109
ಸ್ತುತಿಗೀತೆ. ರಚನೆಗಾರ: ದಾವೀದ.
1 ನಾನು ಸ್ತುತಿಸುವ ದೇವರೇ,
ನನ್ನ ಪ್ರಾರ್ಥನೆಗೆ ಕಿವಿಗೊಡದಿರಬೇಡ.
2 ದುಷ್ಟರು ನನ್ನ ವಿಷಯವಾಗಿ ಸುಳ್ಳಾಡುತ್ತಿದ್ದಾರೆ.
ಅವರು ಅಸತ್ಯವಾದವುಗಳನ್ನು ಹೇಳುತ್ತಿದ್ದಾರೆ.
3 ಅವರು ನನ್ನನ್ನು ದ್ವೇಷಿಸುತ್ತಾರೆ;
ನಿಷ್ಕಾರಣವಾಗಿ ನನಗೆ ಎದುರಾಗಿದ್ದಾರೆ.
4 ನಾನು ಅವರನ್ನು ಪ್ರೀತಿಸಿದರೂ ಅವರು ನನ್ನನ್ನು ದ್ವೇಷಿಸುವರು.
ನಾನಾದರೋ ನಿನಗೆ ಪ್ರಾರ್ಥಿಸುತ್ತಿದ್ದೇನೆ.
5 ನಾನು ಉಪಕಾರವನ್ನು ಮಾಡಿದ್ದರೂ
ಅವರು ನನಗೆ ಅಪಕಾರವನ್ನು ಮಾಡುತ್ತಿದ್ದಾರೆ.
ನಾನು ಅವರನ್ನು ಪ್ರೀತಿಸಿದರೂ
ಅವರು ನನ್ನನ್ನು ದ್ವೇಷಿಸುವರು.
6 ನನ್ನ ವೈರಿಯನ್ನು ಅವನ ದುಷ್ಕೃತ್ಯಗಳಿಗೆ ತಕ್ಕಂತೆ ದಂಡಿಸು.
ಅವನ ಮೇಲೆ ತಪ್ಪು ಹೊರಿಸಲು ದೂಷಕನನ್ನು ಅವನ ಬಲಗಡೆಯಲ್ಲಿ ನಿಲ್ಲಿಸು.
7 ನ್ಯಾಯವಿಚಾರಣೆಯಲ್ಲಿ ನ್ಯಾಯಾಧೀಶನು ಅವನನ್ನು ಅಪರಾಧಿಯೆಂದು ನಿರ್ಣಯಿಸಲಿ.
ನನ್ನ ಶತ್ರುವಿನ ಪ್ರತಿವಾದವು ಅವನಿಗೆ ಮತ್ತಷ್ಟು ಕೇಡು ಮಾಡಲಿ.
8 ನನ್ನ ಶತ್ರುವು ಬೇಗನೆ ಸಾಯಲಿ.
ಅವನ ಉದ್ಯೋಗವು ಮತ್ತೊಬ್ಬನಿಗೆ ದೊರೆಯಲಿ.
9 ಅವನ ಮಕ್ಕಳನ್ನು ಅನಾಥರನ್ನಾಗಿಯೂ ಅವನ ಹೆಂಡತಿಯನ್ನು ವಿಧವೆಯನ್ನಾಗಿಯೂ ಮಾಡು.
10 ಅವನ ಮಕ್ಕಳು ತಮ್ಮ ಮನೆಯನ್ನು ಕಳೆದುಕೊಂಡು
ತಿರುಕರಂತೆ ಅಲೆಯುತ್ತಾ ಭಿಕ್ಷುಕರಾಗಲಿ.
11 ಅವನಿಗೆ ಸಾಲಕೊಟ್ಟವರು ಅವನ ಆಸ್ತಿಯನ್ನೆಲ್ಲಾ ಕಸಿದುಕೊಳ್ಳಲಿ.
ಅವನು ದುಡಿದು ಸಂಪಾದಿಸಿದ್ದೆಲ್ಲವನ್ನು ಪರರು ಸುಲಿದುಕೊಳ್ಳಲಿ.
12 ಅವನಿಗೆ ಯಾರೂ ಕೃಪೆತೋರದಿರಲಿ;
ಅವನ ಮಕ್ಕಳಿಗೂ ಯಾರೂ ಕರುಣೆತೋರದಿರಲಿ.
13 ಅವನನ್ನು ಸಂಪೂರ್ಣವಾಗಿ ನಾಶಮಾಡು.
ಮುಂದಿನ ತಲೆಮಾರಿನಲ್ಲಿಯೇ ಅವನ ಹೆಸರು ಇಲ್ಲವಾಗಲಿ.
14 ಯೆಹೋವನು ನನ್ನ ಶತ್ರುವಿನ ತಂದೆಯ ಪಾಪವನ್ನು ಮರೆಯದಿರಲಿ;
ಅವನ ತಾಯಿಯ ಪಾಪವು ಅಳಿದುಹೋಗದಿರಲಿ.
15 ಆ ಪಾಪಗಳನ್ನು ಯೆಹೋವನು ಯಾವಾಗಲೂ ಜ್ಞಾಪಕಮಾಡಿಕೊಳ್ಳಲಿ;
ಭೂಮಿಯ ಮೇಲೆ ಅವರ ನೆನಪೇ ಉಳಿಯದಂತೆ ಯೆಹೋವನು ಮಾಡಲಿ.
16 ಯಾಕೆಂದರೆ, ಆ ದುಷ್ಟನು ಯಾವ ಒಳ್ಳೆಯದನ್ನೂ ಮಾಡಲಿಲ್ಲ;
ಯಾರನ್ನೂ ಪ್ರೀತಿಸಲಿಲ್ಲ.
ಅವನು ಬಡಜನರಿಗೂ ಮತ್ತು ಅಸಹಾಯಕರಿಗೂ ಜೀವನವನ್ನು ಕಷ್ಟಕರವನ್ನಾಗಿ ಮಾಡಿದನು.
17 ಜನರನ್ನು ಶಪಿಸುವುದೇ ಅವನಿಗೆ ಇಷ್ಟವಾಗಿತ್ತು.
ಆದ್ದರಿಂದ ಆ ಶಾಪಗಳು ಅವನಿಗೇ ಸಂಭವಿಸಲಿ.
ಅವನು ಜನರನ್ನು ಆಶೀರ್ವದಿಸಲೇ ಇಲ್ಲ.
ಆದ್ದರಿಂದ ಅವನಿಗೆ ಒಳ್ಳೆಯದಾಗದಂತೆ ಮಾಡು.
18 ಅವನು ಉಡುಪುಗಳನ್ನು ಧರಿಸುವಂತೆ
ಶಪಿಸುವುದೇ ಅವನ ದಿನನಿತ್ಯ ಜೀವಿತದ ಕೆಲಸವಾಗಿತ್ತು.
19 ಆದ್ದರಿಂದ ಅವನು ಧರಿಸಿಕೊಳ್ಳುವ ನಿಲುವಂಗಿಯಂತೆ
ಶಾಪಗಳು ಅವನನ್ನು ಆವರಿಸಿಕೊಳ್ಳಲಿ;
ನಡುಪಟ್ಟಿಯಂತೆ ಯಾವಾಗಲೂ ಸುತ್ತಿಕೊಳ್ಳಲಿ.
20 ನನ್ನ ಶತ್ರುವಿಗೂ ನನ್ನನ್ನು ಕೊಲ್ಲಬೇಕೆಂದಿರುವವರಿಗೂ
ಯೆಹೋವನು ಅವುಗಳನ್ನು ಮಾಡಲಿ.
21 ಯೆಹೋವನೇ, ನೀನೇ ನನ್ನ ಒಡೆಯನು.
ಆದ್ದರಿಂದ ನಿನ್ನ ಹೆಸರಿನ ಘನತೆಗಾಗಿ ನನಗೆ ಸಹಾಯಮಾಡು.
ನಿನ್ನ ಶಾಶ್ವತವಾದ ಪ್ರೀತಿಯಿಂದ ನನ್ನನ್ನು ರಕ್ಷಿಸು.
22 ನಾನು ಕೇವಲ ಬಡವನೂ ಅಸಹಾಯಕನೂ ಆಗಿರುವೆ.
ನನ್ನ ಹೃದಯವು ನೊಂದು ದುಃಖಗೊಂಡಿದೆ.
23 ಸಂಜೆಯ ನೆರಳಿನಂತೆ ನನ್ನ ಜೀವಮಾನವು ಕೊನೆಗೊಳ್ಳುತ್ತಿದೆ;
ಗಾಳಿಯು ಬಡಿದುಕೊಂಡು ಹೋಗುವ ಮಿಡತೆಯಂತಾಗಿದ್ದೇನೆ.
24 ಹಸಿವೆಯಿಂದ ನನ್ನ ಮೊಣಕಾಲುಗಳು ಬಲಹೀನವಾಗಿವೆ.
ನನ್ನ ತೂಕ ಕಡಿಮೆಯಾಗುತ್ತಿದೆ; ನಾನು ತೆಳ್ಳಗಾಗುತ್ತಿದ್ದೇನೆ.
25 ಕೆಡುಕರು ನನ್ನನ್ನು ಗೇಲಿ ಮಾಡುವರು.
ಅವರು ನನ್ನನ್ನು ನೋಡಿ ತಲೆಯಾಡಿಸುವರು.
26 ನನ್ನ ದೇವರಾದ ಯೆಹೋವನೇ, ನನಗೆ ಸಹಾಯಮಾಡು!
ನಿನ್ನ ಶಾಶ್ವತವಾದ ಪ್ರೀತಿಯಿಂದ ನನ್ನನ್ನು ರಕ್ಷಿಸು.
27 ಯೆಹೋವನೇ, ಆಗ ಅವರು ಅದು ನಿನ್ನ ಕೈಕೆಲಸವೆಂದೂ
ಅದನ್ನು ಮಾಡಿದ್ದು ನೀನೇ ಎಂದೂ ತಿಳಿದುಕೊಳ್ಳುವರು.
28 ಆ ದುಷ್ಟರು ನನ್ನನ್ನು ಶಪಿಸುತ್ತಾರೆ; ಯೆಹೋವನೇ, ನೀನಾದರೋ ನನ್ನನ್ನು ಆಶೀರ್ವದಿಸುವೆ.
ನನಗೆ ವಿರೋಧವಾಗಿ ಎದ್ದಿರುವ ಅವರನ್ನು ಸೋಲಿಸು.
ಆಗ, ನಿನ್ನ ಸೇವಕನಾದ ನಾನು ಸಂತೋಷವಾಗಿರುವೆನು.
29 ನನ್ನ ಶತ್ರುಗಳಿಗೆ ಅವಮಾನವೇ ವಸ್ತ್ರವಾಗಲಿ!
ನಾಚಿಕೆಯೇ ಅವರ ಮೇಲಂಗಿಯಾಗಲಿ.
30 ನಾನು ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡುವೆನು.
ಜನಸಮೂಹದಲ್ಲಿ ಆತನನ್ನು ಕೊಂಡಾಡುವೆನು.
31 ಯಾಕೆಂದರೆ, ಆತನು ಅಸಹಾಯಕರ ಬಲಗಡೆಯಲ್ಲಿ ನಿಂತುಕೊಳ್ಳುವನು;
ಮರಣದಂಡನೆ ವಿಧಿಸಬೇಕೆಂದಿರುವ ಜನರಿಂದ ಅವರನ್ನು ರಕ್ಷಿಸುವನು.