4
ರಚನೆಗಾರ: ದಾವೀದ.
1 ನೀತಿಸ್ವರೂಪನಾದ ದೇವರೇ, ನನ್ನ ಪ್ರಾರ್ಥನೆಗೆ ಉತ್ತರಿಸು!
ನನ್ನ ಮೊರೆಗೆ ಕಿವಿಗೊಟ್ಟು ನನ್ನನ್ನು ಕರುಣಿಸು!
ಇಕ್ಕಟ್ಟುಗಳಿಂದ ನನ್ನನ್ನು ಬಿಡಿಸಿ
ಸುರಕ್ಷಿತ ಸ್ಥಳದಲ್ಲಿ ಸೇರಿಸು.
2 ಜನರೇ, ಇನ್ನೆಷ್ಟರವರೆಗೆ ನನ್ನ ಬಗ್ಗೆ ಕೆಟ್ಟದ್ದನ್ನು ಹೇಳುವಿರಿ?
ಅಸತ್ಯವನ್ನೇ ಪ್ರೀತಿಸುತ್ತಾ, ನನ್ನ ಮೇಲೆ ಹೊರಿಸಲು ಸುಳ್ಳುಅಪವಾದಗಳಿಗಾಗಿ ಯಾಕೆ ಹುಡುಕುತ್ತಿದ್ದೀರಿ?
3 ಯೆಹೋವನು ತನ್ನ ಭಕ್ತನನ್ನು ತನಗೋಸ್ಕರ ಪ್ರತ್ಯೇಕಿಸಿಕೊಂಡಿದ್ದಾನೆಂಬುದು ನಿಮಗೆ ತಿಳಿದಿರಲಿ.
ನಾನು ಮೊರೆಯಿಡುವಾಗಲೆಲ್ಲಾ ಆತನು ನನಗೆ ಕಿವಿಗೊಡುತ್ತಾನೆ.
4 ನೀವು ಕೋಪದಿಂದಿರುವಾಗ ಎಚ್ಚರಿಕೆಯಾಗಿದ್ದು ಪಾಪಮಾಡದಿರಿ.
ಹಾಸಿಗೆಯ ಮೇಲಿರುವಾಗ ಹೃದಯಗಳನ್ನು ಪರೀಕ್ಷಿಸಿಕೊಳ್ಳಿರಿ.
5 ದೇವರಿಗೆ ಯೋಗ್ಯವಾದ ಯಜ್ಞಗಳನ್ನು ಅರ್ಪಿಸಿರಿ;
ಯೆಹೋವನಲ್ಲಿಯೇ ಭರವಸೆಯಿಡಿರಿ!
6 “ನಮಗೆ ಒಳ್ಳೆಯದನ್ನು ಯಾರು ತೋರಿಸುವರು?
ಯೆಹೋವನೇ, ನಿನ್ನ ಪ್ರಕಾಶಮಾನವಾದ ಮುಖವನ್ನು ನಾವು ನೋಡುವಂತಾಗಲಿ!” ಎಂದು ಅನೇಕರು ಅಂದುಕೊಳ್ಳುವರು.
7 ಧಾನ್ಯಯವೂ ದ್ರಾಕ್ಷಿಯೂ ಸಮೃದ್ಧಿಯಾಗಿ ಬೆಳೆದ ಸುಗ್ಗಿಕಾಲದಲ್ಲಿ ಜನರಲ್ಲಿರುವ ಸಂತೋಷಕ್ಕಿಂತಲೂ ಅಧಿಕವಾದ ಆನಂದವನ್ನು ನೀನು ನನ್ನ ಹೃದಯದಲ್ಲಿ ತುಂಬಿರುವೆ.
8 ನಾನು ಹಾಸಿಗೆಯ ಮೇಲೆ ಸಮಾಧಾನದಿಂದ ನಿದ್ರಿಸುವೆನು.
ಯಾಕೆಂದರೆ, ಯೆಹೋವನೇ, ನನ್ನನ್ನು ಕಾಪಾಡುವಾತನು ನೀನೇ.