ಮೂರನೆ ಭಾಗ
73
(ಕೀರ್ತನೆಗಳು 73-89)
ಸ್ತುತಿಗೀತೆ. ರಚನೆಗಾರ: ಆಸಾಫ.
ದೇವರು ಇಸ್ರೇಲಿಗೆ ಒಳ್ಳೆಯವನೇ ನಿಜ!
ಶುದ್ಧ ಹೃದಯವುಳ್ಳವರಿಗೆ ದೇವರು ಒಳ್ಳೆಯವನೇ ಸರಿ!
ಆದರೆ ನನ್ನ ಕಾಲುಗಳು ಜಾರಿದವು;
ನನ್ನ ಹೆಜ್ಜೆಗಳು ತಪ್ಪಿದವು.
ದುಷ್ಟರ ಏಳಿಗೆಯನ್ನು ಕಂಡು
ಗರ್ವಿಷ್ಠರ ಮೇಲೆ ಅಸೂಯೆಗೊಂಡೆನು.
ಅವರು ಆರೋಗ್ಯವಂತರಾಗಿದ್ದಾರೆ.
ಜೀವನೋಪಾಯಕ್ಕಾಗಿ ಅವರು ಹೋರಾಡಬೇಕಿಲ್ಲ.*
ಆ ಗರ್ವಿಷ್ಠರು ನಮ್ಮಂತೆ ಕಷ್ಟಪಡುವುದಿಲ್ಲ.
ಅವರಿಗೆ ಬೇರೆಯವರಂತೆ ತೊಂದರೆಗಳಿಲ್ಲ.
ಆದ್ದರಿಂದ ಗರ್ವವು ಅವರಿಗೆ ಆಭರಣವಾಗಿದೆ;
ದ್ವೇಷವು ಅವರಿಗೆ ಉಡುಪಾಗಿದೆ.
ಅವರ ಕಣ್ಣುಗಳು ಕೊಬ್ಬಿವೆ;
ಅವರ ಮನಸ್ಸು ದುಷ್ಕಲ್ಪನೆಗಳಿಂದ ತುಂಬಿತುಳುಕುತ್ತದೆ.
ಅವರು ಗೇಲಿಮಾಡುತ್ತಾ ಬೇರೆಯವರ ವಿರುದ್ಧ ಕೆಟ್ಟದ್ದನ್ನೇ ಮಾತಾಡುವರು.
ಗರ್ವಿಷ್ಠರಾದ ಅವರು ಬೇರೆಯವರ ಮೇಲೆ ಬಲಾತ್ಕಾರ ನಡೆಸಲು ಸಂಚು ಮಾಡುವರು.
ಆ ಗರ್ವಿಷ್ಠರು ತಮ್ಮನ್ನು ದೇವರುಗಳೆಂದು ಭಾವಿಸಿಕೊಂಡಿದ್ದಾರೆ,
ತಾವೇ ಭೂಮಿಯ ಅಧಿಪತಿಗಳೆಂದು ಆಲೋಚಿಸಿಕೊಂಡಿದ್ದಾರೆ.
10 ಆದ್ದರಿಂದ ದೇವರ ಮಕ್ಕಳೂ ಅವರ ಪಕ್ಷ ಹಿಡಿಯುವರು;
ಅವರು ಹೇಳಿದಂತೆಯೇ ಮಾಡುವರು.
11 “ನಮ್ಮ ಕಾರ್ಯಗಳು ದೇವರಿಗೆ ಗೊತ್ತಿಲ್ಲ! ಮಹೋನ್ನತನಾದ ದೇವರಿಗೆ ಗೊತ್ತೇ ಇಲ್ಲ!”
ಎಂದು ಆ ದುಷ್ಟರು ಹೇಳಿಕೊಳ್ಳುವರು.
12 ಆ ಗರ್ವಿಷ್ಠರು ದುಷ್ಟರೇ ಸರಿ!
ಆದರೂ ಅವರ ಐಶ್ವರ್ಯವು ಹೆಚ್ಚಾಗುತ್ತಲೇ ಇದೆ.
13 ಹೀಗಿರಲು, ನನ್ನ ಹೃದಯವನ್ನು ನಾನೇಕೆ ನಿರ್ಮಲಗೊಳಿಸಿಕೊಳ್ಳಲಿ?
ನನ್ನ ಕೈಗಳನ್ನು ನಾನೇಕೆ ಸ್ವಚ್ಛಗೊಳಿಸಿಕೊಳ್ಳಲಿ?
14 ದೇವರೇ ದಿನವೆಲ್ಲಾ ನಾನು ಕಷ್ಟಪಡುತ್ತಿರುವೆ.
ಪ್ರತಿ ಮುಂಜಾನೆಯೂ ನೀನು ನನ್ನನ್ನು ಶಿಕ್ಷಿಸುವೆ.
15 ಇವುಗಳ ಬಗ್ಗೆ ನಾನು ಬೇರೆಯವರಿಗೆ ಹೇಳಬೇಕೆಂದಿದ್ದೆ.
ಒಂದುವೇಳೆ ಹೇಳಿದ್ದರೆ, ನಿನ್ನ ಜನರಿಗೆ ದ್ರೋಹಿಯಾಗುತ್ತಿದ್ದೆ.
16 ಇವುಗಳನ್ನು ಅರ್ಥಮಾಡಿಕೊಳ್ಳಲು ನಾನು ಬಹಳವಾಗಿ ಪ್ರಯತ್ನಿಸಿದರೂ
ನಿನ್ನ ಆಲಯಕ್ಕೆ ಹೋಗುವವರೆಗೂ ಕಷ್ಟಕರವಾಗಿತ್ತು.
17 ಆದರೆ ನಿನ್ನ ಆಲಯಕ್ಕೆ ಹೋದಮೇಲೆ
ನನಗೆ ಅರ್ಥವಾಯಿತು.
18 ನೀನು ಅವರನ್ನು ಅಪಾಯಕರವಾದ ಪರಿಸ್ಥಿತಿಯಲ್ಲಿ ಇಟ್ಟಿರುವೆ.
ಅವರು ಸುಲಭವಾಗಿ ಬಿದ್ದು ನಾಶವಾಗುವರು.
19 ಇದ್ದಕ್ಕಿದ್ದಂತೆ ಆಪತ್ತು ಬರುವುದು,
ಆಗ ಆ ಗರ್ವಿಷ್ಠರು ನಾಶವಾಗುವರು.
ಭಯಂಕರವಾದ ಸಂಗತಿಗಳು ಅವರಿಗೆ ಸಂಭವಿಸುತ್ತವೆ;
ಆಗ ಅವರು ಅಂತ್ಯಗೊಳ್ಳುವರು.
20 ಯೆಹೋವನೇ, ನಾವು ನಿದ್ರೆಯಿಂದ ಎಚ್ಚರಗೊಂಡಾಗ
ಮರೆತುಬಿಡುವ ಕನಸಿನಂತಿದ್ದಾರೆ ಆ ಜನರು.
ನಾವು ಕನಸಿನಲ್ಲಿ ಕಾಣುವ ರಾಕ್ಷಸರಂತೆ
ನೀನು ಅವರನ್ನು ಮಾಯಗೊಳಿಸುವೆ.
21-22 ನಾನು ಬಹು ಮೂಢನಾಗಿದ್ದೆ.
ಶ್ರೀಮಂತರ ಕುರಿತಾಗಿಯೂ ದುಷ್ಟರ ಕುರಿತಾಗಿಯೂ ಆಲೋಚಿಸಿ ಗಲಿಬಿಲಿಗೊಂಡೆ.
ದೇವರೇ, ನಾನು ನಿನ್ನ ಮೇಲೆ ಕೋಪಗೊಂಡಿದ್ದೆನು; ಬೇಸರಗೊಂಡಿದ್ದೆನು!
ನಾನು ಮೂಢ ಪಶುವಿನಂತೆ ವರ್ತಿಸಿದೆನು.
23 ಆದರೂ ನಾನು ಯಾವಾಗಲೂ ನಿನ್ನ ಸಂಗಡವಿದ್ದೇನೆ.
ನನ್ನ ಕೈಯನ್ನು ಹಿಡಿದುಕೊ.
24 ನನಗೆ ಉಪದೇಶಿಸುತ್ತಾ ನನ್ನನ್ನು ಮುನ್ನಡೆಸು.
ಬಳಿಕ ನಿನ್ನ ಮಹಿಮೆಗೆ ನನ್ನನ್ನು ಸೇರಿಸಿಕೊ.
25 ಪರಲೋಕದಲ್ಲಿ ನೀನಲ್ಲದೆ ನನಗೆ ಬೇರೆ ಯಾರ ಅಗತ್ಯವಿದೆ?
ಈ ಲೋಕದಲ್ಲಿ ನಿನ್ನನ್ನಲ್ಲದೆ ಬೇರೆ ಯಾರನ್ನು ಬಯಸಲಿ?
26 ನನ್ನ ಹೃದಯವೂ ದೇಹವೂ ನಾಶವಾಗುತ್ತವೆ;
ಆದರೆ ಎಂದೆಂದಿಗೂ ನೀನೇ ನನಗೆ ಆಶ್ರಯಸ್ಥಾನವೂ
ನನ್ನ ದೇವರೂ ಆಗಿರುವೆ.
27 ನಿನ್ನನ್ನು ತೊರೆದುಬಿಟ್ಟವರು ನಾಶವಾಗುವರು.
ನಿನಗೆ ದ್ರೋಹಮಾಡಿದವರನ್ನೆಲ್ಲ ನೀನು ನಾಶಮಾಡುವೆ.
28 ನನಗಾದರೋ ದೇವರ ಸಮೀಪದಲ್ಲಿರುವುದೇ ಭಾಗ್ಯವಾಗಿದೆ.
ನನ್ನ ಒಡೆಯನಾದ ಯೆಹೋವನನ್ನು ನನ್ನ ಆಶ್ರಯಸ್ಥಾನವನ್ನಾಗಿ ಮಾಡಿಕೊಂಡಿರುವೆ.
ದೇವರೇ, ನಿನ್ನ ಎಲ್ಲಾ ಕಾರ್ಯಗಳ ಕುರಿತಾಗಿ ಹೇಳಲು ಬಂದಿರುವೆ.

* 73:4: ಅವರು ಹೋರಾಡಬೇಕಿಲ್ಲ ಅಕ್ಷರಶಃ, “ಅವರ ಮರಣವು ನಿರ್ಬಾಧಕವಾಗಿದೆ.”