ಹೃದಯ ಪರಿವರ್ತನೆ
13
1 ಅದೇ ಸಮಯದಲ್ಲಿ ಅಲ್ಲಿದ್ದ ಕೆಲವರು ಯೇಸುವಿನ ಬಳಿಗೆ ಬಂದು ಗಲಿಲಾಯದಲ್ಲಿ ಯಜ್ಞ ಅರ್ಪಿಸುತ್ತಿದ್ದವರನ್ನು ಪಿಲಾತನು ಕೊಲ್ಲಿಸಿದ್ದನ್ನೂ ಅವರು ಯಜ್ಞವಾಗಿ ಅರ್ಪಿಸಿದ್ದ ಪಶುಗಳ ರಕ್ತದೊಡನೆ ಅವರ ರಕ್ತವನ್ನು ಬೆರಸಿದ್ದನ್ನೂ ಯೇಸುವಿಗೆ ತಿಳಿಸಿದರು.
2 ಯೇಸು ಅವರಿಗೆ, “ಕೊಲೆಗೀಡಾದವರು ಗಲಿಲಾಯದ ಇತರರೆಲ್ಲರಿಗಿಂತ ಹೆಚ್ಚು ಪಾಪಿಗಳಾಗಿದ್ದರೆಂದು ಭಾವಿಸುತ್ತೀರೋ?
3 ಇಲ್ಲ! ಅವರು ಅಂತಹ ಪಾಪಿಗಳಾಗಿರಲಿಲ್ಲ! ಆದರೆ ನೀವು ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ ಅವರಂತೆಯೇ ನಾಶವಾಗುವಿರಿ!
4 ಸಿಲೊವಾ ಎಂಬಲ್ಲಿ ಗೋಪುರ ಕುಸಿದು ಬಿದ್ದಾಗ, ಸತ್ತುಹೋದ ಹದಿನೆಂಟು ಮಂದಿಯ ಕುರಿತು ನಿಮ್ಮ ಅಭಿಪ್ರಾಯವೇನು? ಜೆರುಸಲೇಮಿನಲ್ಲಿ ವಾಸವಾಗಿದ್ದ ಇತರರೆಲ್ಲರಿಗಿಂತಲೂ ಅವರು ಹೆಚ್ಚು ಪಾಪಿಗಳಾಗಿದ್ದರೆಂದು ಭಾವಿಸುತ್ತೀರೋ?
5 ಅವರು ಅಂತಹ ಪಾಪಿಗಳಾಗಿರಲಿಲ್ಲ! ಆದರೆ ನೀವು ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ ಅವರಂತೆಯೇ ನಾಶವಾಗುವಿರಿ ಎಂದು ನಾನು ನಿಮಗೆ ಹೇಳುತ್ತೇನೆ!” ಎಂದು ಉತ್ತರಿಸಿದನು.
ಉಪಯೋಗವಿಲ್ಲದ ಮರ
6 ಯೇಸು ಈ ಸಾಮ್ಯವನ್ನು ಹೇಳಿದನು: “ಒಬ್ಬನು ತನ್ನ ತೋಟದಲ್ಲಿ ಒಂದು ಅಂಜೂರದ ಮರವನ್ನು ನೆಡಿಸಿದ್ದನು. ಒಮ್ಮೆ ಅವನು ಆ ಮರ ಹಣ್ಣು ಫಲಿಸಿರಬಹುದೆಂದು ಅಲ್ಲಿಗೆ ಬಂದನು. ಆದರೆ ಅವನು ಅದರಲ್ಲಿ ಒಂದು ಹಣ್ಣನ್ನೂ ಕಾಣಲಿಲ್ಲ.
7 ಅವನು ತನ್ನ ತೋಟವನ್ನು ನೋಡಿಕೊಳ್ಳುವುದಕ್ಕಾಗಿ ಒಬ್ಬ ತೋಟಗಾರನನ್ನೂ ನೇಮಿಸಿದ್ದನು. ಅವನು ತನ್ನ ಆ ಸೇವಕನಿಗೆ, ‘ಈ ಮರವು ಹಣ್ಣು ಬಿಡಬಹುದೆಂದು ನಾನು ಮೂರು ವರ್ಷದಿಂದ ಕಾಯುತ್ತಿದ್ದೇನೆ. ಆದರೆ ಇದು ಹಣ್ಣನ್ನು ಬಿಡಲೇ ಇಲ್ಲ. ಇದನ್ನು ಕತ್ತರಿಸಿಹಾಕು! ಇದು ಭೂಮಿಯ ಸಾರವನ್ನೇಕೆ ವ್ಯರ್ಥಗೊಳಿಸಬೇಕು?’ ಎಂದು ಹೇಳಿದನು.
8 ಆದರೆ ಆ ಸೇವಕನು, ‘ಯಜಮಾನನೇ, ಇನ್ನೊಂದು ವರ್ಷ ತಾಳಿಕೊ. ಅದು ಫಲವನ್ನು ಕೊಡಬಹುದು. ಅದರ ಸುತ್ತಲೂ ಅಗೆದು ಸ್ವಲ್ಪ ರಸಗೊಬ್ಬರವನ್ನು ಹಾಕುತ್ತೇನೆ.
9 ಆಗ ಮುಂದಿನ ವರ್ಷ ಈ ಮರ ಫಲವನ್ನು ಕೊಡಬಹುದು. ಒಂದುವೇಳೆ ಇದು ಫಲವನ್ನು ಕೊಡದಿದ್ದರೆ ನೀನು ಇದನ್ನು ಕಡಿದುಹಾಕು’ ಎಂದು ಉತ್ತರಿಸಿದನು.”
ಯೇಸುವಿನಿಂದ ಗುಣಹೊಂದಿದ ಸ್ತ್ರೀ
10 ಒಂದು ಸಬ್ಬತ್‌ದಿನ ಯೇಸು ಸಭಾಮಂದಿರದಲ್ಲಿ ಉಪದೇಶಿಸಿದನು.
11 ದೆವ್ವದಿಂದ ಪೀಡಿತಳಾಗಿದ್ದ ಒಬ್ಬ ಸ್ತ್ರೀ ಅಲ್ಲಿದ್ದಳು. ಆ ದೆವ್ವದಿಂದಾಗಿ ಆಕೆಗೆ ಹದಿನೆಂಟು ವರ್ಷಗಳಿಂದ ನಡು ಬಗ್ಗಿಕೊಂಡಿತ್ತು. ನೆಟ್ಟಗೆ ನಿಂತುಕೊಳ್ಳಲು ಆಕೆಗೆ ಸಾಧ್ಯವಿರಲಿಲ್ಲ.
12 ಯೇಸು ಆಕೆಯನ್ನು ಕಂಡು, ತನ್ನ ಬಳಿಗೆ ಕರೆದು, “ಅಮ್ಮಾ, ನಿನ್ನ ಕಾಯಿಲೆ ನಿನ್ನನ್ನು ಬಿಟ್ಟುಹೋಗಿದೆ!” ಎಂದು ಹೇಳಿದನು.
13 ಯೇಸು ಆಕೆಯ ಮೇಲೆ ತನ್ನ ಕೈಗಳನ್ನಿಟ್ಟಾಗ ಆಕೆ ನೆಟ್ಟಗೆ ನಿಲ್ಲಲು ಶಕ್ತಳಾದಳು. ಆಕೆ ದೇವರನ್ನು ಕೊಂಡಾಡಿದಳು.
14 ಯೇಸು ಸಬ್ಬತ್‌ದಿನದಲ್ಲಿ ವಾಸಿಮಾಡಿದ್ದರಿಂದ ಸಭಾಮಂದಿರದ ಅಧಿಕಾರಿ ಕೋಪಗೊಂಡು ಜನರಿಗೆ, “ಕೆಲಸಕ್ಕಾಗಿ ವಾರದಲ್ಲಿ ಆರು ದಿನಗಳಿವೆ. ಆ ದಿನಗಳಲ್ಲಿ ಬಂದು ವಾಸಿಮಾಡಿಸಿಕೊಳ್ಳಿರಿ. ಸಬ್ಬತ್‌ದಿನದಲ್ಲಿ ವಾಸಿಮಾಡಿಸಿಕೊಳ್ಳಬಾರದು” ಎಂದು ಹೇಳಿದನು.
15 ಅದಕ್ಕೆ ಪ್ರಭುವು (ಯೇಸು), “ನೀವು ಕಪಟಿಗಳು! ನೀವೆಲ್ಲರೂ ನಿಮ್ಮ ದುಡಿಮೆಯ ಪಶುಗಳನ್ನು ಪ್ರತಿದಿನ ಬಿಚ್ಚಿ ನೀರು ಕುಡಿಸಲು ಕರೆದೊಯ್ಯುತೀರಿ. ಸಬ್ಬತ್‌ದಿನದಲ್ಲಿಯೂ ನೀವು ಹಾಗೆಯೇ ಮಾಡುತ್ತೀರಿ!
16 ನಾನು ವಾಸಿಮಾಡಿದ ಈ ಸ್ತ್ರೀಯಾದರೋ ಯೆಹೂದ್ಯಳು. ಸೈತಾನನು ಆಕೆಯನ್ನು ಹದಿನೆಂಟು ವರ್ಷಗಳಿಂದ ಕಟ್ಟಿಹಾಕಿದ್ದನು. ಆದ್ದರಿಂದ ಆಕೆಯನ್ನು ಸಬ್ಬತ್‌ದಿನದಂದು ಕಾಯಿಲೆಯಿಂದ ಬಿಡುಗಡೆ ಮಾಡುವುದು ಖಂಡಿತವಾಗಿಯೂ ತಪ್ಪಲ್ಲ!” ಎಂದು ಹೇಳಿದನು.
17 ಈ ಮಾತನ್ನು ಕೇಳಿದಾಗ, ಆತನನ್ನು ಟೀಕಿಸುತ್ತಿದ್ದ ಜನರೆಲ್ಲರಿಗೂ ತಮ್ಮ ಬಗ್ಗೆ ನಾಚಿಕೆಯಾಯಿತು. ಯೇಸು ಮಾಡುತ್ತಿದ್ದ ಅದ್ಭುತಕಾರ್ಯಗಳಿಗಾಗಿ ಜನರೆಲ್ಲರೂ ಸಂತೋಷಪಟ್ಟರು.
ದೇವರ ರಾಜ್ಯ ಯಾವುದಕ್ಕೆ ಹೋಲಿಕೆಯಾಗಿದೆ?
(ಮತ್ತಾಯ 13:31-33; ಮಾರ್ಕ 4:30-32)
18 ಬಳಿಕ ಯೇಸು, “ದೇವರ ರಾಜ್ಯ ಯಾವುದಕ್ಕೆ ಹೋಲಿಕೆಯಾಗಿದೆ? ಅದನ್ನು ನಾನು ಯಾವುದಕ್ಕೆ ಹೋಲಿಸಲಿ?
19 ದೇವರ ರಾಜ್ಯ ಸಾಸಿವೆಕಾಳಿನಂತಿದೆ. ಒಬ್ಬನು ತನ್ನ ತೋಟದಲ್ಲಿ ಈ ಬೀಜವನ್ನು ಹಾಕುತ್ತಾನೆ. ಅದು ಬೆಳೆದು ಮರವಾಗುತ್ತದೆ. ಪಕ್ಷಿಗಳು ಅದರ ಕೊಂಬೆಗಳಲ್ಲಿ ಗೂಡುಗಳನ್ನು ಕಟ್ಟಿಕೊಳ್ಳುತ್ತವೆ” ಎಂದು ಹೇಳಿದನು.
20 ಯೇಸು ಮತ್ತೆ ಹೀಗೆಂದನು: “ದೇವರ ರಾಜ್ಯವನ್ನು ನಾನು ಯಾವುದಕ್ಕೆ ಹೋಲಿಸಲಿ?
21 ಅದು, ಸ್ತ್ರೀಯೊಬ್ಬಳು ರೊಟ್ಟಿಮಾಡುವುದಕ್ಕಾಗಿ ದೊಡ್ಡ ಪಾತ್ರೆಯೊಂದರಲ್ಲಿರುವ ಹಿಟ್ಟಿಗೆ ಬೆರೆಸುವ ಹುಳಿಯಂತಿದೆ. ಆ ಹುಳಿಯು ನಾದಿದ ಹಿಟ್ಟನ್ನೆಲ್ಲ ಉಬ್ಬಿಸುತ್ತದೆ.”
ಕಿರಿದಾದ ಬಾಗಿಲು
(ಮತ್ತಾಯ 7:13-14; 21-23)
22 ಯೇಸು ಪ್ರತಿಯೊಂದು ಊರಿನಲ್ಲಿಯೂ ಹಳ್ಳಿಯಲ್ಲಿಯೂ ಉಪದೇಶಿಸುತ್ತಾ ಜೆರುಸಲೇಮಿನ ಕಡೆಗೆ ಪ್ರಯಾಣ ಮಾಡಿದನು.
23 ಯಾರೋ ಒಬ್ಬನು ಯೇಸುವಿಗೆ, “ಸ್ವಾಮೀ, ಎಷ್ಟು ಜನರು ರಕ್ಷಿಸಲ್ಪಡುವರು? ಕೇವಲ ಸ್ವಲ್ಪ ಜನರೋ?” ಎಂದು ಕೇಳಿದನು.
ಅದಕ್ಕೆ ಯೇಸು,
24 “ಸ್ವರ್ಗಕ್ಕೆ ನಡೆಸುವ ಕಿರಿದಾದ ಬಾಗಿಲಿನ ಮೂಲಕ ಹೋಗಲು ಪ್ರಯಾಸಪಡಿರಿ! ಅನೇಕ ಜನರು ಅದರ ಮೂಲಕ ಹೋಗಲು ಪ್ರಯತ್ನಿಸುತ್ತಾರೆ. ಆದರೆ ಅವರಿಂದ ಆಗುವುದಿಲ್ಲ.
25 ಮನೆಯ ಯಜಮಾನನು ಎದ್ದು ಬಾಗಿಲನ್ನು ಮುಚ್ಚಿದ ಮೇಲೆ ನೀವು ಹೊರಗೆ ನಿಂತುಕೊಂಡು ಬಾಗಿಲು ತಟ್ಟಬೇಕಷ್ಟೇ, ಆದರೂ ಅವನು ತೆರೆಯುವುದಿಲ್ಲ. ‘ಸ್ವಾಮೀ, ನಮಗೆ ಬಾಗಿಲು ತೆರೆ!’ ಎಂದು ನೀವು ಕೇಳುವಿರಿ. ಅವನು ನಿಮಗೆ, ‘ನೀವು ಯಾರೋ ನನಗೆ ತಿಳಿಯದು. ನೀವು ಎಲ್ಲಿಯವರು?’ ಎಂದು ಉತ್ತರಿಸುವನು.
26 ಆಗ ನೀವು, ‘ನಾವು ನಿನ್ನೊಡನೆ ಊಟಮಾಡಿದೆವು, ಪಾನಮಾಡಿದೆವು. ನೀನು ನಮ್ಮ ಬೀದಿಗಳಲ್ಲಿ ನಮಗೆ ಉಪದೇಶಿಸಿದೆ’ ಎಂದು ಹೇಳುವಿರಿ.
27 ಆಗ ಅವನು ನಿಮಗೆ, ‘ನೀವು ಯಾರೋ ನನಗೆ ಗೊತ್ತಿಲ್ಲ! ನೀವು ಎಲ್ಲಿಯವರು? ಇಲ್ಲಿಂದ ಹೊರಟುಹೋಗಿ! ನೀವೆಲ್ಲರೂ ಪಾಪಕೃತ್ಯಗಳನ್ನು ಮಾಡುವ ಜನರು!’ ಎಂದು ನಿಮಗೆ ಹೇಳುವನು.
28 “ಅಬ್ರಹಾಮ, ಇಸಾಕ, ಯಾಕೋಬ ಮತ್ತು ಎಲ್ಲಾ ಪ್ರವಾದಿಗಳು ದೇವರ ರಾಜ್ಯದಲ್ಲಿರುವುದನ್ನು ನೀವು ನೋಡುವಿರಿ. ಆದರೆ ನಿಮ್ಮನ್ನು ಹೊರಗೆ ಹಾಕಲಾಗುವುದು. ಆಗ ನೀವು ಭಯದಿಂದಲೂ ಕೋಪದಿಂದಲೂ ಕೂಗಿಕೊಳ್ಳುವಿರಿ.
29 ಜನರು ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣದಿಕ್ಕುಗಳಿಂದ ಬರುವರು. ಅವರು ದೇವರ ರಾಜ್ಯದಲ್ಲಿ ಊಟಕ್ಕೆ ಕುಳಿತುಕೊಳ್ಳುವರು.
30 ಇಗೋ, ಕಡೆಯವರಾಗಿರುವ ಕೆಲವರು ಮೊದಲಿನವರಾಗುವರು, ಮೊದಲಿನವರಾಗಿರುವ ಕೆಲವರು ಕಡೆಯವರಾಗುವರು.”
ಜೆರುಸಲೇಮಿನಲ್ಲಿ ಯೇಸುವಿನ ಮರಣ
(ಮತ್ತಾಯ 23:37-39)
31 ಆ ಸಮಯದಲ್ಲಿ ಕೆಲವು ಫರಿಸಾಯರು ಯೇಸುವಿನ ಬಳಿಗೆ ಬಂದು, “ಇಲ್ಲಿಂದ ಹೋಗಿ ಅಡಗಿಕೊ! ಹೆರೋದನು ನಿನ್ನನ್ನು ಕೊಲ್ಲಬೇಕೆಂದಿದ್ದಾನೆ!” ಎಂದು ಹೇಳಿದರು.
32 ಯೇಸು ಅವರಿಗೆ, “ನೀವು ಹೋಗಿ ಆ ನರಿಗೆ (ಹೆರೋದನಿಗೆ), ‘ಈ ದಿನ ಮತ್ತು ನಾಳೆ ನಾನು ಜನರನ್ನು ದೆವ್ವಗಳಿಂದ ಬಿಡಿಸುತ್ತೇನೆ ಮತ್ತು ರೋಗಿಗಳನ್ನು ಗುಣಪಡಿಸುವ ಕಾರ್ಯವನ್ನು ಪೂರ್ಣಗೊಳಿಸುತ್ತೇನೆ. ನಾಳಿದ್ದು, ನನ್ನ ಕಾರ್ಯವೆಲ್ಲಾ ಸಂಪೂರ್ಣ ಮುಕ್ತಾಯವಾಗುವುದು’ ಎಂದು ಹೇಳಿರಿ.
33 ಅನಂತರ ನಾನು ಜೆರುಸಲೇಮಿಗೆ ಹೋಗಬೇಕು. ಏಕೆಂದರೆ ಪ್ರವಾದಿಗಳು ಅಲ್ಲೇ ಕೊಲ್ಲಲ್ಪಡತಕ್ಕದ್ದು.
34 “ಜೆರುಸಲೇಮೇ, ಜೆರುಸಲೇಮೇ! ನೀನು ಪ್ರವಾದಿಗಳನ್ನು ಕೊಲ್ಲುವವಳು. ದೇವರು ನಿನ್ನ ಬಳಿಗೆ ಕಳುಹಿಸಿದ ಜನರನ್ನು ನೀನು ಕಲ್ಲೆಸೆದು ಕೊಲ್ಲುವೆ. ಕೋಳಿ ತನ್ನ ಮರಿಗಳನ್ನು ತನ್ನ ರೆಕ್ಕೆಗಳ ಕೆಳಗೆ ಕೂಡಿಸಿಕೊಳ್ಳುವಂತೆ ನಾನು ನಿನ್ನ ಜನರಿಗೆ ಸಹಾಯ ಮಾಡಲು ಎಷ್ಟೋ ಸಲ ಅಪೇಕ್ಷಿಸಿದೆ. ಆದರೆ ನೀನು ನನಗೆ ಆಸ್ಪದವನ್ನು ಕೊಡಲಿಲ್ಲ.
35 ನಿನ್ನ ಆಲಯವು ಬರಿದಾಗುವುದು. ‘ಪ್ರಭುವಿನ ಹೆಸರಿನಲ್ಲಿ ಬರುವಾತನಿಗೆ ಆಶೀರ್ವಾದ!’ ಎಂದು ಹೇಳುವ ಸಮಯದ ತನಕ ನೀನು ನನ್ನನ್ನು ನೋಡುವುದೇ ಇಲ್ಲವೆಂದು ನಾನು ನಿನಗೆ ಹೇಳುತ್ತೇನೆ” ಎಂದನು.