19
ಸುಳ್ಳುಹೇಳುವ ಮತ್ತು ಮೋಸಮಾಡುವ ಮೂಢನಾಗಿರುವುದಕ್ಕಿಂತ, ಬಡವನಾಗಿಯೂ ಯಥಾರ್ಥನಾಗಿಯೂ ಇರುವುದು ಲೇಸು.
ಯಾವುದೇ ಕಾರ್ಯದಲ್ಲಿ ಉತ್ಸುಕತೆಯೊಂದೇ ಸಾಲದು, ತಿಳುವಳಿಕೆಯೂ ಬೇಕು. ಯಾವುದೇ ಕಾರ್ಯದಲ್ಲಿ ದುಡುಕದಿರಿ; ಇಲ್ಲವಾದರೆ, ತಪ್ಪಾದೀತು!
ಮೂಢನ ಮೂಢತನವು ಅವನ ಜೀವನವನ್ನೇ ನಾಶಪಡಿಸುತ್ತದೆ. ಆದರೆ ಅವನು ದೂಷಿಸುವುದು ಯೆಹೋವನನ್ನೇ.
ಐಶ್ವರ್ಯವಂತನಿಗೆ ಅನೇಕ ಸ್ನೇಹಿತರಿರುವರು; ಬಡವನಿಗೆ ಇದ್ದ ಸ್ನೇಹಿತರೂ ಬಿಟ್ಟುಹೋಗುವರು.
ಮತ್ತೊಬ್ಬನ ಮೇಲೆ ಸುಳ್ಳುಹೇಳುವವನು ದಂಡಿಸಲ್ಪಡುವನು. ಸುಳ್ಳುಸಾಕ್ಷಿಗೆ ಸುರಕ್ಷತೆಯಿಲ್ಲ.
ಉದಾರಿಯ ಸ್ನೇಹಿತರಾಗಿರಲು ಅನೇಕರಿಗೆ ಆಸೆ. ದಾನಶೂರನಿಗೆ ಸ್ನೇಹಿತರಾಗಿರಲು ಎಲ್ಲರಿಗೂ ಆಸೆ.
ಬಡವನಿಗೆ ಅವನ ಕುಟುಂಬವು ವಿರುದ್ಧವಾಗುವುದು; ಅವನ ಸ್ನೇಹಿತರೆಲ್ಲಾ ಮುಖತಿರುವಿಕೊಂಡು ಅವನಿಗೆ ದೂರವಾಗುವರು. ಆ ಬಡವನು ಸಹಾಯಕ್ಕಾಗಿ ಬೇಡಿಕೊಂಡರೂ ಅವನ ಸಮೀಪಕ್ಕೆ ಯಾರೂ ಹೋಗುವುದಿಲ್ಲ.
ತನ್ನನ್ನು ಪ್ರೀತಿಸುವ ಪ್ರತಿಯೊಬ್ಬನು ಜ್ಞಾನಿಯಾಗಲು ಪ್ರಯಾಸಪಡುವನು; ಅಭಿವೃದ್ಧಿಗಾಗಿ ಇಷ್ಟಪಡುವವನು ತಿಳುವಳಿಕೆಯನ್ನು ಹೊಂದಿಕೊಳ್ಳಲು ಪ್ರಯತ್ನಿಸುವನು.
ಸುಳ್ಳುಸಾಕ್ಷಿಯು ದಂಡಿಸಲ್ಪಡುವನು; ಸುಳ್ಳುಗಾರನು ನಾಶವಾಗುವನು.
10 ಮೂಢನಿಗೆ ಐಶ್ವರ್ಯವು ಸೂಕ್ತವಲ್ಲ; ರಾಜಕುಮಾರರ ಮೇಲೆ ದೊರೆತನ ಮಾಡುವುದು ಗುಲಾಮನಿಗೆ ಮತ್ತಷ್ಟು ಸೂಕ್ತವಲ್ಲ.
11 ಜ್ಞಾನಿಗೆ ಅವನ ಜ್ಞಾನವೇ ಸನ್ಮಾನವನ್ನು ತರುತ್ತದೆ. ತನಗೆ ತಪ್ಪು ಮಾಡಿದವರನ್ನು ಕ್ಷಮಿಸುವುದು ಅವನ ಸದ್ಗುಣವಾಗಿದೆ.
12 ರಾಜನ ಕೋಪವು ಸಿಂಹ ಬರ್ಜನೆಯಂತಿರುತ್ತದೆ. ರಾಜನಿಗೆ ನಿನ್ನ ಮೇಲಿರುವ ಸಂತೋಷವು ತುಂತುರು ಮಳೆಯಂತಿರುತ್ತದೆ.
13 ಮೂಢನಾದ ಮಗನು ತಂದೆಗೆ ಹಾನಿ; ವಾದಿಸುವ ಹೆಂಡತಿಯು ಸೋರುವ ಮೇಲ್ಛಾವಣಿಯಂತಿದ್ದಾಳೆ.
14 ಮಕ್ಕಳು ತಂದೆಯಿಂದ ಮನೆಗಳನ್ನು ಮತ್ತು ಹಣವನ್ನು ಸ್ವಾಸ್ತ್ಯವಾಗಿ ಪಡೆದುಕೊಳ್ಳುವರು. ವಿವೇಕಿಯಾದ ಹೆಂಡತಿಯಾದರೋ ಯೆಹೋವನಿಂದ ಬಂದ ಉಡುಗೊರೆ.
15 ಸೋಮಾರಿಗೆ ಗಾಢವಾದ ನಿದ್ರೆ. ಮೈಗಳ್ಳನಿಗೆ ಹಸಿವೆ.
16 ಆಜ್ಞೆಗಳಿಗೆ ವಿಧೇಯನಾಗುವವನು ತನ್ನ ಪ್ರಾಣವನ್ನು ಸಂರಕ್ಷಿಸಿಕೊಳ್ಳುವನು. ಆದರೆ ತನ್ನ ನಡತೆಯ ಬಗ್ಗೆ ನಿರ್ಲಕ್ಷ್ಯದಿಂದಿರುವವನು ಸಾವಿಗೀಡಾಗುವನು.
17 ಬಡಜನರಿಗೆ ಉದಾರವಾಗಿ ಕೊಡುವವನು ಯೆಹೋವನಿಗೆ ಸಾಲಕೊಡುತ್ತಾನೆ; ಅವನ ಕರುಣೆಯ ಕಾರ್ಯಕ್ಕೆ ಯೆಹೋವನು ಅವನಿಗೆ ಮರುಪಾವತಿ ಮಾಡುವನು.
18 ನಿನ್ನ ಮಗನು ತನ್ನ ಮಾರ್ಗಗಳನ್ನು ಸರಿಪಡಿಸಿಕೊಳ್ಳುತ್ತಾನೆ ಎಂಬ ನಿರೀಕ್ಷೆ ಇನ್ನೂ ಇರುವಾಗಲೇ ಅವನನ್ನು ಶಿಸ್ತುಗೊಳಿಸು. ಅವನನ್ನು ಶಿಸ್ತುಗೊಳಿಸದಿದ್ದರೆ ಮರಣಕ್ಕೆ ಈಡು ಮಾಡಿದಂತಾಗುವುದು.
19 ಮುಂಗೋಪಿಯು ತನ್ನ ಕೋಪಕ್ಕೆ ದಂಡ ಕೊಡಲೇಬೇಕು. ಕೊಡಬೇಕಾದ ದಂಡದಿಂದ ತಪ್ಪಿಸಿದರೆ, ಅವನು ಅದೇ ಕಾರ್ಯಗಳನ್ನು ಮತ್ತೆ ಮಾಡುವನು.
20 ಉಪದೇಶಕ್ಕೆ ಕಿವಿಗೊಟ್ಟು ಸರಿಪಡಿಸಿಕೊ. ಆಗ ನೀನು ಜ್ಞಾನಿಯಾಗುವೆ.
21 ಜನರು ಅನೇಕ ಆಲೋಚನೆಗಳನ್ನು ಮಾಡಿಕೊಂಡರೂ ಯೆಹೋವನ ಇಚ್ಛೆಯೇ ನೆರವೇರುವುದು.
22 ದುರಾಶೆಯುಳ್ಳವನಿಗೆ ಅವನ ದುರಾಶೆಯೇ ಅವಮಾನಕರ. ಸುಳ್ಳು ಹೇಳುವುದಕ್ಕಿಂತ ಬಡವನಾಗಿರುವುದೇ ಮೇಲು.
23 ಭಯಭಕ್ತಿಯು ಒಳ್ಳೆಯ ಜೀವನಕ್ಕೆ ನಡೆಸುತ್ತದೆ. ಅದು ಅವನಿಗೆ ತೃಪ್ತಿಯನ್ನೂ ಕೊಡುವುದು; ಕೇಡಿನಿಂದಲೂ ತಪ್ಪಿಸಿ ಕಾಪಾಡುವುದು.
24 ಕೆಲವರಿಗೆ ಊಟಮಾಡುವುದಕ್ಕೂ ಸೋಮಾರಿತನ. ಅವರು ಕೈಯನ್ನು ತಟ್ಟೆಗೆ ಹಾಕಿದರೂ ಊಟವನ್ನು ಬಾಯಿಗೆ ಹಾಕಿಕೊಳ್ಳುವುದಿಲ್ಲ.
25 ದುರಾಭಿಮಾನಿಯನ್ನು ದಂಡಿಸಿದರೆ ಅವನು ಪಾಠವನ್ನು ಕಲಿತುಕೊಳ್ಳಬಹುದು. ವಿವೇಕಿಯನ್ನು ತಿದ್ದಿ ಸರಿಪಡಿಸಿದರೆ ಅವನು ಮತ್ತಷ್ಟು ಜ್ಞಾನವನ್ನು ಗಳಿಸಿಕೊಳ್ಳುವನು.
26 ತಂದೆಗೆ ಹೊಡೆಯುವವನೂ ತಾಯಿಯನ್ನು ಓಡಿಸುವವನೂ ತನಗೇ ನಾಚಿಕೆಯನ್ನು ಮತ್ತು ಅವಮಾನವನ್ನು ತಂದುಕೊಳ್ಳುವನು.
27 ನೀನು ಬುದ್ಧಿವಾದವನ್ನು ಕೇಳದಿದ್ದರೆ, ನಿನ್ನ ತಪ್ಪುಗಳಲ್ಲಿಯೇ ಮುಂದುವರಿಯುವೆ.
28 ದುಷ್ಟಸಾಕ್ಷಿಯು ನ್ಯಾಯವನ್ನು ಪರಿಹಾಸ್ಯ ಮಾಡುವನು; ಕೆಡುಕರ ಮಾತುಗಳು ಅನ್ಯಾಯವನ್ನು ಹರಡುತ್ತವೆ.
29 ದುರಾಭಿಮಾನಿಯು ಶಿಕ್ಷೆಗೆ ಗುರಿಯಾಗಿ ದಂಡಿಸಲ್ಪಡುವನು; ಮೂಢನು ತನಗಾಗಿ ಕಾದಿರುವ ದಂಡನೆಯನ್ನು ಅನುಭವಿಸುವನು.