ಯೇಸುವನ್ನು ಹಿಂಬಾಲಿಸಿದ ಪೇತ್ರ, ಯಾಕೋಬ, ಯೋಹಾನ
(ಮತ್ತಾಯ 4:18-22; ಮಾರ್ಕ 1:16-20)
5
ಯೇಸು ಗೆನೆಸರೇತ್ (ಗಲಿಲಾಯ) ಸರೋವರದ ಬಳಿ ನಿಂತುಕೊಂಡಿದ್ದಾಗ, ದೇವರ ವಾಕ್ಯವನ್ನು ಕೇಳಲು ಅನೇಕ ಜನರು ನೂಕಾಡುತ್ತಾ ಆತನ ಸುತ್ತಲೂ ಸೇರಿಬಂದರು. ಸರೋವರದ ದಡದಲ್ಲಿ ನಿಂತಿದ್ದ ಎರಡು ದೋಣಿಗಳನ್ನು ಯೇಸು ನೋಡಿದನು. ಬೆಸ್ತರು ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು. ಯೇಸು ಸೀಮೋನನ ದೋಣಿಯಲ್ಲಿ ಹತ್ತಿ ಕುಳಿತುಕೊಂಡು ದೋಣಿಯನ್ನು ದಡದಿಂದ ಸ್ವಲ್ಪದೂರಕ್ಕೆ ನೂಕಬೇಕೆಂದು ಸೀಮೋನನಿಗೆ ಹೇಳಿದನು.
ಉಪದೇಶ ಮಾಡಿದಮೇಲೆ ಯೇಸು ಸೀಮೋನನಿಗೆ, “ದೋಣಿಯನ್ನು ಆಳವಾದ ನೀರಿನ ಸ್ಥಳಕ್ಕೆ ನಡೆಸಿ, ಮೀನುಹಿಡಿಯಲು ನಿಮ್ಮ ಬಲೆಗಳನ್ನು ನೀರಿನಲ್ಲಿ ಹಾಕಿರಿ” ಎಂದು ಹೇಳಿದನು.
ಸೀಮೋನನು, “ಗುರುವೇ, ನಾವು ರಾತ್ರಿಯೆಲ್ಲಾ ಪ್ರಯಾಸಪಟ್ಟರೂ ಒಂದು ಮೀನೂ ಸಿಕ್ಕಲಿಲ್ಲ. ಆದರೆ, ನೀನು ಹೇಳಿದ್ದರಿಂದ ಬೀಸುತ್ತೇವೆ” ಎಂದನು. ಬೆಸ್ತರು ತಮ್ಮ ಬಲೆಗಳನ್ನು ನೀರಿನೊಳಗೆ ಬೀಸಿದಾಗ, ಅವರ ಬಲೆಗಳು ಹರಿದುಹೋಗುವಷ್ಟು ಮೀನುಗಳು ರಾಶಿರಾಶಿಯಾಗಿ ಬಲೆಗಳಲ್ಲಿ ತುಂಬಿಕೊಂಡವು. ಆಗ ಅವರು ಮತ್ತೊಂದು ದೋಣಿಯಲ್ಲಿದ್ದ ತಮ್ಮ ಸ್ನೇಹಿತರಿಗೆ ಸನ್ನೆಮಾಡಿ ಸಹಾಯಕ್ಕಾಗಿ ಕರೆದುಕೊಂಡರು. ಅವರೆಲ್ಲರೂ ಮೀನುಗಳನ್ನು ತುಂಬಿಸಲು ದೋಣಿಗಳೆರಡೂ ಮುಳುಗುವಂತಾದವು.
8-9 ಇದನ್ನು ಕಂಡ ಬೆಸ್ತರಿಗೆಲ್ಲಾ ವಿಸ್ಮಯವಾಯಿತು. ಸೀಮೋನ್ ಪೇತ್ರನಂತೂ ಯೇಸುವಿನ ಮುಂದೆ ಮೊಣಕಾಲೂರಿ “ಪ್ರಭುವೇ ನನ್ನನ್ನು ಬಿಟ್ಟುಹೋಗು, ನಾನು ಪಾಪಿಯಾಗಿದ್ದೇನೆ!” ಎಂದನು. 10 ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರೂ ಆಶ್ಚರ್ಯಪಟ್ಟರು. (ಇವರಿಬ್ಬರೂ ಸೀಮೋನನ ಪಾಲುಗಾರರಾಗಿದ್ದರು.)
ಯೇಸು ಸೀಮೋನನಿಗೆ, “ಭಯಪಡಬೇಡ. ಇಂದಿನಿಂದ ನೀನು ಮೀನನ್ನು ಹಿಡಿಯದೆ, ಮನುಷ್ಯರನ್ನು ಒಟ್ಟುಗೂಡಿಸಲು ದುಡಿಯುವೆ!” ಎಂದು ಹೇಳಿದನು.
11 ಅವರು ತಮ್ಮ ದೋಣಿಗಳನ್ನು ದಡಕ್ಕೆ ಸಾಗಿಸಿದ ಮೇಲೆ ಎಲ್ಲವನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು.
ಯೇಸುವಿನಿಂದ ಗುಣಹೊಂದಿದ ಕುಷ್ಠರೋಗಿ
(ಮತ್ತಾಯ 8:1-4; ಮಾರ್ಕ 1:40-45)
12 ಒಮ್ಮೆ ಯೇಸು ಒಂದು ಊರಿನಲ್ಲಿದ್ದಾಗ ಕುಷ್ಠರೋಗಿಯೊಬ್ಬನು ಆತನನ್ನು ಕಂಡು, ಆತನ ಮುಂದೆ ಅಡ್ಡಬಿದ್ದು, “ಪ್ರಭುವೇ, ನೀನು ಮನಸ್ಸು ಮಾಡಿದರೆ ನನ್ನನ್ನು ಗುಣಪಡಿಸಬಲ್ಲೆ ಎಂದು ನನಗೆ ಗೊತ್ತಿದೆ” ಎಂದು ಬೇಡಿಕೊಂಡನು.
13 ಯೇಸು, “ನಿನ್ನನ್ನು ಗುಣಪಡಿಸಲು ನನಗೆ ಮನಸ್ಸುಂಟು. ನಿನಗೆ ಗುಣವಾಗಲಿ!” ಎಂದು ಹೇಳಿ ಅವನನ್ನು ಮುಟ್ಟಿದನು. ಕೂಡಲೆ ಅವನಿಗೆ ಗುಣವಾಯಿತು. 14 ಯೇಸು ಅವನಿಗೆ, “ನಿನಗೆ ಹೇಗೆ ಗುಣವಾಯಿತು ಎಂಬುದರ ಬಗ್ಗೆ ಯಾರಿಗೂ ಹೇಳದೆ ಯಾಜಕನ ಬಳಿಗೆ ಹೋಗಿ ನಿನ್ನ ಮೈಯನ್ನು ತೋರಿಸಿ ಮೋಶೆಯ ನಿಯಮಗಳಿಗನುಸಾರವಾಗಿ ಕಾಣಿಕೆಯನ್ನು ದೇವರಿಗೆ ಸಮರ್ಪಿಸು. ನಿನಗೆ ವಾಸಿಯಾಯಿತೆಂಬುದಕ್ಕೆ ಇದೇ ಜನರಿಗೆಲ್ಲಾ ಸಾಕ್ಷಿಯಾಗಿರುವುದು” ಎಂದು ಹೇಳಿದನು. ಆದರೆ ಯೇಸುವಿನ ಸುದ್ದಿಯು ಹೆಚ್ಚೆಚ್ಚಾಗಿ ಹಬ್ಬಿತು.
15 ಅನೇಕ ಜನರು ಆತನ ಬೋಧನೆಗಳನ್ನು ಕೇಳುವುದಕ್ಕೂ ತಮ್ಮ ಕಾಯಿಲೆಗಳನ್ನು ವಾಸಿಮಾಡಿಸಿಕೊಳ್ಳುವುದಕ್ಕೂ ಬಂದರು. 16 ಯೇಸು ಆಗಾಗ್ಗೆ ನಿರ್ಜನ ಸ್ಥಳಗಳಿಗೆ ಹೋಗಿ ಪ್ರಾರ್ಥನೆ ಮಾಡುತ್ತಿದ್ದನು.
ಯೇಸುವಿನಿಂದ ಗುಣಹೊಂದಿದ ಪಾರ್ಶ್ವವಾಯು ರೋಗಿ
(ಮತ್ತಾಯ 9:1-8; ಮಾರ್ಕ 2:1-12)
17 ಒಂದು ದಿನ ಯೇಸು ಜನರಿಗೆ ಬೋಧಿಸುತ್ತಿದ್ದನು. ಫರಿಸಾಯರು ಮತ್ತು ಧರ್ಮೋಪದೇಶಕರು ಸಹ ಅಲ್ಲಿ ಕುಳಿತುಕೊಂಡಿದ್ದರು. ಅವರು, ಗಲಿಲಾಯದಿಂದಲೂ ಜುದೇಯ ಪ್ರಾಂತ್ಯದ ಊರುಗಳಿಂದಲೂ ಜೆರುಸಲೇಮಿನಿಂದಲೂ ಬಂದಿದ್ದರು. ರೋಗಿಗಳನ್ನು ಗುಣಪಡಿಸಲು ಪ್ರಭುವಿನ ಶಕ್ತಿಯು ಆತನಲ್ಲಿತ್ತು. 18 ಒಬ್ಬ ಪಾರ್ಶ್ವವಾಯು ರೋಗಿ ಅಲ್ಲಿದ್ದನು. ಒಂದು ಚಿಕ್ಕ ಹಾಸಿಗೆಯಲ್ಲಿ ಅವನನ್ನು ಕೆಲವು ಮಂದಿ ಗಂಡಸರು ಹೊತ್ತುಕೊಂಡು ಬಂದು ಯೇಸುವಿನ ಮುಂದೆ ಇಡಲು ಪ್ರಯತ್ನಿಸಿದರು. 19 ಆದರೆ ಅಲ್ಲಿ ಬಹಳ ಜನ ಇದ್ದುದರಿಂದ ಯೇಸುವಿನ ಬಳಿಗೆ ಹೋಗಲು ಅವರಿಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಅವರು ಮನೆಯ ಮೇಲೆ ಹತ್ತಿ ಹೆಂಚುಗಳನ್ನು ತೆಗೆದು ಪಾರ್ಶ್ವವಾಯು ರೋಗಿಯನ್ನು ಹಾಸಿಗೆಯ ಸಹಿತ ಯೇಸುವಿನ ಮುಂದೆ ಇಳಿಸಿದರು. 20 ಈ ಜನರ ನಂಬಿಕೆಯನ್ನು ನೋಡಿ ಯೇಸು ಆ ರೋಗಿಗೆ, “ಸ್ನೇಹಿತನೇ ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.
21 ಯೆಹೂದ್ಯ ಧರ್ಮೋಪದೇಶಕರು ಮತ್ತು ಫರಿಸಾಯರು, “ಈ ಮನುಷ್ಯನು (ಯೇಸು) ಯಾರು? ಈತನು ದೇವರಿಗೆ ವಿರುದ್ಧವಾದ ಸಂಗತಿಗಳನ್ನು ಹೇಳುತ್ತಾನಲ್ಲಾ! ದೇವರೊಬ್ಬನೇ ಪಾಪಗಳನ್ನು ಕ್ಷಮಿಸಬಲ್ಲನು” ಎಂದು ತಮ್ಮತಮ್ಮೊಳಗೆ ಯೋಚಿಸಿದರು.
22 ಆದರೆ ಅವರ ಆಲೋಚನೆಯನ್ನು ತಿಳಿದಿದ್ದ ಯೇಸು ಅವರಿಗೆ, “ನೀವು ಆ ರೀತಿ ಯೋಚಿಸುವುದೇಕೆ? 23 ಯಾವುದು ಸುಲಭ? ‘ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ’ ಎಂದು ಪಾರ್ಶ್ವವಾಯು ರೋಗಿಗೆ ಹೇಳುವುದೋ? ಅಥವಾ ‘ಎದ್ದುನಿಂತು ನಡೆ’ ಎನ್ನುವುದೋ? 24 ಆದರೆ ಮನುಷ್ಯಕುಮಾರನಿಗೆ* ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸುವ ಅಧಿಕಾರ ಉಂಟೆಂಬುದು ನಿಮಗೆ ಖಚಿತವಾಗಬೇಕು” ಎಂದು ಹೇಳಿ, ಪಾರ್ಶ್ವವಾಯು ರೋಗಿಗೆ, “ಏಳು! ನಿನ್ನ ಹಾಸಿಗೆಯನ್ನು ಹೊತ್ತುಕೊಂಡು ಮನೆಗೆ ಹೋಗು!” ಎಂದು ಹೇಳಿದನು.
25 ಆ ಕೂಡಲೇ ಅವನು ಜನರು ಮುಂದೆ ಎದ್ದುನಿಂತು, ತನ್ನ ಹಾಸಿಗೆಯನ್ನು ಹೊತ್ತುಕೊಂಡು ದೇವರನ್ನು ಸ್ತುತಿಸುತ್ತಾ ಮನೆಗೆ ಹೋದನು. 26 ಜನರೆಲ್ಲರೂ ಬಹಳ ಆಶ್ಚರ್ಯಪಟ್ಟು ದೇವರನ್ನು ಸ್ತುತಿಸತೊಡಗಿದರು ಮತ್ತು ದೇವರಲ್ಲಿ ಭಯಭಕ್ತಿಯುಳ್ಳವರಾಗಿ, “ಈ ದಿನ ನಾವು ಆಶ್ಚರ್ಯಕರವಾದ ಸಂಗತಿಯನ್ನು ಕಂಡೆವು!” ಎಂದರು.
ಯೇಸುವನ್ನು ಹಿಂಬಾಲಿಸಿದ ಲೇವಿ
(ಮತ್ತಾಯ 9:9-13; ಮಾರ್ಕ 2:13-17)
27 ಬಳಿಕ, ಯೇಸು ಅಲ್ಲಿಂದ ಹೋಗುತ್ತಿರುವಾಗ, ಸುಂಕದಕಟ್ಟೆಯಲ್ಲಿ ಕುಳಿತುಕೊಂಡಿದ್ದ ಒಬ್ಬನನ್ನು ಕಂಡನು. ಅವನ ಹೆಸರು ಲೇವಿ. ಯೇಸು ಅವನಿಗೆ, “ನನ್ನನ್ನು ಹಿಂಬಾಲಿಸು!” ಎಂದು ಹೇಳಿದನು. 28 ಲೇವಿಯು ಎದ್ದು, ಎಲ್ಲವನ್ನೂ ಅಲ್ಲಿಯೇ ಬಿಟ್ಟು ಯೇಸುವನ್ನು ಹಿಂಬಾಲಿಸಿದನು.
29 ಬಳಿಕ ಲೇವಿಯು ಯೇಸುವಿಗೆ ತನ್ನ ಮನೆಯಲ್ಲಿ ಒಂದು ದೊಡ್ಡ ಔತಣವನ್ನು ಏರ್ಪಡಿಸಿದನು. ಅನೇಕ ಸುಂಕವಸೂಲಿಗಾರರು ಮತ್ತು ಇನ್ನಿತರ ಜನರು ಸಹ ಊಟಕ್ಕೆ ಕುಳಿತಿದ್ದರು. 30 ಆದರೆ ಫರಿಸಾಯರು ಮತ್ತು ಧರ್ಮೋಪದೇಶಕರು ಯೇಸುವಿನ ಶಿಷ್ಯರಿಗೆ, “ನೀವು ಸುಂಕದವರೊಡನೆ ಮತ್ತು ಇತರ ಕೆಟ್ಟ ಜನರೊಂದಿಗೆ ಏಕೆ ಊಟಮಾಡುತ್ತೀರಿ ಮತ್ತು ಕುಡಿಯುತ್ತೀರಿ?” ಎಂದು ಆಕ್ಷೇಪಿಸಿದರು.
31 ಯೇಸು ಅವರಿಗೆ, “ವೈದ್ಯನ ಅಗತ್ಯವಿರುವುದು ಆರೋಗ್ಯವಂತರಿಗಲ್ಲ, ಕಾಯಿಲೆಯವರಿಗಷ್ಟೆ. 32 ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರಿಗಿಕೊಳ್ಳಿರಿ ಎಂದು ನೀತಿವಂತರನ್ನು ಕರೆಯಲು ನಾನು ಬಂದವನಲ್ಲ, ಪಾಪಿಗಳನ್ನು ಕರೆಯಲು ಬಂದವನು!” ಎಂದು ಉತ್ತರಿಸಿದನು.
ಉಪವಾಸದ ಕುರಿತು ಯೇಸುವಿನ ಉತ್ತರ
(ಮತ್ತಾಯ 9:14-17; ಮಾರ್ಕ 2:18-22)
33 ಅವರು ಯೇಸುವಿಗೆ, “ಫರಿಸಾಯರ ಹಿಂಬಾಲಕರು ಉಪವಾಸವಿದ್ದು ಪ್ರಾರ್ಥಿಸುತ್ತಾರೆ. ಯೋಹಾನನ ಶಿಷ್ಯರು ಆಗಾಗ್ಗೆ ಉಪವಾಸವಿದ್ದು ಪ್ರಾರ್ಥಿಸುತ್ತಾರೆ. ನಿನ್ನ ಶಿಷ್ಯರಾದರೋ ಯಾವಾಗಲೂ ತಿಂದುಕುಡಿಯುವುದರಲ್ಲೇ ಇದ್ದಾರೆ” ಎಂದು ಟೀಕಿಸಿದರು.
34 ಯೇಸು ಅವರಿಗೆ, “ಮದುವೆಯಲ್ಲಿ ಮದುಮಗನ ಸಂಗಡ ಇರುವ ಅವನ ಸ್ನೇಹಿತರಿಗೆ ನೀವು ಉಪವಾಸಮಾಡಿ ಎಂದು ಹೇಳಲು ಸಾಧ್ಯವಿಲ್ಲ. 35 ಆದರೆ ಮದುಮಗನು ಅವರ ಬಳಿಯಿಂದ ಹೊರಟುಹೋಗುವ ಕಾಲ ಬರುತ್ತದೆ. ಆಗ ಅವನ ಸ್ನೇಹಿತರು ಉಪವಾಸ ಮಾಡುವರು” ಎಂದು ಉತ್ತರಕೊಟ್ಟನು.
36 ಬಳಿಕ ಯೇಸು ಅವರಿಗೆ ಈ ಸಾಮ್ಯವನ್ನು ಹೇಳಿದನು: “ಹಳೆ ಅಂಗಿಗೆ ತೇಪೆ ಹಚ್ಚುವುದಕ್ಕಾಗಿ ಹೊಸ ಅಂಗಿಯಿಂದ ಬಟ್ಟೆಯನ್ನು ಯಾರೂ ಹರಿದುಕೊಳ್ಳುವುದಿಲ್ಲ. ಹಾಗೆ ಮಾಡಿದ್ದೇಯಾದರೆ, ಹೊಸ ಅಂಗಿಯನ್ನು ಕೆಡಿಸಿಕೊಂಡಂತಾಗುತ್ತದೆ. ಅಲ್ಲದೆ ಹೊಸ ಅಂಗಿಯ ಬಟ್ಟೆಯು ಹಳೆ ಅಂಗಿಗೆ ಹೋಲುವುದೂ ಇಲ್ಲ. 37 ಅಂತೆಯೇ ಹೊಸ ದ್ರಾಕ್ಷಾರಸವನ್ನು ಹಳೆಯ ದ್ರಾಕ್ಷಾರಸದ ಚೀಲಗಳಲ್ಲಿ ಯಾರೂ ತುಂಬಿಡುವುದಿಲ್ಲ. ಒಂದುವೇಳೆ ತುಂಬಿದರೆ, ಹೊಸ ದ್ರಾಕ್ಷಾರಸವು ಚೀಲಗಳನ್ನು ಒಡೆದುಹಾಕುವುದರಿಂದ ದ್ರಾಕ್ಷಾರಸವೂ ಚೆಲ್ಲಿಹೋಗುತ್ತದೆ, ಚೀಲಗಳೂ ಹಾಳಾಗುತ್ತವೆ. 38 ಜನರು ಯಾವಾಗಲೂ ಹೊಸ ದ್ರಾಕ್ಷಾರಸವನ್ನು ಹೊಸ ದ್ರಾಕ್ಷಾರಸದ ಚೀಲಗಳಲ್ಲಿ ತುಂಬಿಡುತ್ತಾರೆ. 39 ಹಳೆಯ ದ್ರಾಕ್ಷಾರಸವನ್ನು ಕುಡಿದವನಿಗೆ ಹೊಸ ದ್ರಾಕ್ಷಾರಸವು ರುಚಿಸುವುದಿಲ್ಲ. ಅವನು ಹಳೆಯ ದ್ರಾಕ್ಷಾರಸವನ್ನೇ ಇಷ್ಟಪಡುತ್ತಾನೆ.”

* 5:24: ಮನುಷ್ಯಕುಮಾರನು ಯೇಸು. ದಾನಿಯೇಲ 7:13-14ರಲ್ಲಿ ದೇವರು ತನ್ನ ಜನರನ್ನು ರಕ್ಷಿಸಲು ಆರಿಸಿಕೊಂಡ ಮೆಸ್ಸೀಯನಿಗೆ ಈ ಹೆಸರು ಕೊಡಲಾಗಿದೆ.