಿಸಿಕೊಂಡರು. ಅವು ಎಫ್ರಾಯೀಮ್ ಪ್ರದೇಶದೊಳಕ್ಕೆ ಹೋಗುವ ಮಾರ್ಗದಲ್ಲಿಯೇ ಇದ್ದವು. ಯಾವಾಗಲಾದರೂ ಎಫ್ರಾಯೀಮ್ ಕುಲದವರಲ್ಲಿ ಅಳಿದುಳಿದವನೊಬ್ಬ ಅಲ್ಲಿಗೆ ಬಂದು, “ನನ್ನನ್ನು ದಾಟಗೊಡಿರಿ” ಎಂದು ಕೇಳಿದರೆ ಗಿಲ್ಯಾದಿನವರು, “ನೀನು ಎಫ್ರಾಯೀಮಿನವನೇ?” ಎಂದು ಕೇಳುತ್ತಿದ್ದರು. ಅವನು “ಅಲ್ಲ” ಎಂದು ಉತ್ತರಿಸಿದರೆ, ಅವರು ಅವನಿಗೆ, “ಷಿಬ್ಬೋಲೆತ್ ಅನ್ನು” ಎಂದು ಹೇಳುವರು. ಎಫ್ರಾಯೀಮಿನ ಜನರಿಗೆ ಆ ಪದವನ್ನು ಸರಿಯಾಗಿ ಉಚ್ಚರಿಸಲು ಬರುತ್ತಿರಲಿಲ್ಲ. ಅವರು ಆ ಪದವನ್ನು “ಸಿಬ್ಬೋಲೆತ್” ಎಂದು ಉಚ್ಚರಿಸುತ್ತಿದ್ದರು. ಆ ಮನುಷ್ಯನು “ಸಿಬ್ಬೋಲೆತ್” ಅಂದತಕ್ಷಣ ಗಿಲ್ಯಾದಿನ ಜನರಿಗೆ ಅವನು ಎಫ್ರಾಯೀಮ್ಯನೆಂದು ಗೊತ್ತಾಗುತ್ತಿತ್ತು. ಅವರು ಅವನನ್ನು ದಾರಿಯ ತಿರುವುಗಳಲ್ಲೇ ಕೊಂದುಬಿಡುತ್ತಿದ್ದರು. ಅವರು ಎಫ್ರಾಯೀಮಿನ ನಲವತ್ತೆರಡು ಸಾವಿರ ಜನರನ್ನು ಕೊಂದುಹಾಕಿದರು.
ಯೆಫ್ತಾಹನು ಆರು ವರ್ಷ ಇಸ್ರೇಲರ ನ್ಯಾಯಾಧೀಶನಾಗಿದ್ದನು. ಆಮೇಲೆ ಗಿಲ್ಯಾದ್ಯನಾದ ಯೆಫ್ತಾಹನು ಮರಣಹೊಂದಿದನು. ಅವರು ಅವನ ಶವವನ್ನು ಗಿಲ್ಯಾದಿನ ಪಟ್ಟಣದಲ್ಲಿ ಸಮಾಧಿಮಾಡಿದರು.
ನ್ಯಾಯಾಧೀಶನಾದ ಇಬ್ಜಾನನು
ಯೆಫ್ತಾಹನ ತರುವಾಯ ಇಬ್ಜಾನ ಎಂಬವನು ಇಸ್ರೇಲರ ನ್ಯಾಯಾಧೀಶನಾಗಿದ್ದನು. ಇಬ್ಜಾನನು ಬೆತ್ಲೆಹೇಮ್ ನಗರದವನು. ಇಬ್ಜಾನನಿಗೆ ಮೂವತ್ತು ಗಂಡುಮಕ್ಕಳು ಮತ್ತು ಮೂವತ್ತು ಹೆಣ್ಣುಮಕ್ಕಳು ಇದ್ದರು. ಅವನು ತನ್ನ ಮೂವತ್ತು ಹೆಣ್ಣುಮಕ್ಕಳಿಗೆ ತನ್ನ ರಕ್ತಸಂಬಂಧಿ ಅಲ್ಲದವರೊಂದಿಗೆ ಮದುವೆಯಾಗಬೇಕೆಂದು ಹೇಳಿದನು. ಅವನು ತನ್ನ ಸಂಬಂಧಿಗಳಲ್ಲದ ಮೂವತ್ತು ಕನ್ಯೆಯರನ್ನು ಹುಡುಕಿ ತನ್ನ ಗಂಡುಮಕ್ಕಳಿಗೆ ಅವರನ್ನು ಮದುವೆಮಾಡಿಸಿದನು. ಇಬ್ಜಾನನು ಏಳು ವರ್ಷ ಇಸ್ರೇಲರ ನ್ಯಾಯಾಧೀಶನಾಗಿದ್ದನು. 10 ಆಮೇಲೆ ಇಬ್ಜಾನನು ಮರಣಹೊಂದಿದನು. ಅವನನ್ನು ಬೆತ್ಲೆಹೇಮಿನಲ್ಲಿ ಸಮಾಧಿಮಾಡಿದರು.
ನ್ಯಾಯಾಧೀಶನಾದ ಏಲೋನನು
11 ಇಬ್ಜಾನನ ತರುವಾಯ ಏಲೋನ ಎಂಬವನು ಇಸ್ರೇಲರ ನ್ಯಾಯಾಧೀಶನಾದನು. ಏಲೋನನು ಜೆಬುಲೂನ್ ಕುಲದವನಾಗಿದ್ದನು. ಅವನು ಹತ್ತು ವರ್ಷ ಇಸ್ರೇಲರ ನ್ಯಾಯಾಧೀಶನಾಗಿದ್ದನು. 12 ಆಮೇಲೆ ಜೆಬುಲೂನ್ಯನಾದ ಏಲೋನನು ಮರಣ ಹೊಂದಿದನು. ಅವನ ಶವವನ್ನು ಜೆಬುಲೂನ್ ಪ್ರದೇಶದ ಅಯ್ಯಾಲೋನ್ ನಗರದಲ್ಲಿ ಸಮಾಧಿಮಾಡಿದರು.
ನ್ಯಾಯಾಧೀಶನಾದ ಅಬ್ದೋನನು
13 ಏಲೋನನ ಮರಣಾನಂತರ ಹಿಲ್ಲೇಲನ ಮಗನಾದ ಅಬ್ದೋನ ಎಂಬವನು ಇಸ್ರೇಲರ ನ್ಯಾಯಾಧೀಶನಾದನು. ಅಬ್ದೋನನು ಪಿರಾತೋನ್ ನಗರದವನಾಗಿದ್ದನು. 14 ಅಬ್ದೋನನಿಗೆ ನಲವತ್ತು ಮಕ್ಕಳೂ ಮೂವತ್ತು ಮೊಮ್ಮಕ್ಕಳೂ ಇದ್ದರು. ಇವರೆಲ್ಲರಿಗೆ ಸವಾರಿ ಮಾಡುವುದಕ್ಕೋಸ್ಕರ ಎಪ್ಪತ್ತು ಕತ್ತೆಗಳಿದ್ದವು. ಅಬ್ದೋನನು ಎಂಟು ವರ್ಷ ಇಸ್ರೇಲರಿಗೆ ನ್ಯಾಯಾಧೀಶನಾಗಿದ್ದನು. 15 ಆಮೇಲೆ ಹಿಲ್ಲೇಲನ ಮಗನಾದ ಅಬ್ದೋನನು ಮರಣಹೊಂದಿದನು. ಅವನ ಶವವನ್ನು ಪಿರಾತೋನ್ ನಗರದಲ್ಲಿ ಸಮಾಧಿಮಾಡಿದರು. ಪಿರಾತೋನ್ ನಗರವು ಎಫ್ರಾಯೀಮ್ ಪ್ರದೇಶದಲ್ಲಿದೆ. ಇದು ಅಮಾಲೇಕ್ಯರು ವಾಸಮಾಡುತ್ತಿದ್ದ ಬೆಟ್ಟಪ್ರದೇಶದಲ್ಲಿದೆ.