ಜಾಮೀನಿನ ಅಪಾಯ
6
1 ನನ್ನ ಮಗನೇ, ಮತ್ತೊಬ್ಬನ ಸಾಲಕ್ಕೆ ನೀನು ಜಾಮೀನಾಗಬೇಡ. ಅವನು ಸಾಲ ತೀರಿಸಲಾಗದಿದ್ದರೆ ನಾನು ತೀರಿಸುತ್ತೇನೆ ಎಂದು ಪ್ರಮಾಣ ಮಾಡಿರುವೆಯಾ?
2 ಮಾಡಿದ್ದರೆ, ಸಿಕ್ಕಿಕೊಂಡಿರುವೆ! ನಿನ್ನ ಸ್ವಂತ ಮಾತೇ ನಿನ್ನನ್ನು ಬಲೆಗೆ ಸಿಕ್ಕಿಸಿದೆ!
3 ನೀನು ಅವನ ಅಧಿಕಾರದ ಅಧೀನದಲ್ಲಿರುವೆ. ಆದ್ದರಿಂದ ಅವನ ಬಳಿಗೆ ಹೋಗಿ ನಿನ್ನನ್ನು ಸಾಲದಿಂದ ಬಿಡುಗಡೆ ಮಾಡುವಂತೆ ಬೇಡಿಕೋ.
4 ವಿಶ್ರಮಿಸಲು ಹಾಗೂ ನಿದ್ರಿಸಲು ಕಾಯಬೇಡ.
5 ಬೇಟೆಗಾರನಿಂದ ತಪ್ಪಿಸಿಕೊಂಡು ಓಡುವ ಜಿಂಕೆಯಂತೆ ಆ ಸಾಲದ ಬಂಧನದಿಂದ ತಪ್ಪಿಸಿಕೊ. ಬಲೆಯಿಂದ ತಪ್ಪಿಸಿಕೊಂಡು ಹಾರುವ ಪಕ್ಷಿಯಂತೆ ನಿನ್ನನ್ನು ಬಿಡುಗಡೆ ಮಾಡಿಕೋ.
ಸೋಮಾರಿತನದ ಅಪಾಯ
6 ಸೋಮಾರಿಯೇ, ನೀನು ಇರುವೆಯಂತೆ ಚುರುಕಾಗಿರಬೇಕು. ಇರುವೆಯನ್ನು ನೋಡಿ ಕಲಿತುಕೊ.
7 ಇರುವೆಗೆ ರಾಜನಿಲ್ಲ, ಅಧಿಕಾರಿಯಿಲ್ಲ, ನಾಯಕನಿಲ್ಲ,
8 ಆದರೆ ಸುಗ್ಗಿಕಾಲದಲ್ಲಿ ತನಗೆ ಬೇಕಾದ ಆಹಾರವನ್ನೆಲ್ಲ ಅದು ಕೂಡಿಸಿಟ್ಟುಕೊಳ್ಳುವುದು. ಆದ್ದರಿಂದ ಚಳಿಗಾಲದಲ್ಲಿ ಅದಕ್ಕೆ ಬೇಕಾದಷ್ಟು ಆಹಾರ ಇರುವುದು.
9 ಸೋಮಾರಿಯೇ, ಇನ್ನೆಷ್ಟುಕಾಲ ಮಲಗಿಕೊಂಡಿರುವೆ? ನಿನ್ನ ವಿಶ್ರಾಂತಿಯಿಂದ ಯಾವಾಗ ಎದ್ದೇಳುವೆ?
10 ಸೋಮಾರಿಯು, “ಸ್ವಲ್ಪ ನಿದ್ರೆ, ಸ್ವಲ್ಪ ವಿಶ್ರಾಂತಿ” ಅನ್ನುವನು.
11 ಆದರೆ ಅವನು ನಿದ್ರಿಸುತ್ತಲೇ ಇರುವನು; ಬಡವನಾಗುತ್ತಲೇ ಹೋಗುವನು. ಅವನ ಸ್ಥಿತಿಯು ದರೋಡೆಕೋರರು ಬಂದು ಇದ್ದದ್ದನ್ನೆಲ್ಲಾ ದೋಚಿಕೊಂಡು ಹೋದಂತಾಗಿರುವುದು.
ದುಷ್ಟನು
12 ಕೆಡುಕನೂ ನೀಚನೂ ಆಗಿರುವವನು ಸುಳ್ಳಾಡುತ್ತಾ ಅಡ್ಡಾಡುತ್ತಾನೆ.
13 ಅವನು ಜನರನ್ನು ಮೋಸಗೊಳಿಸಲು ತನ್ನ ಕಾಲುಗಳಿಂದಲೂ ಕೈಬೆರಳುಗಳಿಂದಲೂ ಸನ್ನೆಮಾಡುತ್ತಾನೆ.
14 ಅವನು ಕೆಡುಕ. ಎಲ್ಲಾ ಸಮಯಗಳಲ್ಲಿ ಅವನು ಕೆಡುಕನ್ನೇ ಆಲೋಚಿಸುತ್ತಾನೆ; ಎಲ್ಲೆಲ್ಲೂ ತೊಂದರೆ ಮಾಡುತ್ತಾನೆ.
15 ಆದರೆ ಅವನಿಗೆ ಆಪತ್ತು ಇದ್ದಕ್ಕಿದ್ದಂತೆ ಬರುವುದು. ಅವನು ನಾಶವಾಗುವನು! ಅವನಿಗೆ ಸಹಾಯಮಾಡಲು ಯಾರೂ ಇರುವುದಿಲ್ಲ!
ಯೆಹೋವನು ದ್ವೇಷಿಸುವ ಏಳು ವಸ್ತುಗಳು
16 ಯೆಹೋವನು ಈ ಆರು ವಸ್ತುಗಳನ್ನು ದ್ವೇಷಿಸುತ್ತಾನೆ, ಇಲ್ಲ, ಏಳು ವಸ್ತುಗಳನ್ನು ದ್ವೇಷಿಸುತ್ತಾನೆ:
17 ಗರ್ವದ ಕಣ್ಣು, ಸುಳ್ಳಾಡುವ ನಾಲಿಗೆ,
ನಿರಪರಾಧಿಗಳನ್ನು ಕೊಲ್ಲುವ ಕೈ.
18 ದುರಾಲೋಚನೆ ಮಾಡುವ ಹೃದಯ,
ಕೇಡುಮಾಡಲು ಓಡುವ ಕಾಲು.
19 ಅಸತ್ಯವಾಡುವ ಸುಳ್ಳುಸಾಕ್ಷಿ
ಮತ್ತು ಸಹೋದರರಲ್ಲಿ ಜಗಳ ಬಿತ್ತುವ ವ್ಯಕ್ತಿ.
ವ್ಯಭಿಚಾರದ ಕುರಿತು ಎಚ್ಚರಿಕೆ
20 ನನ್ನ ಮಗನೇ, ನಿನ್ನ ತಂದೆಯ ಆಜ್ಞೆಗಳನ್ನು ಜ್ಞಾಪಕಮಾಡಿಕೋ. ನಿನ್ನ ತಾಯಿಯ ಉಪದೇಶಗಳನ್ನು ಮರೆಯಬೇಡ.
21 ಯಾವಾಗಲೂ ಅವರ ಮಾತುಗಳನ್ನು ಜ್ಞಾಪಕಮಾಡಿಕೊ. ಅವುಗಳನ್ನು ನಿನ್ನ ಕೊರಳಿಗೆ ಕಟ್ಟಿಕೊ; ನಿನ್ನ ಹೃದಯದ ಮೇಲೆ ಇಟ್ಟುಕೊ.
22 ನೀನು ಹೋಗುವಲ್ಲೆಲ್ಲಾ ಅವರ ಉಪದೇಶಗಳು ನಿನ್ನನ್ನು ನಡೆಸುತ್ತವೆ. ನೀನು ಮಲಗಿರುವಾಗಲೂ ಅವು ನಿನ್ನನ್ನು ಕಾಯುತ್ತವೆ. ನೀನು ಎಚ್ಚರಗೊಂಡಾಗ ಅವು ನಿನ್ನೊಡನೆ ಮಾತಾಡಿ ನಿನಗೆ ಮಾರ್ಗದರ್ಶನ ನೀಡುತ್ತವೆ.
23 ನಿನ್ನ ತಂದೆತಾಯಿಗಳ ಆಜ್ಞೆಗಳು ಮತ್ತು ಉಪದೇಶಗಳು ನಿನಗೆ ನೀತಿಮಾರ್ಗವನ್ನು ತೋರಿಸುವ ಬೆಳಕಿನಂತಿವೆ. ಅವು ನಿನ್ನನ್ನು ಸರಿಪಡಿಸಿ ಜೀವಮಾರ್ಗದಲ್ಲಿ ನಡೆಯಲು ಸಹಾಯಮಾಡುತ್ತವೆ.
24 ಅವು ನಿನ್ನನ್ನು ಕೆಟ್ಟ ಹೆಂಗಸಿನ ಬಳಿಗೆ ಹೋಗದಂತೆ ತಡೆಯುತ್ತವೆ; ಗಂಡನನ್ನು ಬಿಟ್ಟಂಥ ಹೆಂಗಸಿನ ನಯವಾದ ನುಡಿಗಳಿಂದ ತಪ್ಪಿಸಿ ಕಾಪಾಡುತ್ತವೆ.
25 ಆಕೆಯ ಸೌಂದರ್ಯವನ್ನು ಕಂಡು ಹೃದಯದಲ್ಲಿ ಆಸೆಪಡಬೇಡ. ಆಕೆಯ ಕಣ್ಣುಗಳು ನಿನ್ನನ್ನು ವಶಮಾಡಿಕೊಳ್ಳಲು ಬಿಡಬೇಡ.
26 ಸೂಳೆಯು ಒಂದು ರೊಟ್ಟಿಗೇ ಬರಬಹುದು; ಆದರೆ ಬೇರೊಬ್ಬನ ಹೆಂಡತಿಗೆ ನಿನ್ನ ಜೀವವನ್ನೇ ಕಳೆದುಕೊಳ್ಳಬೇಕಾಗುವುದು.
27 ಮಡಿಲಲ್ಲಿ ಬೆಂಕಿಯನ್ನಿಟ್ಟುಕೊಂಡರೆ ಬಟ್ಟೆ ಸುಡುವುದಿಲ್ಲವೇ?
28 ಉರಿಯುವ ಕೆಂಡದ ಮೇಲೆ ನಡೆದರೆ ಪಾದಗಳು ಸುಟ್ಟುಹೋಗುವುದಿಲ್ಲವೇ?
29 ಬೇರೊಬ್ಬನ ಹೆಂಡತಿಯೊಡನೆ ಮಲಗಿಕೊಳ್ಳುವವನಿಗೆ ಇದೇ ರೀತಿಯಾಗುವುದು. ಅವನು ದಂಡನೆ ಅನುಭವಿಸುವನು.
30-31 ಹಸಿವೆಗೊಂಡಿರುವವನು ಕದ್ದುತಿಂದರೂ ತಿನ್ನಬಹುದು. ಅವನು ಸಿಕ್ಕಿಕೊಂಡರೆ ತಾನು ಕದ್ದದ್ದಕ್ಕಿಂತ ಏಳರಷ್ಟು ಹೆಚ್ಚಾಗಿ ಕೊಡಬೇಕು. ಒಂದುವೇಳೆ ಅವನು ತನ್ನಲ್ಲಿರುವ ಪ್ರತಿಯೊಂದನ್ನೂ ಕೊಡಬೇಕಾಗಬಹುದು! ಆದರೆ ಬೇರೆಯವರು ಅವನನ್ನು ಅರ್ಥಮಾಡಿಕೊಳ್ಳುತ್ತಾರೆ; ಅವನ ಬಗ್ಗೆ ಅವರಿಗಿರುವ ಗೌರವವು ಕಳೆದು ಹೋಗುವುದಿಲ್ಲ.
32 ಆದರೆ ವ್ಯಭಿಚಾರ ಮಾಡುವವನು ಮೂರ್ಖನಾಗಿದ್ದಾನೆ. ಅದನ್ನು ಮಾಡುವವನು ತನ್ನನ್ನೇ ನಾಶಮಾಡಿಕೊಳ್ಳುತ್ತಾನೆ.
33 ಅವನಿಗೆ ಹೊಡೆತಬೀಳುವುದು; ಅವಮಾನವಾಗುವುದು. ಆ ನಾಚಿಕೆಯು ಅವನನ್ನು ಬಿಟ್ಟುಹೋಗುವುದೇ ಇಲ್ಲ.
34 ಆಕೆಯ ಗಂಡನು ಮತ್ಸರದಿಂದ ಬಹು ಕೋಪಗೊಳ್ಳುವನು; ಕರುಣೆತೋರದೆ ಅವನ ಮೇಲೆ ಸೇಡುತೀರಿಸಿಕೊಳ್ಳುವನು.
35 ಏನೇ ಕೊಟ್ಟರೂ, ಎಷ್ಟೇ ಹಣ ಕೊಟ್ಟರೂ ಅವನ ಕೋಪವನ್ನು ತಡೆಯಲಾಗುವುದಿಲ್ಲ.