ಯೇಸುವನ್ನು ಪರೀಕ್ಷಿಸಲು ಯೆಹೂದ್ಯ ನಾಯಕರ ಪ್ರಯತ್ನ
(ಮಾರ್ಕ 8:11-13; ಲೂಕ 12:54-56)
16
ಫರಿಸಾಯರು ಮತ್ತು ಸದ್ದುಕಾಯರು ಯೇಸುವಿನ ಬಳಿಗೆ ಬಂದರು. ಅವರು ಯೇಸುವನ್ನು ಪರೀಕ್ಷಿಸಲು, “ನೀನು ದೇವರಿಂದ ಬಂದವನೆಂಬುದನ್ನು ನಿರೂಪಿಸಲು ಒಂದು ಅದ್ಭುತಕಾರ್ಯವನ್ನು ಮಾಡಿ ತೋರಿಸು” ಎಂದು ಕೇಳಿದರು.
ಯೇಸು, “ಸೂರ್ಯನು ಮುಳುಗುವಾಗ ಹವಾಮಾನ ಹೇಗಿರುತ್ತದೆ ಎಂಬುದು ನಿಮಗೆ ತಿಳಿದಿದೆ. ಆಕಾಶವು ಕೆಂಪಾಗಿದ್ದರೆ, ನಮಗೆ ಒಳ್ಳೆಯ ಹವಾಮಾನವಿರುತ್ತದೆ ಎಂದು ಹೇಳುತ್ತೀರಿ. ಬೆಳಿಗ್ಗೆ ಸೂರ್ಯೋದಯವನ್ನು ಗಮನಿಸುತ್ತೀರಿ. ಆಕಾಶವು ಕಪ್ಪಾಗಿದ್ದರೆ ಅಥವಾ ಕೆಂಪಾಗಿದ್ದರೆ, ಈ ದಿನ ಮಳೆ ಬರುತ್ತದೆ ಎಂದು ಹೇಳುತ್ತೀರಿ. ಇವುಗಳು ಹವಾಮಾನದ ಗುರುತುಗಳಾಗಿವೆ. ನೀವು ಈ ಗುರುತುಗಳನ್ನು ಕಂಡು ಅವುಗಳ ಅರ್ಥವನ್ನು ತಿಳಿದುಕೊಳ್ಳುತ್ತೀರಿ. ಅದೇ ರೀತಿಯಲ್ಲಿ ಈಗ ನೀವು ನೋಡುತ್ತಿರುವ ಇಂದಿನ ಸಂಗತಿಗಳು ಸಹ ಗುರುತುಗಳಾಗಿವೆ. ಆದರೆ ನಿಮಗೆ ಈ ಗುರುತುಗಳ ಅರ್ಥವು ಗೊತ್ತಿಲ್ಲ. ಕೆಟ್ಟವರಾದ ಮತ್ತು ಪಾಪಿಗಳಾದ ಜನರು ಸೂಚನೆಗಾಗಿ ಒಂದು ಅದ್ಭುತಕಾರ್ಯವನ್ನು ಅಪೇಕ್ಷಿಸುತ್ತಾರೆ. ಅವರಿಗೆ ಯೋನನಲ್ಲಾದ ಸೂಚಕಕಾರ್ಯವೊಂದೇ* ಹೊರತು ಬೇರೆ ಯಾವ ಸೂಚಕಕಾರ್ಯವೂ ದೊರೆಯುವುದಿಲ್ಲ” ಎಂದು ಉತ್ತರಕೊಟ್ಟನು. ಬಳಿಕ ಯೇಸು ಆ ಸ್ಥಳವನ್ನು ಬಿಟ್ಟು ಹೊರಟುಹೋದನು.
ಯೆಹೂದ್ಯನಾಯಕರ ಬಗ್ಗೆ ಯೇಸು ನೀಡಿದ ಎಚ್ಚರಿಕೆ
(ಮಾರ್ಕ 8:14-21)
ಯೇಸು ಮತ್ತು ಆತನ ಶಿಷ್ಯರು ಸರೋವರವನ್ನು ದಾಟಿ ಹೋದರು. ಆದರೆ ಶಿಷ್ಯರು ರೊಟ್ಟಿಯನ್ನು ತರಲು ಮರೆತುಬಿಟ್ಟರು. ಯೇಸು ಶಿಷ್ಯರಿಗೆ, “ಎಚ್ಚರಿಕೆಯಿಂದಿರಿ! ಫರಿಸಾಯರ ಮತ್ತು ಸದ್ದುಕಾಯರ ಹುಳಿಗೆ ಒಳಗಾಗಬೇಡಿ” ಎಂದು ಹೇಳಿದನು.
ಶಿಷ್ಯರು ಇದರ ಅರ್ಥವನ್ನು ಚರ್ಚಿಸಿದರು. ಅವರು, “ನಾವು ರೊಟ್ಟಿ ತರಲು ಮರೆತುಬಿಟ್ಟದ್ದಕ್ಕಾಗಿ ಯೇಸು ಹೀಗೆ ಹೇಳಿರಬಹುದೆ?” ಎಂದು ಮಾತಾಡಿಕೊಂಡರು.
ಶಿಷ್ಯರು ಈ ವಿಷಯವನ್ನು ಚರ್ಚಿಸುತ್ತಿರುವುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಯೇಸು ಅವರಿಗೆ, “ರೊಟ್ಟಿ ಇಲ್ಲವಲ್ಲಾ ಎಂಬ ವಿಷಯದಲ್ಲಿ ನೀವು ಮಾತಾಡಿಕೊಳ್ಳುತ್ತಿರುವುದೇಕೆ? ಅಲ್ಪ ವಿಶ್ವಾಸಿಗಳೇ, ನೀವಿನ್ನೂ ಅರ್ಥಮಾಡಿಕೊಳ್ಳಲಿಲ್ಲವೇ? ಐದು ರೊಟ್ಟಿಗಳಿಂದ ಐದು ಸಾವಿರ ಜನರಿಗೆ ಊಟ ಮಾಡಿಸಿದ್ದು ನಿಮಗೆ ನೆನಪಿಲ್ಲವೇ? ಜನರು ಊಟ ಮಾಡಿದ ಮೇಲೆ ನೀವು ಅನೇಕ ಬುಟ್ಟಿಗಳಲ್ಲಿ ರೊಟ್ಟಿಗಳನ್ನು ತುಂಬಿಸಿದ್ದು ನಿಮಗೆ ನೆನಪಿಲ್ಲವೇ? 10 ಏಳು ರೊಟ್ಟಿಗಳ ತುಂಡುಗಳನ್ನು ನಾಲ್ಕು ಸಾವಿರ ಜನರಿಗೆ ಊಟ ಮಾಡಿಸಿದ್ದು ನಿಮಗೆ ನೆನಪಿಲ್ಲವೇ? ಜನರು ತಿಂದು ಮುಗಿಸಿದ ಮೇಲೆ ನೀವು ಅನೇಕ ಬುಟ್ಟಿಗಳಲ್ಲಿ ರೊಟ್ಟಿಗಳನ್ನು ತುಂಬಿಸಿದ್ದು ನಿಮಗೆ ನೆನಪಿಲ್ಲವೇ? 11 ಆದ್ದರಿಂದ ನಾನು ನಿಮಗೆ ಹೇಳಿದ್ದು ರೊಟ್ಟಿಯ ಕುರಿತಲ್ಲ. ನೀವು ಇದನ್ನು ಅರ್ಥ ಮಾಡಿಕೊಳ್ಳುವುದಿಲ್ಲವೇಕೆ? ಫರಿಸಾಯರು ಮತ್ತು ಸದ್ದುಕಾಯರ ಹುಳಿಗೆ (ಕೆಟ್ಟ ಪ್ರಭಾವಕ್ಕೆ) ಒಳಗಾಗದಂತೆ ನೀವು ಎಚ್ಚರಿಕೆಯಿಂದಿರಬೇಕೆಂದು ನಾನು ನಿಮ್ಮನ್ನು ಎಚ್ಚರಿಸಿದೆನು” ಅಂದನು.
12 ಆಗ ಶಿಷ್ಯರು ಯೇಸು ಹೇಳಿದ್ದನ್ನು ಅರ್ಥಮಾಡಿಕೊಂಡರು. ಆತನು ಅವರಿಗೆ ರೊಟ್ಟಿಯಲ್ಲಿ ಬೆರೆಸಿದ್ದ ಹುಳಿಯನ್ನು ಕುರಿತು ಎಚ್ಚರಿಕೆಯಾಗಿರಬೇಕೆಂದು ಹೇಳಲಿಲ್ಲ. ಫರಿಸಾಯರು ಮತ್ತು ಸದ್ದುಕಾಯರ ಬೋಧನೆಯ ಪ್ರಭಾವಕ್ಕೆ ಒಳಗಾಗದಂತೆ ಎಚ್ಚರಿಕೆಯಾಗಿರಬೇಕೆಂದು ಹೇಳಿದ್ದನು.
ಯೇಸುವೇ ಕ್ರಿಸ್ತನೆಂದು ಪೇತ್ರನ ಪ್ರಕಟನೆ
(ಮಾರ್ಕ 8:27-30; ಲೂಕ 9:18-21)
13 ಯೇಸು ಫಿಲಿಪ್ಪನ ಸೆಜರೇಯ ಎಂಬ ಪ್ರಾಂತ್ಯಕ್ಕೆ ಹೋದನು. ಯೇಸು ತನ್ನ ಶಿಷ್ಯರಿಗೆ, “ಮನುಷ್ಯಕುಮಾರನಾದ ನನ್ನನ್ನು ಜನರು ಯಾರೆಂದು ಹೇಳುತ್ತಾರೆ?” ಎಂದು ಕೇಳಿದನು.
14 ಶಿಷ್ಯರು, “ಕೆಲವರು ‘ಸ್ನಾನಿಕ ಯೋಹಾನ’ನೆಂದು ಹೇಳುತ್ತಾರೆ. ಇನ್ನು ಕೆಲವರು ‘ಎಲೀಯ’ನೆಂದು ಹೇಳುತ್ತಾರೆ. ಮತ್ತೆ ಕೆಲವರು ‘ಯೆರೆಮೀಯ’ನೆಂದು ಇಲ್ಲವೆ ‘ಪ್ರವಾದಿಗಳಲ್ಲಿ ಒಬ್ಬ’ನೆಂದು ಹೇಳುತ್ತಾರೆ” ಎಂದು ಉತ್ತರಕೊಟ್ಟರು.
15 ಅದಕ್ಕೆ ಆತನು, “ನೀವು ನನ್ನನ್ನು ಯಾರೆಂದು ಹೇಳುತ್ತೀರಿ?” ಎಂದು ಕೇಳಿದನು.
16 ಸೀಮೋನ್ ಪೇತ್ರನು, “ನೀನೇ ಬರಬೇಕಾಗಿರುವ ಕ್ರಿಸ್ತನು. ನೀನೇ ಜೀವಸ್ವರೂಪನಾದ ದೇವರ ಮಗನು” ಎಂದು ಉತ್ತರಕೊಟ್ಟನು.
17 ಯೇಸು, “ಯೋನನ ಮಗನಾದ ಸೀಮೋನನೇ ನೀನು ಧನ್ಯನು. ಅದನ್ನು ನಿನಗೆ ತಿಳಿಸಿಕೊಟ್ಟವನು ಯಾವ ಮನುಷ್ಯನೂ ಅಲ್ಲ. ಪರಲೋಕದಲ್ಲಿರುವ ನನ್ನ ತಂದೆಯೇ ನಿನಗೆ ತಿಳಿಸಿಕೊಟ್ಟನು. 18 ಆದ್ದರಿಂದ ನಾನು ನಿನಗೆ ಹೇಳುವುದೇನೆಂದರೆ, ನೀನೇ ಪೇತ್ರ. ನಾನು ಈ ಬಂಡೆಯ ಮೇಲೆ ನನ್ನ ಸಭೆಯನ್ನು ಕಟ್ಟುತ್ತೇನೆ. ಪಾತಾಳಲೋಕದ ಬಲವು ನನ್ನ ಸಭೆಯನ್ನು ಸೋಲಿಸಲಾರದು. 19 ಪರಲೋಕರಾಜ್ಯದ ಬೀಗದ ಕೈಗಳನ್ನು ನಾನು ನಿನಗೆ ಕೊಡುತ್ತೇನೆ. ನೀನು ಭೂಲೋಕದಲ್ಲಿ ನೀಡುವ ನ್ಯಾಯತೀರ್ಪು ದೇವರ ನ್ಯಾಯತೀರ್ಪಾಗಿರುತ್ತದೆ. ನೀನು ಭೂಲೋಕದಲ್ಲಿ ನೀಡುವ ಕ್ಷಮೆಯು ದೇವರ ಕ್ಷಮೆಯಾಗಿರುತ್ತದೆ” ಎಂದು ಉತ್ತರಿಸಿದನು.
20 ಬಳಿಕ ಯೇಸು ತನ್ನ ಶಿಷ್ಯರಿಗೆ, ತಾನು ಕ್ರಿಸ್ತನೆಂಬುದನ್ನು ಯಾರಿಗೂ ಹೇಳಕೂಡದೆಂದು ಎಚ್ಚರಿಕೆ ಕೊಟ್ಟನು.
ಯೇಸು ತನ್ನ ಮರಣದ ಕುರಿತು ಮುಂತಿಳಿಸಿದ್ದು
(ಮಾರ್ಕ 8:31-9:1; ಲೂಕ 9:22-27)
21 ಆ ಸಮಯದಲ್ಲಿ ಯೇಸು ತಾನು ಜೆರುಸಲೇಮಿಗೆ ಹೋಗಬೇಕೆಂದು ಮತ್ತು ಅಲ್ಲಿ ಯೆಹೂದ್ಯರ ಹಿರಿಯ ನಾಯಕರಿಂದಲೂ ಮಹಾಯಾಜಕರಿಂದಲೂ ಮತ್ತು ಧರ್ಮೋಪದೇಶಕರಿಂದಲೂ ತಾನು ಅನೇಕ ಕಷ್ಟಗಳನ್ನು ಅನುಭವಿಸಿ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಸತ್ತವರೊಳಗಿಂದ ಜೀವಂತವಾಗಿ ಎದ್ದುಬರಬೇಕಾಗಿದೆ ಎಂದು ತನ್ನ ಶಿಷ್ಯರಿಗೆ ವಿವರಿಸಿ ಹೇಳಿದನು.
22 ಆಗ ಪೇತ್ರನು ಯೇಸುವನ್ನು ಸ್ವಲ್ಪ ದೂರದಲ್ಲಿ ಕರೆದೊಯ್ದು, “ದೇವರು ನಿನ್ನನ್ನು ಕಾಪಾಡಲಿ, ನಿನಗೆಂದಿಗೂ ಹಾಗೆ ಸಂಭವಿಸದಿರಲಿ!” ಎಂದು ಪ್ರತಿಭಟಿಸಿದನು.
23 ಆಗ ಯೇಸು ಪೇತ್ರನಿಗೆ, “ಸೈತಾನನೇ, ಇಲ್ಲಿಂದ ತೊಲಗು! ನೀನು ನನಗೆ ಅಡ್ಡಿಯಾಗಿರುವೆ! ನಿನ್ನ ಯೋಚನೆ ಮನುಷ್ಯರ ಯೋಚನೆಯೇ ಹೊರತು ದೇವರದಲ್ಲ” ಎಂದು ಹೇಳಿದನು.
24 ಬಳಿಕ ಯೇಸು ತನ್ನ ಶಿಷ್ಯರಿಗೆ, “ನನ್ನನ್ನು ಹಿಂಬಾಲಿಸಲು ಅಪೇಕ್ಷಿಸುವವನು ತನಗೆ ಇಷ್ಟವಾದದ್ದನ್ನು ತ್ಯಜಿಸಬೇಕು. ಅವನು ತನಗೆ ಕೊಟ್ಟಿರುವ ಶಿಲುಬೆಯನ್ನು (ಸಂಕಟ) ಸ್ವೀಕರಿಸಿಕೊಂಡು ನನ್ನನ್ನು ಹಿಂಬಾಲಿಸಬೇಕು. 25 ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳೆದುಕೊಳ್ಳುವನು. ನನಗಾಗಿ ತನ್ನ ಪ್ರಾಣವನ್ನು ಕೊಡುವ ಪ್ರತಿಯೊಬ್ಬನೂ ಅದನ್ನು ಉಳಿಸಿಕೊಳ್ಳುವನು. 26 ಒಬ್ಬನು ಪ್ರಪಂಚವನ್ನೆಲ್ಲಾ ಗಳಿಸಿಕೊಂಡು ತನ್ನ ಆತ್ಮವನ್ನೇ ಕಳೆದುಕೊಂಡರೆ ಅದರಿಂದ ಅವನಿಗೇನು ಪ್ರಯೋಜನ? ಮನುಷ್ಯನು ತನ್ನ ಆತ್ಮವನ್ನು ಕೊಂಡುಕೊಳ್ಳಲು ಏನನ್ನು ತಾನೇ ಕೊಡಬಲ್ಲನು? 27 ಮನುಷ್ಯಕುಮಾರನು ತನ್ನ ತಂದೆಯ ಮಹಿಮೆಯೊಡನೆ ಮತ್ತು ತನ್ನ ದೂತರೊಡನೆ ಮರಳಿ ಬಂದು ಪ್ರತಿಯೊಬ್ಬನಿಗೂ ಅವನವನ ಕಾರ್ಯಗಳಿಗೆ ತಕ್ಕಂತೆ ಪ್ರತಿಫಲ ಕೊಡುವನು. 28 ನಾನು ನಿಮಗೆ ಸತ್ಯವನ್ನೇ ಹೇಳುತ್ತೇನೆ. ಈಗ ಇಲ್ಲಿ ನಿಂತಿರುವ ಕೆಲವರು, ಮನುಷ್ಯಕುಮಾರನು ತನ್ನ ರಾಜ್ಯದೊಡನೆ ಬರುವುದನ್ನು ನೋಡುವ ತನಕ ಸಾಯುವುದಿಲ್ಲ” ಎಂದು ಹೇಳಿದನು.

* 16:4: ಯೋನನಲ್ಲಾದ ಸೂಚಕಕಾರ್ಯ ಯೋನನು ಮೂರು ದಿನಗಳ ಕಾಲ ಒಂದು ದೊಡ್ಡ ಮೀನಿನಲ್ಲಿದ್ದುದು ಯೇಸು ಮೂರು ದಿನ ಸಮಾಧಿಯಲ್ಲಿದ್ದಂತೆ.
† 16:5: ಸರೋವರ ಗಲಿಲೇಯ ಸರೋವರ.
‡ 16:18: ಪೇತ್ರ ಅಂದರೆ “ಬಂಡೆ.” ಇದು ಪದ ಬಳಕೆಯ “ಶ್ಲೇಚ್ಛೆಯಾಗಿದೆ.”