ಸಂಸೋನನ ಮದುವೆ
14
ಸಂಸೋನನು ತಿಮ್ನಾ ನಗರಕ್ಕೆ ಹೋದನು. ಅವನು ಅಲ್ಲಿ ಒಬ್ಬ ಫಿಲಿಷ್ಟಿಯರ ತರುಣಿಯನ್ನು ನೋಡಿದನು. ಅವನು ಮನೆಗೆ ಹಿಂದಿರುಗಿ ತನ್ನ ತಂದೆತಾಯಿಗಳಿಗೆ, “ನಾನು ತಿಮ್ನಾ ನಗರದಲ್ಲಿ ಫಿಲಿಷ್ಟಿಯರ ಸ್ತ್ರೀಯನ್ನು ನೋಡಿದ್ದೇನೆ. ನೀವು ಅವಳನ್ನು ನನಗೆ ಮದುವೆ ಮಾಡಿಸಿಕೊಡಿ” ಎಂದು ಕೇಳಿದನು.
ಅವನ ತಂದೆತಾಯಿಗಳು, “ಇಸ್ರೇಲರಲ್ಲಿಯೇ ಒಬ್ಬ ಸ್ತ್ರೀ ಇದ್ದಾಳೆ. ನೀನು ಅವಳನ್ನು ಮದುವೆಯಾಗು. ನೀನು ಫಿಲಿಷ್ಟಯರ ಹೆಣ್ಣನ್ನು ಮದುವೆಯಾಗುವುದೇಕೆ? ಅವರು ಸುನ್ನತಿಯನ್ನು ಮಾಡಿಸಿಕೊಂಡವರಲ್ಲ” ಎಂದರು.
ಆದರೆ ಸಂಸೋನನು, “ನನಗೆ ಆಕೆಯನ್ನೇ ಮದುವೆಯಾಗಬೇಕು. ನಾನು ಆಕೆಯನ್ನೇ ಮೆಚ್ಚಿಕೊಂಡಿದ್ದೇನೆ” ಎಂದನು. ಇದು ಯೆಹೋವನ ಚಿತ್ತವೆಂಬುದು ಸಂಸೋನನ ತಂದೆತಾಯಿಗಳಿಗೆ ತಿಳಿದಿರಲಿಲ್ಲ. ಫಿಲಿಷ್ಟಿಯರಿಗೆ ಕೇಡುಮಾಡಲು ಯೆಹೋವನು ತಕ್ಕಮಾರ್ಗವನ್ನು ಹುಡುಕುತ್ತಿದ್ದನು. ಆ ಸಮಯದಲ್ಲಿ ಫಿಲಿಷ್ಟಿಯರು ಇಸ್ರೇಲರ ಮೇಲೆ ಆಳ್ವಿಕೆ ಮಾಡುತ್ತಿದ್ದರು.
ಸಂಸೋನನು ತನ್ನ ತಂದೆತಾಯಿಗಳೊಂದಿಗೆ ತಿಮ್ನಾ ನಗರಕ್ಕೆ ಹೋದನು. ಅವರು ನಗರದ ಸಮೀಪದ ದ್ರಾಕ್ಷಿತೋಟಗಳವರೆಗೆ ಹೋದರು. ಅಲ್ಲಿ ಹಠಾತ್ತಾಗಿ ಒಂದು ಪ್ರಾಯದ ಸಿಂಹವು ಬರ್ಜಿಸಿ ಸಂಸೋನನ ಮೇಲೆ ಬಿತ್ತು. ಯೆಹೋವನ ಆತ್ಮವು ಸಂಸೋನನ ಮೇಲೆ ಪ್ರಬಲವಾಗಿ ಬಂದುದರಿಂದ ಅವನು ಬರಿಗೈಯಿಂದಲೇ ಹೋತದ ಮರಿಯೊ ಎಂಬಂತೆ ಅದನ್ನು ಎರಡು ಹೋಳಾಗಿ ಸೀಳಿಬಿಟ್ಟನು. ಆದರೆ ಸಂಸೋನನು ಇದನ್ನು ತನ್ನ ತಂದೆತಾಯಿಗಳಿಗೆ ಹೇಳಲಿಲ್ಲ.
ಸಂಸೋನನು ನಗರಕ್ಕೆ ಹೋಗಿ ಆ ಫಿಲಿಷ್ಟಿಯ ಸ್ತ್ರೀಯೊಂದಿಗೆ ಮಾತನಾಡಿ ಅವಳನ್ನು ಇಷ್ಟಪಟ್ಟನು. ಕೆಲವು ದಿನಗಳಾದ ಮೇಲೆ ಸಂಸೋನನು ಆ ಫಿಲಿಷ್ಟಿಯ ಸ್ತ್ರೀಯನ್ನು ಮದುವೆಯಾಗುವುದಕ್ಕೋಸ್ಕರ ತಿರುಗಿ ಹೋಗುತ್ತಿದ್ದನು. ದಾರಿಯಲ್ಲಿ ಅವನು ಆ ಸತ್ತಸಿಂಹವನ್ನು ನೋಡುವುದಕ್ಕೆ ಹೋದನು. ಅವನು ಆ ಸತ್ತ್ತಸಿಂಹದ ದೇಹದಲ್ಲಿ ಒಂದು ಜೇನುಗೂಡನ್ನು ಕಂಡನು. ಅದರಲ್ಲಿ ಜೇನುತುಪ್ಪವಿತ್ತು. ಸಂಸೋನನು ತನ್ನ ಕೈಯಿಂದ ಸ್ವಲ್ಪ ಜೇನುತುಪ್ಪವನ್ನು ತೆಗೆದುಕೊಂಡು ಅದನ್ನು ತಿನ್ನುತ್ತಾ ನಡೆದನು. ತಂದೆತಾಯಿಗಳ ಹತ್ತಿರ ಬಂದು ಅವರಿಗೆ ಸ್ವಲ್ಪ ಜೇನುತುಪ್ಪವನ್ನು ಕೊಟ್ಟನು. ಅವರೂ ತಿಂದರು. ಆದರೆ ಆ ಸತ್ತಸಿಂಹದ ದೇಹದಿಂದ ಜೇನುತುಪ್ಪವನ್ನು ತೆಗೆದುಕೊಂಡ ಸಂಗತಿಯನ್ನು ಸಂಸೋನನು ಅವರಿಗೆ ಹೇಳಲಿಲ್ಲ.
10 ಸಂಸೋನನ ತಂದೆಯು ಈ ಫಿಲಿಷ್ಟಿಯ ಸ್ತ್ರೀಯನ್ನು ನೋಡುವುದಕ್ಕೆಂದು ಹೋದನು. ಮದುವೆಯ ಗಂಡು ಒಂದು ಔತಣವನ್ನು ಕೊಡುವ ಪದ್ಧತಿ ಇತ್ತು. ಆದ್ದರಿಂದ ಸಂಸೋನನು ಒಂದು ಔತಣವನ್ನು ಏರ್ಪಡಿಸಿದನು. 11 ಅವನು ಔತಣದ ಏರ್ಪಾಟು ಮಾಡಿದ್ದನ್ನು ಕಂಡು ಫಿಲಿಷ್ಟಿಯರು ಅವನ ಸಂಗಡ ಇರುವುದಕ್ಕೆ ಮೂವತ್ತು ಜನರನ್ನು ಕಳುಹಿಸಿದರು.
12 ಆಗ ಸಂಸೋನನು ಆ ಮೂವತ್ತು ಜನರಿಗೆ, “ನಾನು ನಿಮಗೊಂದು ಒಗಟನ್ನು ಹೇಳಬಯಸುತ್ತೇನೆ. ಈ ಔತಣವು ಏಳು ದಿನ ಮುಂದುವರಿಯುತ್ತದೆ. ಈ ಅವಧಿಯಲ್ಲಿ ನೀವು ಉತ್ತರವನ್ನು ಹೇಳುವ ಪ್ರಯತ್ನ ಮಾಡಿರಿ. ನೀವು ಈ ಅವಧಿಯಲ್ಲಿ ಒಗಟುಗಳ ಅರ್ಥ ಹೇಳಿದರೆ ನಾನು ನಿಮಗೆ ಮೂವತ್ತು ನಾರುಬಟ್ಟೆಯ ಅಂಗಿಗಳನ್ನು ಮತ್ತು ಮೂವತ್ತು ವಿಶೇಷ ವಸ್ತ್ರಗಳನ್ನು ಕೊಡುತ್ತೇನೆ. 13 ಆದರೆ ಉತ್ತರ ಹೇಳಲು ನಿಮಗೆ ಸಾಧ್ಯವಾಗದಿದ್ದರೆ ನೀವು ನನಗೆ ಮೂವತ್ತು ನಾರುಬಟ್ಟೆಯ ಅಂಗಿಗಳನ್ನು ಮತ್ತು ಮೂವತ್ತು ವಿಶೇಷ ವಸ್ತ್ರಗಳನ್ನು ಕೊಡಬೇಕು” ಎಂದು ಹೇಳಿದನು. ಆ ಮೂವತ್ತು ಜನರು, “ನಮಗೆ ನಿನ್ನ ಒಗಟನ್ನು ಹೇಳು, ನಾವು ಅದನ್ನು ಕೇಳಬಯಸುತ್ತೇವೆ” ಎಂದರು.
14 ಸಂಸೋನನು ಅವರಿಗೆ ಈ ಒಗಟನ್ನು ಹೇಳಿದನು:
“ತಿಂದುಬಿಡುವಂಥದರಿಂದ ತಿನ್ನತಕ್ಕದ್ದು ದೊರಕಿತು.
ಕ್ರೂರವಾದದ್ದರಿಂದ ಮಧುರವಾದದ್ದು ಸಿಕ್ಕಿತು.”
ಆ ಮೂವತ್ತು ಜನರು ಮೂರು ದಿನಗಳವರೆಗೆ ಒಗಟಿನ ಅರ್ಥವನ್ನು ಕಂಡುಹಿಡಿಯಲು ಪ್ರಯತ್ನ ಮಾಡಿದರು. ಆದರೆ ಅವರಿಂದ ಸಾಧ್ಯವಾಗಲಿಲ್ಲ.
15 ನಾಲ್ಕನೆಯ ದಿನ* ಅವರು ಸಂಸೋನನ ಹೆಂಡತಿಯಲ್ಲಿಗೆ ಬಂದು, “ನೀನು ನಮ್ಮನ್ನು ಬಡವರನ್ನಾಗಿ ಮಾಡಲು ಇಲ್ಲಿಗೆ ಕರೆದಿರುವಿಯಾ? ನೀನು ನಿನ್ನ ಗಂಡನನ್ನು ಮರುಳುಗೊಳಿಸಿ ನಮಗೆ ಒಗಟಿನ ಅರ್ಥವನ್ನು ಹೇಳುವಂತೆ ಮಾಡು. ನೀನು ನಮಗೆ ಒಗಟಿನ ಅರ್ಥವನ್ನು ಹೇಳದಿದ್ದರೆ ನಾವು ನಿನ್ನನ್ನು ಮತ್ತು ನಿನ್ನ ತಂದೆಯ ಮನೆಯಲ್ಲಿರುವ ಎಲ್ಲರನ್ನೂ ಸುಟ್ಟುಹಾಕುತ್ತೇವೆ” ಎಂದರು.
16 ಸಂಸೋನನ ಹೆಂಡತಿಯು ಅವನ ಹತ್ತಿರ ಹೋಗಿ ಅಳುವುದಕ್ಕೆ ಪ್ರಾರಂಭಿಸಿದಳು. ಅವಳು, “ನೀನು ನನ್ನನ್ನು ನಿಜವಾಗಿ ಪ್ರೀತಿಸುವುದಿಲ್ಲ, ನನ್ನನ್ನು ದ್ವೇಷಿಸುತ್ತಿ; ನೀನು ನಮ್ಮ ಜನರಿಗೆ ಒಗಟನ್ನು ಹೇಳಿರುವೆ; ಆದರೆ ಅದರ ಅರ್ಥವನ್ನು ನನಗೆ ಹೇಳಿಲ್ಲ” ಎಂದು ಗೋಳಾಡತೊಡಗಿದಳು.
ಅದಕ್ಕೆ ಸಂಸೋನನು, “ನಾನು ನನ್ನ ತಂದೆತಾಯಿಯರಿಗೆ ಅದನ್ನು ತಿಳಿಸಲಿಲ್ಲ, ನಿನಗೆ ತಿಳಿಸುವೆನೋ?” ಎಂದನು.
17 ಸಂಸೋನನ ಹೆಂಡತಿಯು ಔತಣದ ಏಳು ದಿನಗಳೆಲ್ಲಾ ಅಳುತ್ತಿದ್ದಳು. ಆದ್ದರಿಂದ ಏಳನೆಯ ದಿನ ಅವನು ಒಗಟಿನ ಅರ್ಥವನ್ನು ಅವಳಿಗೆ ಹೇಳಿದನು. ಅವಳು ಪೀಡಿಸಿದ್ದರಿಂದ ಅವನು ಹೇಳಿದನು. ಆಗ ಅವಳು ತನ್ನ ಜನರಲ್ಲಿಗೆ ಹೋಗಿ ಆ ಒಗಟಿನ ಅರ್ಥವನ್ನು ತಿಳಿಸಿದಳು.
18 ಔತಣದ ಏಳನೆಯ ದಿನ ಸೂರ್ಯಾಸ್ತಮಾನಕ್ಕಿಂತ ಮುಂಚೆ ಫಿಲಿಷ್ಟಿಯರಿಗೆ ಅರ್ಥ ಗೊತ್ತಾಯಿತು. ಅವರು ಸಂಸೋನನಲ್ಲಿಗೆ ಬಂದು ಅವನಿಗೆ,
“ಜೇನಿಗಿಂತ ಸಿಹಿಯಾದದ್ದು ಯಾವುದು;
ಸಿಂಹಕ್ಕಿಂತ ಕ್ರೂರವಾದದ್ದು ಯಾವುದು”
ಎಂದರು.
ಅದಕ್ಕೆ ಸಂಸೋನನು ಅವರಿಗೆ,
“ನೀವು ನನ್ನ ಹಸುವಿನಿಂದ ನೇಗಿಲು ಹೊಡೆಯದ್ದಿದ್ದರೆ
ಒಗಟನ್ನು ಬಿಡಿಸುವುದು ನಿಮ್ಮಿಂದ ಆಗುತ್ತಿರಲಿಲ್ಲ”
ಎಂದನು.
19 ಸಂಸೋನನು ಬಹಳ ಕೋಪಗೊಂಡನು. ಯೆಹೋವನ ಆತ್ಮವು ಸಂಸೋನನ ಮೇಲೆ ಪ್ರಬಲವಾಗಿ ಬಂತು. ಅವನು ಅಷ್ಕೆಲೋನ್ ನಗರಕ್ಕೆ ಧಾವಿಸಿದನು. ಆ ನಗರದಲ್ಲಿ ಅವನು ಮೂವತ್ತು ಜನ ಫಿಲಿಷ್ಟಿಯರನ್ನು ಕೊಂದನು. ಆಮೇಲೆ ಅವನು ಹೆಣಗಳ ಮೇಲಿನ ಎಲ್ಲ ಬಟ್ಟೆಗಳನ್ನೂ ಸ್ವತ್ತನ್ನೂ ಸುಲಿದುಕೊಂಡನು. ಆ ಬಟ್ಟೆಗಳನ್ನು ತಂದು ಒಗಟಿನ ಅರ್ಥ ಹೇಳಿದ ಜನರಿಗೆ ಕೊಟ್ಟನು. ಬಳಿಕ ಅವನು ತನ್ನ ತಂದೆಯ ಮನೆಗೆ ಹೋದನು. 20 ಸಂಸೋನನು ತನ್ನ ಹೆಂಡತಿಯನ್ನು ಕರೆದುಕೊಂಡು ಹೋಗಲಿಲ್ಲ. ಆಕೆಯ ತಂದೆ ಮೂವತ್ತು ಜನರಲ್ಲಿದ್ದ ಉತ್ತಮ ಪುರುಷನೊಬ್ಬನಿಗೆ ಅವಳನ್ನು ಕೊಟ್ಟು ಮದುವೆಮಾಡಿದನು.

* 14:15: ನಾಲ್ಕನೆಯ ದಿನ ಇದು ಕೆಲವು ಪ್ರಾಚೀನ ಗ್ರೀಕ್ ಪ್ರತಿಗಳಲ್ಲಿ ಇದೆ. ಆದರೆ ಹೀಬ್ರೂ ಪ್ರತಿಗಳಲ್ಲಿ ಎಳನೆಯ ದಿನ ಎಂದು ಹೇಳಲಾಗಿದೆ.