11
ಅಮ್ಮೋನಿಯನಾದ ನಾಹಾಷನು ಒಂದು ತಿಂಗಳ ನಂತರ, ತನ್ನ ಸೈನ್ಯದೊಂದಿಗೆ ಯಾಬೇಷ್‌ಗಿಲ್ಯಾದಿಗೆ ಮುತ್ತಿಗೆ ಹಾಕಿದನು. ಯಾಬೇಷಿನ ಜನರೆಲ್ಲ ನಾಹಾಷನಿಗೆ, “ನೀನು ನಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳುವುದಾದರೆ, ನಾವು ನಿನ್ನ ಸೇವೆಮಾಡುತ್ತೇವೆ” ಎಂದು ಹೇಳಿದರು.
ಆದರೆ ಅಮ್ಮೋನಿಯನಾದ ನಾಹಾಷನು, “ನಾನು ನಿಮ್ಮಲ್ಲಿ ಪ್ರತಿಯೊಬ್ಬರ ಬಲಗಣ್ಣನ್ನು ಕಿತ್ತುಹಾಕಿದಾಗ ಮಾತ್ರ ನಿಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತೇನೆ. ಆಗ ಇಸ್ರೇಲರಿಗೆಲ್ಲಾ ಅವಮಾನವಾಗುವುದು” ಎಂದು ಉತ್ತರಿಸಿದನು.
ಯಾಬೇಷಿನ ಹಿರಿಯರು ನಾಹಾಷನಿಗೆ, “ನಮಗೆ ಏಳು ದಿನಗಳವರೆಗೆ ಸಮಯ ಕೊಡು. ನಾವು ಇಸ್ರೇಲಿನ ಎಲ್ಲಾ ಕಡೆಗೆ ದೂತರನ್ನು ಕಳುಹಿಸುತ್ತೇವೆ. ನಮ್ಮನ್ನು ರಕ್ಷಿಸಲು ಯಾರೂ ಬರದಿದ್ದರೆ ನಾವೆಲ್ಲ ನಿನ್ನ ಬಳಿಗೆ ಬರುತ್ತೇವೆ ಹಾಗೂ ನಿನಗೆ ಅಧೀನರಾಗುತ್ತೇವೆ” ಎಂದು ಹೇಳಿದರು.
ಸೌಲನು ಯಾಬೇಷ್ ಗಿಲ್ಯಾದನ್ನು ರಕ್ಷಿಸುವನು
ಸೌಲನು ವಾಸವಾಗಿದ್ದ ಗಿಬೆಯಕ್ಕೆ ಸಂದೇಶಕರು ಬಂದು ಜನರಿಗೆ ಸುದ್ದಿಯನ್ನು ತಿಳಿಸಿದರು. ಜನರು ಗಟ್ಟಿಯಾಗಿ ಅತ್ತರು. ಸೌಲನು ಹಸುಗಳನ್ನು ಹೊಡೆದುಕೊಂಡು ಹೊಲಕ್ಕೆ ಹೋಗಿದ್ದನು. ಸೌಲನು ಹೊಲದಿಂದ ಬಂದಾಗ ಜನರೆಲ್ಲ ಅಳುವುದು ಕೇಳಿಸಿತು. ಸೌಲನು, “ಏನಾಯಿತು? ಜನರು ಅಳುತ್ತಿರುವುದೇಕೆ?” ಎಂದು ಕೇಳಿದನು.
ಆಗ ಜನರೆಲ್ಲ ಯಾಬೇಷಿನ ಸಂದೇಶಕರು ಹೇಳಿದ್ದನ್ನೆಲ್ಲ ಸೌಲನಿಗೆ ತಿಳಿಸಿದರು. ಅವರು ಹೇಳಿದ್ದನ್ನು ಕೇಳಿದಾಗ ದೇವರಾತ್ಮನು ಸೌಲನ ಮೈಮೇಲೆ ಮಹಾಶಕ್ತಿಯೊಡನೆ ಬಂದಿತು. ಸೌಲನು ಬಹುಕೋಪಗೊಂಡನು. ಸೌಲನು ಒಂದು ಜೊತೆ ಹಸುಗಳನ್ನು ತೆಗೆದುಕೊಂಡು ಅವುಗಳನ್ನು ತುಂಡುತುಂಡಾಗಿ ಕತ್ತರಿಸಿ ಆ ತುಂಡುಗಳನ್ನು ಸಂದೇಶಕರಿಗೆ ಕೊಟ್ಟನು. “ಇಸ್ರೇಲಿನ ನಾಡಿನಲ್ಲೆಲ್ಲಾ ಈ ತುಂಡುಗಳನ್ನು ತೆಗೆದುಕೊಂಡು ಹೋಗಿ ಅವರಿಗೆ, ‘ಸೌಲನನ್ನೂ ಮತ್ತು ಸಮುವೇಲನನ್ನೂ ಹಿಂಬಾಲಿಸಿರಿ, ಸೌಲನನ್ನು ಮತ್ತು ಸಮುವೇಲನನ್ನು ಯಾರು ಹಿಂಬಾಲಿಸುವುದಿಲ್ಲವೋ, ಯಾರು ಅವರಿಗೆ ಸಹಾಯ ಮಾಡುವುದಿಲ್ಲವೋ ಅಂತಹವರ ಹಸುಗಳಿಗೂ ಇದೇ ಗತಿಯಾಗುತ್ತದೆ’ ಎಂದು ತಿಳಿಸಿರಿ” ಎಂದನು.
ಯೆಹೋವನ ಮೇಲೆ ಜನರಲ್ಲಿ ಹೆಚ್ಚು ಭಯವುಂಟಾಯಿತು. ಅವರೆಲ್ಲಾ ಒಂದೇ ಮನಸ್ಸಿನಿಂದ ಒಟ್ಟಾಗಿ ಸೇರಿ ಬಂದರು. ಸೌಲನು ಬೆಜೆಕಿನಲ್ಲಿ ಅವರೆಲ್ಲರನ್ನೂ ಒಟ್ಟುಗೂಡಿಸಿದನು. ಅಲ್ಲಿ ಮೂರು ಲಕ್ಷ ಇಸ್ರೇಲರೂ ಮೂವತ್ತು ಸಾವಿರ ಯೆಹೂದ್ಯರೂ ಇದ್ದರು.
ಸೌಲನು ಮತ್ತು ಅವನ ಸೈನಿಕರು ಯಾಬೇಷಿನ ಸಂದೇಶಕರಿಗೆ, “ಗಿಲ್ಯಾದಿನ ಯಾಬೇಷ್ ಜನರಿಗೆ ನಾಳೆ ನಡುಮಧ್ಯಾಹ್ನದೊಳಗೆ ನಿಮ್ಮನ್ನು ರಕ್ಷಿಸುತ್ತೇವೆಂದು ತಿಳಿಸಿ” ಎಂಬುದಾಗಿ ಹೇಳಿದರು.
ಯಾಬೇಷಿನ ಜನರಿಗೆ ಸೌಲನ ಸಂದೇಶವನ್ನು ಸಂದೇಶಕರು ತಿಳಿಸಿದರು. ಯಾಬೇಷಿನ ಜನರು ಹರ್ಷಿತರಾದರು. 10 ನಂತರ ಯಾಬೇಷಿನ ಜನರು ಅಮ್ಮೋನಿಯದ ನಾಹಾಷನಿಗೆ, “ನಾವು ನಾಳೆ ನಿನ್ನ ಬಳಿಗೆ ಬರುತ್ತೇವೆ. ಆಗ ನಿನಗೆ ತೋಚಿದ್ದನ್ನು ನಮಗೆ ಮಾಡು” ಎಂದು ಹೇಳಿದರು.
11 ಮಾರನೆಯ ದಿನ ಬೆಳಿಗ್ಗೆ ಸೌಲನು ತನ್ನ ಸೈನ್ಯವನ್ನು ಮೂರು ಗುಂಪುಗಳಾಗಿ ವಿಂಗಡಿಸಿದನು. ಸೌಲನು ಮತ್ತು ಅವನ ಸೈನಿಕರು ಬೆಳಗಿನ ಜಾವದಲ್ಲೇ ಅಮ್ಮೋನಿಯರ ಶಿಬಿರದೊಳಕ್ಕೆ ನುಗ್ಗಿದರು. ಅವರು ಆ ದಿನ ಬೆಳಗಿನ ಜಾವ ಶಿಬಿರ ರಕ್ಷಕರನ್ನು ಬದಲಾಯಿಸುತ್ತಿದ್ದಂತೆಯೇ ಸೌಲನು ಆಕ್ರಮಣ ಮಾಡಿದನು. ಸೌಲನು ಮತ್ತು ಅವನ ಸೈನಿಕರು ನಡುಮಧ್ಯಾಹ್ನದೊಳಗೆ ಅಮ್ಮೋನಿಯರನ್ನು ಸೋಲಿಸಿದರು. ಅಮ್ಮೋನಿಯ ಸೈನಿಕರೆಲ್ಲರೂ ದಿಕ್ಕುಪಾಲಾಗಿ ಓಡಿಹೋದರು; ಅವರು ಒಟ್ಟಾಗಿ ಸೇರಿಬರಲು ಸಾಧ್ಯವಾಗಲಿಲ್ಲ.
12 ತರುವಾಯ ಜನರೆಲ್ಲರು ಸಮುವೇಲನಿಗೆ, “ಸೌಲನು ರಾಜನಾಗಿ ಆಳುವುದು ಬೇಕಿಲ್ಲ ಎಂದು ಹೇಳಿದ್ದ ಜನರೆಲ್ಲ ಎಲ್ಲಿ ಹೋದರು? ಅವರನ್ನು ನಮಗೆ ಒಪ್ಪಿಸಿ, ನಾವು ಅವರನ್ನು ಕೊಂದುಹಾಕುತ್ತೇವೆ” ಎಂದು ಹೇಳಿದರು.
13 ಆದರೆ ಸೌಲನು, “ಯೆಹೋವನು ಇಸ್ರೇಲನ್ನು ರಕ್ಷಿಸಿದ್ದಾನೆ. ಈ ದಿನ ಯಾರನ್ನೂ ಕೊಲ್ಲುವುದು ಬೇಡ” ಎಂದು ಹೇಳಿದನು.
14 ಬಳಿಕ ಸಮುವೇಲನು, “ನಾವೆಲ್ಲ ಗಿಲ್ಗಾಲಿಗೆ ಹೋಗಿ ಸೌಲನನ್ನು ಮತ್ತೆ ರಾಜನನ್ನಾಗಿ ಮಾಡೋಣ” ಎಂದು ಜನರಿಗೆ ಹೇಳಿದನು.
15 ಜನರೆಲ್ಲ ಗಿಲ್ಗಾಲಿಗೆ ಹೋದರು. ಅಲ್ಲಿ ಯೆಹೋವನ ಸಮ್ಮುಖದಲ್ಲಿ ಜನರೆಲ್ಲ ಸೌಲನನ್ನು ರಾಜನನ್ನಾಗಿ ಮಾಡಿದರು. ಅವರೆಲ್ಲರು ಯೆಹೋವನಿಗೆ ಸಮಾಧಾನಯಜ್ಞಗಳನ್ನು ಅರ್ಪಿಸಿದರು. ಸೌಲನು ಮತ್ತು ಇಸ್ರೇಲರೆಲ್ಲಾ ಒಂದು ದೊಡ್ಡ ಉತ್ಸವವನ್ನೇ ಮಾಡಿದರು.