ದೇವಾಲಯದ ನಕ್ಷೆ
28
ದಾವೀದನು ತನ್ನ ರಾಜ್ಯದಲ್ಲಿದ್ದ ಎಲ್ಲಾ ನಾಯಕರನ್ನು ಅಂದರೆ ಕುಲಪ್ರಧಾನರನ್ನು, ಪ್ರಧಾನಸೇನಾಧಿಪತಿಗಳನ್ನು, ಮಹಾಸೇನಾಧಿಪತಿಗಳನ್ನು ಮತ್ತು ಸೇನಾಧಿಪತಿಗಳನ್ನು, ರಾಜನಿಗೂ ಅವನ ಗಂಡುಮಕ್ಕಳಿಗೂ ಸೇರಿದ ಆಸ್ತಿಯನ್ನು ಮತ್ತು ಪಶುಗಳನ್ನು ನೋಡಿಕೊಳ್ಳುತ್ತಿದ್ದ ಅಧಿಕಾರಿಗಳನ್ನು; ರಾಜನ ಪ್ರಮುಖ ಅಧಿಕಾರಿಗಳನ್ನು; ಬಲಿಷ್ಠ ಯುದ್ಧವೀರರನ್ನು ಮತ್ತು ಧೈರ್ಯವಂತರಾದ ಸೈನಿಕರನ್ನು ಜೆರುಸಲೇಮಿಗೆ ಕರೆಸಿ ಸಭೆಸೇರಿಸಿದನು.
ಎಲ್ಲರೂ ಸೇರಿಬಂದಾಗ ದಾವೀದನು ನಿಂತು ಹೇಳಿದ್ದೇನೆಂದರೆ, “ನನ್ನ ಜನರೇ, ನನ್ನ ಸಹೋದರರೇ, ನನ್ನ ಮಾತುಗಳನ್ನು ಕೇಳಿರಿ. ನಮ್ಮ ದೇವರ ಒಡಂಬಡಿಕೆಯ ಪೆಟ್ಟಿಗೆಗೋಸ್ಕರ ಒಂದು ಯೋಗ್ಯಸ್ಥಳವನ್ನು ನಿರ್ಮಿಸಬೇಕೆಂದು ನನ್ನ ಮನಸ್ಸಿನಲ್ಲಿತ್ತು. ಆ ಸ್ಥಳವು ದೇವರ ಪಾದಪೀಠವಾಗಬೇಕು. ಅದಕ್ಕಾಗಿ ನಾನು ದೇವರಿಗೆ ಆಲಯವನ್ನು ಕಟ್ಟಿಸಲು ಯೋಜನೆಯನ್ನು ಹಾಕಿದೆನು. ಆದರೆ ದೇವರು ನನಗೆ, ‘ದಾವೀದನೇ, ನೀನು ನನ್ನ ಹೆಸರಿಗಾಗಿ ಆಲಯವನ್ನು ಕಟ್ಟಬಾರದು. ಯಾಕೆಂದರೆ ನೀನೊಬ್ಬ ರಣವೀರನಾಗಿದ್ದುದರಿಂದ ಎಷ್ಟೋ ಮಂದಿಯನ್ನು ಕೊಂದು ಅವರ ರಕ್ತಸುರಿಸಿರುವೆ’ ಎಂದು ಹೇಳಿದನು.
“ಇಸ್ರೇಲರ ದೇವರಾದ ಯೆಹೋವನು ಇಸ್ರೇಲರ ಹನ್ನೆರಡು ಕುಲಗಳನ್ನು ಮುನ್ನಡೆಸಲು ಯೆಹೂದ ಕುಲವನ್ನು ಆರಿಸಿಕೊಂಡಿದ್ದಾನೆ. ಆ ಕುಲದಿಂದ ದೇವರು ನನ್ನ ತಂದೆಯ ಕುಟುಂಬವನ್ನು ಆರಿಸಿದ್ದಾನೆ; ಆ ಕುಟುಂಬದಿಂದ ದೇವರು ಇಸ್ರೇಲರ ಅರಸನನ್ನಾಗಿ ನನ್ನನ್ನು ಆರಿಸಿಕೊಂಡಿದ್ದಾನೆ. ಯೆಹೋವನು ನನಗೆ ಅನೇಕ ಮಕ್ಕಳನ್ನು ಕೊಟ್ಟನು. ಆ ಮಕ್ಕಳಲ್ಲಿ ಯೆಹೋವನು ಸೊಲೊಮೋನನನ್ನು ನನ್ನ ನಂತರ ಇಸ್ರೇಲರ ಅರಸನನ್ನಾಗಿ ಆರಿಸಿಕೊಂಡಿದ್ದಾನೆ. ಆದರೆ ನಿಜವಾಗಿಯೂ, ಇಸ್ರೇಲ್, ದೇವರಾದ ಯೆಹೋವನ ರಾಜ್ಯವಾಗಿದೆ. ಯೆಹೋವನು ನನಗೆ, ‘ದಾವೀದನೇ, ನಿನ್ನ ಮಗನಾದ ಸೊಲೊಮೋನನು ದೇವಾಲಯವನ್ನು ಮತ್ತು ಅದರ ಸುತ್ತಮುತ್ತಲಿನ ಕಟ್ಟಡಗಳನ್ನು ಕಟ್ಟುವನು. ಯಾಕೆಂದರೆ ಸೊಲೊಮೋನನನ್ನು ನಾನು ಆರಿಸಿಕೊಂಡಿದ್ದೇನೆ. ಅವನು ನನಗೆ ಮಗನಾಗಿರುವನು; ನಾನು ಅವನಿಗೆ ತಂದೆಯಾಗಿರುವೆನು. ಸೊಲೊಮೋನನು ನನ್ನ ಕಟ್ಟಳೆಗಳಿಗೆ ಮತ್ತು ಆಜ್ಞೆಗಳಿಗೆ ವಿಧೇಯನಾಗಿದ್ದಾನೆ. ಅವನು ಹೀಗೆಯೇ ಮುಂದುವರಿದರೆ ನಾನು ಅವನ ರಾಜ್ಯವನ್ನು ಶಾಶ್ವತವಾಗಿ ಬಲಗೊಳಿಸುವೆನು’” ಎಂದು ಹೇಳಿದನು.
“ನಾನು ದೇವರ ಸನ್ನಿಧಾನದಲ್ಲಿಯೂ ಎಲ್ಲಾ ಇಸ್ರೇಲರ ಮುಂದೆಯೂ ನಿಮಗಿದನ್ನು ಹೇಳುತ್ತಿದ್ದೇನೆ. ನಿಮ್ಮ ದೇವರಾದ ಯೆಹೋವನ ಎಲ್ಲಾ ಆಜ್ಞೆಗಳಿಗೆ ವಿಧೇಯರಾಗಿರಿ. ಆಗ ನೀವು ಉತ್ತಮವಾದ ಈ ದೇಶವನ್ನು ಅನುಭವಿಸುವಿರಿ; ನಿಮ್ಮ ಸಂತತಿಯವರೂ ಇದರ ಸುಖವನ್ನು ಅನುಭವಿಸುವಂತೆ ಮಾಡುವಿರಿ.
“ನನ್ನ ಮಗನಾದ ಸೊಲೊಮೋನನೇ, ನಿನ್ನ ತಂದೆಯ ದೇವರನ್ನು ನೀನು ಚೆನ್ನಾಗಿ ಅರಿತುಕೋ. ನೀನು ಪೂರ್ಣಹೃದಯದಿಂದಲೂ ಪೂರ್ಣಮನಸ್ಸಿನಿಂದಲೂ ನಿನ್ನ ದೇವರನ್ನು ಸೇವಿಸು. ದೇವರು ಪ್ರತಿಯೊಬ್ಬನ ಹೃದಯ ಮನಸ್ಸುಗಳನ್ನು ನೋಡುತ್ತಾನೆ. ನೀನು ದೇವರ ಸಹಾಯವನ್ನು ಕೇಳಿದರೆ ಆತನು ನಿನ್ನ ಪ್ರಾರ್ಥನೆಯನ್ನು ಲಾಲಿಸುವನು. ಆದರೆ ನೀನು ದೇವರನ್ನು ಬಿಟ್ಟರೆ ಆತನು ನಿನ್ನನ್ನು ಬಿಟ್ಟುಹೋಗುವನು. 10 ಸೊಲೊಮೋನನೇ, ಆತನ ಪವಿತ್ರ ದೇವಾಲಯವನ್ನು ಕಟ್ಟಲು ದೇವರು ನಿನ್ನನ್ನು ಆರಿಸಿಕೊಂಡಿರುತ್ತಾನೆಂಬುದನ್ನು ನೀನು ತಿಳಿಯಬೇಕು. ಆದ್ದರಿಂದ ನೀನು ಬಲಗೊಂಡು ಕಾರ್ಯವನ್ನು ಸಂಪೂರ್ಣಗೊಳಿಸು.”
11 ಆ ಬಳಿಕ ದಾವೀದನು ತನ್ನ ಮಗನಾದ ಸೊಲೊಮೋನನಿಗೆ ದೇವಾಲಯದ ನಕ್ಷೆಯನ್ನು ಕೊಟ್ಟನು. ದೇವಾಲಯ ಮತ್ತು ಅದರ ಮಂಟಪ, ಉಗ್ರಾಣದ ಕೋಣೆಗಳು, ಮೇಲುಪ್ಪರಿಗೆ, ಒಳಗಿನ ಕೋಣೆಗಳು ಮತ್ತು ಕೃಪಾಸನದ ಮಂದಿರದ ನಕ್ಷೆಗಳನ್ನು ಕೊಟ್ಟನು. 12 ದೇವಾಲಯದ ಪ್ರತಿಯೊಂದು ಭಾಗದ ನಕ್ಷೆಯನ್ನು ದಾವೀದನು ತಯಾರಿಸಿದ್ದನು. ದೇವಾಲಯದ ಸುತ್ತಣ ಅಂಗಳಗಳ ನಕ್ಷೆ ಮತ್ತು ಸುತ್ತಲೂ ಇರುವ ಕೋಣೆಗಳ ನಕ್ಷೆಯನ್ನು ದೇವಾಲಯದ ಪವಿತ್ರ ವಸ್ತುಗಳನ್ನು ಇಡುವ ಕೋಣೆಗಳ ಯೋಜನೆಯನ್ನು ಮತ್ತು ನಕ್ಷೆಗಳನ್ನು ಸೊಲೊಮೋನನಿಗೆ ಕೊಟ್ಟನು. 13 ದಾವೀದನು ಸೊಲೊಮೋನನಿಗೆ ಲೇವಿಯರ ಮತ್ತು ಯಾಜಕರ ತಂಡದ ವಿಷಯವಾಗಿ ತಿಳಿಸಿದನು. ದೇವಾಲಯದ ಆರಾಧನಾ ಕ್ರಮಗಳನ್ನು ಅದಕ್ಕೆ ಸಂಬಂಧಪಟ್ಟ ವಿವಿಧ ವಿಷಯಗಳನ್ನು ಸೊಲೊಮೋನನಿಗೆ ದಾವೀದನು ವಿವರಿಸಿದನು. 14 ದೇವಾಲಯದಲ್ಲಿ ಎಲ್ಲಾ ಸಲಕರಣೆಗಳಿಗೆ ಎಷ್ಟು ಬೆಳ್ಳಿಬಂಗಾರಗಳು ಬೇಕಾಗುತ್ತವೆ ಎಂಬುದನ್ನು ದಾವೀದನು ಸೊಲೊಮೋನನಿಗೆ ತಿಳಿಸಿದನು. 15 ಬಂಗಾರದ ದೀಪಗಳಿಗೆ ಮತ್ತು ದೀಪಸ್ತಂಭಗಳಿಗೆ, ಬೆಳ್ಳಿಯ ದೀಪಗಳಿಗೆ ಮತ್ತು ದೀಪಸ್ತಂಭಗಳಿಗೆ ನಕ್ಷೆಗಳಿದ್ದವು. ಪ್ರತಿಯೊಂದು ದೀಪ ಮತ್ತು ದೀಪಸ್ತಂಭಗಳಿಗೆ ಬೇಕಾಗುವ ಬೆಳ್ಳಿಬಂಗಾರಗಳನ್ನು ಸಹ ದಾವೀದನು ಸೊಲೊಮೋನನಿಗೆ ತಿಳಿಸಿದನು. ಅವಶ್ಯಕತೆಗೆ ತಕ್ಕಂತೆ ಈ ದೀಪಸ್ತಂಭಗಳನ್ನು ಉಪಯೋಗಿಸಲಾಗುತ್ತಿತ್ತು. 16 ಪವಿತ್ರವಾದ ರೊಟ್ಟಿಯನ್ನು ಇಡುವ ಮೇಜನ್ನು ತಯಾರಿಸಲು ಎಷ್ಟು ಬಂಗಾರ ಬೇಕಾಗುತ್ತದೆ ಮತ್ತು ಬೆಳ್ಳಿಯಿಂದ ಮಾಡುವ ಮೇಜಿಗೆ ಎಷ್ಟು ಬೆಳ್ಳಿ ಬೇಕಾಗುತ್ತದೆ ಎಂಬುದನ್ನು ಸಹ ದಾವೀದನು ತಿಳಿಸಿದನು. 17 ಮುಳ್ಳುಚಮಚ, ಚಿಮಿಕಿಸುವ ಬೋಗುಣಿ ಮತ್ತು ಹೂಜೆಗಳಿಗೆ ಬೇಕಾಗುವ ಚೊಕ್ಕ ಬಂಗಾರವನ್ನು ದಾವೀದನು ತಿಳಿಸಿದನು; ಅಲ್ಲದೆ ಬೆಳ್ಳಿಬಂಗಾರಗಳಿಂದ ಮಾಡಬೇಕಾದ ಬೋಗುಣಿಗಳಿಗೆ ಎಷ್ಟು ಬೆಳ್ಳಿಬಂಗಾರಗಳು ಬೇಕಾಗುತ್ತದೆ ಎಂಬುದನ್ನು ತಿಳಿಸಿದನು. 18 ಧೂಪವೇದಿಗೆ ಎಷ್ಟು ಅಪ್ಪಟ ಬಂಗಾರ ಬೇಕೆಂಬುದನ್ನು ದಾವೀದನು ತಿಳಿಸಿದನು. ಇದಲ್ಲದೆ ದೇವರ ಕೃಪಾಸನವನ್ನು ಮತ್ತು ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯ ಮೇಲೆ ರೆಕ್ಕೆಗಳನ್ನು ಚಾಚಿಕೊಂಡಿರುವ ಕೆರೂಬಿದೂತರನ್ನು ತಯಾರಿಸಲು ನಕ್ಷೆಗಳನ್ನು ದಾವೀದನು ಸೊಲೊಮೋನನಿಗೆ ಕೊಟ್ಟನು. ಕೆರೂಬಿದೂತರನ್ನು ಚಿನ್ನದಿಂದ ಮಾಡಲಾಗಿತ್ತು.
19 ಆಮೇಲೆ ದಾವೀದನು, “ನಕ್ಷೆಗಳನ್ನೆಲ್ಲ ಮಾಡಲು ಯೆಹೋವನೇ ನನ್ನನ್ನು ನಡಿಸಿ ಮಾರ್ಗದರ್ಶನ ಕೊಟ್ಟನು. ಈ ನಕ್ಷೆಗಳಲ್ಲಿರುವ ಸಕಲ ವಿಷಯಗಳನ್ನು ನಾನು ಅರಿತುಕೊಳ್ಳುವಂತೆ ಸಹಾಯ ಮಾಡಿದನು” ಎಂದು ಹೇಳಿದನು.
20 ದಾವೀದನು ತನ್ನ ಮಗನಾದ ಸೊಲೊಮೋನನಿಗೆ, “ಧೈರ್ಯವಾಗಿದ್ದು ಬಲಗೊಳ್ಳು ಮತ್ತು ಈ ಕಾರ್ಯವನ್ನು ಮಾಡಿ ಮುಗಿಸು. ನನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರುವದರಿಂದ ನೀನು ಭಯಪಡುವ ಕಾರಣವೇ ಇಲ್ಲ. ಆತನು ನಿನ್ನೊಂದಿಗಿದ್ದು ಆಲಯವನ್ನು ಸಂಪೂರ್ಣ ಮಾಡುವಂತೆ ನಿನ್ನನ್ನು ನಡೆಸುತ್ತಾನೆ. ನೀನು ಯೆಹೋವನ ಆಲಯವನ್ನು ಕಟ್ಟುವೆ. 21 ನೇಮಿಸಲ್ಪಟ್ಟ ಯಾಜಕರ ಮತ್ತು ಲೇವಿಯರ ತಂಡಗಳು ದೇವಾಲಯದ ಸೇವೆಗಾಗಿ ಸಿದ್ಧರಾಗಿದ್ದಾರೆ; ಅನುಭವಸ್ಥರಾದ ಕಾರ್ಮಿಕರು ದೇವಾಲಯದ ಕೆಲಸಕ್ಕಾಗಿ ಸಿದ್ಧರಾಗಿದ್ದಾರೆ. ಕೆಲಸದ ಮೇಲ್ವಿಚಾರಣೆ ಮಾಡುವ ಅಧಿಕಾರಿಗಳು ನಿನ್ನ ಆಜ್ಞೆಯನ್ನು ಪರಿಪಾಲಿಸಲು ಸಿದ್ಧರಾಗಿದ್ದಾರೆ” ಎಂದು ದಾವೀದನು ಸೊಲೊಮೋನನಿಗೆ ಹೇಳಿದನು.