9
ರಚನೆಗಾರ: ದಾವೀದ.
ಯೆಹೋವನೇ, ಪೂರ್ಣಹೃದಯದಿಂದ ನಿನ್ನನ್ನು ಕೊಂಡಾಡುವೆನು.
ನಿನ್ನ ಅದ್ಭುತಕಾರ್ಯಗಳನ್ನೆಲ್ಲಾ ವರ್ಣಿಸುವೆನು.
ದೇವರೇ, ನಿನ್ನಲ್ಲಿ ನಾನು ಸಂತೋಷಿಸುತ್ತಾ ಉಲ್ಲಾಸಪಡುವೆನು.
ಮಹೋನ್ನತನೇ, ನಿನ್ನ ಹೆಸರನ್ನೇ ಸಂಕೀರ್ತಿಸುವೆನು.
ನನ್ನ ವೈರಿಗಳು ನಿನ್ನ ಎದುರಿನಿಂದ ಹಿಂತಿರುಗಿ ಓಡಿಹೋದರು.
ಆದರೆ ಅವರು ಬಿದ್ದು ನಾಶವಾದರು.
ನೀನು ನೀತಿವಂತನಾದ ನ್ಯಾಯಾಧಿಪತಿ.
ಸಿಂಹಾಸನದ ಮೇಲೆ ಕುಳಿತು ನೀನು ನ್ಯಾಯತೀರಿಸುವೆ.
ನೀನು ನನ್ನ ಮೊಕದ್ದಮೆಯನ್ನು ಕೇಳಿ ನನ್ನ ವಿಷಯದಲ್ಲಿ ತೀರ್ಪು ಮಾಡಿರುವೆ.
ನೀನು ಜನಾಂಗಗಳನ್ನು ಟೀಕಿಸಿ ಆ ದುಷ್ಟರನ್ನು ನಾಶಮಾಡಿದೆ.
ನೀನು ಅವರ ಹೆಸರುಗಳನ್ನು ಜೀವಿತರ ಪಟ್ಟಿಯಿಂದ ಶಾಶ್ವತವಾಗಿ ಅಳಿಸಿಹಾಕಿರುವೆ.
ವೈರಿಗಳು ಇಲ್ಲವಾದರು.
ನೀನು ಅವರ ನಗರಗಳನ್ನು ನಾಶಮಾಡಿದೆ!
ಈಗ ಹಾಳಾದ ಕಟ್ಟಡಗಳು ಮಾತ್ರ ಉಳಿದಿವೆ; ದುಷ್ಟರನ್ನು ಜ್ಞಾಪಕಕ್ಕೆ ತರುವ ಯಾವುದೂ ಉಳಿದಿಲ್ಲ.
ಯೆಹೋವನಾದರೋ ಶಾಶ್ವತವಾಗಿ ಆಳುವನು.
ಆತನು ಭೂಲೋಕಕ್ಕೆ ನ್ಯಾಯದೊರಕಿಸುವುದಕ್ಕಾಗಿ ತನ್ನ ರಾಜ್ಯವನ್ನು ಬಲಗೊಳಿಸಿದ್ದಾನೆ.
ಆತನು ಭೂನಿವಾಸಿಗಳಿಗೆಲ್ಲಾ ನ್ಯಾಯವಾಗಿ ತೀರ್ಪುಮಾಡುವನು.
ಆತನು ಜನಾಂಗಗಳಿಗೆಲ್ಲಾ ಯಥಾರ್ಥವಾಗಿ ತೀರ್ಪುಮಾಡುವನು.
ಯೆಹೋವನು ಕುಗ್ಗಿಹೋದವರಿಗೆ ಆಶ್ರಯಸ್ಥಾನವೂ
ಇಕ್ಕಟ್ಟಿನಲ್ಲಿರುವವರಿಗೆ ಆಶ್ರಯದುರ್ಗವೂ ಆಗಿದ್ದಾನೆ.
10 ಯೆಹೋವನೇ, ನಿನ್ನ ಹೆಸರನ್ನು ಬಲ್ಲವರು ನಿನ್ನಲ್ಲಿ ಭರವಸೆಯಿಡುವರು.
ಯಾಕೆಂದರೆ ನಿನ್ನ ಸಹಾಯಕ್ಕಾಗಿ ಬರುವವರನ್ನು ನೀನು ತೊರೆದುಬಿಡುವುದಿಲ್ಲ.
11 ಚೀಯೋನಿನ ನಿವಾಸಿಗಳೇ, ಯೆಹೋವನನ್ನು ಸಂಕೀರ್ತಿಸಿರಿ.
ಆತನ ಮಹತ್ಕಾರ್ಯಗಳನ್ನು ಜನಾಂಗಗಳಲ್ಲಿ ಪ್ರಕಟಿಸಿರಿ.
12 ಪ್ರಾಣಾಪರಾಧಕ್ಕೆ ಮುಯ್ಯಿತೀರಿಸುವ ಆತನು
ಕುಗ್ಗಿಹೋದವರ ಮೊರೆಯನ್ನು ಮರೆಯದೆ ಅವರನ್ನು ಜ್ಞಾಪಿಸಿಕೊಂಡನು.
13 “ಯೆಹೋವನೇ, ನನ್ನನ್ನು ಕನಿಕರಿಸು.
ಇಗೋ, ವೈರಿಗಳು ನನಗೆ ಕೇಡುಮಾಡುತ್ತಿದ್ದಾರೆ.
‘ಮರಣ ದ್ವಾರ’ದಿಂದ ತಪ್ಪಿಸಿ ಕಾಪಾಡು.”
14 ಆಗ ಜೆರುಸಲೇಮಿನ ದ್ವಾರಗಳ ಬಳಿಯಲ್ಲಿ ನಿನ್ನನ್ನು ಸಂಕೀರ್ತಿಸುವೆನು.
ನೀನು ನನ್ನನ್ನು ರಕ್ಷಿಸಿದ್ದರಿಂದ ಹರ್ಷಿಸುವೆನು.
15 ಅನ್ಯಜನಾಂಗಗಳವರು ತಾವು ತೋಡಿದ ಕುಣಿಗಳಲ್ಲಿ ತಾವೇ ಬಿದ್ದುಹೋಗುವರು;
ತಾವು ಹಾಸಿದ ಬಲೆಗಳಲ್ಲಿ ತಾವೇ ಸಿಕ್ಕಿಬೀಳುವರು.
16 ಯೆಹೋವನು ಅವರನ್ನು ಅವರ ಕುಯುಕ್ತಿಯಲ್ಲಿಯೇ ಸಿಕ್ಕಿಸಿದ್ದರಿಂದ
ಆತನ ನೀತಿಯು ಪ್ರಖ್ಯಾತವಾಯಿತು.
17 ದೇವರನ್ನು ಅಲಕ್ಷ್ಯ ಮಾಡುವ ಜನರೆಲ್ಲ ಕೆಟ್ಟವರು.
ಅವರು ಮರಣದ ಸ್ಥಳಕ್ಕೆ ಹೋಗುವರು.
18 ಕೆಲವೊಮ್ಮೆ, ಇಕ್ಕಟ್ಟಿನಲ್ಲಿರುವವರನ್ನು ದೇವರು ಮರೆತಿರುವಂತೆ ಕಾಣುತ್ತದೆ;
ಕುಗ್ಗಿಹೋದ ಅವರಿಗೆ ನಿರೀಕ್ಷೆಯೇ ಇಲ್ಲದಂತೆ ಕಂಡರೂ
ದೇವರು ಅವರನ್ನು ಮರೆತುಬಿಡುವುದಿಲ್ಲ.
19 ಯೆಹೋವನೇ, ಎದ್ದೇಳು! ಜನಾಂಗಗಳಿಗೆ ನ್ಯಾಯತೀರಿಸು.
ಅವರು ಬಲಿಷ್ಠರಾಗಕೂಡದು.
20 ಯೆಹೋವನೇ, ಅವರಿಗೆ ಭಯಹುಟ್ಟಿಸು;
ತಾವು ಕೇವಲ ಮನುಷ್ಯರೆಂಬುದನ್ನು ಅವರು ಗ್ರಹಿಸಿಕೊಳ್ಳಲಿ.