ಚೆಫನ್ಯ
1
1 ಚೆಫನ್ಯನಿಗೆ ಯೆಹೋವನು ಕೊಟ್ಟ ಸಂದೇಶ. ಆಮೋನನ ಮಗನಾದ ಯೋಷೀಯನು ಯೆಹೂದ ಪ್ರಾಂತ್ಯದ ಅರಸನಾಗಿದ್ದಾಗ ಈ ಸಂದೇಶವು ಅವನಿಗೆ ದೊರಕಿತು. ಚೆಫನ್ಯನು ಕೂಷನ ಮಗನು; ಕೂಷನು ಗೆದಲ್ಯನ ಮಗನು; ಗೆದಲ್ಯನು ಅಮರ್ಯನ ಮಗನು; ಅಮರ್ಯನು ಹಿಜ್ಕೀಯನ ಮಗನು.
ಜನರಿಗೆ ನ್ಯಾಯತೀರಿಸುವ ಯೆಹೋವನ ದಿನ
2 ಯೆಹೋವನು ಹೇಳುವುದೇನೆಂದರೆ, “ಭೂಲೋಕದಲ್ಲಿರುವದೆಲ್ಲವನ್ನು ನಾನು ನಾಶಮಾಡುತ್ತೇನೆ.
3 ಲೋಕದೊಳಗಿರುವ ಎಲ್ಲಾ ಮನುಷ್ಯರನ್ನೂ ಪ್ರಾಣಿಗಳನ್ನೂ ಆಕಾಶದಲ್ಲಿರುವ ಎಲ್ಲಾ ಪಕ್ಷಿಗಳನ್ನೂ ನೀರಿನಲ್ಲಿರುವ ಎಲ್ಲಾ ಮೀನುಗಳನ್ನೂ ನಾನು ನಾಶಮಾಡುವೆನು. ಎಲ್ಲಾ ದುಷ್ಟ ಜನರನ್ನೂ ಮತ್ತು ಅವರನ್ನು ಪಾಪಕ್ಕೆ ನಡಿಸುವ ಎಲ್ಲಾ ವಸ್ತುಗಳನ್ನೂ ನಾನು ನಾಶಮಾಡುವೆನು. ಭೂಮಿಯ ಮೇಲಿರುವ ಎಲ್ಲಾ ಜನರನ್ನು ನಿರ್ಮೂಲ ಮಾಡುವೆನು.” ಈ ವಿಷಯಗಳನ್ನು ಯೆಹೋವನು ತಿಳಿಸಿದನು.
4 ಯೆಹೋವನು ಹೀಗೆ ನುಡಿದನು: “ನಾನು ಯೆಹೂದವನ್ನೂ ಜೆರುಸಲೇಮಿನಲ್ಲಿ ವಾಸಿಸುವ ಜನರನ್ನೂ ದಂಡಿಸುವೆನು. ಬಾಳನ ಪೂಜೆಯ ಪ್ರತಿಯೊಂದು ಚಿಹ್ನೆಯನ್ನೂ ಅದನ್ನು ಪೂಜಿಸುವ ಪುರೋಹಿತರನ್ನೂ ಮತ್ತು ಯಾವ ಜನರು
5 ತಮ್ಮ ಮಾಳಿಗೆಯ ಮೇಲೆ ಹತ್ತಿ ನಕ್ಷತ್ರಗಳನ್ನು ಆರಾಧಿಸುತ್ತಾರೋ ನಾನು ಅವರನ್ನು ನಿರ್ಮೂಲ ಮಾಡುತ್ತೇನೆ. ಜನರು ತಮ್ಮ ಸುಳ್ಳು ಪುರೋಹಿತರನ್ನು ಮರೆತುಬಿಡುವರು. ಕೆಲವರು ತಮ್ಮನ್ನು ನನ್ನ ಆರಾಧಕರೆಂದು ಹೇಳಿಕೊಳ್ಳುವರು. ಆದರೆ ಈಗ ಅವರು ಸುಳ್ಳು ದೇವರಾದ ಮಲ್ಕಾಮನನ್ನು ಆರಾಧಿಸುತ್ತಾರೆ. ಅಂಥವರನ್ನು ಅವರ ಸ್ಥಳಗಳಿಂದ ತೆಗೆದುಹಾಕುವೆನು.
6 ಕೆಲವರು ಯೆಹೋವನಾದ ನನ್ನಿಂದ ತೊಲಗಿಹೋದರು. ನನ್ನನ್ನು ಹಿಂಬಾಲಿಸುವುದನ್ನು ನಿಲ್ಲಿಸಿಬಿಟ್ಟರು. ಅವರು ಯೆಹೋವನನ್ನು ಸಹಾಯಕ್ಕಾಗಿ ಬೇಡುವಂತದ್ದನ್ನು ನಿಲ್ಲಿಸಿದರು. ಅವರನ್ನು ನಾನು ಅವರ ಸ್ಥಳಗಳಿಂದ ತೆಗೆದುಹಾಕುವೆನು.”
7 ದೇವರಾದ ಯೆಹೋವನ ಸನ್ನಿಧಿಯಲ್ಲಿ ಮೌನವಾಗಿರಿ. ಯಾಕೆಂದರೆ ಯೆಹೋವನು ಜನರಿಗೆ ನ್ಯಾಯತೀರಿಸುವ ದಿನವು ಹತ್ತಿರವಾಯಿತು. ಯೆಹೋವನು ತನ್ನ ಯಜ್ಞವನ್ನು ತಯಾರು ಮಾಡಿ ತನ್ನ ಆಮಂತ್ರಿತರನ್ನು ಸಿದ್ಧವಾಗಿರಲು ಹೇಳಿದ್ದಾನೆ.
8 “ಯೆಹೋವನ ಯಜ್ಞದ ದಿನದಲ್ಲಿ ನಾನು ರಾಜಕುಮಾರರನ್ನೂ ಇತರ ನಾಯಕರುಗಳನ್ನೂ ಶಿಕ್ಷಿಸುವೆನು. ಪರದೇಶದ ಬಟ್ಟೆಯನ್ನು ತೊಟ್ಟುಕೊಳ್ಳುವ ಪ್ರತಿಯೊಬ್ಬರನ್ನೂ ನಾನು ಶಿಕ್ಷಿಸುವೆನು.
9 ಆ ಸಮಯದಲ್ಲಿ ಹೊಸ್ತಿಲನ್ನು ಹಾರಿ ತಮ್ಮ ಒಡೆಯರ ಮನೆಯನ್ನು ತಮ್ಮ ಸುಳ್ಳು, ಮೋಸ, ಹಿಂಸೆಗಳಿಂದ ತುಂಬಿರುವವರನ್ನು ಶಿಕ್ಷಿಸುತ್ತೇನೆ” ಎಂದು ಯೆಹೋವನು ನುಡಿಯುತ್ತಾನೆ.
10 ಯೆಹೋವನು ಇನ್ನೂ ಹೇಳುವುದೇನೆಂದರೆ, “ಆ ಸಮಯದಲ್ಲಿ ಜೆರುಸಲೇಮಿನ ಮೀನು ಬಾಗಿಲಲ್ಲಿ ಜನರು ಸಹಾಯಕ್ಕಾಗಿ ಮೊರೆಯಿಡುವರು. ನಗರದ ಇತರ ಕಡೆಗಳಿಂದ ಜನರು ರೋಧಿಸುವರು. ನಗರದ ಸುತ್ತಲಿರುವ ಬೆಟ್ಟಗಳಲ್ಲಿ ನಾಶವಾಗುವ ಶಬ್ದವನ್ನು ಜನರು ಕೇಳುವರು.
11 ನಗರದ ಕೆಳಗಿನ ಭಾಗದಲ್ಲಿರುವವರೇ, ನೀವು ಅಳುವಿರಿ. ಯಾಕೆಂದರೆ ನಿಮ್ಮಲ್ಲಿರುವ ಧನಿಕರೂ ವ್ಯಾಪಾರಸ್ತರೂ ನಾಶವಾಗುವರು.
12 “ಆ ಸಮಯಗಳಲ್ಲಿ ನಾನು ದೀಪವನ್ನು ಹಚ್ಚಿ ಜೆರುಸಲೇಮಿನಲ್ಲಿ ಹುಡುಕಾಡುವೆನು. ತಮ್ಮ ಸ್ವಂತ ರೀತಿಯಲ್ಲಿ ನಡೆದು ತೃಪ್ತಿಯಾಗಿರುವ ಜನರನ್ನು ಕಂಡುಕೊಳ್ಳುವೆನು. ಅವರು ಹೇಳುವುದೇನೆಂದರೆ, ‘ಯೆಹೋವನು ಏನೂ ಮಾಡುವುದಿಲ್ಲ. ಅವನು ಸಹಾಯವನ್ನೂ ಮಾಡುವುದಿಲ್ಲ. ಜನರಿಗೆ ಕೆಡುಕನ್ನೂ ಮಾಡುವುದಿಲ್ಲ.’ ಅಂಥವರನ್ನು ನಾನು ಹಿಡಿದು ಶಿಕ್ಷಿಸುವೆನು.
13 ಆಗ ಇತರ ಜನರು ಬಂದು ಅವರ ಐಶ್ವರ್ಯವನ್ನು ಸುಲುಕೊಂಡು ಅವರ ಮನೆಯನ್ನು ನಾಶಮಾಡುವರು. ಆ ಸಮಯಗಳಲ್ಲಿ ಮನೆಕಟ್ಟಿದ ಜನರು ಅದರಲ್ಲಿ ವಾಸಮಾಡುವುದಿಲ್ಲ. ದ್ರಾಕ್ಷಿತೋಟವನ್ನು ನೆಟ್ಟವರು, ಅದರ ಹಣ್ಣಿನ ರಸವನ್ನು ಕುಡಿಯುವುದಿಲ್ಲ. ಬೇರೆಯವರು ಅದನ್ನು ಪಡೆದುಕೊಳ್ಳುವರು.”
14 ಯೆಹೋವನ ನ್ಯಾಯತೀರ್ಪಿನ ದಿನವು ಬೇಗನೇ ಬರುತ್ತದೆ; ಅತ್ಯಂತ ವೇಗವಾಗಿ ಬರುತ್ತಿದೆ. ಆ ದಿನದಂದು ಜನರು ಬಹಳವಾಗಿ ದುಃಖಿಸುವರು. ಧೈರ್ಯಶಾಲಿಗಳಾದ ಸೈನಿಕರೂ ಅಳುವರು.
15 ಯೆಹೋವನು ತನ್ನ ಕೋಪವನ್ನು ಆ ದಿವಸದಲ್ಲಿ ತೋರಿಸುವನು. ಆ ದಿವಸಗಳಲ್ಲಿ ಮಹಾ ಸಂಕಟಗಳಿರುವವು. ಅವು ನಾಶನದ ದಿವಸಗಳಾಗಿರುವವು. ಆ ದಿವಸವು ಕತ್ತಲು, ಕಾರ್ಮುಗಿಲು ಕವಿದ ಬಿರುಗಾಳಿಯ ದಿವಸವಾಗಿರುವುದು.
16 ಅದು ಒಂದು ಯುದ್ಧದ ದಿವಸದಂತಿರುವುದು; ಎಲ್ಲೆಲ್ಲೂ ಕೊಂಬು, ತುತ್ತೂರಿಗಳ ಧ್ವನಿಗಳನ್ನು ಜನರು ಬುರುಜು, ಕೊತ್ತಲಗಳಿಂದ ಕೇಳಿಸಿಕೊಳ್ಳುವರು.
17 ಯೆಹೋವನು ಹೇಳುವುದೇನೆಂದರೆ, “ಜನರ ಜೀವನವನ್ನು ನಾನು ಬಹು ಕಷ್ಟಕರವಾಗಿ ಮಾಡುವೆನು. ಅವರು ಕುರುಡರಂತೆ ಅತ್ತಿತ್ತ ತೊಳಲಾಡುವರು. ತಾವು ಎಲ್ಲಿಗೆ ಹೋಗುತ್ತಿದ್ದಾರೆಂದು ಅವರಿಗೆ ತಿಳಿಯದು. ಯಾಕೆಂದರೆ ಯೆಹೋವನಿಗೆ ವಿರುದ್ಧವಾಗಿ ಪಾಪ ಮಾಡಿದ್ದಾರೆ. ಅನೇಕ ಮಂದಿ ಕೊಲ್ಲಲ್ಪಡುವರು. ಅವರ ರಕ್ತವು ಭೂಮಿಗೆ ಸುರಿಯಲ್ಪಡುವುದು. ಅವರ ಹೆಣಗಳು ಮಲದ ಹಾಗೆ ನೆಲದಲ್ಲಿ ಬೀಳುವವು.
18 ಅವರ ಬೆಳ್ಳಿಬಂಗಾರಗಳು ಅವರ ಸಹಾಯಕ್ಕೆ ಬಾರವು. ಆ ಸಮಯದಲ್ಲಿ ಯೆಹೋವನು ಕೋಪಾಗ್ನಿಯಿಂದ ತುಂಬಿದವನಾಗುವನು. ಯೆಹೋವನು ಇಡೀ ಪ್ರಪಂಚವನ್ನೇ ನಾಶಮಾಡುವನು. ಭೂಮಿಯ ಮೇಲಿರುವ ಪ್ರತಿಯೊಬ್ಬನನ್ನು ಯೆಹೋವನು ಸಂಪೂರ್ಣವಾಗಿ ನಾಶಮಾಡುವನು.”