ಚಲ್ಪಹಾದನ ಹೆಣ್ಣುಮಕ್ಕಳು
27
1 ಚಲ್ಪಹಾದನು ಹೇಫೆರನ ಮಗನು. ಹೇಫೆರನು ಗಿಲ್ಯಾದನ ಮಗನು. ಗಿಲ್ಯಾದನು ಮಾಕೀರನ ಮಗನು. ಮಾಕೀರನು ಮನಸ್ಸೆಯ ಮಗನು. ಮನಸ್ಸೆಯು ಯೋಸೇಫನ ಮಗನು. ಚಲ್ಪಹಾದನಿಗೆ ಐದುಮಂದಿ ಹೆಣ್ಣುಮಕ್ಕಳಿದ್ದರು. ಅವರು ಯಾರೆಂದರೆ: ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ ಮತ್ತು ತಿರ್ಚಾ.
2 ಈ ಐದುಮಂದಿ ಸ್ತ್ರೀಯರು ದೇವದರ್ಶನಗುಡಾರದ ಪ್ರವೇಶದ್ವಾರದ ಬಳಿಗೆ ಹೋಗಿ ಮೋಶೆಯ, ಮಹಾಯಾಜಕನಾದ ಎಲ್ಲಾಜಾರನ, ನಾಯಕರ ಮತ್ತು ಎಲ್ಲಾ ಇಸ್ರೇಲರ ಮುಂದೆ ನಿಂತರು.
3 ಈ ಐದು ಹೆಣ್ಣುಮಕ್ಕಳು, “ನಮ್ಮ ತಂದೆ ಮರುಭೂಮಿಯಲ್ಲಿ ಸತ್ತುಹೋದನು. ಅವನು ಕೋರಹನ ಜೊತೆಯಲ್ಲಿ ಯೆಹೋವನಿಗೆ ವಿರೋಧವಾಗಿ ತಿರುಗಿ ಬಿದ್ದವರಲ್ಲಿ ಸೇರಿದವನಲ್ಲ. ನಮ್ಮ ತಂದೆಯು ತನ್ನ ಪಾಪದ ಫಲವಾಗಿ ಸತ್ತನು. ಅವನಿಗೆ ಗಂಡುಮಕ್ಕಳಿರಲಿಲ್ಲ.
4 ನಮ್ಮ ತಂದೆಗೆ ಗಂಡುಮಗನಿಲ್ಲದ ಮಾತ್ರದಿಂದ ಅವನ ಹೆಸರನ್ನು ಅವನ ಕುಲದವರ ಮಧ್ಯದಿಂದ ತೆಗೆಯುವುದು ನ್ಯಾಯವೋ? ನಮ್ಮ ತಂದೆಯ ಸಂಬಂಧಿಕರೊಡನೆ ನಮಗೂ ಸ್ವಾಸ್ತ್ಯವನ್ನು ಕೊಡು” ಎಂದು ಹೇಳಿದರು.
5 ಮೋಶೆಯು ಇದರ ವಿಷಯದಲ್ಲಿ ತಾನು ಏನು ಮಾಡಬೇಕೆಂದು ಯೆಹೋವನ ಸನ್ನಿಧಿಯಲ್ಲಿ ವಿಚಾರಿಸಲಾಗಿ,
6 ಯೆಹೋವನು ಅವನಿಗೆ ಹೇಳಿದ್ದೇನೆಂದರೆ:
7 “ಚಲ್ಪಹಾದನ ಹೆಣ್ಣುಮಕ್ಕಳು ಹೇಳುವುದು ನ್ಯಾಯವಾಗಿದೆ. ಅವರ ತಂದೆಯ ಸಂಬಂಧಿಕರೊಡನೆ ಅವರಿಗೂ ನೀನು ಸ್ವಾಸ್ತ್ಯವನ್ನು ಕೊಡಬೇಕು. ಅವರ ತಂದೆಯ ಸ್ವಾಸ್ತ್ಯವನ್ನು ನೀನು ಅವರಿಗೆ ವರ್ಗಾವಣೆ ಮಾಡಬೇಕು.
8 “ಮತ್ತು ನೀನು ಇಸ್ರೇಲರಿಗೆ ಹೀಗೆ ಅಪ್ಪಣೆ ಕೊಡಬೇಕು: ‘ಒಬ್ಬ ಮನುಷ್ಯನು ಮಗನಿಲ್ಲದೆ ಸತ್ತರೆ, ನೀವು ಅವನ ಸ್ವಾಸ್ತ್ಯವನ್ನು ಅವನ ಮಗಳಿಗೆ ವರ್ಗಾವಣೆ ಮಾಡಬೇಕು.
9-10 ಮಗಳು ಇಲ್ಲದ ಪಕ್ಷಕ್ಕೆ ಅವನ ಸ್ವಾಸ್ತ್ಯವನ್ನು ಅವನ ಅಣ್ಣತಮ್ಮಂದಿರಿಗೆ ಕೊಡಬೇಕು. ಅಣ್ಣತಮ್ಮಂದಿರು ಇಲ್ಲದ ಪಕ್ಷಕ್ಕೆ ಅವನ ಸ್ವಾಸ್ತ್ಯವನ್ನು ಅವನ ತಂದೆಯ ಸಹೋದರರಿಗೆ ಕೊಡಬೇಕು.
11 ಅವನ ತಂದೆಗೆ ಸಹೋದರರಿಲ್ಲದಿದ್ದರೆ, ಅವನ ಸ್ವಂತ ಕುಲದ ಅತಿ ಸಮೀಪದ ಸಂಬಂಧಿಕನಿಗೆ ಅದನ್ನು ವಹಿಸಿಕೊಡಬೇಕು. ಆಗ ಅವನು ಅದನ್ನು ಸ್ವಾಧೀನಪಡಿಸಿಕೊಳ್ಳುವನು. ಯೆಹೋವನು ಮೋಶೆಗೆ ಆಜ್ಞಾಪಿಸಿದ ಈ ನಿರ್ಧಾರವು ಇಸ್ರೇಲರಿಗೆ ಕಾನೂನು ಬದ್ಧವಾದ ವಿಧಿಯಾಗಿದೆ.’”
ಯೆಹೋಶುವನು ನೂತನ ನಾಯಕ
12 ಬಳಿಕ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಅಬಾರೀಮ್ ಪರ್ವತ ಶ್ರೇಣಿಯಲ್ಲಿರುವ ಈ ಬೆಟ್ಟವನ್ನು ಹತ್ತು. ನಾನು ಇಸ್ರೇಲರಿಗೆ ಕೊಡಲಿಕ್ಕಿರುವ ದೇಶವನ್ನು ನೀನು ಅಲ್ಲಿಂದ ನೋಡು.
13 ಆ ದೇಶವನ್ನು ನೋಡಿದ ನಂತರ ನಿನ್ನ ಅಣ್ಣನಾದ ಆರೋನನಂತೆ ನೀನೂ ಸಾಯುವೆ.
14 ಇಸ್ರೇಲರ ಸಮೂಹದವರು ಚಿನ್ ಮರುಭೂಮಿಯಲ್ಲಿ ನನ್ನೊಡನೆ ವಿವಾದಿಸಿದಾಗ ನೀವಿಬ್ಬರೂ ನನ್ನ ಪವಿತ್ರತೆಯನ್ನು ಜನರ ಮುಂದೆ ತೋರಿಸದೆ ನನ್ನ ಆಜ್ಞೆಗೆ ಅವಿಧೇಯರಾದ ಕಾರಣ ಆ ದೇಶವನ್ನು ನೀನು ಸೇರಬಾರದು.” ಚಿನ್ ಮರುಭೂಮಿಯಲ್ಲಿ ಕಾದೇಶಿನ ಬಳಿ ಮೆರೀಬಾ ಬುಗ್ಗೆಯ ಕುರಿತಾಗಿ ಯೆಹೋವನು ಇದನ್ನು ಹೇಳಿದನು.
15 ಆಗ ಮೋಶೆಯು ಯೆಹೋವನಿಗೆ,
16 “ಎಲ್ಲಾ ಮನುಷ್ಯರ ಯೋಚನೆಗಳನ್ನು ತಿಳಿದಿರುವ ದೇವರಾದ ಯೆಹೋವನು ಈ ಸಮೂಹಕ್ಕೆ ಒಬ್ಬ ನಾಯಕನನ್ನು ನೇಮಿಸಲಿ.
17 ಅವನು ಅವರನ್ನು ಯುದ್ಧದಲ್ಲಿ ಮುನ್ನಡೆಸುವವನೂ ಸೈನ್ಯದ ಯೋಜನೆಗಳನ್ನು ರೂಪಿಸುವವನೂ ಆಗಿರಲಿ. ಆಗ ಯೆಹೋವನ ಸಮೂಹವು ಕುರುಬನಿಲ್ಲದ ಕುರಿಯಂತಾಗುವುದಿಲ್ಲ.”
18 ಅದಕ್ಕೆ ಯೆಹೋವನು, “ನೂನನ ಮಗನಾದ ಯೆಹೋಶುವನು ಹೊಸ ನಾಯಕನಾಗಿರುವನು. ಅವನು ಧೈರ್ಯವಂತನು. ಅವನನ್ನು ಹೊಸ ನಾಯಕನನ್ನಾಗಿ ಮಾಡಲು ಅವನ ಮೇಲೆ ನಿನ್ನ ಕೈಯನ್ನು ಇಡು.
19 ಯಾಜಕನಾದ ಎಲ್ಲಾಜಾರನ ಮುಂದೆಯೂ ಸಮಸ್ತ ಇಸ್ರೇಲರ ಮುಂದೆಯೂ ಅವನನ್ನು ನಿಲ್ಲಿಸು. ಅವರ ಎದುರಿನಲ್ಲಿಯೇ ಅವನಿಗೆ ಆದೇಶಗಳನ್ನು ಕೊಡು.
20 “ಇಸ್ರೇಲರ ಇಡೀ ಸಮುದಾಯವು ವಿಧೇಯರಾಗುವಂತೆ ನಿನ್ನ ಅಧಿಕಾರಗಳಲ್ಲಿ ಸ್ವಲ್ಪವನ್ನು ಅವನಿಗೆ ಕೊಡು.
21 ಯೆಹೋಶುವನು ತೀರ್ಮಾನವೇನಾದರೂ ಮಾಡಬೇಕಾದರೆ ಅವನು ಯಾಜಕನಾದ ಎಲ್ಲಾಜಾರನ ಬಳಿಗೆ ಹೋಗಲಿ, ಎಲ್ಲಾಜಾರನು ಊರೀಮಿನಿಂದ ಯೆಹೋವನ ಉತ್ತರವನ್ನು ಪಡೆಯುವನು. ಆಗ ಯೆಹೋಶುವನೂ ಇಸ್ರೇಲರೆಲ್ಲರೂ ದೇವರು ಹೇಳುವ ಕಾರ್ಯಗಳನ್ನು ಮಾಡುವರು. ಆತನು, ‘ಯುದ್ಧಕ್ಕೆ ಹೋಗಿರಿ’ ಎಂದು ಹೇಳಿದರೆ ಅವರು ಯುದ್ಧಕ್ಕೆ ಹೋಗುವರು. ಆತನು, ‘ಮನೆಗೆ ಹೋಗಿರಿ’ ಎಂದು ಹೇಳಿದರೆ ಅವರು ಮನೆಗೆ ಹೋಗುವರು” ಎಂದು ಹೇಳಿದನು.
22 ಮೋಶೆಯು ಯೆಹೋವನಿಗೆ ವಿಧೇಯನಾಗಿ ಯೆಹೋಶುವನನ್ನು ಯಾಜಕನಾದ ಎಲ್ಲಾಜಾರನ ಮಂದೆಯೂ ಸಮಸ್ತ ಇಸ್ರೇಲರ ಮುಂದೆಯೂ ನಿಲ್ಲಿಸಿದನು.
23 ಬಳಿಕ ಮೋಶೆಯು ತನ್ನ ಕೈಯನ್ನು ಅವನ ಮೇಲಿಟ್ಟು ಹೊಸ ನಾಯಕನಿಗೆ ಕೊಡತಕ್ಕ ಆದೇಶಗಳನ್ನು ಕೊಟ್ಟನು. ಯೆಹೋವನು ಆಜ್ಞಾಪಿಸಿದಂತೆ ಅವನು ಇದನ್ನು ಮಾಡಿದನು.