ದಾವೀದ ಮತ್ತು ಯೋನಾತಾನರು ಆತ್ಮೀಯ ಗೆಳೆಯರಾದರು
18
ದಾವೀದನು ಸೌಲನೊಂದಿಗೆ ಮಾತನಾಡಿದ ಬಳಿಕ ಯೋನಾತಾನನು ದಾವೀದನೊಂದಿಗೆ ಒಂದಾದನು. ಯೋನಾತಾನನು ತನ್ನನ್ನು ಪ್ರೀತಿಸುವಷ್ಟೇ ದಾವೀದನನ್ನು ಪ್ರೀತಿಸಲಾರಂಭಿಸಿದನು. ಸೌಲನು ಅಂದಿನಿಂದ ದಾವೀದನನ್ನು ತನ್ನ ಜೊತೆಯಲ್ಲಿಯೇ ಇರಿಸಿಕೊಂಡನು. ಸೌಲನು ದಾವೀದನನ್ನು ಅವನ ತಂದೆಯ ಮನೆಗೆ ಹೋಗಲು ಬಿಡಲಿಲ್ಲ. ಯೋನಾತಾನನು ದಾವೀದನನ್ನು ಬಹಳವಾಗಿ ಪ್ರೀತಿಸುತ್ತಿದ್ದನು. ಅವನು ದಾವೀದನೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡನು. ಯೋನಾತಾನನು ತಾನು ಧರಿಸಿದ್ದ ಮೇಲಂಗಿಯನ್ನೂ ತನ್ನ ಸಮವಸ್ತ್ರವನ್ನೂ ತನ್ನ ಬಿಲ್ಲನ್ನೂ ಕತ್ತಿಯನ್ನೂ ಸೊಂಟಪಟ್ಟಿಯನ್ನೂ ದಾವೀದನಿಗೆ ಕೊಟ್ಟನು.
ಸೌಲನು ದಾವೀದನ ಯಶಸ್ಸನ್ನು ಗಮನಿಸಿದನು
ಸೌಲನು ದಾವೀದನನ್ನು ಬೇರೆಬೇರೆ ಯುದ್ಧಗಳಲ್ಲಿ ಹೋರಾಡಲು ಕಳುಹಿಸಿದನು. ದಾವೀದನು ಆ ಯುದ್ಧಗಳಲ್ಲೆಲ್ಲಾ ಯಶ್ವಸಿಯಾದನು. ಆದ್ದರಿಂದ ಸೌಲನು ದಾವೀದನನ್ನು ಸೈನ್ಯಾಧಿಪತಿಯನ್ನಾಗಿ ನೇಮಿಸಿದನು. ಇದು ಸೌಲನ ಅಧಿಕಾರಿಗಳಿಗೂ ಇತರರಿಗೂ ಸಂತಸವನ್ನು ಉಂಟುಮಾಡಿತು! ದಾವೀದನು ಫಿಲಿಷ್ಟಿಯರೊಡನೆ ಹೋರಾಡಲು ಹೋಗುತ್ತಿದ್ದನು. ಯುದ್ಧದ ನಂತರ ಅವನು ಮನೆಗೆ ಹಿಂದಿರುಗುತ್ತಿದ್ದನು. ಇಸ್ರೇಲಿನ ಎಲ್ಲ ಪಟ್ಟಣಗಳಲ್ಲೂ ಹೆಂಗಸರು ದಾವೀದನನ್ನು ನೋಡುವುದಕ್ಕಾಗಿ ಹೊರಬರುತ್ತಿದ್ದರು. ಅವರು ಡೋಲು ಮುಂತಾದ ವಾದ್ಯಗಳನ್ನು ಬಾರಿಸುತ್ತಾ ಕೇಕೆ ಹಾಕಿ ನಗುತ್ತಾ ನರ್ತಿಸುತ್ತಿದ್ದರು. ಅವರು ಸೌಲನ ಸಮ್ಮುಖದಲ್ಲಿಯೇ ಇವನ್ನೆಲ್ಲ ಮಾಡುತ್ತಿದ್ದರು. ಹೆಂಗಸರು,
“ಸೌಲನು ಸಾವಿರಾರು ಶತ್ರುಗಳನ್ನು ಕೊಂದರೆ,
ದಾವೀದನು ಲಕ್ಷಾಂತರ ಶತ್ರುಗಳನ್ನು ಕೊಂದನು”
ಎಂದು ಹಾಡುತ್ತಿದ್ದರು.
ಹೆಂಗಸರ ಈ ಹಾಡಿನಿಂದ ಸೌಲನು ಬಹಳವಾಗಿ ವ್ಯಸನಗೊಂಡನು ಮತ್ತು ರೋಷಗೊಂಡನು. “ದಾವೀದನು ಲಕ್ಷಾಂತರ ಶತ್ರುಗಳನ್ನು ಕೊಂದನು ಎಂದು ಇವರು ಹಾಡುತ್ತಾರಲ್ಲಾ, ಇವನಿಗೆ ರಾಜ್ಯವೊಂದನ್ನು ಬಿಟ್ಟು ಬೇರೆ ಏನು ಕಡಿಮೆಯಾಯಿತು?” ಎಂದು ಆಲೋಚಿಸತೊಡಗಿದನು. “ಸೌಲನು ಸಾವಿರಾರು ಶತ್ರುಗಳನ್ನು ಕೊಂದನು” ಎಂದು ಹಾಡಿದ ಹೆಂಗಸರ ಮಾತುಗಳಿಂದ ಸೌಲನು ಚಿಂತೆಗೀಡಾದನು. ಸೌಲನು ಅಂದಿನಿಂದ ದಾವೀದನನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದನು.
ಸೌಲನು ದಾವೀದನಿಗೆ ಭಯಪಟ್ಟನು
10 ಮಾರನೆಯ ದಿನ, ದೇವರಿಂದ ಬಂದ ದುರಾತ್ಮವು ಸೌಲನನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿತು. ಸೌಲನು ತನ್ನ ಮನೆಯಲ್ಲಿ ಹುಚ್ಚನಂತೆ ಕೂಗಿಕೊಳ್ಳುತ್ತಿದ್ದನು. ಆಗ ದಾವೀದನು ಎಂದಿನಂತೆ ಕಿನ್ನರಿಯನ್ನು ಬಾರಿಸುತ್ತಿದ್ದನು. 11 ಸೌಲನ ಕೈಯಲ್ಲಿ ಒಂದು ಈಟಿಯಿತ್ತು. “ಗೋಡೆಗೆ ಹತ್ತಿಕೊಳ್ಳುವಂತೆ ನಾನು ದಾವೀದನನ್ನು ತಿವಿಯುವೆ” ಎಂದು ಅವನು ಯೋಚಿಸಿ ಎರಡು ಬಾರಿ ಈಟಿಯನ್ನು ಎಸೆದನು. ಆದರೆ ದಾವೀದನು ಎರಡು ಸಲವೂ ತಪ್ಪಿಸಿಕೊಂಡನು.
12 ಯೆಹೋವನು ಸೌಲನನ್ನು ಬಿಟ್ಟು ದಾವೀದನ ಜೊತೆಗಿದ್ದನು. ಆದ್ದರಿಂದ ಸೌಲನು ದಾವೀದನಿಗೆ ಭಯಪಟ್ಟನು. 13 ಸೌಲನು ದಾವೀದನನ್ನು ತನ್ನಿಂದ ದೂರಕಳುಹಿಸಿದನು. ಸೌಲನು ದಾವೀದನನ್ನು ಒಂದು ಸಾವಿರ ಸೈನಿಕರಿಗೆ ಸೇನಾಪತಿಯನ್ನಾಗಿ ಮಾಡಿದನು. ದಾವೀದನು ಯುದ್ಧದಲ್ಲಿ ಸೈನಿಕರನ್ನು ಮುನ್ನಡೆಸಿದನು. 14 ಯೆಹೋವನು ದಾವೀದನ ಜೊತೆಗಿದ್ದನು. ಆದ್ದರಿಂದ ದಾವೀದನು ಎಲ್ಲದರಲ್ಲೂ ಯಶ್ವಸಿಯಾದನು. 15 ದಾವೀದನು ಬಹಳವಾಗಿ ಯಶ್ವಸಿಯಾಗುತ್ತಿರುವುದನ್ನು ಕಂಡ ಸೌಲನು ದಾವೀದನಿಗೆ ಮತ್ತಷ್ಟು ಭಯಪಟ್ಟನು. 16 ಆದರೆ ಇಸ್ರೇಲಿನ ಮತ್ತು ಯೆಹೂದದ ಜನರೆಲ್ಲ ದಾವೀದನನ್ನು ಪ್ರೀತಿಸಿದರು. ಅವನು ಯುದ್ಧದಲ್ಲಿ ಅವರನ್ನು ಮುನ್ನಡೆಸಿದ್ದರಿಂದ ಮತ್ತು ಅವರಿಗೋಸ್ಕರ ಹೋರಾಡಿದ್ದರಿಂದ ಅವರು ಅವನನ್ನು ಬಹಳವಾಗಿ ಪ್ರೀತಿಸಿದರು.
ಸೌಲನ ಮಗಳೊಂದಿಗೆ ದಾವೀದನ ಮದುವೆ
17 ಆದರೆ ಸೌಲನು ದಾವೀದನನ್ನು ಕೊಲ್ಲಬೇಕೆಂದಿದ್ದನು. ದಾವೀದನಿಗೆ ಮೋಸಮಾಡಲು ಸೌಲನು ಒಂದು ಉಪಾಯವನ್ನು ಹೂಡಿ ಅವನಿಗೆ, “ನನ್ನ ಹಿರಿಯ ಮಗಳಾದ ಮೇರಬಳು ಇದ್ದಾಳೆ. ನಾನು ಅವಳನ್ನು ನಿನಗೆ ಮದುವೆ ಮಾಡಿಕೊಡುತ್ತೇನೆ. ಆಗ ನೀನೊಬ್ಬ ಬಲಶಾಲಿಯಾದ ಸೈನಿಕನಾಗುವೆ. ನೀನು ನನಗೆ ಮಗನಂತಿರುವೆ! ನಂತರ ನೀನು ಹೋಗಿ ಯೆಹೋವನ ಯುದ್ಧಗಳಲ್ಲಿ ಹೋರಾಡು” ಎಂದು ಹೇಳಿದನು. ಆದರೆ ಇದೊಂದು ಮೋಸವಾಗಿತ್ತು. “ಈಗ ನಾನು ದಾವೀದನನ್ನು ಕೊಲ್ಲುವ ಅಗತ್ಯವಿಲ್ಲ. ನನಗೋಸ್ಕರ ಫಿಲಿಷ್ಟಿಯರೇ ಅವನನ್ನು ಕೊಲ್ಲುವಂತೆ ಮಾಡುತ್ತೇನೆ” ಎಂಬದು ಸೌಲನ ನಿಜವಾದ ಆಲೋಚನೆಯಾಗಿತ್ತು.
18 ಆದರೆ ದಾವೀದನು, “ನಾನು ಪ್ರಮುಖ ಕುಲದವನೂ ಅಲ್ಲ; ಪ್ರಮುಖನಾದ ವ್ಯಕ್ತಿಯೂ ಅಲ್ಲ! ರಾಜನ ಮಗಳನ್ನು ಮದುವೆಯಾಗಲು ನಾನು ಯೋಗ್ಯನಲ್ಲ” ಎಂದು ಹೇಳಿದನು.
19 ಸೌಲನ ಮಗಳಾದ ಮೇರಾಬಳಿಗೆ ದಾವೀದನನ್ನು ಮದುವೆಯಾಗುವ ಕಾಲ ಬಂದಾಗ, ಸೌಲನು ಅವಳನ್ನು ಮೆಹೋಲದ ಅದ್ರೀಯೇಲನಿಗೆ ಮದುವೆ ಮಾಡಿಕೊಟ್ಟನು.
20 ಸೌಲನ ಮತ್ತೊಬ್ಬ ಮಗಳಾದ ಮೀಕಲಳು ದಾವೀದನನ್ನು ಪ್ರೀತಿಸಿದಳು. ಮೀಕಲಳು ದಾವೀದನನ್ನು ಪ್ರೀತಿಸುತ್ತಿರುವುದನ್ನು ಸೌಲನಿಗೆ ಜನರು ತಿಳಿಸಿದರು. ಸೌಲನಿಗೆ ಇದು ಸಂತಸವನ್ನು ಉಂಟುಮಾಡಿತು. 21 ಸೌಲನು, “ನಾನು ದಾವೀದನನ್ನು ಬಲೆಗೆ ಬೀಳಿಸಲು ಮೀಕಲಳನ್ನು ಬಳಸಿಕೊಳ್ಳುತ್ತೇನೆ. ದಾವೀದನನ್ನು ಮದುವೆಯಾಗಲು ನಾನು ಮೀಕಲಳಿಗೆ ಅವಕಾಶ ಕೊಡುತ್ತೇನೆ. ನಂತರ ಅವನನ್ನು ಕೊಲ್ಲಲು ಫಿಲಿಷ್ಟಿಯರಿಗೆ ಬಿಟ್ಟುಕೊಡುತ್ತೇನೆ” ಎಂದು ಯೋಚಿಸಿದನು. ಹೀಗೆ ಸೌಲನು ಎರಡನೆಯ ಸಲ ದಾವೀದನಿಗೆ, “ನೀನು ನನ್ನ ಮಗಳನ್ನು ಇಂದು ಮದುವೆಯಾಗು” ಎಂದು ಹೇಳಿದನು.
22 ಸೌಲನು ತನ್ನ ಅಧಿಕಾರಿಗಳಿಗೆ ಅಪ್ಪಣೆ ಮಾಡಿದನು. ಸೌಲನು ಅವರಿಗೆ, “ದಾವೀದನೊಂದಿಗೆ ಪ್ರತ್ಯೇಕವಾಗಿ ಮಾತನಾಡಿ. ‘ರಾಜನು ನಿನ್ನನ್ನು ಇಷ್ಟಪಟ್ಟಿದ್ದಾನೆ. ಅವನ ಅಧಿಕಾರಿಗಳೂ ನಿನ್ನನ್ನು ಇಷ್ಟಪಡುತ್ತಾರೆ. ನೀನು ಅವನ ಮಗಳನ್ನು ಮದುವೆಯಾಗಬೇಕು’ ಎಂದು ಹೇಳಿರಿ” ಎಂಬುದಾಗಿ ತಿಳಿಸಿದನು.
23 ಸೌಲನ ಅಧಿಕಾರಿಗಳು ದಾವೀದನಿಗೆ ಆ ವಿಚಾರಗಳನ್ನು ತಿಳಿಸಿದರು. ಆದರೆ ದಾವೀದನು, “ರಾಜನ ಅಳಿಯನಾಗುವುದು ಸುಲಭವೆಂದು ನೀವು ತಿಳಿದಿರುವಿರಾ? ರಾಜನ ಮಗಳಿಗೆ ಕೊಡಲು ನನ್ನ ಹತ್ತಿರ ಹಣವೇ ಇಲ್ಲ! ನಾನು ಕೇವಲ ಬಡವ, ಸಾಮಾನ್ಯ ಮನುಷ್ಯ” ಎಂದು ಉತ್ತರಿಸಿದನು.
24 ದಾವೀದನು ತಿಳಿಸಿದ್ದನ್ನೆಲ್ಲ ಸೌಲನ ಅಧಿಕಾರಿಗಳು ಸೌಲನಿಗೆ ಹೇಳಿದರು. 25 ಸೌಲನು ಅವರಿಗೆ, “ನೀವು ದಾವೀದನ ಬಳಿಗೆ ಹೋಗಿ ಹೇಳಿ: ‘ನೀನು ರಾಜನ ಮಗಳಿಗಾಗಿ ಹಣ ಕೊಡಬೇಕಿಲ್ಲ. ಸೌಲನು ತನ್ನ ಶತ್ರುಗಳ ಮೇಲೆ ಸೇಡನ್ನು ತೀರಿಸಿಕೊಳ್ಳುತ್ತಾನೆ. ಆದ್ದರಿಂದ ಅವನ ಮಗಳನ್ನು ಮದುವೆಯಾಗಲು ಕೊಡಬೇಕಾದ ದಕ್ಷಿಣೆ ಏನೆಂದರೆ ನೂರು ಮಂದಿ ಫಿಲಿಷ್ಟಿಯರ ಮುಂದೊಗಲುಗಳು’ ಎಂದು ಹೇಳಿರಿ” ಎಂಬುದಾಗಿ ತಿಳಿಸಿದನು. ಸೌಲನ ರಹಸ್ಯವಾದ ಉಪಾಯ ಇದಾಗಿದ್ದಿತು. ಫಿಲಿಷ್ಟಿಯರು ದಾವೀದನನ್ನು ಕೊಂದು ಬಿಡಬಹುದೆಂದು ಸೌಲನು ಭಾವಿಸಿದ್ದನು.
26 ಸೌಲನ ಅಧಿಕಾರಿಗಳು ಆ ಸಂಗತಿಗಳನ್ನು ದಾವೀದನಿಗೆ ತಿಳಿಸಿದರು. ದಾವೀದನು ರಾಜನ ಅಳಿಯನಾಗಬೇಕೆಂದು ಬಯಸಿದನು. ಆದ್ದರಿಂದ ಅವನು ತಕ್ಷಣವೇ ಕಾರ್ಯನಿರತನಾದನು. 27 ದಾವೀದನು ಮತ್ತು ಅವನ ಜನರು ಫಿಲಿಷ್ಟಿಯರೊಂದಿಗೆ ಹೋರಾಡಲು ಹೋದರು. ಅವರು ಇನ್ನೂರು ಜನ ಫಿಲಿಷ್ಟಿಯರನ್ನು ಕೊಂದು ಅವರ ಮುಂದೊಗಲುಗಳನ್ನು ತೆಗೆದುಕೊಂಡು ಬಂದು ರಾಜನ ಅಳಿಯನಾಗುವುದಕ್ಕೋಸ್ಕರ ಅವುಗಳನ್ನು ಸಂಪೂರ್ಣವಾಗಿ ಸೌಲನಿಗೆ ಒಪ್ಪಿಸಿದರು.
ಆಗ ಸೌಲನು ತನ್ನ ಮಗಳಾದ ಮೀಕಲಳನ್ನು ದಾವೀದನಿಗೆ ಮದುವೆ ಮಾಡಿಕೊಟ್ಟನು. 28 ಯೆಹೋವನು ದಾವೀದನೊಂದಿಗಿರುವುದನ್ನೂ ತನ್ನ ಮಗಳಾದ ಮೀಕಲಳು ದಾವೀದನನ್ನು ಪ್ರೀತಿಸುತ್ತಿರುವುದನ್ನೂ ಸೌಲನು ಗಮನಿಸಿದನು. 29 ಆದ್ದರಿಂದ ಸೌಲನು ದಾವೀದನಿಗೆ ಇನ್ನೂ ಹೆಚ್ಚು ಭಯಪಟ್ಟನು. ಸೌಲನು ಆ ಕಾಲದಲ್ಲೆಲ್ಲ ದಾವೀದನಿಗೆ ವಿರೋಧವಾಗಿದ್ದನು.
30 ಫಿಲಿಷ್ಟಿಯ ಸೇನಾಧಿಪತಿಗಳು ಇಸ್ರೇಲರೊಂದಿಗೆ ಹೋರಾಡಲು ಹೋಗುತ್ತಲೇ ಇದ್ದರು. ಆದರೆ ದಾವೀದನು ಪ್ರತಿಸಲವೂ ಅವರನ್ನು ಸೋಲಿಸುತ್ತಿದ್ದನು. ದಾವೀದನು ಸೌಲನ ಒಬ್ಬ ಯಶಸ್ವಿಯಾದ ಅಧಿಕಾರಿಯಾಗಿದ್ದನು! ದಾವೀದನು ಪ್ರಖ್ಯಾತನಾದನು.