ಆಸನ ಕೊನೆಯ ವರ್ಷಗಳು
16
ಆಸನ ಆಳ್ವಿಕೆಯ ಮೂವತ್ತಾರನೆಯ ವರ್ಷದಲ್ಲಿ ಇಸ್ರೇಲಿನ ರಾಜನಾದ ಬಾಷನು ಆಸನ ಸಂಗಡ ಯುದ್ಧಕ್ಕೆ ಹೊರಟನು. ಅವನು ರಾಮ ಎಂಬ ಪಟ್ಟಣವನ್ನು ಕೋಟೆಯನ್ನಾಗಿ ಪರಿವರ್ತಿಸಿ, ಯೆಹೂದದ ರಾಜನಾದ ಆಸನ ಬಳಿಗೆ ಹೋಗುವುದಕ್ಕಾಗಲಿ ಬರುವುದಕ್ಕಾಗಲಿ ಯಾರಿಗೂ ಆಗದಂತೆ ಮಾಡಿದನು. ಆಗ ಆಸನು ದೇವಾಲಯದಲ್ಲಿಯೂ ಅರಮನೆಯಲ್ಲಿಯೂ ಶೇಖರಿಸಿಟ್ಟಿದ್ದ ಬೆಳ್ಳಿಬಂಗಾರಗಳನ್ನೆಲ್ಲಾ ಒಟ್ಟಾಗಿ ಸೇರಿಸಿ ದಮಸ್ಕದಲ್ಲಿದ್ದ ಅರಾಮ್ಯರ ಅರಸನಾದ ಬೆನ್ಹದದನಿಗೆ ಈ ಸಂದೇಶದೊಡನೆ ಕಳುಹಿಸಿದನು, “ಬೆನ್ಹದದನೇ, ನಮ್ಮೊಂದಿಗೆ ಒಂದು ಒಪ್ಪಂದವಿರಲಿ. ನನ್ನ ತಂದೆಯೂ ನಿನ್ನ ತಂದೆಯೂ ಮಾಡಿದ್ದ ಒಪ್ಪಂದವನ್ನು ನಾವು ಮುಂದುವರಿಸೋಣ. ನೋಡು, ನಾನೀಗ ನಿನಗೆ ಬೆಳ್ಳಿಬಂಗಾರಗಳನ್ನು ಕಳುಹಿಸುತ್ತಿದ್ದೇನೆ. ನೀನೀಗ ಇಸ್ರೇಲಿನ ರಾಜನಾದ ಬಾಷನೊಡನೆ ಮಾಡಿದ್ದ ಒಪ್ಪಂದವನ್ನು ಮುರಿದುಹಾಕು. ಆಗ ಅವನು ನನಗೆ ತೊಂದರೆ ಕೊಡುವುದನ್ನು ನಿಲ್ಲಿಸುವನು.”
ಇದಕ್ಕೆ ಬೆನ್ಹದದನು ಒಪ್ಪಿ ತನ್ನ ಸೇನಾಪತಿಗಳನ್ನು ಇಸ್ರೇಲಿನ ಪಟ್ಟಣಗಳ ಮೇಲೆ ಆಕ್ರಮಣಮಾಡಲು ಕಳುಹಿಸಿದನು. ಅವರು ಹೋಗಿ ಇಯ್ಯೋನ್, ದಾನ್, ಅಬೇಲ್ಮಯಿಮ್ ಎಂಬ ಪಟ್ಟಣಗಳ ಮೇಲೆಯೂ ಭಂಡಾರಗಳನ್ನು ಇಟ್ಟಿದ ನಫ್ತಾಲಿ ಪ್ರಾಂತ್ಯದ ಎಲ್ಲಾ ಪಟ್ಟಣಗಳ ಮೇಲೆಯೂ ಆಕ್ರಮಣ ಮಾಡಿದರು. ಇದನ್ನು ಕೇಳಿದ ಬಾಷನು ರಾಮ ಪಟ್ಟಣವನ್ನು ಕೋಟೆಯಾಗಿ ಕಟ್ಟುವ ಕೆಲಸವನ್ನು ಬಿಟ್ಟುಬಿಟ್ಟನು. ಆಗ ಆಸನೂ ಇಸ್ರೇಲಿನ ಎಲ್ಲಾ ಜನರೂ ಒಟ್ಟಿಗೆ ರಾಮಕ್ಕೆ ಹೋಗಿ ಅಲ್ಲಿ ಬಾಷನು ಕೋಟೆಕಟ್ಟಲು ತಂದಿಟ್ಟಿದ್ದ ಕಲ್ಲುಮರಗಳನ್ನೆಲ್ಲಾ ತೆಗೆದು ಮಿಚ್ಪ ಮತ್ತು ಗೆಬ ಪಟ್ಟಣಗಳನ್ನು ಭದ್ರಪಡಿಸಿದರು.
ಆಗ ದೇವದರ್ಶಿಯಾದ ಹನಾನಿಯು ಯೆಹೂದದ ರಾಜನಾದ ಆಸನ ಬಳಿಗೆ ಬಂದು, “ಆಸನೇ, ನೀನು ದೇವರಾದ ಯೆಹೋವನ ಮೇಲೆ ಭರವಸವನ್ನಿಡುವ ಬದಲು ಅರಾಮ್ಯರ ಅರಸನ ಮೇಲೆ ಭರವಸವನ್ನಿಟ್ಟಿದ್ದರಿಂದ ಅರಾಮ್ಯರ ಸೈನ್ಯವು ನಿನ್ನ ಕೈಗೆ ಬೀಳದಂತೆ ತಪ್ಪಿಸಿಕೊಂಡಿತು. ಇಥಿಯೋಪಿಯಾದವರಿಗೆ ಮತ್ತು ಲಿಬ್ಯದವರಿಗೆ ಮಹಾದೊಡ್ಡ ಸೈನ್ಯವಿತ್ತು. ಅಪರಿಮಿತವಾದ ರಥಾಶ್ವಗಳಿದ್ದವು. ಆದರೆ ಅವರನ್ನು ಸೋಲಿಸುವಂತೆ ಯೆಹೋವನು ನಿನಗೆ ಸಹಾಯಿಸಿದನು. ದೇವರು ಲೋಕವನ್ನೆಲ್ಲಾ ದೃಷ್ಟಿಸಿ ನೋಡಿ ತನ್ನ ನಂಬಿಗಸ್ತರನ್ನು ಕಂಡುಕೊಂಡು ಅವರನ್ನು ಬಲಿಷ್ಠರನ್ನಾಗಿ ಮಾಡುವನು. ಆಸನೇ, ನೀನು ಮೂರ್ಖ ಕೆಲಸ ಮಾಡಿದೆ. ಇಂದಿನಿಂದ ಯಾವಾಗಲೂ ನಿನಗೆ ಯುದ್ಧವಿರುವದು.”
10 ಇದನ್ನು ಕೇಳಿದ ಆಸನು ಹನಾನಿಯ ಮೇಲೆ ಬಹುಕೋಪಗೊಂಡು ಅವನನ್ನು ಸೆರೆಮನೆಯಲ್ಲಿ ಹಾಕಿಸಿದನು. ಆಸನು ಅದೇ ಸಮಯದಲ್ಲಿ ದೇವಜನರಾದ ಕೆಲವರೊಂದಿಗೆ ಕ್ರೂರವಾಗಿ ವರ್ತಿಸಿದನು.
11 ಆಸನು ಪ್ರಾರಂಭದಿಂದ ಕೊನೆಯವರೆಗೆ ಮಾಡಿದ ಎಲ್ಲಾ ವಿಷಯಗಳು ಯೆಹೂದ ಮತ್ತು ಇಸ್ರೇಲ್ ರಾಜರ ಗ್ರಂಥದಲ್ಲಿ ಬರೆಯಲ್ಪಟ್ಟಿವೆ. 12 ಆಸನ ಆಳ್ವಿಕೆಯ ಮೂವತ್ತೊಂಭತ್ತನೆಯ ವರ್ಷದಲ್ಲಿ ಅವನ ಕಾಲಿಗೆ ರೋಗ ಬಂದಿತು. ಅದು ಅಧಿಕವಾಗಿ ಹೆಚ್ಚಿದ್ದರಿಂದ ಅವನು ಯೆಹೋವನ ಸಹಾಯವನ್ನು ಕೇಳದೆ ವೈದ್ಯರ ನೆರವನ್ನೇ ಪಡೆದನು. 13 ಆಸನು ತನ್ನ ಆಳ್ವಿಕೆಯ ನಲವತ್ತೊಂದನೆಯ ವರ್ಷದಲ್ಲಿ ತನ್ನ ಪೂರ್ವಿಕರ ಬಳಿ ಸೇರಿದನು. 14 ಅವನು ತನಗಾಗಿ ದಾವೀದನಗರದಲ್ಲಿ ಮಾಡಿಸಿದ್ದ ಸಮಾಧಿಯಲ್ಲಿಯೇ ಅವನಿಗೆ ಸಮಾಧಿಮಾಡಿದರು. ನಾನಾತರದ ಪರಿಮಳದ್ರವ್ಯಗಳಿಂದ ತುಂಬಿದ್ದ ಹಾಸಿಗೆಯ ಮೇಲೆ ಮಲಗಿಸಿದ್ದರು. ಆಮೇಲೆ ಅವನ ಗೌರವಾರ್ಥವಾಗಿ ಒಂದು ದೊಡ್ಡ ಬೆಂಕಿಕೊಂಡವನ್ನು ಮಾಡಿ ಪರಿಮಳಧೂಪವನ್ನು ಸುಟ್ಟರು.