36
ರಚನೆಗಾರ: ದಾವೀದ.
ದುಷ್ಟನು ಪಾಪದಿಂದ ಪ್ರಭಾವಿತನಾಗಿ, “ನಾನು ದೇವರಿಗೆ ಭಯಪಡುವುದೂ ಇಲ್ಲ
ಆತನನ್ನು ಗೌರವಿಸುವುದೂ ಇಲ್ಲ” ಎಂದುಕೊಳ್ಳುವನು.
ಅವನು ತನ್ನನ್ನು ವಂಚಿಸಿಕೊಳ್ಳುವನು.
ಅವನು ತನ್ನ ತಪ್ಪುಗಳನ್ನು ಕಾಣುವುದೂ ಇಲ್ಲ,
ಅವುಗಳಿಗಾಗಿ ಕ್ಷಮೆಯನ್ನು ಕೇಳುವುದೂ ಇಲ್ಲ.
ಅವನ ಮಾತುಗಳು ಕೇವಲ ಸುಳ್ಳುಗಳಾಗಿವೆ.
ಅವನು ಜ್ಞಾನಿಯಾಗುವುದೂ ಇಲ್ಲ, ಒಳ್ಳೆಯದನ್ನು ಕಲಿತುಕೊಳ್ಳುವುದೂ ಇಲ್ಲ.
ರಾತ್ರಿಯಲ್ಲಿ, ಅವನು ಕೇಡನ್ನೇ ಆಲೋಚಿಸುವನು.
ಮರುದಿನ ಮುಂಜಾನೆ ಎದ್ದಾಗ,
ಒಳ್ಳೆಯದನ್ನು ಮಾಡದೆ ಕೇಡನ್ನು ಮಾಡಲು ಸಿದ್ಧನಾಗಿರುವನು.
ಯೆಹೋವನೇ, ನಿನ್ನ ಪ್ರೀತಿಯು ಆಕಾಶಕ್ಕಿಂತಲೂ ಉನ್ನತವಾಗಿದೆ.
ನಿನ್ನ ನಂಬಿಗಸ್ತಿಕೆಯು ಮೇಘಗಳಿಗಿಂತಲೂ ಎತ್ತರವಾಗಿದೆ.
ನಿನ್ನ ನೀತಿಯು ಅತ್ಯುನ್ನತವಾದ ಬೆಟ್ಟಕ್ಕಿಂತಲೂ ಎತ್ತರವಾಗಿದೆ.
ನಿನ್ನ ನ್ಯಾಯವು ಮಹಾಸಾಗರಕ್ಕಿಂತಲೂ ಆಳವಾಗಿದೆ.
ಯೆಹೋವನೇ, ಮನುಷ್ಯರನ್ನೂ ಪ್ರಾಣಿಗಳನ್ನೂ ಕಾಪಾಡುವಾತನು ನೀನೇ.
ನಿನ್ನ ಶಾಶ್ವತವಾದ ಪ್ರೀತಿಗಿಂತ ಅಮೂಲ್ಯವಾದದ್ದು ಬೇರೊಂದಿಲ್ಲ.
ಜನರೂ ದೇವದೂತರೂ ನಿನ್ನನ್ನೇ ಆಶ್ರಯಿಸಿಕೊಳ್ಳುವರು.
ನಿನ್ನ ಆಲಯದ ಸಮೃದ್ಧಿಯಿಂದ ಅವರು ನವಚೈತನ್ಯವನ್ನು ಪಡೆದುಕೊಳ್ಳುವರು.
ನಿನ್ನ ಶ್ರೇಷ್ಠ ನದಿಯಲ್ಲಿ ಕುಡಿಯಲು ಅವರಿಗೆ ಆಸ್ಪದನೀಡು.
ಜೀವಬುಗ್ಗೆಯು ನಿನ್ನ ಬಳಿಯಿಂದ ಹರಿಯುವುದು!
ನಾವು ಬೆಳಕನ್ನು ನೋಡುವುದು ನಿನ್ನ ಬೆಳಕಿನಿಂದಲೇ.
10 ನಿನ್ನನ್ನು ಅರಿತುಕೊಂಡವರ ಮೇಲೆ ನಿನ್ನ ಪ್ರೀತಿಯು ನೆಲೆಸಿರಲಿ.
ಯಥಾರ್ಥವಂತರಿಗೆ ಒಳ್ಳೆಯದನ್ನು ಮಾಡು.
11 ಗರ್ವಿಷ್ಠರ ಬಲೆಗೆ ನನ್ನನ್ನು ಬೀಳಿಸಬೇಡ;
ದುಷ್ಟರ ಕೈಹಿಡಿತಕ್ಕೆ ನನ್ನನ್ನು ಸಿಕ್ಕಿಸಬೇಡ.
12 “ದುಷ್ಟರು ಬಿದ್ದು ಜಜ್ಜಲ್ಪಟ್ಟದ್ದು ಇಲ್ಲಿಯೇ.
ಅವರು ಮತ್ತೆಂದಿಗೂ ಮೇಲೇಳುವುದಿಲ್ಲ”
ಎಂದು ಅವರ ಸಮಾಧಿಯ ಮೇಲೆ ಬರೆಯಿಸು.