ಸ್ವಸ್ಥತೆಯನ್ನು ಹೊಂದಿದ ಪಾರ್ಶ್ವವಾಯು ರೋಗಿ
(ಮಾರ್ಕ 2:1-12; 5:17-26)
9
1 ಯೇಸು ದೋಣಿಯನ್ನು ಹತ್ತಿ ಸರೋವರವನ್ನು ದಾಟಿ ತನ್ನ ಸ್ವಂತ ಊರಿಗೆ ಹೋದನು.
2 ಕೆಲವರು ಒಬ್ಬ ಪಾರ್ಶ್ವವಾಯು ರೋಗಿಯನ್ನು ಯೇಸುವಿನ ಬಳಿಗೆ ತಂದರು. ಅವನು ತನ್ನ ಹಾಸಿಗೆಯ ಮೇಲೆ ಮಲಗಿದ್ದನು. ಯೇಸು ಈ ಜನರಲ್ಲಿದ್ದ ದೊಡ್ಡ ನಂಬಿಕೆಯನ್ನು ಕಂಡು ಪಾರ್ಶ್ವವಾಯು ರೋಗಿಗೆ, “ಯುವಕನೇ, ಸಂತೋಷಪಡು. ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.
3 ಅಲ್ಲಿದ್ದ ಧರ್ಮೋಪದೇಶಕರು ಇದನ್ನು ಕೇಳಿ, “ಇದು ದೇವದೂಷಣೆ” ಎಂದು ತಮ್ಮೊಳಗೆ ಅಂದುಕೊಂಡರು.
4 ಅವರು ಹೀಗೆ ಆಲೋಚಿಸುತ್ತಿರುವುದು ಯೇಸುವಿಗೆ ತಿಳಿದಿತ್ತು. ಆತನು ಅವರಿಗೆ, “ನೀವು ಏಕೆ ದುರಾಲೋಚನೆ ಮಾಡುತ್ತಿದ್ದೀರಿ?
5 ಯಾವುದು ಸುಲಭ? ಈ ಪಾರ್ಶ್ವವಾಯು ರೋಗಿಗೆ, ‘ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ’ ಎಂದು ಹೇಳುವುದೇ ಅಥವಾ ‘ಮೇಲಕ್ಕೆದ್ದು ನಡೆ’ ಎಂದು ಹೇಳುವುದೇ?
6 ಆದರೆ ಮನುಷ್ಯಕುಮಾರನಿಗೆ ಪಾಪಗಳನ್ನು ಕ್ಷಮಿಸಲು ಭೂಲೋಕದಲ್ಲಿ ಅಧಿಕಾರವಿದೆ ಎಂಬುದನ್ನು ನಾನು ನಿಮಗೆ ನಿರೂಪಿಸುತ್ತೇನೆ” ಎಂದನು. ನಂತರ ಯೇಸು ಪಾರ್ಶ್ವವಾಯು ರೋಗಿಗೆ, “ಎದ್ದು, ನಿನ್ನ ಹಾಸಿಗೆಯನ್ನು ತೆಗೆದುಕೊಂಡು ಮನೆಗೆ ಹೋಗು” ಎಂದನು.
7 ಆಗ ಅವನು ಎದ್ದು ಮನೆಗೆ ಹೋದನು.
8 ಜನರು ಇದನ್ನು ನೋಡಿ ಆಶ್ಚರ್ಯಚಕಿತರಾದರು. ಮನುಷ್ಯರಿಗೆ ಇಂಥ ಅಧಿಕಾರವನ್ನು ಕೊಟ್ಟಿದ್ದಕ್ಕಾಗಿ ಜನರು ದೇವರನ್ನು ಕೊಂಡಾಡಿದರು.
ಸುಂಕದವನು
(ಮಾರ್ಕ 2:13-17; ಲೂಕ 5:27-32)
9 ಯೇಸು ಹೋಗುತ್ತಿರುವಾಗ, ಮತ್ತಾಯ ಎಂಬ ವ್ಯಕ್ತಿಯನ್ನು ಕಂಡನು. ಮತ್ತಾಯನು ಸುಂಕದಕಟ್ಟೆಯಲ್ಲಿ ಕುಳಿತಿದ್ದನು. ಯೇಸು ಅವನಿಗೆ, “ನನ್ನನ್ನು ಹಿಂಬಾಲಿಸು” ಅಂದನು. ಆಗ ಮತ್ತಾಯನು ಎದ್ದು ಯೇಸುವನ್ನು ಹಿಂಬಾಲಿಸಿದನು.
10 ಯೇಸು ಮತ್ತಾಯನ ಮನೆಯಲ್ಲಿ ಊಟಕ್ಕೆ ಕುಳಿತುಕೊಂಡನು. ಅನೇಕ ಮಂದಿ ಸುಂಕವಸೂಲಿಗಾರರು ಮತ್ತು ಕೆಟ್ಟ ಜನರು ಸಹ ಯೇಸುವಿನ ಸಂಗಡ ಮತ್ತು ಆತನ ಹಿಂಬಾಲಕರ ಸಂಗಡ ಊಟಕ್ಕೆ ಕುಳಿತುಕೊಂಡರು.
11 ಇದನ್ನು ಕಂಡ ಫರಿಸಾಯರು ಯೇಸುವಿನ ಶಿಷ್ಯರಿಗೆ, “ನಿಮ್ಮ ಬೋಧಕನು ಸುಂಕವಸೂಲಿಗಾರರೊಂದಿಗೆ ಮತ್ತು ಕೆಟ್ಟ ಜನರೊಂದಿಗೆ ಏಕೆ ಊಟಮಾಡುತ್ತಾನೆ?” ಎಂದು ಕೇಳಿದರು.
12 ಫರಿಸಾಯರು ಹೇಳಿದ್ದನ್ನು ಕೇಳಿಸಿಕೊಂಡ ಯೇಸು ಅವರಿಗೆ, “ಆರೋಗ್ಯವುಳ್ಳ ಜನರಿಗೆ ವೈದ್ಯನ ಅವಶ್ಯಕತೆಯಿಲ್ಲ. ಕಾಯಿಲೆಯ ಜನರಿಗೆ ವೈದ್ಯನು ಅವಶ್ಯ.
13 ನೀವು ಹೋಗಿ, ‘ನನಗೆ ಯಜ್ಞ ಬೇಡ, ದಯೆ ಬೇಕು’ ಎಂದು ಪವಿತ್ರ ಗ್ರಂಥದಲ್ಲಿ ಬರೆದಿರುವ ವಾಕ್ಯದ ಅರ್ಥವನ್ನು ಕಲಿತುಕೊಳ್ಳಿ. ನಾನು ನೀತಿವಂತರನ್ನು ಕರೆಯಲು ಬರಲಿಲ್ಲ, ಪಾಪಿಗಳನ್ನು ಕರೆಯಲು ಬಂದೆನು” ಎಂದು ಹೇಳಿದನು.
ಯೇಸು ಇತರ ಧಾರ್ಮಿಕ ಯೆಹೂದ್ಯರಂತಲ್ಲ
(ಮಾರ್ಕ 2:18-22; ಲೂಕ 5:33-39)
14 ನಂತರ ಯೋಹಾನನ ಶಿಷ್ಯರು ಯೇಸುವಿನ ಬಳಿಗೆ ಬಂದರು. ಅವರು ಯೇಸುವಿಗೆ, “ನಾವು ಮತ್ತು ಫರಿಸಾಯರು ಆಗಾಗ್ಗೆ ಉಪವಾಸ ಮಾಡುತ್ತೇವೆ. ಆದರೆ ನಿನ್ನ ಶಿಷ್ಯರು ಏಕೆ ಉಪವಾಸ ಮಾಡುವುದಿಲ್ಲ?” ಎಂದು ಕೇಳಿದರು.
15 ಯೇಸು, “ಮದುವೆ ಸಮಯದಲ್ಲಿ ಮದುಮಗನ ಸಂಗಡವಿರುವ ಅವನ ಸ್ನೇಹಿತರು ದುಃಖಪಡುವುದಿಲ್ಲ. ಆದರೆ ಮದುಮಗನು ಅವರನ್ನು ಬಿಟ್ಟುಹೋಗುವ ಸಮಯ ಬರುತ್ತದೆ. ಆಗ ಅವರು ದುಃಖಪಡುತ್ತಾರೆ ಮತ್ತು ಉಪವಾಸ ಮಾಡುತ್ತಾರೆ.
16 “ಒಬ್ಬನು ಹರಿದುಹೋದ ಹಳೆ ಮೇಲಂಗಿಗೆ ಹೊಸ ಬಟ್ಟೆಯ ತುಂಡನ್ನು ತೇಪೆಹಾಕಿ ಹೊಲಿಯುವುದಿಲ್ಲ. ಒಂದುವೇಳೆ ಹೊಲಿದರೆ, ಆ ತೇಪೆಯು ಹಿಂಜಿಕೊಂಡು ಮೇಲಂಗಿಯಿಂದ ಕಿತ್ತುಬರುವುದು. ಆಗ ಆ ಮೇಲಂಗಿಯು ಮತ್ತಷ್ಟು ಹರಿದುಹೋಗುವುದು.
17 ಇದಲ್ಲದೆ ಜನರು ಹೊಸ ದ್ರಾಕ್ಷಾರಸವನ್ನು ಹಳೆ ದ್ರಾಕ್ಷಾರಸದ ಬುದ್ದಲಿಗಳಲ್ಲಿ ಹಾಕುವುದಿಲ್ಲ; ಏಕೆಂದರೆ ಹಳೆ ಬುದ್ದಲಿಗಳು ಒಡೆದುಹೋಗುತ್ತವೆ; ಮತ್ತು ದ್ರಾಕ್ಷಾರಸವು ಚೆಲ್ಲಿಹೋಗುತ್ತದೆ. ಆದ್ದರಿಂದ ಜನರು ಯಾವಾಗಲೂ ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕಿಡುವರು. ಆಗ ಎರಡೂ ಉಳಿಯುತ್ತವೆ” ಅಂದನು.
ಮರುಜೀವ ಹೊಂದಿದ ಬಾಲಕಿ ಮತ್ತು ಗುಣಮುಖಳಾದ ಸ್ತ್ರೀ
(ಮಾರ್ಕ 5:21-43; ಲೂಕ 8:40-56)
18 ಯೇಸು ಈ ಸಂಗತಿಗಳನ್ನು ಹೇಳುತ್ತಿರುವಾಗ ಸಭಾಮಂದಿರದ ಅಧಿಕಾರಿಯೊಬ್ಬನು ಆತನ ಬಳಿಗೆ ಬಂದು ಆತನಿಗೆ ಬಾಗಿ ನಮಸ್ಕರಿಸಿ, “ನನ್ನ ಮಗಳು ಈಗ ತಾನೇ ಸತ್ತುಹೋದಳು. ನೀನು ಬಂದು ಅವಳನ್ನು ಮುಟ್ಟಿದರೆ ಅವಳು ಮತ್ತೆ ಜೀವಂತಳಾಗುವಳು” ಎಂದು ಹೇಳಿದನು.
19 ಆದ್ದರಿಂದ ಯೇಸು ಎದ್ದು ಅಧಿಕಾರಿಯ ಸಂಗಡ ಹೋದನು. ಯೇಸುವಿನ ಶಿಷ್ಯರು ಸಹ ಹೋದರು.
20 ಹನ್ನೆರಡು ವರ್ಷಗಳಿಂದ ರಕ್ತಸ್ರಾವ ಕಾಯಿಲೆ ಹೊಂದಿದ್ದ ಒಬ್ಬ ಹೆಂಗಸು ಅಲ್ಲಿದ್ದಳು. ಆ ಹೆಂಗಸು ಯೇಸುವಿನ ಹಿಂದೆಯೇ ಬಂದು ಆತನ ಮೇಲಂಗಿಯ ತುದಿಯನ್ನು ಮುಟ್ಟಿದಳು.
21 ಆ ಹೆಂಗಸು, “ನಾನು ಆತನ ಅಂಗಿಯನ್ನು ಮುಟ್ಟಿದರೆ ಸಾಕು, ನಾನು ಗುಣವಾಗಬಲ್ಲೆ” ಎಂದು ಆಲೋಚನೆ ಮಾಡಿಕೊಂಡಿದ್ದಳು.
22 ಯೇಸು ಹಿಂತಿರುಗಿ ಆ ಹೆಂಗಸನ್ನು ನೋಡಿ, “ಮಗಳೇ, ಸಂತೋಷಪಡು! ನಿನ್ನ ನಂಬಿಕೆಯಿಂದಲೇ ನಿನಗೆ ಗುಣವಾಯಿತು” ಎಂದು ಹೇಳಿದನು. ಆಗ ಅವಳು ಗುಣಮುಖಳಾದಳು.
23 ಬಳಿಕ ಯೇಸು ಅಧಿಕಾರಿಯೊಡನೆ ಮುಂದೆ ಸಾಗಿ ಅವನ ಮನೆಯೊಳಕ್ಕೆ ಹೋದನು. ಶವಸಂಸ್ಕಾರಕ್ಕಾಗಿ ಬಂದಿದ್ದ ವಾದ್ಯವೃಂದದವರಿಗೂ ಗೋಳಾಡುತ್ತಿದ್ದವರಿಗೂ ಯೇಸು,
24 “ದೂರ ಹೋಗಿರಿ, ಹುಡುಗಿ ಸತ್ತಿಲ್ಲ. ಅವಳು ನಿದ್ದೆ ಮಾಡುತ್ತಿದ್ದಾಳೆ” ಅಂದನು. ಆದರೆ ಅವರು ಯೇಸುವನ್ನು ಅಪಹಾಸ್ಯ ಮಾಡಿದರು.
25 ಜನರನ್ನು ಮನೆಯ ಹೊರಗೆ ಕಳುಹಿಸಿದ ಮೇಲೆ ಯೇಸು ಹುಡುಗಿಯ ಕೋಣೆಯ ಒಳಗೆ ಹೋದನು. ಯೇಸು ಹುಡುಗಿಯ ಕೈಯನ್ನು ಹಿಡಿದಾಗ ಆ ಹುಡುಗಿಯು ಎದ್ದುನಿಂತಳು.
26 ಈ ಸುದ್ದಿಯು ಸುತ್ತಮುತ್ತಲಿನ ಪ್ರದೇಶದಲ್ಲೆಲ್ಲಾ ಹಬ್ಬಿತು.
ಅನೇಕರಿಗೆ ಸ್ವಸ್ಥತೆ
27 ಯೇಸು ಅಲ್ಲಿಂದ ಹೊರಡುತ್ತಿರುವಾಗ ಇಬ್ಬರು ಕುರುಡರು ಆತನನ್ನು ಹಿಂಬಾಲಿಸಿದರು. ಅವರು, “ದಾವೀದನ ಕುಮಾರನೇ, ನಮಗೆ ದಯೆ ತೋರು” ಎಂದು ಗಟ್ಟಿಯಾಗಿ ಕೂಗಿದರು.
28 ಯೇಸು ಮನೆಯೊಳಗೆ ಹೋದನು. ಕುರುಡರೂ ಆತನ ಸಂಗಡ ಹೋದರು. ಯೇಸು ಅವರಿಗೆ, “ನಾನು ನಿಮ್ಮನ್ನು ಗುಣಪಡಿಸಬಲ್ಲೆನೆಂದು ನೀವು ನಂಬುತ್ತೀರೋ?” ಎಂದು ಕೇಳಿದನು. ಕುರುಡರು, “ಹೌದು ಪ್ರಭುವೇ, ನಾವು ನಂಬುತ್ತೇವೆ” ಎಂದು ಉತ್ತರಕೊಟ್ಟರು.
29 ಆಗ ಯೇಸು ಅವರ ಕಣ್ಣುಗಳನ್ನು ಮುಟ್ಟಿ, “ನೀವು ನಂಬಿದಂತೆಯೇ ನಿಮಗೆ ಗುಣವಾಗಲಿ” ಅಂದನು.
30 ಕೂಡಲೇ ಅವರಿಗೆ ದೃಷ್ಟಿ ಬಂದಿತು. “ಈ ವಿಷಯವನ್ನು ಯಾರಿಗೂ ಹೇಳಬಾರದು” ಎಂದು ಯೇಸು ಅವರಿಗೆ ಎಚ್ಚರಿಕೆ ನೀಡಿದನು.
31 ಆದರೆ ಆ ಕುರುಡರು ಅಲ್ಲಿಂದ ಹೊರಟುಹೋಗಿ ಯೇಸುವಿನ ಸುದ್ದಿಯನ್ನು ಆ ಪ್ರದೇಶದ ಸುತ್ತಮುತ್ತಲೆಲ್ಲಾ ಹಬ್ಬಿಸಿದರು.
32 ಅವರಿಬ್ಬರು ಹೋಗುತ್ತಿರುವಾಗ ಕೆಲವರು ಬೇರೊಬ್ಬನನ್ನು ಯೇಸುವಿನ ಬಳಿಗೆ ತಂದರು. ಅವನಲ್ಲಿ ದೆವ್ವವಿದ್ದುದರಿಂದ ಅವನು ಮೂಕನಾಗಿದ್ದನು.
33 ಯೇಸು ಆ ದೆವ್ವಕ್ಕೆ ಅವನನ್ನು ಬಿಟ್ಟುಹೋಗುವಂತೆ ಆಜ್ಞಾಪಿಸಿದನು. ಅವನು ಮಾತನಾಡತೊಡಗಿದನು. ಇದನ್ನು ಕಂಡ ಜನರು ಆಶ್ಚರ್ಯಚಕಿತರಾಗಿ, “ಇಸ್ರೇಲಿನಲ್ಲಿ ಇಂಥ ಕಾರ್ಯವನ್ನು ನೋಡಿಯೇ ಇಲ್ಲ” ಅಂದರು.
34 ಆದರೆ ಫರಿಸಾಯರು, “ಇವನು ದೆವ್ವಗಳ ಒಡೆಯನ ಶಕ್ತಿಯಿಂದಲೇ ದೆವ್ವಗಳನ್ನು ಬಿಡಿಸುತ್ತಾನೆ” ಎಂದರು.
ಜನರ ವಿಷಯದಲ್ಲಿ ಯೇಸುವಿನ ದುಃಖ
35 ಯೇಸು ಊರುಗಳಲ್ಲೆಲ್ಲಾ ಮತ್ತು ಹಳ್ಳಿಗಳಲ್ಲೆಲ್ಲಾ ಸಂಚಾರ ಮಾಡಿದನು. ಯೇಸು ಅವರ ಸಭಾಮಂದಿರಗಳಲ್ಲಿ ಉಪದೇಶಿಸಿ ಪರಲೋಕರಾಜ್ಯದ ವಿಷಯವಾಗಿ ಶುಭವಾರ್ತೆಯನ್ನು ಹೇಳಿದನು. ಎಲ್ಲಾ ತರದ ರೋಗಗಳನ್ನು ಬೇನೆಗಳನ್ನು ವಾಸಿಮಾಡಿದನು.
36 ನೋವಿನಿಂದ ನರಳುತ್ತಿದ್ದ ಮತ್ತು ಅಸಹಾಯಕರಾಗಿದ್ದ ಅನೇಕ ಜನರನ್ನು ಯೇಸು ನೋಡಿ ದುಃಖಪಟ್ಟನು. ಕುರುಬನಿಲ್ಲದ ಕುರಿಗಳಂತೆ ಅವರಿದ್ದರು.
37 ಯೇಸು ತನ್ನ ಶಿಷ್ಯರಿಗೆ, “ಬೆಳೆಯು ಬಹಳ, ಆದರೆ ಕೆಲಸಗಾರರು ಸ್ವಲ್ಪ.
38 ಬೆಳೆಯ ಯಜಮಾನ ದೇವರೇ. ಆದ್ದರಿಂದ ಹೆಚ್ಚು ಕೆಲಸಗಾರರನ್ನು ಸುಗ್ಗಿಗಾಗಿ ಕಳುಹಿಸಿಕೊಡುವಂತೆ ಆತನಿಗೆ ಪ್ರಾರ್ಥನೆ ಮಾಡಿರಿ” ಎಂದು ಹೇಳಿದನು.