51
ದಾವೀದನು ಬತ್ಷೆಬಳೊಂದಿಗೆ ವ್ಯಭಿಚಾರ ಮಾಡಿದಾಗ ಪ್ರವಾದಿಯಾದ ನಾತಾನನು ದಾವೀದನ ಬಳಿಗೆ ಹೋಗಿ ದೇವರ ನ್ಯಾಯತೀರ್ಪನ್ನು ಹೇಳುತ್ತಾನೆ. ಆಗ ಈ ಕೀರ್ತನೆ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.
ಪ್ರೀತಿಸ್ವರೂಪನಾದ ದೇವರೇ, ನನಗೆ ಕರುಣೆತೋರು;
ಕರುಣಾನಿಧಿಯೇ, ನನ್ನ ಪಾಪಗಳನ್ನೆಲ್ಲಾ ಅಳಿಸಿಬಿಡು.
ನನ್ನ ದೋಷವನ್ನು ತೊಳೆದುಬಿಡು.
ನನ್ನ ಪಾಪವನ್ನು ಪರಿಹರಿಸಿ ನನ್ನನ್ನು ಮತ್ತೆ ಶುದ್ಧೀಕರಿಸು!
ನಾನು ಪಾಪಮಾಡಿದ್ದೇನೆಂದು ನನಗೆ ಗೊತ್ತಿದೆ.
ಆ ಪಾಪಗಳು ನನ್ನ ಮುಂದೆಯೇ ಇವೆ.
ನಿನ್ನ ದೃಷ್ಟಿಗೆ ಕೆಟ್ಟದ್ದಾಗಿದ್ದನ್ನೇ ಮಾಡಿದ್ದೇನೆ.
ಹೌದು, ನಾನು ಪಾಪ ಮಾಡಿದ್ದು ನಿನಗೇ.
ನಾನು ತಪ್ಪಿತಸ್ಥನೆಂತಲೂ ನೀನು ನೀತಿವಂತನೆಂತಲೂ
ಜನರಿಗೆ ಗೊತ್ತಾಗಲೆಂದೇ ಇವುಗಳನ್ನು ಅರಿಕೆಮಾಡಿಕೊಳ್ಳುತ್ತಿದ್ದೇನೆ.
ನಿನ್ನ ತೀರ್ಪುಗಳು ನ್ಯಾಯಬದ್ಧವಾಗಿವೆ.
ಹುಟ್ಟಿದಂದಿನಿಂದ ನಾನು ಪಾಪಿಯೇ.
ಮಾತೃಗರ್ಭವನ್ನು ಪ್ರವೇಶಿಸಿದ ದಿನದಿಂದ ನಾನು ದ್ರೋಹಿಯೇ.
ದೇವರೇ, ನಾನು ನಿನಗೆ ನಂಬಿಗಸ್ತನಾಗಿರಬೇಕೆಂಬುದೇ ನಿನ್ನ ಅಪೇಕ್ಷೆ.
ಆದ್ದರಿಂದ ಸುಜ್ಞಾನದ ರಹಸ್ಯಗಳನ್ನು ನನಗೆ ಉಪದೇಶಿಸು.
ಹಿಸ್ಸೋಪ್ ಗಿಡದ ಬರಲಿನಿಂದ ನನ್ನನ್ನು ತೊಳೆದು ಶುದ್ಧೀಕರಿಸು;
ನಾನು ಹಿಮಕ್ಕಿಂತಲೂ ಬಿಳುಪಾಗುವ ತನಕ ನನ್ನನ್ನು ತೊಳೆ!
ನನ್ನಲ್ಲಿ ಆನಂದವನ್ನೂ ಉಲ್ಲಾಸವನ್ನೂ ಬರಮಾಡು.
ನೀನು ಜಜ್ಜಿಹಾಕಿದ ಮೂಳೆಗಳು ಮತ್ತೆ ಉಲ್ಲಾಸಿಸಲಿ!
ನನ್ನ ಪಾಪಗಳನ್ನು ನೋಡಬೇಡ!
ಅವುಗಳನ್ನೆಲ್ಲ ಅಳಿಸಿಬಿಡು!
10 ದೇವರೇ, ನನ್ನಲ್ಲಿ ಶುದ್ಧ ಹೃದಯವನ್ನು ನಿರ್ಮಿಸು!
ನನ್ನ ಆತ್ಮವನ್ನು ಮತ್ತೆ ಬಲಗೊಳಿಸಿ ನನ್ನನ್ನು ನೂತನಪಡಿಸು.
11 ನಿನ್ನ ಸನ್ನಿಧಿಯಿಂದ ನನ್ನನ್ನು ತಳ್ಳಿಬಿಡಬೇಡ!
ನಿನ್ನ ಪವಿತ್ರಾತ್ಮನನ್ನು ನನ್ನಿಂದ ತೆಗೆಯಬೇಡ!
12 ನಿನ್ನ ರಕ್ಷಣೆಯಿಂದುಂಟಾಗುವ ಆನಂದವನ್ನು ನನಗೆ ಮತ್ತೆ ದಯಪಾಲಿಸು!
ನಿನಗೆ ವಿಧೇಯನಾಗಿರಲು ನನ್ನ ಮನಸ್ಸನ್ನು ದೃಢಪಡಿಸು.
13 ನಿನ್ನ ಜೀವಮಾರ್ಗವನ್ನು ನಾನು ಪಾಪಿಗಳಿಗೆ ಉಪದೇಶಿಸುವೆನು;
ಆಗ ಅವರು ನಿನ್ನ ಬಳಿಗೆ ಹಿಂತಿರುಗಿ ಬರುವರು.
14 ದೇವರೇ, ನನ್ನನ್ನು ಮರಣದಂಡನೆಯಿಂದ ತಪ್ಪಿಸು.
ನನ್ನ ದೇವರೇ, ನನ್ನನ್ನು ರಕ್ಷಿಸುವಾತನು ನೀನೇ.
ನಿನ್ನ ಒಳ್ಳೆಯತನವನ್ನು ಕುರಿತು ನಾನು ಹಾಡುವೆನು!
15 ನನ್ನ ಯೆಹೋವನೇ, ನನ್ನ ಬಾಯಿ ತೆರೆದು ನಿನ್ನನ್ನು ಕೊಂಡಾಡುವಂತೆ ನನ್ನ ತುಟಿಗಳನ್ನು ತೆರೆಯಮಾಡು.
16 ನಿನಗೆ ನಿಜವಾಗಿಯೂ ಬೇಕಾದದ್ದು ಯಜ್ಞಗಳಲ್ಲ.
ಹೀಗಿರಲು ನಿನಗೆ ಇಷ್ಟವೇ ಇಲ್ಲದ ಯಜ್ಞಗಳನ್ನು ನಾನೇಕೆ ಅರ್ಪಿಸಲಿ!
17 ದೇವರೇ, ನೀನು ಅಪೇಕ್ಷಿಸುವ ಯಜ್ಞ ದೀನ ಮನಸ್ಸೇ.
ದೀನತೆ ಮತ್ತು ವಿಧೇಯತೆಯುಳ್ಳ ಹೃದಯವನ್ನು ನೀನು ತಿರಸ್ಕರಿಸುವುದಿಲ್ಲ.
18 ಚೀಯೋನಿಗೆ ಕರುಣೆತೋರಿ
ಜೆರುಸಲೇಮಿನ ಕೋಟೆಗಳನ್ನು ಮತ್ತೆ ನಿರ್ಮಿಸು.
19 ಆಗ ಜನರು ಯಜ್ಞಗಳನ್ನೂ ಸರ್ವಾಂಗಹೋಮಗಳನ್ನೂ ಅರ್ಪಿಸಿ
ನಿನಗೆ ಸಂತೋಷವನ್ನು ಉಂಟು ಮಾಡುವರು.
ಜನರು ನಿನ್ನ ಯಜ್ಞವೇದಿಕೆಯ ಮೇಲೆ ಹೋರಿಗಳನ್ನು ಮತ್ತೆ ಅರ್ಪಿಸುವರು.