ಬಿತ್ತನೆಯನ್ನು ಉದಾಹರಿಸಿ ಯೇಸು ಹೇಳಿದ ಬೋಧನೆ
(ಮಾರ್ಕ 4:1-9; ಲೂಕ 8:4-8)
13
1 ಅದೇ ದಿನದಲ್ಲಿ ಯೇಸು ಮನೆಯಿಂದ ಹೊರಟು ಸರೋವರದ ತೀರದಲ್ಲಿ ಕುಳಿತುಕೊಂಡನು.
2 ಅನೇಕ ಜನರು ಯೇಸುವಿನ ಸುತ್ತಲೂ ನೆರೆದರು. ಆಗ ಯೇಸು ದೋಣಿಯೊಳಕ್ಕೆ ಹೋಗಿ ಕುಳಿತುಕೊಂಡನು. ಜನರೆಲ್ಲರೂ ದಡದಲ್ಲಿ ನಿಂತಿದ್ದರು.
3 ಆಗ ಯೇಸು ಸಾಮ್ಯಗಳ ಮೂಲಕ ಅನೇಕ ವಿಷಯಗಳನ್ನು ಅವರಿಗೆ ಬೋಧಿಸಿದನು. ಯೇಸು ಅವರಿಗೆ ಈ ಸಾಮ್ಯವನ್ನು ಹೇಳಿದನು:
“ಒಬ್ಬ ರೈತನು ಬೀಜ ಬಿತ್ತುವುದಕ್ಕೆ ಹೋದನು.
4 ಅವನು ಬೀಜ ಬಿತ್ತುವಾಗ ಕೆಲವು ಬೀಜಗಳು ರಸ್ತೆಯ ಮಗ್ಗುಲಲ್ಲಿ ಬಿದ್ದವು. ಹಕ್ಕಿಗಳು ಬಂದು ಬೀಜಗಳನ್ನೆಲ್ಲ ತಿಂದುಬಿಟ್ಟವು.
5 ಕೆಲವು ಬೀಜಗಳು ಬಂಡೆಯ ನೆಲದಲ್ಲಿ ಬಿದ್ದವು. ಅಲ್ಲಿಯ ನೆಲದಲ್ಲಿ ಸಾಕಷ್ಟು ಮಣ್ಣಿಲ್ಲದಿದ್ದುದರಿಂದ ಬೀಜಗಳು ಬೇಗ ಮೊಳೆತವು.
6 ಆದರೆ ಬಿಸಿಲೇರಿದಾಗ ಆ ಮೊಳಕೆಗಳು ಒಣಗಿಹೋದವು. ಏಕೆಂದರೆ ಅವುಗಳಿಗೆ ಆಳವಾದ ಬೇರಿರಲಿಲ್ಲ.
7 ಬೇರೆ ಕೆಲವು ಬೀಜಗಳು ಮುಳ್ಳುಗಿಡಗಳಲ್ಲಿ ಬಿದ್ದವು. ಮುಳ್ಳುಗಿಡಗಳು ಬೆಳೆದು ಒಳ್ಳೆಯ ಗಿಡಗಳು ಬೆಳೆಯುವುದನ್ನು ತಡೆದುಬಿಟ್ಟವು.
8 ಬೇರೆ ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದವು. ಅವು ಬೆಳೆದು ಕಾಳುಬಿಟ್ಟವು. ಕೆಲವು ಗಿಡಗಳು ನೂರರಷ್ಟು, ಕೆಲವು ಗಿಡಗಳು ಅರವತ್ತರಷ್ಟು, ಇನ್ನು ಕೆಲವು ಮೂವತ್ತರಷ್ಟು ಕಾಳುಬಿಟ್ಟವು.
9 ನನಗೆ ಕಿವಿಗೊಡುವ ಜನರೇ, ಲಾಲಿಸಿರಿ!”
ಯೇಸು ಸಾಮ್ಯಗಳನ್ನು ಏಕೆ ಬಳಸಿದನು?
(ಮಾರ್ಕ 4:10-12; ಲೂಕ 8:9-10)
10 ಆಗ ಶಿಷ್ಯರು ಯೇಸುವಿನ ಬಳಿಗೆ ಬಂದು, “ನೀನು ಸಾಮ್ಯಗಳ ಮೂಲಕ ಜನರಿಗೆ ಉಪದೇಶಿಸುವುದೇಕೆ?” ಎಂದು ಕೇಳಿದರು.
11 ಯೇಸು, “ಪರಲೋಕರಾಜ್ಯದ ರಹಸ್ಯವಾದ ಸತ್ಯಗಳನ್ನು ನೀವು ಮಾತ್ರ ತಿಳಿದುಕೊಳ್ಳಬಲ್ಲಿರಿ. ಈ ಸತ್ಯಗಳ ರಹಸ್ಯವು ಬೇರೆ ಜನರಿಗೆ ತಿಳಿಯಲಾರದು.
12 ಸ್ವಲ್ಪ ಜ್ಞಾನವನ್ನು ಹೊಂದಿರುವವನು ಇನ್ನೂ ಹೆಚ್ಚು ಜ್ಞಾನವನ್ನು ಪಡೆದುಕೊಂಡು ಸಾಕಷ್ಟು ಜ್ಞಾನವಂತನಾಗುವನು. ಆದರೆ ಜ್ಞಾನವನ್ನು ಹೊಂದಿಲ್ಲದವನು ತನಗಿರುವ ಸ್ವಲ್ಪ ಜ್ಞಾನವನ್ನೂ ಕಳೆದುಕೊಳ್ಳುವನು.
13 ಈ ಕಾರಣದಿಂದಲೇ ನಾನು ಈ ಸಾಮ್ಯಗಳ ಮೂಲಕ ಇವರಿಗೆ ಬೋಧಿಸುತ್ತೇನೆ. ಈ ಜನರು ನೋಡಿದರೂ ಕಾಣುವುದಿಲ್ಲ, ಕೇಳಿದರೂ ಗ್ರಹಿಸುವುದಿಲ್ಲ.
14 ಇಂಥವರ ಬಗ್ಗೆ ಯೆಶಾಯನು ಹೇಳಿದ್ದೇನೆಂದರೆ:
‘ನೀವು ಆಲಿಸುತ್ತೀರಿ, ಕೇಳುತ್ತೀರಿ,
ಆದರೆ ನಿಮಗೆ ಅರ್ಥವಾಗುವುದಿಲ್ಲ.
ನೀವು ದೃಷ್ಟಿಸಿ ನೋಡುತ್ತೀರಿ,
ಆದರೆ ನಿಮಗೆ ಕಾಣುವುದನ್ನು ಅರ್ಥಮಾಡಿಕೊಳ್ಳುವುದಿಲ್ಲ.
15 ಹೌದು, ಇವರ ಮನಸ್ಸುಗಳು ಕಠಿಣವಾಗಿವೆ.
ಕಿವಿ ಮಂದವಾಗಿವೆ,
ಕಣ್ಣು ಮಬ್ಬಾಗಿವೆ.
ಅವರು
ತಮ್ಮ ಕಣ್ಣುಗಳಿಂದ ನೋಡದಂತೆಯೂ
ತಮ್ಮ ಕಿವಿಗಳಿಂದ ಕೇಳದಂತೆಯೂ
ತಮ್ಮ ಮನಸ್ಸುಗಳಿಂದ ಅರ್ಥಮಾಡಿಕೊಳ್ಳದಂತೆಯೂ
ನನ್ನ ಕಡೆಗೆ ತಿರುಗಿಕೊಳ್ಳದಂತೆಯೂ ನನ್ನಿಂದ ಗುಣಹೊಂದದಂತೆಯೂ ಹೀಗಾಯಿತು.’ ಯೆಶಾಯ 6:9-10
16 ನೀವಾದರೋ ಧನ್ಯರು. ನಿಮಗೆ ಕಾಣುವ ಸಂಗತಿಗಳನ್ನೂ ನಿಮಗೆ ಹೇಳುವ ವಿಷಯಗಳನ್ನೂ ಅರ್ಥಮಾಡಿಕೊಳ್ಳಬಲ್ಲಿರಿ.
17 ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ನೀವು ಈಗ ನೋಡುವ ಸಂಗತಿಗಳನ್ನು ನೋಡಲು ಮತ್ತು ಈಗ ನೀವು ಕೇಳುವ ಸಂಗತಿಗಳನ್ನು ಕೇಳಲು ಅನೇಕ ಪ್ರವಾದಿಗಳು ಮತ್ತು ಒಳ್ಳೆಯ ಜನರು ಅಪೇಕ್ಷಿಸಿದರು. ಆದರೆ ಅವರಿಗೆ ಸಾಧ್ಯವಾಗಲಿಲ್ಲ.
ಬಿತ್ತನೆಯ ಕುರಿತು ಯೇಸುವಿನ ವಿವರಣೆ
(ಮಾರ್ಕ 4:13-20; ಲೂಕ 8:11-15)
18 “ಹೀಗಿರಲು ಒಕ್ಕಲಿಗನ ಕುರಿತಾದ ಸಾಮ್ಯದ ಅರ್ಥವನ್ನು ಲಾಲಿಸಿರಿ.
19 “ಮಗ್ಗುಲಲ್ಲಿ ಬಿದ್ದ ಬೀಜ ಅಂದರೇನು? ಪರಲೋಕರಾಜ್ಯವನ್ನು ಕುರಿತು ಬೋಧಿಸಿದ್ದನ್ನು ಕೇಳಿ ಅದನ್ನು ಅರ್ಥಮಾಡಿಕೊಳ್ಳದೆ ಇರುವ ಮನುಷ್ಯನೇ ಬೀಜ ಬಿದ್ದ ದಾರಿ ಮಗ್ಗುಲಾಗಿರುವನು. ಕೆಡುಕನು (ಸೈತಾನನು) ಬಂದು ಆ ಮನುಷ್ಯನ ಹೃದಯದಲ್ಲಿ ಬಿತ್ತಿದ್ದ ಬೀಜಗಳನ್ನು ತೆಗೆದುಹಾಕುತ್ತಾನೆ.
20 “ಬಂಡೆನೆಲದ ಮೇಲೆ ಬಿದ್ದ ಬೀಜ ಅಂದರೇನು? ಬೋಧನೆಯನ್ನು ಕೇಳಿದ ಕೂಡಲೇ ಅದನ್ನು ಸಂತೋಷದಿಂದ ಅಂಗೀಕರಿಸುವ ಮನುಷ್ಯನೇ ಬೀಜ ಬಿದ್ದ ಬಂಡೆನೆಲವಾಗಿರುವನು.
21 ಆದರೆ ಆ ಮನುಷ್ಯನು ಬೋಧನೆಯನ್ನು ತನ್ನ ಜೀವಿತದಲ್ಲಿ ಬೇರೂರಿಸಿಕೊಳ್ಳುವುದಿಲ್ಲ. ಅವನು ಆ ಬೋಧನೆಯನ್ನು ಸ್ವಲ್ಪಕಾಲ ಮಾತ್ರ ಅನುಸರಿಸುವನು. ಆ ಬೋಧನೆಯನ್ನು ಅಂಗೀಕರಿಸಿದ್ದರಿಂದ ತನಗೆ ಕಷ್ಟವಾಗಲಿ ಹಿಂಸೆಯಾಗಲಿ ಬಂದಾಗ ಅದನ್ನು ಬೇಗನೆ ಬಿಟ್ಟುಬಿಡುವನು.
22 “ಮುಳ್ಳುಗಿಡಗಳ ನಡುವೆ ಬಿದ್ದ ಬೀಜ ಅಂದರೇನು? ಬೋಧನೆಯನ್ನು ಕೇಳಿದರೂ ಜೀವನದ ಚಿಂತೆಗಳಿಂದ ಮತ್ತು ಹಣದ ಮೇಲಿನ ಪ್ರೀತಿಯಿಂದ ಬೋಧನೆಯನ್ನು ತನ್ನಲ್ಲಿ ಬೆಳೆಯದಂತೆ ಮಾಡುವವನೇ ಬೀಜ ಬಿದ್ದ ಮುಳ್ಳುಗಿಡಗಳ ನೆಲವಾಗಿರವನು. ಆದ್ದರಿಂದ ಬೋಧನೆಯು ಆ ಮನುಷ್ಯನ ಜೀವಿತದಲ್ಲಿ ಫಲ ಕೊಡುವುದಿಲ್ಲ.
23 “ಒಳ್ಳೆಯ ನೆಲದ ಮೇಲೆ ಬಿದ್ದ ಬೀಜ ಅಂದರೇನು? ಬೋಧನೆಯನ್ನು ಕೇಳಿ ಅದನ್ನು ಅರ್ಥಮಾಡಿಕೊಂಡ ವ್ಯಕ್ತಿಯೇ ಬೀಜ ಬಿದ್ದ ಒಳ್ಳೆಯ ನೆಲವಾಗಿರುವನು. ಆ ಮನುಷ್ಯನು ಬೆಳೆದು ಕೆಲವು ಸಾರಿ ನೂರರಷ್ಟು ಕೆಲವು ಸಾರಿ ಅರವತ್ತರಷ್ಟು ಮತ್ತು ಕೆಲವು ಸಾರಿ ಮೂವತ್ತರಷ್ಟು ಫಲ ಕೊಡುವನು” ಎಂದು ಹೇಳಿದನು.
ಗೋಧಿ ಮತ್ತು ಹಣಜಿ ಸಾಮ್ಯ
24 ಬಳಿಕ ಯೇಸು ಅವರಿಗೆ ಇನ್ನೊಂದು ಸಾಮ್ಯದ ಮೂಲಕ ಬೋಧಿಸಿದನು. ಅದೇನೆಂದರೆ: “ಪರಲೋಕರಾಜ್ಯ ಒಳ್ಳೆಯ ಬೀಜವನ್ನು ತನ್ನ ಹೊಲದಲ್ಲಿ ಬಿತ್ತಿದ ಒಬ್ಬ ರೈತನಂತಿದೆ.
25 ಆ ರಾತ್ರಿ ಜನರೆಲ್ಲರೂ ನಿದ್ರಿಸುತ್ತಿದ್ದಾಗ ಅವನ ವೈರಿ ಬಂದು ಗೋಧಿಯ ನಡುವೆ ಹಣಜಿಯನ್ನು ಬಿತ್ತಿ ಹೊರಟುಹೋದನು.
26 ಬಳಿಕ ಗೋಧಿ ಬೆಳೆದು ತೆನೆಬಿಟ್ಟಿತು. ಅದರೊಡನೆ ಹಣಜಿ ಸಹ ಬೆಳೆಯಿತು.
27 ಆಗ ಆ ರೈತನ ಸೇವಕರು ಅವನ ಬಳಿಗೆ ಬಂದು, ‘ನಿನ್ನ ಹೊಲದಲ್ಲಿ ನೀನು ಒಳ್ಳೆಯ ಬೀಜ ಬಿತ್ತಿದೆ. ಹಣಜಿ ಎಲ್ಲಿಂದ ಬಂತು?’ ಎಂದು ಕೇಳಿದರು.
28 “ಆ ಮನುಷ್ಯನು, ‘ಒಬ್ಬ ವೈರಿ ಹಣಜಿಯನ್ನು ಬಿತ್ತಿದ್ದಾನೆ’ ಎಂದು ಉತ್ತರಕೊಟ್ಟನು.
“ಆ ಸೇವಕರು ‘ನಾವು ಹೋಗಿ ಹಣಜಿಗಳನ್ನು ಕೀಳಬೇಕೆ?’ ಎಂದು ಕೇಳಿದರು.
29 “ಆ ಮನುಷ್ಯನು, ‘ಬೇಡ, ಏಕೆಂದರೆ ನೀವು ಹಣಜಿಗಳನ್ನು ಕೀಳುವಾಗ ಗೋಧಿಯನ್ನು ಸಹ ಕೀಳಬಹುದು.
30 ಸುಗ್ಗಿಕಾಲದವರೆಗೆ ಹಣಜಿಯೂ ಗೋಧಿಯೂ ಒಟ್ಟಿಗೆ ಬೆಳೆಯಲಿ. ಸುಗ್ಗಿಕಾಲದ ಸಮಯದಲ್ಲಿ ನಾನು ಕೆಲಸದವರಿಗೆ, ಮೊದಲು ಹಣಜಿಗಳನ್ನು ಕೂಡಿಸಿ ಅದನ್ನು ಸುಡುವುದಕ್ಕಾಗಿ ಹೊರೆ ಕಟ್ಟಿ, ನಂತರ ಗೋಧಿಯನ್ನು ಕೂಡಿಸಿ ಅದನ್ನು ನನ್ನ ಕಣಜಕ್ಕೆ ತನ್ನಿರಿ ಎಂದು ಹೇಳುವೆನು’ ಎಂದು ಉತ್ತರಕೊಟ್ಟನು.”
ಅನೇಕ ಸಾಮ್ಯಗಳ ಮೂಲಕ ಯೇಸುವಿನ ಉಪದೇಶ
(ಮಾರ್ಕ 4:30-34; ಲೂಕ 13:18-21)
31 ನಂತರ ಯೇಸು ಜನರಿಗೆ ಮತ್ತೊಂದು ಸಾಮ್ಯವನ್ನು ಹೇಳಿದನು: “ಪರಲೋಕರಾಜ್ಯ ಸಾಸಿವೆ ಕಾಳಿಗೆ ಹೋಲಿಕೆಯಾಗಿದೆ. ಒಬ್ಬನು ಅದನ್ನು ತನ್ನ ಹೊಲದಲ್ಲಿ ಬಿತ್ತಿದನು.
32 ಅದು ಎಲ್ಲಾ ಬೀಜಗಳಿಗಿಂತಲೂ ಸಣ್ಣ ಬೀಜವಾಗಿದೆ. ಆದರೆ ಅದು ಬೆಳೆದಾಗ ತೋಟದ ಗಿಡಗಳಿಗಿಂತಲೂ ದೊಡ್ಡದಾಗಿರುವುದು. ಅದು ಮರವಾದಾಗ ಪಕ್ಷಿಗಳು ಬಂದು ಅದರ ಕೊಂಬೆಗಳಲ್ಲಿ ಗೂಡು ಮಾಡಿಕೊಳ್ಳುವಷ್ಟು ದೊಡ್ಡದಾಗಿರುತ್ತದೆ.”
33 ಬಳಿಕ ಯೇಸು ಜನರಿಗೆ ಇನ್ನೊಂದು ಸಾಮ್ಯವನ್ನು ಹೇಳಿದನು: “ಪರಲೋಕರಾಜ್ಯವು ಒಬ್ಬ ಸ್ತ್ರೀ ರೊಟ್ಟಿ ಮಾಡುವುದಕ್ಕೆ ಒಂದು ದೊಡ್ಡ ಬೋಗುಣಿಯ ಹಿಟ್ಟಿಗೆ ಬೆರೆಸಿದ ಹುಳಿಗೆ ಹೋಲಿಕೆಯಾಗಿದೆ. ಆ ಹುಳಿಯು ನಾದಿದ ಹಿಟ್ಟನ್ನೆಲ್ಲಾ ಉಬ್ಬಿಸಿತು.”
34 ಯೇಸು ಇವುಗಳನ್ನೆಲ್ಲ ಸಾಮ್ಯಗಳ ಮೂಲಕ ಹೇಳಿದನು. ಆತನು ಉಪದೇಶಿಸುವಾಗಲೆಲ್ಲಾ ಸಾಮ್ಯಗಳನ್ನು ಉಪಯೋಗಿಸುತ್ತಿದ್ದನು.
35 ಪ್ರವಾದಿ ಹೇಳಿದ್ದ ಈ ಮಾತು ಇದರಿಂದ ನೆರವೇರಿತು:
“ನಾನು ಸಾಮ್ಯಗಳ ಮೂಲಕ ಉಪದೇಶಿಸುತ್ತೇನೆ.
ಲೋಕ ಉಂಟಾದಂದಿನಿಂದ ಮರೆಯಾಗಿದ್ದ ಸಂಗತಿಗಳನ್ನು ನಾನು ಹೇಳುತ್ತೇನೆ.” ಕೀರ್ತನೆ 78:2
ಕಠಿಣವಾದ ಸಾಮ್ಯಕ್ಕೆ ಯೇಸುವಿನ ವಿವರಣೆ
36 ನಂತರ ಯೇಸು ಜನರನ್ನು ಬಿಟ್ಟು ಮನೆಯೊಳಕ್ಕೆ ಹೋದನು. ಆತನ ಶಿಷ್ಯರು ಆತನ ಬಳಿಗೆ ಬಂದು, “ಹೊಲದಲ್ಲಿರುವ ಹಣಜಿಯನ್ನು ಕುರಿತಾದ ಸಾಮ್ಯದ ಅರ್ಥವನ್ನು ನಮಗೆ ವಿವರಿಸು” ಅಂದರು.
37 ಯೇಸು ಹೀಗೆ ಉತ್ತರಿಸಿದನು: “ಹೊಲದಲ್ಲಿ ಒಳ್ಳೆಯ ಬೀಜವನ್ನು ಬಿತ್ತುವವನೇ ಮನುಷ್ಯಕುಮಾರನು.
38 ಆ ಹೊಲ ಈ ಲೋಕವಾಗಿದೆ. ಒಳ್ಳೆಯ ಕಾಳುಗಳೇ ಪರಲೋಕರಾಜ್ಯಕ್ಕೆ ಸೇರಿದ ದೇವರ ಮಕ್ಕಳು. ಕೆಡುಕನಿಗೆ ಸಂಬಂಧಪಟ್ಟವರೇ ಹಣಜಿಗಳು.
39 ಹಣಜಿಯನ್ನು ಬಿತ್ತಿದ ವೈರಿಯೇ ಸೈತಾನ. ಸುಗ್ಗಿಕಾಲ ಅಂದರೆ ಲೋಕದ ಅಂತ್ಯಕಾಲ. ಕೂಡಿಸುವ ಕೆಲಸಗಾರರೇ ದೇವದೂತರು.
40 “ಹಣಜಿಗಳನ್ನು ಕಿತ್ತು ಬೆಂಕಿಯಲ್ಲಿ ಸುಟ್ಟುಬಿಡುತ್ತಾರೆ. ಈ ಲೋಕದ ಅಂತ್ಯದಲ್ಲಿ ಆಗುವಂಥದ್ದು ಇದೇ.
41 ಮನುಷ್ಯಕುಮಾರನು ತನ್ನ ದೂತರನ್ನು ಕಳುಹಿಸುವನು. ಆತನ ದೂತರು ಪಾಪಕ್ಕೆ ಕಾರಣರಾದ ಮತ್ತು ಕೇಡುಮಾಡುವ ಜನರನ್ನೆಲ್ಲ ಕೂಡಿಸುವರು; ಅವರನ್ನು ಆತನ ರಾಜ್ಯದಿಂದ ಹೊರಗೆ ಹಾಕಿ
42 ಬೆಂಕಿಯ ಸ್ಥಳಕ್ಕೆ ಎಸೆದುಬಿಡುವರು. ಅಲ್ಲಿ ಅವರು ಗೋಳಾಡುತ್ತಾ ನೋವಿನಿಂದ ತಮ್ಮ ಹಲ್ಲುಗಳನ್ನು ಕಡಿಯುವರು.
43 ಒಳ್ಳೆಯವರಾದರೋ ಸೂರ್ಯನಂತೆ ಪ್ರಕಾಶಿಸುತ್ತಾ ತಮ್ಮ ತಂದೆಯ ರಾಜ್ಯದಲ್ಲಿರುವರು. ನನಗೆ ಕಿವಿಗೊಡುವ ಜನರೇ, ಆಲಿಸಿರಿ!
ನಿಧಿ ಮತ್ತು ಮುತ್ತಿನ ಸಾಮ್ಯಗಳು
44 “ಪರಲೋಕರಾಜ್ಯವು ಹೊಲದಲ್ಲಿ ಹೂಳಿಟ್ಟ ನಿಧಿಗೆ ಹೋಲಿಕೆಯಾಗಿದೆ. ಒಂದು ದಿನ ಒಬ್ಬನು ಆ ನಿಧಿಯನ್ನು ಕಂಡು ಬಹಳ ಸಂತೋಷದಿಂದ ಅದನ್ನು ಹೊಲದಲ್ಲಿ ಅಡಗಿಸಿಟ್ಟನು. ಬಳಿಕ ಅವನು ತನ್ನ ಆಸ್ತಿಯನ್ನೆಲ್ಲಾ ಮಾರಿ ಆ ಹೊಲವನ್ನು ಕೊಂಡುಕೊಂಡನು.
45 “ಪರಲೋಕರಾಜ್ಯವು ಶ್ರೇಷ್ಠವಾದ ಮುತ್ತುಗಳನ್ನು ಹುಡುಕುವ ಒಬ್ಬ ವ್ಯಾಪಾರಿಯಂತಿದೆ.
46 ಒಂದು ದಿನ ಆ ವ್ಯಾಪಾರಿಗೆ ಬಹು ಅಮೂಲ್ಯವಾದ ಒಂದು ಮುತ್ತು ಸಿಕ್ಕಿತು. ಆಗ ಅವನು ತನ್ನ ಆಸ್ತಿಯನ್ನೆಲ್ಲಾ ಮಾರಿ ಆ ಮುತ್ತನ್ನು ಕೊಂಡುಕೊಂಡನು.
ಮೀನಿನ ಬಲೆಯ ಕುರಿತಾದ ಸಾಮ್ಯ
47 “ಪರಲೋಕರಾಜ್ಯವು ಸರೋವರದೊಳಗೆ ಬೀಸಿದ ಬಲೆಯಂತಿದೆ. ಆ ಬಲೆಗೆ ಅನೇಕ ಜಾತಿಯ ಮೀನುಗಳು ಸಿಕ್ಕಿಕೊಂಡವು.
48 ಆಗ ಆ ಬಲೆಯು ತುಂಬಿಹೋಯಿತು. ಬೆಸ್ತರು ಆ ಬಲೆಯನ್ನು ದಡಕ್ಕೆ ಎಳೆದುಕೊಂಡು ಬಂದು ಒಳ್ಳೆಯ ಮೀನುಗಳನ್ನೆಲ್ಲಾ ಪುಟ್ಟಿಗಳಲ್ಲಿ ತುಂಬಿಕೊಂಡು ಕೆಟ್ಟ ಮೀನುಗಳನ್ನು ಬಿಸಾಡಿದರು.
49 ಈ ಪ್ರಪಂಚದ ಅಂತ್ಯದಲ್ಲಿ ಅದೇ ರೀತಿ ಆಗುವುದು. ದೇವದೂತರು ಬಂದು ಒಳ್ಳೆಯ ಜನರಿಂದ ಕೆಟ್ಟಜನರನ್ನು ಬೇರೆ ಮಾಡುವರು.
50 ದೇವದೂತರು ಕೆಟ್ಟಜನರನ್ನು ಬೆಂಕಿಯ ಸ್ಥಳದೊಳಕ್ಕೆ ಎಸೆಯುವರು. ಆ ಸ್ಥಳದಲ್ಲಿ ಜನರು ಗೋಳಾಡುತ್ತಾ ನೋವಿನಿಂದ ತಮ್ಮ ಹಲ್ಲುಗಳನ್ನು ಕಡಿಯುವರು.”
51 ಯೇಸು ತನ್ನ ಶಿಷ್ಯರಿಗೆ, “ನೀವು ಈ ವಿಷಯಗಳನ್ನೆಲ್ಲಾ ಅರ್ಥಮಾಡಿಕೊಂಡಿರೋ?” ಎಂದು ಕೇಳಿದನು.
ಅದಕ್ಕೆ ಶಿಷ್ಯರು, “ನಾವು ಅರ್ಥಮಾಡಿಕೊಂಡೆವು” ಎಂದು ಉತ್ತರಕೊಟ್ಟರು.
52 ಆಗ ಯೇಸು ತನ್ನ ಶಿಷ್ಯರಿಗೆ, “ಹೀಗಿರಲಾಗಿ ಪರಲೋಕರಾಜ್ಯದ ವಿಷಯವಾಗಿ ಬೋಧಿಸಿದಂಥ ಪ್ರತಿಯೊಬ್ಬ ಧರ್ಮೋಪದೇಶಕನು ಒಂದು ಮನೆಯ ಯಜಮಾನನಂತಿದ್ದಾನೆ. ಆ ಮನುಷ್ಯನು ಹೊಸ ವಸ್ತುಗಳನ್ನೂ ಹಳೆಯ ವಸ್ತುಗಳನ್ನೂ ಆ ಮನೆಯಲ್ಲಿ ಶೇಖರಿಸಿಕೊಂಡು ಅವುಗಳನ್ನು ಹೊರಗೆ ತರುವನು” ಎಂದನು.
ಸ್ವಂತ ಊರಿಗೆ ಯೇಸುವಿನ ಪ್ರಯಾಣ
(ಮಾರ್ಕ 6:1-6; ಲೂಕ 4:16-30)
53 ಯೇಸು ಈ ಸಾಮ್ಯಗಳ ಮೂಲಕ ಬೋಧಿಸಿದ ನಂತರ ಅಲ್ಲಿಂದ ತನ್ನ ಸ್ವಂತ ಊರಿಗೆ ಹೋದನು.
54 ಯೇಸು ಸಭಾಮಂದಿರದಲ್ಲಿ ಬೋಧಿಸಿದಾಗ ಜನರು ಬೆರಗಾಗಿ, “ಈ ಜ್ಞಾನವನ್ನು ಮತ್ತು ಅದ್ಭುತಕಾರ್ಯಗಳನ್ನು ಮಾಡುವ ಈ ಶಕ್ತಿಯನ್ನು ಎಲ್ಲಿಂದ ಪಡೆದುಕೊಂಡನು?
55 ಇವನು ಕೇವಲ ಆ ಬಡಗಿಯ ಮಗನಲ್ಲವೇ? ಇವನ ತಾಯಿ ಮರಿಯಳು. ಯಾಕೋಬ, ಯೋಸೇಫ, ಸಿಮೋನ ಮತ್ತು ಯೂದ ಇವನ ಸಹೋದರರು.
56 ಅವನ ಸಹೋದರಿಯರೆಲ್ಲರೂ ನಮ್ಮಲ್ಲಿ ಇದ್ದಾರೆ. ಹೀಗಿರಲು ಇವನು ಈ ಜ್ಞಾನವನ್ನು ಮತ್ತು ಅದ್ಭುತಕಾರ್ಯಗಳನ್ನು ಮಾಡುವ ಈ ಶಕ್ತಿಯನ್ನು ಎಲ್ಲಿಂದ ಪಡೆದುಕೊಂಡನು?” ಎಂದು ಮಾತಾಡಿಕೊಂಡು,
57 ಆತನನ್ನು ಸ್ವೀಕರಿಸಿಕೊಳ್ಳಲಿಲ್ಲ.
ಯೇಸು ಅವರಿಗೆ, “ಪ್ರವಾದಿಗೆ ಪರಜನರು ಮರ್ಯಾದೆ ಸಲ್ಲಿಸುತ್ತಾರೆ; ಆದರೆ ಸ್ವಂತ ಊರಿನವರಾಗಲಿ ಸ್ವಂತ ಮನೆಯವರಾಗಲಿ ಮರ್ಯಾದೆ ಕೊಡುವುದಿಲ್ಲ” ಎಂದು ಹೇಳಿದನು.
58 ಆ ಜನರ ಅವಿಶ್ವಾಸದ ಕಾರಣ ಆತನು ಅಲ್ಲಿ ಅನೇಕ ಅದ್ಭುತಕಾರ್ಯಗಳನ್ನು ಮಾಡಲಿಲ್ಲ.