ಕಾನಾ ಊರಿನಲ್ಲಿ ಮದುವೆ
2
1 ಮಾರನೆಯ ದಿನ ಗಲಿಲಾಯದ ಕಾನಾ ಊರಿನಲ್ಲಿ ಒಂದು ಮದುವೆ ಇತ್ತು. ಯೇಸುವಿನ ತಾಯಿಯೂ ಬಂದಿದ್ದಳು.
2 ಯೇಸು ಮತ್ತು ಆತನ ಶಿಷ್ಯರನ್ನು ಸಹ ಮದುವೆಗೆ ಆಹ್ವಾನಿಸಲಾಗಿತ್ತು.
3 ಮದುವೆಯಲ್ಲಿ ಸಾಕಷ್ಟು ದ್ರಾಕ್ಷಾರಸವಿರಲಿಲ್ಲ. ಇದ್ದ ದ್ರಾಕ್ಷಾರಸವೆಲ್ಲಾ ಮುಗಿದುಹೋದಾಗ ಯೇಸುವಿನ ತಾಯಿಯು ಆತನಿಗೆ, “ಅವರಲ್ಲಿ ದ್ರಾಕ್ಷಾರಸವೇ ಇಲ್ಲ” ಎಂದು ತಿಳಿಸಿದಳು.
4 ಯೇಸು, “ಅಮ್ಮಾ, ನನ್ನ ಗೊಡವೆ ನಿನಗೇಕೆ? ನನ್ನ ಸಮಯ ಇನ್ನೂ ಬಂದಿಲ್ಲ” ಎಂದು ಉತ್ತರಕೊಟ್ಟನು.
5 ಯೇಸುವಿನ ತಾಯಿ ಸೇವಕರಿಗೆ, “ಯೇಸು ನಿಮಗೆ ಏನು ಹೇಳುತ್ತಾನೋ ಅದನ್ನು ಮಾಡಿರಿ” ಎಂದು ಹೇಳಿದಳು.
6 ಕಲ್ಲಿನಿಂದ ಮಾಡಿದ ಆರು ದೊಡ್ಡ ಬಾನೆಗಳು ಅಲ್ಲಿದ್ದವು. ಯೆಹೂದ್ಯರು ಶುದ್ಧಾಚಾರಗಳಿಗಾಗಿ ಈ ಕಲ್ಲಿನ ಬಾನೆಗಳನ್ನು ಉಪಯೋಗಿಸುತ್ತಿದ್ದರು. ಪ್ರತಿಯೊಂದು ಬಾನೆಯೂ ಸುಮಾರು ನೂರು ಲೀಟರ್‌ಗಳಷ್ಟು ನೀರು ಹಿಡಿಯುತ್ತಿತ್ತು.
7 ಯೇಸು ಸೇವಕರಿಗೆ, “ಆ ಬಾನೆಗಳಲ್ಲಿ ನೀರನ್ನು ತುಂಬಿರಿ” ಎಂದು ಹೇಳಿದನು. ಅಂತೆಯೇ ಸೇವಕರು ಆ ಬಾನೆಗಳ ಕಂಠದವರೆಗೂ ನೀರನ್ನು ತುಂಬಿದರು.
8 ಬಳಿಕ ಯೇಸು ಸೇವಕರಿಗೆ, “ಈಗ ಸ್ವಲ್ಪ ನೀರನ್ನು ತೆಗೆದುಕೊಂಡು ಹೋಗಿ ಔತಣದ ಮೇಲ್ವಿಚಾರಕನಿಗೆ ಕೊಡಿರಿ” ಎಂದು ಹೇಳಿದನು.
ಅಂತೆಯೇ ಅವರು ಅದನ್ನು ತೆಗೆದುಕೊಂಡು ಹೋದರು.
9 ಮದುವೆಯ ಮೇಲ್ವಿಚಾರಕನು ದ್ರಾಕ್ಷಾರಸವಾಗಿ ಮಾರ್ಪಟ್ಟಿದ್ದ ನೀರನ್ನು ರುಚಿ ನೋಡಿದನು. ದ್ರಾಕ್ಷಾರಸವು ಎಲ್ಲಿಂದ ಬಂತೆಂಬುದು ಅವನಿಗೆ ಗೊತ್ತಿರಲಿಲ್ಲ. ಆದರೆ ಅದು ಆ ಸೇವಕರಿಗೆ ತಿಳಿದಿತ್ತು. ಮದುವೆಯ ಮೇಲ್ವಿಚಾರಕನು ಮದುಮಗನನ್ನು ಕರೆದು,
10 “ಜನರು ಉತ್ತಮವಾದ ದ್ರಾಕ್ಷಾರಸವನ್ನು ಯಾವಾಗಲೂ ಮೊದಲು ಹಂಚುತ್ತಾರೆ. ಅತಿಥಿಗಳು ಕುಡಿದು ಮತ್ತರಾದ ಮೇಲೆ ಅವರಿಗೆ ಕಡಿಮೆ ದರ್ಜೆಯ ದ್ರಾಕ್ಷಾರಸವನ್ನು ಕೊಡುತ್ತಾರೆ. ಆದರೆ ನೀನು ಉತ್ತಮವಾದ ದ್ರಾಕ್ಷಾರಸವನ್ನು ಈವರೆಗೂ ಇಟ್ಟಿರುವೆ!” ಎಂದು ಹೇಳಿದನು.
11 ಯೇಸು ಮಾಡಿದ ಮೊದಲನೆಯ ಅದ್ಭುತಕಾರ್ಯವಿದು. ಯೇಸು ಇದನ್ನು ಗಲಿಲಾಯದ ಕಾನಾ ಊರಿನಲ್ಲಿ ಮಾಡಿ ತನ್ನ ಮಹತ್ವವನ್ನು ತೋರಿದನು. ಆತನ ಶಿಷ್ಯರೂ ಆತನಲ್ಲಿ ನಂಬಿಕೆ ಇಟ್ಟರು.
12 ಬಳಿಕ ಯೇಸು ಕಪೆರ್ನೌಮ್ ಎಂಬ ಊರಿಗೆ ಹೋದನು. ಯೇಸುವಿನ ತಾಯಿ ಮತ್ತು ಸಹೋದರರು ಹಾಗೂ ಆತನ ಶಿಷ್ಯರು ಆತನೊಡನೆ ಹೋದರು. ಅವರೆಲ್ಲರೂ ಕಪೆರ್ನೌಮ್‌ನಲ್ಲಿ ಕೆಲವು ದಿನ ತಂಗಿದ್ದರು.
ದೇವಾಲಯದಲ್ಲಿ ಯೇಸು
(ಮತ್ತಾಯ 21:12-13; ಮಾರ್ಕ 11:15-17; ಲೂಕ 19:45-46)
13 ಆಗ ಯೆಹೂದ್ಯರ ಪಸ್ಕಹಬ್ಬ ಬಹು ಸಮೀಪವಾಗಿತ್ತು. ಆದ್ದರಿಂದ ಯೇಸು ಜೆರುಸಲೇಮಿಗೆ ಹೋದನು.
14 ದೇವಾಲಯದಲ್ಲಿ ಜನರು ದನ, ಕುರಿ ಮತ್ತು ಪಾರಿವಾಳಗಳನ್ನು ಮಾರುತ್ತಿರುವುದನ್ನು ಯೇಸು ಕಂಡನು. ಇತರ ಕೆಲವು ಜನರು ಮೇಜುಗಳ ಸಮೀಪದಲ್ಲಿ ಕುಳಿತುಕೊಂಡು ಹಣ ವಿನಿಮಯ ಮಾಡುತ್ತಿದ್ದರು ಮತ್ತು ವ್ಯಾಪಾರ ಮಾಡುತ್ತಿದ್ದರು.
15 ಯೇಸು ಹಗ್ಗದ ಕೆಲವು ತುಂಡುಗಳನ್ನು ತೆಗೆದುಕೊಂಡು ಅವುಗಳಿಂದ ಒಂದು ಚಾವಟಿ ಮಾಡಿ ಆ ಜನರನ್ನು ಮತ್ತು ದನಕುರಿಗಳನ್ನು ಬಲವಂತವಾಗಿ ದೇವಾಲಯದಿಂದ ಹೊರಗಟ್ಟಿದನು. ಯೇಸು ಮೇಜುಗಳನ್ನು ಕೆಡವಿ, ಹಣ ವಿನಿಮಯ ಮಾಡುತ್ತಿದ್ದ ಜನರ ಹಣವನ್ನು ಚೆಲ್ಲಿದನು.
16 ಪಾರಿವಾಳಗಳನ್ನು ಮಾರುತ್ತಿದ್ದವರಿಗೆ, “ಇವುಗಳನ್ನು ಹೊರಗೆ ತೆಗೆದುಕೊಂಡು ಹೋಗಿರಿ! ನನ್ನ ತಂದೆಯ ಮನೆಯನ್ನು ವ್ಯಾಪಾರ ಸ್ಥಳವನ್ನಾಗಿ ಮಾಡಬೇಡಿ!” ಎಂದು ಹೇಳಿದನು.
17 “ನಿನ್ನ ಆಲಯದ ಮೇಲಿನ ಅಭಿಮಾನವು ನನ್ನೊಳಗೆ ಬೆಂಕಿಯಂತೆ ಸುಡುತ್ತದೆ” ಕೀರ್ತನೆ 69:9
ಎಂದು ಪವಿತ್ರ ಗ್ರಂಥದಲ್ಲಿ ಬರೆದಿರುವ ವಾಕ್ಯವನ್ನು ಯೇಸುವಿನ ಶಿಷ್ಯರು ಆಗ ಜ್ಞಾಪಿಸಿಕೊಂಡರು.
18 ಯೆಹೂದ್ಯರು ಯೇಸುವಿಗೆ, “ಇಷ್ಟೆಲ್ಲಾ ಮಾಡಲು ನಿನಗೆ ಅಧಿಕಾರವಿದೆ ಎಂದು ರುಜುವಾತುಪಡಿಸಲು ಯಾವ ಸೂಚಕಕಾರ್ಯವನ್ನು ಮಾಡುವೆ?” ಎಂದು ಕೇಳಿದರು.
19 ಯೇಸು, “ಈ ದೇವಾಲಯವನ್ನು ಕೆಡವಿರಿ, ಮೂರು ದಿನಗಳಲ್ಲಿ ಅದನ್ನು ಮತ್ತೆ ಕಟ್ಟುತ್ತೇನೆ” ಎಂದು ಉತ್ತರಕೊಟ್ಟನು.
20 ಯೆಹೂದ್ಯರು, “ಈ ದೇವಾಲಯವನ್ನು ಕಟ್ಟಲು ಜನರು ನಲವತ್ತಾರು ವರ್ಷಗಳ ಕಾಲ ದುಡಿದಿದ್ದಾರೆ! ನೀನು ಮೂರೇ ದಿನಗಳಲ್ಲಿ ಇದನ್ನು ಕಟ್ಟಬಲ್ಲೆಯಾ?” ಎಂದು ಕೇಳಿದರು.
21 (ಆದರೆ ಯೇಸು ತನ್ನ ದೇಹವೇ ದೇವಾಲಯವೆಂಬ ಅರ್ಥದಲ್ಲಿ ಹೇಳಿದ್ದನು.
22 ಯೇಸು ಸತ್ತವರೊಳಗಿಂದ ಎದ್ದುಬಂದಾಗ ಆತನ ಶಿಷ್ಯರು ಆತನ ಈ ಮಾತನ್ನು ಜ್ಞಾಪಿಸಿಕೊಂಡರು. ಅವರು ಪವಿತ್ರ ಗ್ರಂಥವನ್ನು ಮತ್ತು ಆತನು ಹೇಳಿದ ಮಾತುಗಳನ್ನು ನಂಬಿದರು.)
23 ಯೇಸು ಪಸ್ಕಹಬ್ಬಕ್ಕಾಗಿ ಜೆರುಸಲೇಮಿನಲ್ಲಿದ್ದನು. ಆತನು ಮಾಡಿದ ಸೂಚಕಕಾರ್ಯಗಳನ್ನು ನೋಡಿದಾಗ ಅನೇಕ ಜನರು ಆತನನ್ನು ನಂಬಿದರು.
24 ಆದರೆ ಯೇಸು ಅವರಲ್ಲಿ ಭರವಸೆ ಇಡಲಿಲ್ಲ. ಏಕೆಂದರೆ ಆತನು ಅವರನ್ನು ಚೆನ್ನಾಗಿ ಬಲ್ಲವನಾಗಿದ್ದನು.
25 ಜನರ ಬಗ್ಗೆ ಆತನಿಗೆ ಯಾರೂ ತಿಳಿಸುವ ಅಗತ್ಯವಿರಲಿಲ್ಲ. ಮನುಷ್ಯನ ಮನಸ್ಸಿನಲ್ಲಿ ಏನಿದೆ ಎಂಬುದು ಯೇಸುವಿಗೆ ಗೊತ್ತಿತ್ತು.