ಫಿಲಿಪ್ಪಿಯವರಿಗೆ
ಬರೆದ ಪತ್ರ
1
1 ಯೇಸು ಕ್ರಿಸ್ತನ ದಾಸರಾದ ಪೌಲನು ತಿಮೊಥೆಯನು ಫಿಲಿಪ್ಪಿಯವರಿಗೆ ಬರೆಯುವ ಪತ್ರ. ಯೇಸು ಕ್ರಿಸ್ತನ ಮೂಲಕ ದೇವರ ಪರಿಶುದ್ಧ ಜನರಾಗಿರುವವರಿಗೂ ಎಲ್ಲಾ ಹಿರಿಯರಿಗೂ ಸಭಾಸೇವಕರಿಗೂ ನಾವು ಈ ಪತ್ರವನ್ನು ಬರೆಯತ್ತಿದ್ದೇವೆ.
2 ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಉಂಟಾಗಲಿ.
ಪೌಲನ ಪ್ರಾರ್ಥನೆ
3 ನಾನು ನಿಮ್ಮನ್ನು ಜ್ಞಾಪಿಸಿಕೊಂಡಾಗಲೆಲ್ಲಾ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ.
4 ನಾನು ನಿಮ್ಮೆಲ್ಲರಿಗಾಗಿ ಯಾವಾಗಲೂ ಆನಂದದಿಂದ ಪ್ರಾರ್ಥಿಸುತ್ತೇನೆ.
5 ನನ್ನ ಸುವಾರ್ತಾಸೇವೆಯಲ್ಲಿ ನೀವು ಪಾಲುಗಾರರಾದ ಕಾರಣ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. ನೀವು ನಂಬಿಕೊಂಡಂದಿನಿಂದ ಇಲ್ಲಿಯವರೆಗೂ ನನಗೆ ಸಹಾಯ ಮಾಡಿದಿರಿ.
6 ದೇವರು ನಿಮ್ಮಲ್ಲಿ ಒಳ್ಳೆಯ ಕಾರ್ಯವನ್ನು ಆರಂಭಿಸಿ ನಡೆಸಿಕೊಂಡು ಬರುತ್ತಿದ್ದಾನೆ. ಯೇಸು ಕ್ರಿಸ್ತನು ಮತ್ತೆ ಬಂದಾಗ ದೇವರು ಆ ಕಾರ್ಯವನ್ನು ಸಂಪೂರ್ಣಗೊಳಿಸುವನೆಂದು ನನಗೆ ಭರವಸೆ ಇದೆ.
7 ನಿಮ್ಮೆಲ್ಲರ ವಿಷಯದಲ್ಲಿ ಈ ರೀತಿ ಆಲೋಚಿಸುವುದು ನ್ಯಾಯಬದ್ಧವಾದದ್ದೆಂದು ನನಗೆ ಗೊತ್ತಿದೆ. ನೀವು ನನ್ನ ಹೃದಯದಲ್ಲಿರುವುದರಿಂದ, ನಾನು ನಿಮಗೆ ತುಂಬ ಸಮೀಪಸ್ಥನಾಗಿದ್ದೇನೆಂದು ಭಾವಿಸುತ್ತೇನೆ. ನೀವೆಲ್ಲರೂ ನನ್ನೊಂದಿಗೆ ದೇವರ ಕೃಪೆಯಲ್ಲಿ ಪಾಲುಗಾರರಾದ ಕಾರಣ ನೀವು ನನಗೆ ಸಮೀಪರಾಗಿದ್ದೀರಿ. ನಾನು ಸೆರೆಯಲ್ಲಿರುವಾಗಲೂ ಸುವಾರ್ತೆಯನ್ನು ಪ್ರತಿಪಾದಿಸುವಾಗಲೂ ನಿರೂಪಿಸುವಾಗಲೂ ನೀವು ನನ್ನೊಂದಿಗೆ ದೇವರ ಕೃಪೆಯಲ್ಲಿ ಪಾಲುಗಾರರಾಗಿದ್ದೀರಿ.
8 ನಾನು ನಿಮ್ಮನ್ನು ನೋಡಲು ಬಹು ತವಕಪಡುತ್ತಿದ್ದೇನೆಂಬುದು ದೇವರಿಗೆ ಗೊತ್ತಿದೆ. ಯೇಸು ಕ್ರಿಸ್ತನಿಂದ ತೋರಿಬಂದ ಪ್ರೀತಿಯಿಂದ ನಾನು ನಿಮ್ಮೆಲ್ಲರನ್ನು ಪ್ರೀತಿಸುತ್ತೇನೆ.
9 ನಿಮಗಾಗಿ ನಾನು ಪ್ರಾರ್ಥಿಸುವುದೇನೆಂದರೆ:
ನೀವು ಪ್ರೀತಿಯಲ್ಲಿ ವೃದ್ಧಿಯಾಗುತ್ತಾ ಜ್ಞಾನವಂತರೂ ತಿಳುವಳಿಕೆಯುಳ್ಳವರೂ ಆಗಬೇಕು.
10 ಒಳಿತುಕೆಡಕುಗಳಿಗಿರುವ ವ್ಯತ್ಯಾಸವನ್ನು ಅರಿತುಕೊಂಡು ಒಳ್ಳೆಯದನ್ನೇ ಆರಿಸಿಕೊಳ್ಳುವಂಥವರಾಗಬೇಕು; ಕ್ರಿಸ್ತನ ಬರುವಿಕೆಯಲ್ಲಿ ನೀವು ಪರಿಶುದ್ಧರಾಗಿಯೂ ನಿರ್ದೋಷಿಗಳಾಗಿಯೂ ಇರಬೇಕು.
11 ಕ್ರಿಸ್ತನ ಸಹಾಯದಿಂದ ದೇವರಿಗೆ ಘನತೆಯನ್ನೂ ಸ್ತೋತ್ರವನ್ನೂ ಉಂಟುಮಾಡುವುದಕ್ಕಾಗಿ ನೀವು ಅನೇಕ ಕಾರ್ಯಗಳನ್ನು ಮಾಡುವಂಥವರಾಗಬೇಕು.
ಪೌಲನ ಕಷ್ಟಗಳು ಸುವಾರ್ತಾ ಸೇವೆಗೆ ಸಹಾಯಕವಾಗಿವೆ
12 ಸಹೋದರ ಸಹೋದರಿಯರೇ, ನನಗೆ ಸಂಭವಿಸಿದ ಕಷ್ಟಗಳು ಸುವಾರ್ತೆಯನ್ನು ಹಬ್ಬಿಸಲು ಸಹಾಯಕವಾದವೆಂದು ನಿಮಗೆ ತಿಳಿದಿರಬೇಕೆಂಬುದಾಗಿ ಅಪೇಕ್ಷಿಸುತ್ತೇನೆ.
13 ನಾನು ಏಕೆ ಸೆರೆಮನೆಯಲ್ಲಿದ್ದೇನೆಂಬುದು ಸ್ಪಷ್ಟವಾಗಿಯೇ ಇದೆ. ನಾನು ಕ್ರಿಸ್ತ ವಿಶ್ವಾಸಿಯಾಗಿರುವುದರಿಂದ ಸೆರೆಮನೆಯಲ್ಲಿದ್ದೇನೆ. ಇಲ್ಲಿಯ ಕಾವಲುಗಾರರಿಗೂ ಅರಮನೆಯ ಇತರ ಜನರೆಲ್ಲರಿಗೂ ಇದು ಗೊತ್ತಿದೆ.
14 ನಾನಿನ್ನೂ ಸೆರೆಮನೆಯಲ್ಲಿದ್ದೇನೆ. ಆದರೆ ನನ್ನ ಈ ಸ್ಥಿತಿಯಿಂದ ಅನೇಕ ವಿಶ್ವಾಸಿಗಳು ಪ್ರೋತ್ಸಾಹಿತರಾಗಿ ಕ್ರಿಸ್ತನ ವಿಷಯವಾದ ಸಂದೇಶವನ್ನು ಮತ್ತಷ್ಟು ಧೈರ್ಯದಿಂದ ಜನರಿಗೆ ಹೇಳುತ್ತಿದ್ದಾರೆ.
15 ಕೆಲವರು ತಮ್ಮಲ್ಲಿರುವ ಅಸೂಯೆಯಿಂದಲೂ ವೈಮನಸ್ಸಿನಿಂದಲೂ ಇನ್ನು ಕೆಲವರು ಸಹಾಯ ಮಾಡಬೇಕೆಂಬ ಉದ್ದೇಶದಿಂದಲೂ ಕ್ರಿಸ್ತನ ವಿಷಯವಾಗಿ ಬೋಧಿಸುತ್ತಾರೆ.
16 ಇವರು ತಮ್ಮಲ್ಲಿ ಪ್ರೀತಿಯಿರುವುದರಿಂದಲೇ ಜನರಿಗೆ ಬೋಧಿಸುತ್ತಾರೆ. ಸುವಾರ್ತೆಯನ್ನು ಪ್ರತಿಪಾದಿಸುವ ಕೆಲಸವನ್ನು ದೇವರು ನನಗೆ ಕೊಟ್ಟನೆಂಬುದು ಇವರಿಗೆ ಗೊತ್ತಿದೆ.
17 ಬೇರೆ ಕೆಲವರು ತಮ್ಮ ಸ್ವಾರ್ಥದ ದೆಸೆಯಿಂದ ಕ್ರಿಸ್ತನ ವಿಷಯವಾಗಿ ಬೋಧಿಸುತ್ತಾರೆ. ಅವರ ಸುವಾರ್ತಾಸೇವೆಯ ಉದ್ದೇಶವೇ ತಪ್ಪಾಗಿದೆ. ಸೆರೆಯಲ್ಲಿರುವ ನನಗೆ ತೊಂದರೆ ಮಾಡಬೇಕೆಂಬುದೇ ಅವರ ಅಪೇಕ್ಷೆ.
18 ಅವರು ನನಗೆ ತೊಂದರೆ ಮಾಡಿದರೂ ನಾನು ಚಿಂತಿಸುವುದಿಲ್ಲ. ಅವರ ಉದ್ದೇಶವು ಯಥಾರ್ಥವಾಗಿದ್ದರೂ ಯಥಾರ್ಥವಾಗಿಲ್ಲದಿದ್ದರೂ ನನಗದು ಮುಖ್ಯವಲ್ಲ.
ಅವರು ಕ್ರಿಸ್ತನ ವಿಷಯವಾಗಿ ಜನರಿಗೆ ಬೋಧಿಸುತ್ತಿರುವುದರಿಂದ ನಾನು ಉಲ್ಲಾಸಿಸುತ್ತೇನೆ, ಇನ್ನು ಮುಂದೆಯೂ ಉಲ್ಲಾಸಿಸುತ್ತೇನೆ.
19 ನೀವು ನನಗೋಸ್ಕರ ಪ್ರಾರ್ಥಿಸುತ್ತಿದ್ದೀರಿ ಮತ್ತು ಯೇಸು ಕ್ರಿಸ್ತನ ಆತ್ಮನು ನನಗೆ ಸಹಾಯ ಮಾಡುತ್ತಿದ್ದಾನೆ. ಆದ್ದರಿಂದ ನನ್ನ ಈ ಕಷ್ಟವು ನನಗೆ ರಕ್ಷಣೆಯನ್ನು ಉಂಟು ಮಾಡುವುದೆಂದು ನನಗೆ ಗೊತ್ತಿದೆ.
20 ನಾನು ಯಾವ ವಿಷಯದಲ್ಲಿಯೂ ನಾಚಿಕೆಪಡದೆ ಎಂದಿನಂತೆ ಈಗಲೂ ಸಹ ಧೈರ್ಯದಿಂದ ಇದ್ದೇನೆ. ನಾನು ಬದುಕಿದರೂ ಸರಿ, ಸತ್ತರೂ ಸರಿ ನನ್ನ ದೇಹದ ಮೂಲಕ ಕ್ರಿಸ್ತನಿಗೆ ಮಹಿಮೆ ಉಂಟಾಗಬೇಕೆಂಬುದೇ ನನ್ನ ಅಭಿಲಾಷೆ ಮತ್ತು ನಿರೀಕ್ಷೆ.
21 ನನಗಂತೂ ಬದುಕುವುದೆಂದರೆ ಕ್ರಿಸ್ತನೇ, ಸಾಯುವುದೆಂದರೆ ಲಾಭವೇ.
22 ನಾನು ಜೀವದಿಂದಿದ್ದರೆ ಫಲಫಲಿಸುವ ಕೆಲಸ ನನಗಿರುತ್ತದೆ. ಆದರೆ ನಾನು ಸಾಯಬೇಕೇ? ಅಥವಾ ಬದುಕಬೇಕೇ? ಏನನ್ನು ಆರಿಸಿಕೊಳ್ಳಬೇಕೋ ನನಗೆ ಗೊತ್ತಿಲ್ಲ.
23 ಇವೆರಡರಲ್ಲಿ ಯಾವುದನ್ನು ಆರಿಸಿಕೊಳ್ಳಬೇಕೆಂಬುದೇ ಕಷ್ಟ. ನಾನು ಈ ಜೀವಿತವನ್ನು ಬಿಟ್ಟು ಆತನೊಂದಿಗಿರಲು ಅಪೇಕ್ಷಿಸುತ್ತೇನೆ. ಅದೇ ಉತ್ತಮವಾದದ್ದು.
24 ಆದರೆ ನಾನಿಲ್ಲಿ ಇಹಲೋಕದ ಶರೀರದಲ್ಲಿರುವುದು ನಿಮಗೆ ಅಗತ್ಯವಾಗಿದೆ.
25 ಆದ್ದರಿಂದ ನಾನು ಜೀವದಿಂದುಳಿದು ನಿಮ್ಮೊಂದಿಗೆ ಇರುತ್ತೇನೆಂದು ನನಗೆ ಗೊತ್ತಿದೆ. ನೀವು ನಂಬಿಕೆಯಲ್ಲಿ ವೃದ್ಧಿಯಾಗಿರಲು ಆನಂದವಾಗಿರಲು ನಿಮಗೆ ನೆರವಾಗಬೇಕೆಂತಲೂ
26 ನಾನು ಮತ್ತೆ ನಿಮ್ಮೊಂದಿಗಿರುವಾಗ ನೀವು ಕ್ರಿಸ್ತಯೇಸುವಿನಲ್ಲಿ ನನ್ನ ವಿಷಯವಾಗಿ ಹೆಮ್ಮೆಪಡಲು ಮತ್ತಷ್ಟು ಕಾರಣಗಳಿರುತ್ತವೆ.
27 ಅದೇನೇ ಇರಲಿ, ಕ್ರಿಸ್ತನ ಸುವಾರ್ತೆಗೆ ಯೋಗ್ಯರಾಗಿ ಬಾಳಿರಿ. ಆಗ ನಾನು ನಿಮ್ಮ ಬಳಿಗೆ ಬಂದರೂ ಸರಿ, ನಿಮ್ಮಿಂದ ದೂರದಲ್ಲಿದ್ದರೂ ಸರಿ, ನಿಮ್ಮ ವಿಷಯದಲ್ಲಿ ಒಳ್ಳೆಯ ಸಂಗತಿಗಳನ್ನು ಕೇಳುತ್ತೇನೆ. ನೀವು ಒಂದೇ ಉದ್ದೇಶದಿಂದ ದೃಢವಾಗಿದ್ದೀರೆಂದೂ ಸುವಾರ್ತೆಯಿಂದ ಉಂಟಾದ ನಂಬಿಕೆಗೋಸ್ಕರ ಏಕಮನಸ್ಸಿನಿಂದ ಕೆಲಸ ಮಾಡುತ್ತಿದ್ದೀರೆಂದೂ ಕೇಳುತ್ತಲೇ ಇರುತ್ತೇನೆ.
28 ಅಲ್ಲದೆ ನಿಮ್ಮನ್ನು ವಿರೋಧಿಸುವ ಜನರಿಗೆ ನೀವು ಹೆದರಿಕೊಳ್ಳುವುದಿಲ್ಲ. ನಿಮ್ಮ ರಕ್ಷಣೆಗೂ ನಿಮ್ಮ ವೈರಿಗಳ ನಾಶಕ್ಕೂ ಇವುಗಳು ದೇವರಿಂದಾದ ಪ್ರಮಾಣಗಳಾಗಿವೆ.
29 ನೀವು ಕ್ರಿಸ್ತನಲ್ಲಿ ನಂಬಿಕೆಯಿಟ್ಟದ್ದು ದೇವರ ಅನುಗ್ರಹದಿಂದಲೇ. ಅಷ್ಟು ಮಾತ್ರವೇ ಅಲ್ಲ, ಕ್ರಿಸ್ತನಿಗೋಸ್ಕರ ಕಷ್ಟಪಡುವುದೂ ಸಹ ನಿಮಗೆ ಅನುಗ್ರಹವಾಗಿ ದೊರೆಯಿತು. ಇವೆರಡೂ ಕ್ರಿಸ್ತನಿಗೆ ಮಹಿಮೆಯನ್ನು ಉಂಟುಮಾಡುತ್ತವೆ.
30 ನಾನು ನಿಮ್ಮ ಮಧ್ಯದಲ್ಲಿದ್ದಾಗ ಸುವಾರ್ತೆಗೆ ವಿರುದ್ಧವಾಗಿದ್ದ ಜನರೊಂದಿಗೆ ಮಾಡಿದ ಹೋರಾಟವನ್ನು ನೋಡಿದ್ದೀರಿ. ಈಗಲೂ ನನಗಿರುವ ಹೋರಾಟದ ಬಗ್ಗೆ ಕೇಳುತ್ತಿದ್ದೀರಿ. ಸ್ವತಃ ನೀವೇ ಈ ರೀತಿಯ ಹೋರಾಟವನ್ನು ಹೊಂದಿದ್ದೀರಿ.