ಸೌಲನ ಕುಟುಂಬಕ್ಕಾದ ದಂಡನೆ
21
ದಾವೀದನ ಕಾಲದಲ್ಲಿ ಒಮ್ಮೆ ಮೂರು ವರ್ಷಗಳವರೆಗೆ ಬರಗಾಲವಿತ್ತು. ದಾವೀದನು ಯೆಹೋವನಲ್ಲಿ ಪ್ರಾರ್ಥಿಸಿದನು. ಆಗ ಯೆಹೋವನು, “ಸೌಲನು ಮತ್ತು ಕೊಲೆಗಾರರಾದ ಅವನ ಕುಟುಂಬದವರು ಈ ಬರಗಾಲಕ್ಕೆ ಕಾರಣ. ಸೌಲನು ಗಿಬ್ಯೋನ್ಯರನ್ನು ಕೊಂದದ್ದರಿಂದ ಈಗಿನ ಬರಗಾಲವು ಬಂದಿದೆ” ಎಂದು ಹೇಳಿದನು. (ಗಿಬ್ಯೋನ್ಯರು ಇಸ್ರೇಲರಲ್ಲ, ಅವರು ಇನ್ನೂ ಜೀವಂತವಾಗಿ ಉಳಿದಿರುವ ಅಮೋರಿಯರ ಕುಟುಂಬದವರು. ಗಿಬ್ಯೋನ್ಯರನ್ನು ಹಿಂಸಿಸುವುದಿಲ್ಲವೆಂದು ಇಸ್ರೇಲರು ಪ್ರಮಾಣ ಮಾಡಿದ್ದರು. ಆದರೆ ಸೌಲನು ಇಸ್ರೇಲಿನ ಮತ್ತು ಯೆಹೂದದ ಜನರ ಮೇಲೆ ಹೆಚ್ಚಿನ ಅಭಿಮಾನವನ್ನಿಟ್ಟಿದ್ದನು. ಆದ್ದರಿಂದ ಅವನು ಗಿಬ್ಯೋನ್ಯರನ್ನು ಕೊಲ್ಲಲು ಪ್ರಯತ್ನಿಸಿದನು.)
ರಾಜನಾದ ದಾವೀದನು ಗಿಬ್ಯೋನ್ಯರನ್ನು ಒಟ್ಟಾಗಿ ಕರೆದು ಅವರೊಂದಿಗೆ ಮಾತನಾಡಿದನು. ದಾವೀದನು ಗಿಬ್ಯೋನ್ಯರಿಗೆ, “ನಾನು ನಿಮಗೆ ಏನು ಮಾಡಲಿ? ಇಸ್ರೇಲಿನ ಪಾಪವನ್ನು ತೆಗೆದುಹಾಕಲು, ಯೆಹೋವನ ಜನರನ್ನು ನೀವು ಹರಸಲು, ನಾನು ನಿಮಗೆ ಏನು ಮಾಡಬೇಕು?” ಎಂದು ಕೇಳಿದನು.
ಗಿಬ್ಯೋನ್ಯರು ದಾವೀದನಿಗೆ, “ಸೌಲನ ಬೆಳ್ಳಿಬಂಗಾರವಾಗಲಿ ಅವನ ಮನೆಯಾಗಲಿ ನಮಗೆ ಬೇಕಾಗಿಲ್ಲ ಮತ್ತು ಇಸ್ರೇಲಿನ ಯಾವ ವ್ಯಕ್ತಿಯನ್ನೂ ಕೊಲ್ಲಲು ನಮಗೆ ಹಕ್ಕಿಲ್ಲ” ಎಂದು ಹೇಳಿದರು.
ದಾವೀದನು, “ಆದರೆ ನಿಮಗಾಗಿ ನಾನು ಏನು ಮಾಡಲಿ?” ಎಂದನು.
ಗಿಬ್ಯೋನ್ಯರು ರಾಜನಾದ ದಾವೀದನಿಗೆ, “ಸೌಲನು ನಮ್ಮ ವಿರುದ್ಧ ಯೋಜಿಸಿ ಇಸ್ರೇಲಿನ ದೇಶದಲ್ಲಿ ಉಳಿದಿದ್ದ ನಮ್ಮ ಜನರನ್ನೆಲ್ಲ ನಾಶಪಡಿಸಲು ಪ್ರಯತ್ನಿಸಿದನು. ಅವನ ಏಳು ಮಂದಿ ಗಂಡುಮಕ್ಕಳನ್ನು ನಮ್ಮ ಬಳಿಗೆ ಕಳುಹಿಸು. ಸೌಲನು ವಾಸವಾಗಿದ್ದ ಗಿಬೆಯ ಬೆಟ್ಟದ ಮೇಲೆ ಯೆಹೋವನ ಸನ್ನಿಧಿಯಲ್ಲಿ ನೇತುಹಾಕುತ್ತೇವೆ” ಎಂದು ಹೇಳಿದರು.
ರಾಜನಾದ ದಾವೀದನು, “ಆ ಗಂಡುಮಕ್ಕಳನ್ನು ನಾನು ನಿಮಗೆ ಒಪ್ಪಿಸುತ್ತೇನೆ” ಎಂದು ಹೇಳಿದನು. ಆದರೆ ಯೋನಾತಾನನ ಮಗನಾದ ಮೆಫೀಬೋಶೆತನನ್ನು ರಾಜನು ರಕ್ಷಿಸಿದನು. (ಯೋನಾತಾನನು ಸೌಲನ ಮಗ.) ದಾವೀದನು ಯೆಹೋವನ ಹೆಸರಿನಲ್ಲಿ ಯೋನಾತಾನನಿಗೆ ವಾಗ್ದಾನ ಮಾಡಿದ್ದನು.* ಆದ್ದರಿಂದ ಮೆಫೀಬೋಶೆತನಿಗೆ ಅವರಿಂದ ತೊಂದರೆಯಾಗದಂತೆ ನೋಡಿಕೊಂಡನು. ಆದರೆ ಅಯ್ಯಾಹನ ಮಗಳಾದ ರಿಚ್ಪಳಲ್ಲಿ ಹುಟ್ಟಿದ ಸೌಲನ ಗಂಡುಮಕ್ಕಳಾದ ಅರ್ಮೋನ್ ಮತ್ತು ಮೆಫೀಬೋಶೆತ್ ಎಂಬ ಇಬ್ಬರು ಗಂಡುಮಕ್ಕಳನ್ನೂ ಮೆಹೋಲದ ಬರ್ಜಿಲ್ಲೈಯ ಮಗನಾದ ಅದಿಯೇಲನಿಗೆ ಸೌಲನ ಮಗಳಾದ ಮೇರಬಳಲ್ಲಿ ಹುಟ್ಟಿದ್ದ ಐದು ಮಂದಿ ಗಂಡುಮಕ್ಕಳನ್ನೂ ತೆಗೆದುಕೊಂಡು ಗಿಬ್ಯೋನ್ಯರಿಗೆ ಒಪ್ಪಿಸಿದನು. ಗಿಬ್ಯೋನ್ಯರು ಈ ಏಳು ಮಂದಿ ಗಂಡುಮಕ್ಕಳನ್ನು ಗಿಬೆಯ ಬೆಟ್ಟದ ಮೇಲೆ ಯೆಹೋವನ ಸನ್ನಿಧಿಯಲ್ಲಿ ನೇತುಹಾಕಿದರು. ಈ ಏಳು ಮಂದಿ ಒಟ್ಟಿಗೆ ಸತ್ತರು. ಅವರನ್ನು ಸುಗ್ಗಿಯ ಆರಂಭದ ದಿನಗಳಲ್ಲಿ ಕೊಲ್ಲಲಾಯಿತು. (ಬಾರ್ಲಿಯ ಸುಗ್ಗಿಯು ಆಗ ತಾನೇ ಆರಂಭವಾಗಿತ್ತು.)
ರಿಚ್ಪಳು ತನ್ನ ಮಕ್ಕಳ ದೇಹಗಳನ್ನು ಕಾಯುತ್ತಿದ್ದಳು
10 ಅಯ್ಯಾಹನ ಮಗಳಾದ ರಿಚ್ಪಳು ಶೋಕವಸ್ತ್ರವನ್ನು ಕಲ್ಲಿನ ಮೇಲೆ ಹಾಸಿದಳು. ಸುಗ್ಗಿಯ ಆರಂಭದಿಂದ, ಆ ದೇಹಗಳ ಮೇಲೆ ಮಳೆಯು ಬೀಳುವ ತನಕ, ಆಕೆ ಆ ವಸ್ತ್ರದ ಮೇಲೆ ಕುಳಿತುಕೊಂಡಳು. ಆಕಾಶದಲ್ಲಿ ಹಾರಾಡುವ ಹಕ್ಕಿಗಳು ಹಗಲು ಹೊತ್ತಿನಲ್ಲಿಯೂ, ಕಾಡಿನ ಪ್ರಾಣಿಗಳು ರಾತ್ರಿಯ ಹೊತ್ತಿನಲ್ಲಿಯೂ ತನ್ನ ಮಕ್ಕಳ ದೇಹಗಳನ್ನು ಮುಟ್ಟಲು ರಿಚ್ಪಳು ಅವಕಾಶಕೊಡಲಿಲ್ಲ.
11 ಅಯ್ಯಾಹನ ಮಗಳೂ ಸೌಲನ ಉಪಪತ್ನಿಯೂ ಆದ ರಿಚ್ಪಳು ಮಾಡುತ್ತಿರುವುದನ್ನು ಜನರು ದಾವೀದನಿಗೆ ತಿಳಿಸಿದರು. 12 ಆಗ ದಾವೀದನು ಸೌಲನ ಮತ್ತು ಯೋನಾತಾನನ ಮೂಳೆಗಳನ್ನು ತರುವುದಕ್ಕೋಸ್ಕರ ಯಾಬೇಷ್‌ಗಿಲ್ಯಾದಿಗೆ ಹೋದನು. ಸೌಲ ಮತ್ತು ಯೋನಾತಾನರನ್ನು ಫಿಲಿಷ್ಟಿಯರು ಗಿಲ್ಬೋವದಲ್ಲಿ ಸೋಲಿಸಿದ ನಂತರ ಅವರ ಶವಗಳನ್ನು ಬೇತ್‌ಷೆಯಾನಿನ ಬೀದಿಯಲ್ಲಿ ತೂಗುಹಾಕಿದ್ದರು. ಯಾಬೇಷ್‌ಗಿಲ್ಯಾದಿನವರು ಅಲ್ಲಿಂದ ಅವುಗಳನ್ನು ಕದ್ದುಕೊಂಡು ಹೋಗಿದ್ದರು. 13 ದಾವೀದನು ಯಾಬೇಷ್‌ಗಿಲ್ಯಾದಿನಿಂದ ಸೌಲನ ಮತ್ತು ಅವನ ಮಗನಾದ ಯೋನಾತಾನನ ಮೂಳೆಗಳನ್ನೂ ನೇತುಹಾಕಲ್ಪಟ್ಟಿದ್ದ ಸೌಲನ ಏಳು ಮಂದಿ ಮಕ್ಕಳ ದೇಹಗಳನ್ನೂ ಜನರು ಒಟ್ಟಾಗಿ ಸೇರಿಸಿದರು. 14 ಸೌಲ ಮತ್ತು ಅವನ ಮಗನಾದ ಯೋನಾತಾನರ ಮೂಳೆಗಳನ್ನು ಅವರು ಬೆನ್ಯಾಮೀನಿನ ಪ್ರದೇಶದಲ್ಲಿ ಸಮಾಧಿ ಮಾಡಿದರು. ಸೌಲನ ತಂದೆಯಾದ ಕೀಷನ ಸ್ಮಶಾನದಲ್ಲಿ ಈ ದೇಹಗಳನ್ನು ಜನರು ಸಮಾಧಿ ಮಾಡಿದರು. ರಾಜನು ಆಜ್ಞಾಪಿಸಿದ್ದನ್ನೆಲ್ಲ ಜನರು ಮಾಡಿದರು. ನಂತರ ಆ ದೇಶದ ಜನರ ಪ್ರಾರ್ಥನೆಯನ್ನು ದೇವರು ಆಲಿಸಿದನು.
ಫಿಲಿಷ್ಟಿಯರೊಡನೆ ಯುದ್ಧ
15 ಫಿಲಿಷ್ಟಿಯರು ದಾವೀದನೊಡನೆ ಮತ್ತೆ ಯುದ್ಧವನ್ನು ಮಾಡಿದರು. ದಾವೀದನು ತನ್ನ ಜನರೊಂದಿಗೆ ಫಿಲಿಷ್ಟಿಯರ ವಿರುದ್ಧ ಹೋರಾಡಲು ಹೋದನು. ಆದರೆ ದಾವೀದನು ಆಯಾಸಗೊಂಡು ಬಲಹೀನನಾದನು. 16 ಇಷ್ಬೀಬೆನೋಬನು ಒಬ್ಬ ರಾಕ್ಷಸನ ಮಗ. ಅವನ ಬರ್ಜಿಯು ಏಳುವರೆ ಪೌಂಡುಗಳಷ್ಟು ತೂಕವಿತ್ತು. ಅವನು ಹೊಸ ಖಡ್ಗವನ್ನು ಹೊಂದಿದ್ದನು. ಅವನು ದಾವೀದನನ್ನು ಕೊಲ್ಲುವುದಕ್ಕಿದ್ದನು. 17 ಆದರೆ ಚೆರೂಯಳ ಮಗನಾದ ಅಬೀಷೈ ಆ ಫಿಲಿಷ್ಟಿಯನನ್ನು ಕೊಂದು ದಾವೀದನನ್ನು ರಕ್ಷಿಸಿದನು.
ಆಗ ದಾವೀದನ ಜನರು ಅವನಿಂದ ವಿಶೇಷ ಪ್ರಮಾಣವನ್ನು ಮಾಡಿಸಿದರು. ಅವರು ಅವನಿಗೆ, “ನೀನು ನಮ್ಮೊಂದಿಗೆ ಇನ್ನು ಮೇಲೆ ಯುದ್ಧಕ್ಕೆ ಬರಬಾರದು. ನೀನು ಯುದ್ಧಕ್ಕೆ ಹೋಗಿ ಕೊಲ್ಲಲ್ಪಟ್ಟರೆ, ಇಸ್ರೇಲಿನ ಅತ್ಯಂತ ಮಹಾಪುರುಷನನ್ನು ಕಳೆದುಕೊಂಡಂತಾಗುತ್ತದೆ” ಎಂದು ಹೇಳಿದರು.
18 ತರುವಾಯ, ಫಿಲಿಷ್ಟಿಯರೊಡನೆ ಮತ್ತೊಂದು ಯುದ್ಧವು ಗೋಬ್ ಎಂಬ ಸ್ಥಳದಲ್ಲಿ ನಡೆಯಿತು. ಹುಷಾದ ಸಿಬ್ಬೆಕೈ ಎನ್ನುವವನು ರೆಫಾಯನಾದ ಸಫ್ ಎಂಬವನನ್ನು ಕೊಂದನು.
19 ಆಗ ಗೋಬ್ ಎಂಬ ಸ್ಥಳದಲ್ಲಿ ಫಿಲಿಷ್ಟಿಯರೊಡನೆ ಮತ್ತೊಂದು ಯುದ್ಧವು ಆರಂಭವಾಯಿತು. ಯಾರೇಯೋರೆಗೀವ್ ಎಂಬವನು ಬೆನ್ಯಾಮೀನ್ ಕುಲದವನೂ ಬೆತ್ಲೆಹೇಮಿನವನೂ ಆಗಿದ್ದನು. ಇವನ ಮಗನಾದ ಎಲ್ಹಾನಾನನು ಗಿತ್ತಿಯನಾದ ಗೊಲ್ಯಾತನನ್ನು ಕೊಂದನು. ಗೊಲ್ಯಾತನ ಭರ್ಜಿಯು ನೇಕಾರನ ಕುಂಟೆಯಷ್ಟು ಗಾತ್ರವಿತ್ತು.
20 ಗತ್‌ನಲ್ಲಿ ಮತ್ತೆ ಯುದ್ಧವು ನಡೆಯಿತು. ಅಲ್ಲಿ ಬಹಳ ಎತ್ತರವಾದ ಮನುಷ್ಯನಿದ್ದನು. ಈ ಮನುಷ್ಯನ ಪ್ರತಿಯೊಂದು ಕೈಯಲ್ಲಿ ಆರು ಬೆರಳುಗಳೂ ಪಾದಗಳಲ್ಲಿ ಆರು ಬೆರಳುಗಳೂ ಇದ್ದವು. (ಅವನಿಗೆ ಒಟ್ಟು ಇಪ್ಪತ್ತನಾಲ್ಕು ಬೆರಳುಗಳಿದ್ದವು.) ಇವನು ಸಹ ರೆಫಾಯರಲ್ಲಿ ಒಬ್ಬನಾಗಿದ್ದನು. 21 ಈ ಮನುಷ್ಯನು ಇಸ್ರೇಲನ್ನು ಪ್ರತಿಭಟಿಸಿದನು. ಆದರೆ ಇವನನ್ನು ಯೋನಾತಾನನು ಕೊಂದನು. (ಯೋನಾತಾನನು ದಾವೀದನ ಸೋದರನಾದ ಶಿಮೆಯಾನನ ಮಗ.)
22 ಈ ನಾಲ್ಕು ಜನರು ಗತ್ ಊರಿನ ರೆಫಾಯರು. ಅವರೆಲ್ಲರೂ ದಾವೀದನಿಂದ ಮತ್ತು ಅವನ ಜನರಿಂದ ಕೊಲ್ಲಲ್ಪಟ್ಟರು.

* 21:7: ದಾವೀದನು … ವಾಗ್ದಾನ ಮಾಡಿದ್ದನು ದಾವೀದ ಮತ್ತು ಯೋನಾತಾನ ಪರಸ್ಪರ ಕೇಡುಮಾಡುವುದಿಲ್ಲವೆಂದು ವಾಗ್ದಾನ ಮಾಡಿದ್ದರು.