22
1 ಬಹು ಧನಕ್ಕಿಂತಲೂ ಒಳ್ಳೆಯ ಹೆಸರೇ ಉತ್ತಮ. ಬೆಳ್ಳಿಬಂಗಾರಗಳಿಗಿಂತಲೂ ಸನ್ಮಾನಿತರಾಗಿರುವುದೇ ಅಮೂಲ್ಯ.
2 ಐಶ್ವರ್ಯವಂತರಿಗೂ ಬಡವರಿಗೂ ಯಾವ ವ್ಯತ್ಯಾಸವಿಲ್ಲ. ಯಾಕೆಂದರೆ ಎಲ್ಲರನ್ನು ನಿರ್ಮಿಸಿದಾತನು ಯೆಹೋವನೇ.
3 ಜ್ಞಾನಿಗಳು ಕೇಡನ್ನು ಕಂಡು ದೂರವಾಗುತ್ತಾರೆ. ಮೂಢರಾದರೋ ನೇರವಾಗಿ ಹೋಗಿ ಆಪತ್ತಿಗೀಡಾಗುವರು.
4 ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿದ್ದು ದೀನತೆಯಿಂದಿರು; ಆಗ ನೀನು ಐಶ್ವರ್ಯ, ಸನ್ಮಾನ ಮತ್ತು ನಿಜಜೀವವನ್ನು ಹೊಂದಿಕೊಳ್ಳುವೆ.
5 ವಕ್ರಬುದ್ಧಿಯುಳ್ಳವರು ಅನೇಕ ಆಪತ್ತುಗಳಿಗೆ ಸಿಕ್ಕಿಕ್ಕೊಂಡಿದ್ದಾರೆ. ಆದರೆ ತನ್ನ ಆತ್ಮದ ಬಗ್ಗೆ ಚಿಂತಿಸುವವನು ಆ ಆಪತ್ತುಗಳಿಂದ ದೂರವಿರುವನು.
6 ಮಗನಿಗೆ ಬಾಲ್ಯದಲ್ಲಿಯೇ ಒಳ್ಳೆಯ ಮಾರ್ಗವನ್ನು ಉಪದೇಶಿಸು. ಅವನು ಬೆಳೆದು ದೊಡ್ಡವನಾದಾಗ ಅದೇ ರೀತಿಯಲ್ಲಿ ಜೀವಿಸುವನು.
7 ಬಡವನು ಐಶ್ವರ್ಯವಂತನಿಗೆ ಗುಲಾಮನಾಗಿದ್ದಾನೆ. ಸಾಲ ತೆಗೆದುಕೊಳ್ಳುವವನು ಸಾಲಕೊಡುವವನಿಗೆ ಸೇವಕನಾಗಿದ್ದಾನೆ.
8 ಕೇಡನ್ನು ಬಿತ್ತುವವನು ಕೇಡನ್ನು ಕೊಯ್ಯುವನು. ಅವನ ದುಷ್ಟಶಕ್ತಿಯು ನಾಶವಾಗುವುದು.
9 ಉದಾರಿಯು ತನ್ನ ಆಹಾರವನ್ನು ಬಡವರೊಂದಿಗೆ ಹಂಚಿಕೊಳ್ಳುವುದರಿಂದ ಆಶೀರ್ವಾದ ಹೊಂದುವನು.
10 ದುರಾಭಿಮಾನಿಯನ್ನು ಬಲವಂತವಾಗಿ ಹೊರಗಟ್ಟಿ. ಆಗ ಜಗಳವಾಗಲಿ ವಾದಗಳಾಗಲಿ ಅವಮಾನಗಳಾಗಲಿ ಇರುವುದಿಲ್ಲ.
11 ನೀನು ಶುದ್ಧಹೃದಯವನ್ನೂ ಸವಿಮಾತುಗಳನ್ನೂ ಪ್ರೀತಿಸಿದರೆ ರಾಜನು ನಿನಗೆ ಸ್ನೇಹಿತನಾಗುವನು.
12 ಯೆಹೋವನು ಜ್ಞಾನಿಗಳ ಮೇಲೆ ಲಕ್ಷ್ಯವಿಟ್ಟು ಕಾಪಾಡುವನು; ವಂಚಕರ ಮಾತುಗಳನ್ನಾದರೋ ನಾಶಪಡಿಸುವನು.
13 “ನಾನು ಕೆಲಸಕ್ಕೆ ಹೋಗಲಾರೆ. ಹೊರಗಡೆ ಸಿಂಹವಿದೆ. ಅದು ನನ್ನನ್ನು ಕೊಲ್ಲುತ್ತದೆ” ಎನ್ನುತ್ತಾನೆ ಸೋಮಾರಿ.
14 ಕಾಮುಕಿಯ ಬಾಯಿ ಆಳವಾದ ಗುಂಡಿಯಂತಿದೆ. ಯೆಹೋವನಿಂದ ಶಪಿಸಲ್ಪಟ್ಟವರು ಆ ಗುಂಡಿಯೊಳಗೆ ಬೀಳುವರು.
15 ಮಕ್ಕಳು ಮೂಢಕಾರ್ಯಗಳನ್ನು ಮಾಡುವರು. ನೀವು ಅವರನ್ನು ಶಿಕ್ಷಿಸಿದರೆ, ಅವುಗಳನ್ನು ಮಾಡಬಾರದೆಂದು ಅವರಿಗೆ ಗೊತ್ತಾಗುವುದು.
16 ಐಶ್ವರ್ಯವಂತರಾಗಲು ಬಡವರನ್ನು ಹಿಂಸಿಸುವವರಿಗೂ ಐಶ್ವರ್ಯವಂತರಿಗೆ ಉಡುಗೊರೆಗಳನ್ನು ಕೊಡುವವರಿಗೂ ಕೊರತೆಯೇ ಗತಿ.
ಮೂವತ್ತು ಜ್ಞಾನೋಕ್ತಿಗಳು
17 ನನ್ನ ಉಪದೇಶಗಳಿಗೆ ಕಿವಿಗೊಡು. ಜ್ಞಾನಿಗಳ ಉಪದೇಶವನ್ನೇ ನಾನು ನಿನಗೆ ಉಪದೇಶಿಸುವೆನು. ಈ ಉಪದೇಶಗಳಿಂದ ಕಲಿತುಕೊ.
18 ನೀನು ಈ ಉಪದೇಶಗಳನ್ನು ಜ್ಞಾಪಕದಲ್ಲಿಟ್ಟುಕೊಂಡರೆ ನಿನಗೆ ಒಳ್ಳೆಯದಾಗುವುದು. ನೀನು ಈ ಉಪದೇಶಗಳನ್ನು ಹೇಳಬಲ್ಲವನಾದರೆ ನಿನಗೆ ಅನುಕೂಲವಾಗುವುದು.
19 ಆ ಜ್ಞಾನೋಕ್ತಿಗಳನ್ನು ನಾನೀಗ ಉಪದೇಶಿಸುವೆನು, ನೀನು ಯೆಹೋವನಲ್ಲಿ ಭರವಸೆ ಇಡಬೇಕೆಂಬುದೇ ನನ್ನ ಅಪೇಕ್ಷೆ.
20 ನಾನು ನಿನಗೋಸ್ಕರ ಮೂವತ್ತು ನುಡಿಗಳನ್ನು ಬರೆದಿರುವೆ. ಇವು ಬುದ್ಧಿವಾದದ ಮತ್ತು ವಿವೇಕದ ನುಡಿಗಳಾಗಿವೆ.
21 ಈ ನುಡಿಗಳು ನಿನಗೆ ಸತ್ಯವನ್ನೂ ಮುಖ್ಯವಾದವುಗಳನ್ನೂ ಉಪದೇಶಿಸುತ್ತವೆ. ಆಗ ನೀನು ನಿನ್ನನ್ನು ಕಳುಹಿಸಿದವನಿಗೆ ಒಳ್ಳೆಯ ಉತ್ತರಗಳನ್ನು ಕೊಡಬಲ್ಲವನಾಗುವೆ.
— 1 —
22 ಅಸಹಾಯಕರಾದ ಬಡವರಿಂದ ಕದ್ದುಕೊಳ್ಳಬೇಡ; ನ್ಯಾಯಾಲಯದಲ್ಲಿ ಅವರಿಗೆ ಅನ್ಯಾಯಮಾಡಬೇಡ.
23 ಯಾಕೆಂದರೆ ಯೆಹೋವನು ಅವರ ಪರವಾಗಿ ವಾದಿಸುವನು; ಅವರನ್ನು ದರೋಡೆ ಮಾಡಬೇಕೆಂದಿರುವವರ ಪ್ರಾಣಗಳನ್ನು ತೆಗೆದುಹಾಕುವನು.
— 2 —
24 ಮುಂಗೋಪಿಯ ಸ್ನೇಹಿತನಾಗಿರಬೇಡ. ತಟ್ಟನೆ ಸಿಟ್ಟುಗೊಳ್ಳುವವನ ಸಮೀಪಕ್ಕೆ ಹೋಗಬೇಡ.
25 ಇಲ್ಲವಾದರೆ, ನೀನೂ ಅವನಂತಾಗುವೆ. ಆಗ ಅವನಿಗಿರುವ ತೊಂದರೆಗಳು ನಿನಗೂ ಬರುತ್ತವೆ.
— 3 —
26 ಬೇರೊಬ್ಬನ ಸಾಲಗಳಿಗೆ ಜಾಮೀನಾಗಬೇಡ.
27 ನೀನು ಅವನ ಸಾಲವನ್ನು ತೀರಿಸಲಾಗದಿದ್ದರೆ, ನಿನ್ನಲ್ಲಿರುವ ಪ್ರತಿಯೊಂದನ್ನು ಕಳೆದುಕೊಳ್ಳುವೆ. ನಿನ್ನ ಹಾಸಿಗೆಯನ್ನು ನೀನೇಕೆ ಕಳೆದುಕೊಳ್ಳಬೇಕು.
— 4 —
28 ಬಹುಕಾಲದ ಹಿಂದೆ ನಿನ್ನ ಪೂರ್ವಿಕರು ಜಮೀನಿಗೆ ಹಾಕಿದ ಮೇರೆಗಲ್ಲನ್ನು ಎಂದಿಗೂ ಜರುಗಿಸಬೇಡ.
— 5 —
29 ಚತುರ ಕೆಲಸಗಾರನು ರಾಜರ ಸೇವೆಗೆ ಯೋಗ್ಯನಾಗಿದ್ದಾನೆ. ಅವನು ಸಾಮಾನ್ಯರ ಸೇವೆ ಮಾಡಬೇಕಿಲ್ಲ.