ಜೆರುಸಲೇಮಿನ ಸ್ತ್ರೀಯರು ಪ್ರಿಯತಮೆಗೆ
6
1 ನಿನ್ನ ಪ್ರಿಯನು ಎಲ್ಲಿಗೆ ಹೋದನು?
ನೀನು ಸ್ತ್ರೀಯರಲ್ಲಿ ಅತ್ಯಂತ ಸೌಂದರ್ಯವತಿ.
ನಿನ್ನ ಪ್ರಿಯನು ಯಾವ ಕಡೆಗೆ ಹೋದನು?
ನೀನು ಹೇಳಿದರೆ, ನಾವು ನಿನಗೋಸ್ಕರ ಅವನನ್ನು ಹುಡುಕುವೆವು.
ಪ್ರಿಯತಮೆಯು ಜೆರುಸಲೇಮಿನ ಸ್ತ್ರೀಯರಿಗೆ
2 ನನ್ನ ಪ್ರಿಯನು ತನ್ನ ತೋಟದಲ್ಲಿರುವ
ಸುಗಂಧಸಸ್ಯಗಳ ದಿಬ್ಬಗಳಿಗೆ ಹೋಗಿದ್ದಾನೆ;
ತೋಟಗಳಲ್ಲಿ ಮಂದೆಯನ್ನು ಮೇಯಿಸುವುದಕ್ಕೂ
ನೆಲದಾವರೆಗಳನ್ನು ಕೊಯ್ಯುವುದಕ್ಕೂ ಹೋಗಿದ್ದಾನೆ.
3 ನನ್ನ ಪ್ರಿಯನು ನನ್ನವನೇ; ನಾನು ಅವನವಳೇ.
ಅವನು ನೆಲದಾವರೆಗಳ ಮಧ್ಯದಲ್ಲಿ ಮಂದೆಯನ್ನು ಮೇಯಿಸುವವನಾಗಿದ್ದಾನೆ.
ಪ್ರಿಯಕರನು ಪ್ರಿಯತಮೆಗೆ
4 ನನ್ನ ಪ್ರಿಯಳೇ, ನೀನು ತಿರ್ಚ ಪಟ್ಟಣದಂತೆ ಸುಂದರಿ.
ನೀನು ಜೆರುಸಲೇಮಿನಂತೆ ರೂಪವತಿ;
ಜಯಧ್ವಜವೆತ್ತಿರುವ ಸೈನ್ಯದಂತೆ ಪ್ರಭಾವವುಳ್ಳವಳು.
5 ನಿನ್ನ ಕಣ್ಣುಗಳನ್ನು ನನ್ನ ಕಡೆಯಿಂದ ತಿರುಗಿಸು;
ಅವು ನನ್ನನ್ನು ಉದ್ರೇಕಗೊಳಿಸುತ್ತವೆ.
ನಿನ್ನ ಕೂದಲು ಗಿಲ್ಯಾದ್ ಬೆಟ್ಟದ ಇಳಿಜಾರುಗಳಲ್ಲಿ
ನೃತ್ಯವಾಡುತ್ತಿರುವ ಆಡುಮಂದೆಯಂತೆ ಬಳಕುತ್ತಿದೆ.
6 ನಿನ್ನ ಹಲ್ಲುಗಳು
ಉಣ್ಣೆ ಕತ್ತಿರಿಸಿದ ನಂತರ ಸ್ನಾನ ಮಾಡಿಕೊಂಡು
ತಮ್ಮ ಜೋಡಿಗಳನ್ನು ಕಳೆದುಕೊಳ್ಳದೆ
ಜೊತೆಜೊತೆಯಾಗಿ ಬರುವ ಕುರಿಮಂದೆಯಂತಿವೆ.
7 ಮುಸುಕಿನೊಳಗಿರುವ ನಿನ್ನ ಕೆನ್ನೆಗಳು
ದಾಳಿಂಬೆ ಹಣ್ಣಿನ ಎರಡು ಹೋಳುಗಳಂತಿವೆ.
8 ಅರವತ್ತು ಮಂದಿ ರಾಣಿಯರೂ
ಎಂಭತ್ತು ಮಂದಿ ಉಪಪತ್ನಿಯರೂ
ಲೆಕ್ಕವಿಲ್ಲದಷ್ಟು ಯುವತಿಯರೂ ನನಗಿದ್ದಾರೆ.
9 ಆದರೆ ನನ್ನ ಪಾರಿವಾಳವೂ ನಿರ್ಮಲೆಯೂ
ಒಬ್ಬಳೇ ಒಬ್ಬಳು.
ಆಕೆಯು ತನ್ನ ತಾಯಿಗೆ ಅಚ್ಚುಮೆಚ್ಚಿನವಳು.
ಯುವತಿಯರು ಆಕೆಯನ್ನು ಕಂಡು ಹೊಗಳುವರು.
ಹೌದು, ರಾಣಿಯರೂ ಉಪಪತ್ನಿಯರೂ
ಆಕೆಯನ್ನು ಹೊಗಳುವರು.
ಪ್ರಿಯತಮೆಗೆ ಸ್ತ್ರೀಯರ ಪ್ರಶಂಸೆ
10 ಸೂರ್ಯೋದಯದಂತೆ ಪ್ರಕಾಶಿಸುತ್ತಿರುವ
ಈ ಯುವತಿ ಯಾರು?
ಚಂದ್ರನಂತೆ ಸೌಮ್ಯಳೂ
ಸೂರ್ಯನಂತೆ ಶುಭ್ರಳೂ
ಜಯಧ್ವಜವೆತ್ತಿರುವ ಸೈನ್ಯದಂತೆ
ಪ್ರಭಾವವುಳ್ಳವಳೂ ಆಗಿರುವ ಇವಳಾರು?
ಪ್ರಿಯಕರನು ಪ್ರಿಯತಮೆಗೆ
11 ಕಣಿವೆಯ ಸಸ್ಯಗಳು ಹಣ್ಣುಬಿಟ್ಟಿವೆಯೋ
ದ್ರಾಕ್ಷಿಬಳ್ಳಿಗಳು ಚಿಗುರಿದೆಯೋ
ದಾಳಿಂಬರಗಳು ಹೂ ಬಿಟ್ಟಿವೆಯೋ ಎಂದು ನೋಡಲು
ಬಾದಾಮಿ ಮರಗಳ ತೋಟಕ್ಕೆ ಹೋದೆನು.
12 ನಾನು ಅದನ್ನು ಗ್ರಹಿಸಿಕೊಳ್ಳುವುದಕ್ಕಿಂತ ಮೊದಲೇ,
ನನ್ನ ಮನಸ್ಸು ದೇಶದ ಪ್ರಧಾನರ ರಥಗಳ ನಡುವೆ ನನ್ನನ್ನು ಕುಳ್ಳರಿಸಿತು.
ಜೆರುಸಲೇಮಿನ ಸ್ತ್ರೀಯರು ಪ್ರಿಯತಮೆಗೆ
13 ಶೂಲಾಮಿತಳೇ, ಹಿಂತಿರುಗಿ ಬಾ, ಹಿಂತಿರುಗಿ ಬಾ!
ಹಿಂತಿರುಗಿ ಬಾ, ಹಿಂತಿರುಗಿ ಬಾ, ನಾವು ನಿನ್ನನ್ನು ನೋಡಬೇಕು!
ಮಹನಯಿಮ್ ನೃತ್ಯವನ್ನು ನೋಡುವಂತೆ
ಶೂಲಾಮಿತಳನ್ನೇಕೆ ನೀವು ದೃಷ್ಟಿಸಿ ನೋಡುತ್ತಿರುವಿರಿ?