ದೇವರಿಗೆ ವಿಧೇಯರಾಗುವುದರಿಂದ ದೊರಕುವ ಪ್ರತಿಫಲಗಳು
26
1 “ವಿಗ್ರಹಗಳನ್ನು ಮಾಡಿಕೊಳ್ಳಬೇಡಿರಿ. ಆರಾಧಿಸಲು ಕೆತ್ತಿದ ವಿಗ್ರಹಗಳನ್ನಾಗಲಿ ಕಲ್ಲುಕಂಬಗಳನ್ನಾಗಲಿ ನಿಮ್ಮ ದೇಶದಲ್ಲಿ ಸ್ಥಾಪಿಸಬೇಡಿರಿ. ಯಾಕೆಂದರೆ ನಾನೇ ನಿಮ್ಮ ದೇವರಾದ ಯೆಹೋವನು!
2 “ನನ್ನ ವಿಶ್ರಾಂತಿಯ ವಿಶೇಷ ದಿನಗಳನ್ನು ಜ್ಞಾಪಕಮಾಡಿಕೊಂಡು ನನ್ನ ಪವಿತ್ರಸ್ಥಳವನ್ನು ಸನ್ಮಾನಿಸಿರಿ. ನಾನೇ ಯೆಹೋವನು!
3 “ನನ್ನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ ಜ್ಞಾಪಕಮಾಡಿಕೊಂಡು ಅವುಗಳಿಗೆ ವಿಧೇಯರಾಗಿರಿ.
4 ನೀವು ಅವುಗಳನ್ನು ಅನುಸರಿಸಿದರೆ, ನಾನು ಸರಿಯಾದ ಸಮಯದಲ್ಲಿ ಮಳೆಯನ್ನು ಅನುಗ್ರಹಿಸುವೆನು. ಭೂಮಿಯು ಒಳ್ಳೆಯ ಬೆಳೆಯನ್ನು ಕೊಡುವುದು ಮತ್ತು ತೋಟದ ಮರಗಳು ತಮ್ಮ ಫಲಗಳನ್ನು ಕೊಡುವವು.
5 ಕಣ ತುಳಿಸುವ ಕೆಲಸವು ದ್ರಾಕ್ಷಿಯನ್ನು ಸಂಗ್ರಹಿಸುವ ಸಮಯದವರೆಗೂ ಮುಂದುವರಿಯುವುದು; ದ್ರಾಕ್ಷಿಯನ್ನು ಸಂಗ್ರಹಿಸುವ ಕೆಲಸವು ಬಿತ್ತನೆಯ ಕಾಲದವರೆಗೂ ಮುಂದುವರಿಯುವುದು. ಆಗ ನಿಮಗೆ ಆಹಾರವು ಸಮೃದ್ಧಿಯಾಗಿರುವುದು; ನೀವು ದೇಶದಲ್ಲಿ ಸುರಕ್ಷಿತವಾಗಿ ವಾಸಿಸುವಿರಿ.
6 ನಾನು ನಿಮ್ಮ ದೇಶಕ್ಕೆ ಸಮಾಧಾನವನ್ನು ಅನುಗ್ರಹಿಸುವೆನು. ನೀವು ನಿರ್ಭಯವಾಗಿ ಮಲಗಿಕೊಳ್ಳುವಿರಿ. ನಿಮ್ಮನ್ನು ಭಯಪಡಿಸಲು ಯಾರೂ ಬರುವುದಿಲ್ಲ. ದುಷ್ಟಮೃಗಗಳು ನಿಮ್ಮ ದೇಶದಲ್ಲಿರದಂತೆ ಮಾಡುವೆನು. ಸೈನ್ಯಗಳು ನಿಮ್ಮ ದೇಶದೊಳಕ್ಕೆ ಬರುವುದಿಲ್ಲ.
7 “ನೀವು ನಿಮ್ಮ ವೈರಿಗಳನ್ನು ಸೋಲಿಸಿ ಓಡಿಸಿಬಿಡುವಿರಿ. ನಿಮ್ಮ ಕತ್ತಿಗಳಿಂದ ಅವರನ್ನು ಕೊಲ್ಲುವಿರಿ.
8 ನಿಮ್ಮಲ್ಲಿ ಐದು ಮಂದಿ ನೂರು ಮಂದಿಯನ್ನು ಓಡಿಸುವರು; ನಿಮ್ಮಲ್ಲಿ ನೂರು ಮಂದಿ ಹತ್ತು ಸಾವಿರ ಮಂದಿಯನ್ನು ಓಡಿಸುವರು; ನೀವು ನಿಮ್ಮ ವೈರಿಗಳನ್ನು ಸೋಲಿಸಿ ಕತ್ತಿಯಿಂದ ಕೊಲ್ಲುವಿರಿ.
9 “ಬಳಿಕ ನಾನು ನಿಮ್ಮ ಮೇಲೆ ಕಟಾಕ್ಷವಿಟ್ಟು ನಿಮಗೆ ಅನೇಕ ಮಕ್ಕಳನ್ನು ಅನುಗ್ರಹಿಸುವೆನು. ನಾನು ನಿಮ್ಮೊಡನೆ ಮಾಡಿಕೊಂಡ ನನ್ನ ಒಡಂಬಡಿಕೆಯನ್ನು ನೆರವೇರಿಸುವೆನು.
10 ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯದವರೆಗೆ ಉಳಿಯುವಂತೆ ನಿಮಗೆ ಬೇಕಾದಷ್ಟು ದವಸಧಾನ್ಯಗಳಿರುತ್ತದೆ. ನೀವು ಹೊಸ ಬೆಳೆಯನ್ನು ಕೊಯ್ಯುವಿರಿ. ಆದರೆ ಹೊಸ ಬೆಳೆಯನ್ನು ಸಂಗ್ರಹಿಸಬೇಕಾದರೆ ಹಳೆ ಬೆಳೆಯನ್ನು ಬಿಸಾಡಬೇಕಾಗುತ್ತದೆ.
11 ಅಲ್ಲದೆ ನಾನು ನಿಮ್ಮ ಮಧ್ಯದಲ್ಲಿ ನನ್ನ ಪವಿತ್ರಗುಡಾರವನ್ನು ಇಡುವೆನು. ನಾನು ನಿಮ್ಮಿಂದ ದೂರ ಹೋಗುವುದಿಲ್ಲ.
12 ನಾನು ನಿಮ್ಮೊಂದಿಗೆ ನಡೆಯುತ್ತಾ ನಿಮ್ಮ ದೇವರಾಗಿರುವೆನು ಮತ್ತು ನೀವು ನನ್ನ ಜನರಾಗಿರುವಿರಿ.
13 ನಿಮ್ಮ ದೇವರಾಗಿರುವ ಯೆಹೋವನು ನಾನೇ! ನೀವು ಈಜಿಪ್ಟಿನಲ್ಲಿ ಗುಲಾಮರಾಗಿದ್ದಿರಿ. ಆದರೆ ನಾನು ನಿಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದೆನು. ನೀವು ಗುಲಾಮರಾಗಿ ಭಾರವಾದ ಹೊರೆಗಳನ್ನು ಹೊರುತ್ತಾ ಗೂನಾಗಿದ್ದಿರಿ. ಆದರೆ ನಿಮ್ಮ ಭುಜದ ಮೇಲಿದ್ದ್ದ ನೊಗವನ್ನು ನಾನು ಮುರಿದುಹಾಕಿ ನೀವು ಮತ್ತೆ ನೆಟ್ಟಗೆ ನಡೆಯುವಂತೆ ಮಾಡಿದೆನು.
ದೇವರಿಗೆ ವಿಧೇಯರಾಗದಿದ್ದರೆ ಬರುವ ಶಿಕ್ಷೆ
14 “ಆದರೆ ನೀವು ನನಗೆ ಮತ್ತು ನನ್ನ ಆಜ್ಞೆಗಳಿಗೆಲ್ಲಾ ವಿಧೇಯರಾಗದಿದ್ದರೆ, ಕೆಟ್ಟ ಸಂಗತಿಗಳು ನಿಮಗೆ ಸಂಭವಿಸುತ್ತವೆ.
15 ನೀವು ನನ್ನ ಕಟ್ಟಳೆಗಳಿಗೆ ಮತ್ತು ಆಜ್ಞೆಗಳಿಗೆ ವಿಧೇಯರಾಗದಿದ್ದರೆ, ಆಗ ನೀವು ನನ್ನ ಒಡಂಬಡಿಕೆಯನ್ನು ಮುರಿದವರಾಗುತ್ತೀರಿ.
16 ಆಗ ನಾನು ನಿಮ್ಮ ಮಧ್ಯೆ ಭಯಂಕರ ಸಂಗತಿಗಳು ನಡೆಯುವಂತೆ ಮಾಡುವೆನು. ನೀವು ವ್ಯಾಧಿಯಿಂದಲೂ ಜ್ವರದಿಂದಲೂ ನರಳುವಂತೆ ಮಾಡುವೆನು. ಅವು ನಿಮ್ಮ ಕಣ್ಣುಗಳನ್ನು ನಾಶಮಾಡಿ ನಿಮ್ಮ ಪ್ರಾಣವನ್ನು ತೆಗೆದುಬಿಡುತ್ತವೆ; ನೀವು ಬೀಜ ಬಿತ್ತಿದರೂ ಅದರ ಫಲವು ದೊರೆಯುವುದಿಲ್ಲ: ನಿಮ್ಮ ವೈರಿಗಳು ನಿಮ್ಮ ಬೆಳೆಗಳನ್ನು ತಿಂದುಬಿಡುವರು!
17 ನಾನು ನಿಮಗೆ ವಿಮುಖನಾಗಿರುವುದರಿಂದ ಆ ವೈರಿಗಳು ನಿಮ್ಮನ್ನು ಸೋಲಿಸುವರು. ಆ ವೈರಿಗಳು ನಿಮ್ಮನ್ನು ದ್ವೇಷಿಸುವರು ಮತ್ತು ನಿಮ್ಮನ್ನು ಆಳುವರು. ಯಾರೂ ನಿಮ್ಮನ್ನು ಬೆನ್ನಟ್ಟದಿದ್ದರೂ ಹೆದರಿಕೊಂಡು ಓಡುವಿರಿ.
18 “ಇಷ್ಟಾದರೂ ನೀವು ನನಗೆ ವಿಧೇಯರಾಗದಿದ್ದರೆ ನಿಮ್ಮ ಪಾಪಗಳಿಗಾಗಿ ಇನ್ನೂ ಏಳರಷ್ಟು ನಿಮ್ಮನ್ನು ಶಿಕ್ಷಿಸುವೆನು.
19 ನಿಮ್ಮ ಗರ್ವಕ್ಕೆ ಕಾರಣವಾದ ಬಲಿಷ್ಟವಾದ ಪಟ್ಟಣಗಳನ್ನು ನಾಶಮಾಡುವೆನು. ಆಕಾಶವು ಮಳೆಗರೆಯುವುದಿಲ್ಲ. ಭೂಮಿಯು ಬೆಳೆಯನ್ನು ಫಲಿಸುವುದಿಲ್ಲ.
20 ನೀವು ಕಷ್ಟಪಟ್ಟು ದುಡಿದರೂ ನಿಮಗೆ ಪ್ರಯೋಜನವಿರುವುದಿಲ್ಲ. ನಿಮ್ಮ ಭೂಮಿ ಯಾವ ಬೆಳೆಗಳನ್ನೂ ಫಲಿಸುವುದಿಲ್ಲ; ನಿಮ್ಮ ಮರಗಳೂ ಫಲಗಳನ್ನು ಬಿಡುವುದಿಲ್ಲ.
21 “ನೀವು ಇನ್ನೂ ನನಗೆ ವಿರುದ್ಧವಾಗಿ ತಿರುಗಿ ಅವಿಧೇಯರಾದರೆ, ನಾನು ಇನ್ನೂ ಏಳರಷ್ಟು ಕಠಿಣವಾಗಿ ನಿಮ್ಮನ್ನು ಬಾಧಿಸುವೆನು. ನೀವು ಹೆಚ್ಚು ಪಾಪಮಾಡಿದಂತೆಲ್ಲಾ ಹೆಚ್ಚೆಚ್ಚಾಗಿ ಶಿಕ್ಷಿಸಲ್ಪಡುವಿರಿ.
22 ನಿಮಗೆ ವಿರುದ್ಧವಾಗಿ ನಾನು ಕ್ರೂರ ಮೃಗಗಳನ್ನು ಕಳುಹಿಸುವೆನು. ಅವುಗಳು ನಿಮ್ಮ ಮಕ್ಕಳನ್ನು ತಿಂದು ಬಿಡುವವು; ನಿಮ್ಮ ಪಶುಗಳನ್ನು ನಾಶಮಾಡುವವು. ಅವು ನಿಮ್ಮಲ್ಲಿ ಅನೇಕ ಜನರನ್ನು ಕೊಲ್ಲುವವು. ದಾರಿಗಳು ಜನಸಂಚಾರವಿಲ್ಲದೆ ಬರಿದಾಗಿರುವವು.
23 “ಇಷ್ಚಾದರೂ ನೀವು ತಿದ್ದಿಕೊಳ್ಳದೆ ನನಗೆ ವಿರೋಧವಾಗಿ ನಡೆದರೆ,
24 ಆಗ ನಾನು ಸಹ ನಿಮಗೆ ವಿರೋಧವಾಗಿ ನಡೆಯುವೆನು. ಹೌದು, ನಾನೇ ನಿಮ್ಮನ್ನು ನಿಮ್ಮ ಪಾಪಗಳಿಗಾಗಿ ಏಳರಷ್ಟಾಗಿ ದಂಡಿಸುವೆನು.
25 ನೀವು ನನ್ನ ಒಡಂಬಡಿಕೆಯನ್ನು ಮೀರಿದ್ದರಿಂದ ನಾನು ನಿಮ್ಮನ್ನು ದಂಡಿಸುವೆನು. ನಿಮಗೆ ವಿರೋಧವಾಗಿ ಸೈನ್ಯಗಳನ್ನು ಬರಮಾಡುವೆನು. ನೀವು ಭದ್ರತೆಗಾಗಿ ನಿಮ್ಮ ಪಟ್ಟಣಗಳೊಳಗೆ ಹೋಗುವಿರಿ. ಆದರೆ ವ್ಯಾಧಿಯು ನಿಮ್ಮಲ್ಲಿ ಹಬ್ಬುವಂತೆ ಮಾಡುವೆನು. ನಿಮ್ಮ ವೈರಿಗಳು ನಿಮ್ಮನ್ನು ಸೋಲಿಸುವರು.
26 ನಿಮಗೆ ರೊಟ್ಟಿ ದಯಪಾಲಿಸುವುದನ್ನು ನಾನು ನಿಲ್ಲಿಸಿದಾಗ, ಹತ್ತು ಮಂದಿ ಸ್ತ್ರೀಯರು ತಮ್ಮಲ್ಲಿರುವ ಎಲ್ಲಾ ರೊಟ್ಟಿಗಳನ್ನು ಒಂದೇ ಒಲೆಯಲ್ಲಿ ಸುಡುವರು. ಅವರು ಪ್ರತಿ ರೊಟ್ಟಿಯ ತುಂಡನ್ನು ತೂಕ ಮಾಡಿ ಹಂಚಿಕೊಳ್ಳುವರು. ನೀವು ತಿಂದರೂ ಹಸಿದವರಾಗಿಯೇ ಇರುವಿರಿ.
27 “ನೀವು ನನ್ನ ಮಾತನ್ನು ಇನ್ನೂ ಕೇಳದೆ ನನಗೆ ವಿರೋಧವಾಗಿ ನಡೆದರೆ,
28 ನಾನು ನಿಜವಾಗಿ ನನ್ನ ಕೋಪವನ್ನು ತೋರಿಸುವೆನು. ಹೌದು, ನಾನೇ ನಿಮ್ಮ ಪಾಪಗಳಿಗಾಗಿ ನಿಮ್ಮನ್ನು ಏಳರಷ್ಟಾಗಿ ದಂಡಿಸುವೆನು.
29 ನೀವು ಬಹಳವಾಗಿ ಹಸಿದು ನಿಮ್ಮ ಮಕ್ಕಳ ಮಾಂಸವನ್ನೇ ತಿನ್ನುವಿರಿ.
30 ನಾನು ನಿಮ್ಮ ಉನ್ನತವಾದ ಪೂಜಾಸ್ಥಳಗಳನ್ನು ನಾಶಮಾಡುವೆನು. ನಾನು ನಿಮ್ಮ ಧೂಪವೇದಿಕೆಗಳನ್ನು ಕಡಿದುಹಾಕುವೆನು. ನಿಮ್ಮ ವಿಗ್ರಹಗಳ ಮೇಲೆ ನಿಮ್ಮ ಹೆಣಗಳನ್ನು ಹಾಕುವೆನು. ನೀವು ನನಗೆ ಬಹಳ ಅಸಹ್ಯರಾಗಿರುವಿರಿ.
31 ನಾನು ನಿಮ್ಮ ಪಟ್ಟಣಗಳನ್ನು ನಾಶಮಾಡುವೆನು. ನಿಮ್ಮ ಪವಿತ್ರಸ್ಥಳಗಳನ್ನು ಬರಿದುಮಾಡುವೆನು. ನಿಮ್ಮ ಯಜ್ಞಗಳ ಸುವಾಸನೆಯನ್ನು ನಾನು ಮೂಸಿ ನೋಡುವುದಿಲ್ಲ.
32 ನಿಮ್ಮ ಭೂಮಿಯನ್ನು ಬರಿದುಮಾಡುವೆನು. ಅದರಲ್ಲಿ ವಾಸಿಸಲು ಬರುವ ನಿಮ್ಮ ವೈರಿಗಳೂ ಅದನ್ನು ನೋಡಿ ಆಶ್ಚರ್ಯಪಡುವರು.
33 ನಾನು ನಿಮ್ಮನ್ನು ಜನಾಂಗಗಳ ಮಧ್ಯದಲ್ಲಿ ಚದರಿಸಿಬಿಡುವೆನು. ಕತ್ತಿಯನ್ನು ಇರಿದು ನಿಮ್ಮನ್ನು ನಾಶಮಾಡುವೆನು. ನಿಮ್ಮ ಭೂಮಿ ಬರಿದಾಗುವುದು ಮತ್ತು ನಿಮ್ಮ ಪಟ್ಟಣಗಳು ನಾಶವಾಗುವವು.
34 “ನೀವು ನಿಮ್ಮ ವೈರಿಗಳ ದೇಶಕ್ಕೆ ಒಯ್ಯಲ್ಪಟ್ಟಾಗ, ನಿಮ್ಮ ದೇಶ ಬರಿದಾಗುವುದಲ್ಲದೆ ಭೂಮಿಯು ಹಾಳುಬಿದ್ದು ವಿಶ್ರಾಂತಿಯನ್ನು ಅನುಭವಿಸುವುದು.
35 ಪ್ರತಿ ಏಳು ವರ್ಷದ ನಂತರ ಭೂಮಿಗೆ ವಿಶ್ರಾಂತಿ ಕೊಡಬೇಕೆಂದು ಧರ್ಮಶಾಸ್ತ್ರ ಹೇಳಿದಂತೆ, ನೀವು ವೈರಿಗಳ ದೇಶದಲ್ಲಿ ವಾಸಿಸಿದ ಕಾಲವೆಲ್ಲಾ ನೀವು ಭೂಮಿಗೆ ಕೊಡದೆ ಇದ್ದ ವಿಶ್ರಾಂತಿಯನ್ನು ಆ ಸಮಯದಲ್ಲಿ ಭೂಮಿಯು ಪಡೆದುಕೊಳ್ಳುವುದು.
36 ಜೀವಂತವಾಗಿ ಉಳಿದವರು ತಮ್ಮ ವೈರಿಗಳ ದೇಶದಲ್ಲಿ ಅಧೈರ್ಯಗೊಳ್ಳುವರು. ಅವರು ಪ್ರತಿಯೊಂದಕ್ಕೂ ದಿಗಿಲುಪಡುವರು. ಗಾಳಿಯಿಂದ ತೂರಿಹೋಗುವ ಎಲೆಯ ಶಬ್ದಕ್ಕೆ ಅವರು ಓಡಿಹೋಗುವರು. ಕತ್ತಿಯನ್ನು ಹಿಡಿದುಕೊಂಡು ಬೆನ್ನಟ್ಟುತ್ತಿದ್ದಾರೋ ಎಂಬಂತೆ ಅವರು ಓಡಿಹೋಗುವರು. ಯಾರೂ ಬೆನ್ನಟ್ಟದಿದ್ದಾಗಲೂ ಅವರು ಎಡವಿ ಬೀಳುವರು.
37 ಒಬ್ಬನು ಕತ್ತಿಯನ್ನು ಹಿಡಿದುಕೊಂಡು ಬೆನ್ನಟ್ಟುವಾಗ ಓಡಿಹೋಗುವಂತೆ ಅವರು ಓಡಿಹೋಗುವರು. ಯಾರೂ ಅವರನ್ನು ಬೆನ್ನಟ್ಟದಿದ್ದಾಗಲೂ ಅವರು ಒಬ್ಬರ ಮೇಲೊಬ್ಬರು ಬೀಳುವರು.
“ನೀವು ನಿಮ್ಮ ವೈರಿಗಳ ವಿರುದ್ಧವಾಗಿ ನಿಲ್ಲುವಷ್ಟು ಶಕ್ತಿಯುಳ್ಳವರಾಗಿರುವುದಿಲ್ಲ.
38 ನೀವು ಬೇರೆ ಜನಾಂಗಗಳಲ್ಲಿ ಬೆರೆತು ಇಲ್ಲದಂತಾಗುವಿರಿ. ನಿಮ್ಮ ವೈರಿಗಳ ದೇಶದಲ್ಲಿ ನೀವು ಮಾಯವಾಗಿ ಹೋಗುವಿರಿ.
39 ಆದ್ದರಿಂದ ನಿಮ್ಮಲ್ಲಿ ಜೀವಂತವಾಗಿ ಉಳಿದವರು ತಮ್ಮ ಪಾಪದ ದೆಸೆಯಿಂದಲೂ ತಮ್ಮ ಪೂರ್ವಿಕರ ಪಾಪದ ದೆಸೆಯಿಂದಲೂ ಅವರಂತೆಯೇ ಶತ್ರುಗಳ ದೇಶಗಳಲ್ಲಿ ಕ್ಷಯಿಸಿಹೋಗುವರು.
There Is Always Hope
40 “ಒಂದುವೇಳೆ ಜನರು ತಮ್ಮ ಪಾಪಗಳನ್ನೂ ತಮ್ಮ ಪೂರ್ವಿಕರ ಪಾಪಗಳನ್ನೂ ಅರಿಕೆ ಮಾಡಬಹುದು; ನನಗೆ ವಿರುದ್ಧವಾಗಿ ಪಾಪಮಾಡಿರುವುದಾಗಿಯೂ ನನಗೆ ವಿರೋಧವಾಗಿ ತಿರುಗಿರುವುದಾಗಿಯೂ ಅವರು ಒಪ್ಪಿಕೊಂಡು
41 ನಾನು ಅವರಿಗೆ ವಿಮುಖನಾಗಿ ಅವರನ್ನು ಶತ್ರುಗಳ ದೇಶಕ್ಕೆ ಕರೆದುಕೊಂಡು ಬಂದೆನೆಂದು ಅವರು ಅರಿತುಕೊಂಡು ತಮ್ಮನ್ನು ತಗ್ಗಿಸಿಕೊಂಡು ತಮ್ಮ ಪಾಪಕ್ಕೆ ಬರತಕ್ಕ ಶಿಕ್ಷೆಯನ್ನು ಸ್ವೀಕರಿಸಲು ಯೋಗ್ಯರೆಂದು ಹೇಳಿಕೊಂಡರೆ
42 ಆಗ ನಾನು ಯಾಕೋಬನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನೂ ಇಸಾಕನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನೂ ಅಬ್ರಹಾಮನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನೂ ದೇಶವನ್ನೂ ಜ್ಞಾಪಕಮಾಡಿಕೊಳ್ಳುವೆನು.
43 “ದೇಶವು ಬರಿದಾಗಿದ್ದು ವಿಶ್ರಾಂತಿಯನ್ನು ಅನುಭವಿಸುವುದು. ಆಗ ಜೀವಂತವಾಗಿ ಉಳಿದವರು ತಮ್ಮ ಪಾಪಗಳಿಗೆ ಬರತಕ್ಕ ಶಿಕ್ಷೆಯನ್ನು ಅನುಭವಿಸುವರು. ನನ್ನ ನಿಯಮಗಳನ್ನು ದ್ವೇಷಿಸಿ ನನ್ನ ವಿಧಿಗಳಿಗೆ ಅವಿಧೇಯರಾದ್ದರಿಂದ ತಮಗೆ ಶಿಕ್ಷೆಯಾಯಿತೆಂದು ಅವರು ಅರಿತುಕೊಳ್ಳುವರು.
44 ಅವರು ನಿಜವಾಗಿ ಪಾಪಮಾಡಿದ್ದರೂ ಸಹಾಯಕ್ಕಾಗಿ ಅವರು ನನ್ನ ಬಳಿಗೆ ಬಂದರೆ ನಾನು ಅವರಿಗೆ ವಿಮುಖನಾಗುವುದಿಲ್ಲ. ಅವರು ತಮ್ಮ ಶತ್ರುಗಳ ದೇಶದಲ್ಲಿದ್ದರೂ ನಾನು ಅವರಿಗೆ ಕಿವಿಗೊಡುವೆನು. ಅವರನ್ನು ಸಂಪೂರ್ಣವಾಗಿ ನಾಶಮಾಡುವುದಿಲ್ಲ. ಅವರೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಮರೆಯುವುದಿಲ್ಲ. ಯಾಕೆಂದರೆ ನಾನೇ ಅವರ ದೇವರಾದ ಯೆಹೋವನು!
45 ಅವರಿಗೋಸ್ಕರ ಅವರ ಪೂರ್ವಿಕರ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ನೆನಪಿಗೆ ತಂದುಕೊಂಡು ಅವರಿಗೆ ಹಿತವನ್ನು ಮಾಡುವೆನು. ನಾನು ಅವರ ದೇವರಾಗಿರಬೇಕೆಂದು ಅವರ ಪೂರ್ವಿಕರನ್ನು ಈಜಿಪ್ಟ್ ದೇಶದಿಂದ ಹೊರಗೆ ಕರೆದುಕೊಂಡು ಬಂದೆನು. ಬೇರೆ ಜನಾಂಗಗಳವರು ಆ ಸಂಗತಿಗಳನ್ನು ನೋಡಿದರು. ನಾನೇ ಯೆಹೋವನು!”
46 ಯೆಹೋವನು ಇಸ್ರೇಲರಿಗೆ ಕೊಟ್ಟ ಕಟ್ಟಳೆಗಳು, ನಿಯಮಗಳು ಮತ್ತು ಉಪದೇಶಗಳು ಇವೇ. ಇದು ಯೆಹೋವನ ಮತ್ತು ಇಸ್ರೇಲರ ನಡುವೆ ಆದ ಒಡಂಬಡಿಕೆಯ ನಿಯಮಗಳಾಗಿವೆ. ಯೆಹೋವನು ಆ ನಿಯಮಗಳನ್ನು ಸೀನಾಯಿ ಬೆಟ್ಟದಲ್ಲಿ ಮೋಶೆಗೆ ಕೊಟ್ಟನು. ಮೋಶೆಯು ಅವುಗಳನ್ನು ಜನರಿಗೆ ಕೊಟ್ಟನು.