15
ದೇವರು ಅಬ್ರಾಮನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು 
 1 ಈ ಸಂಗತಿಗಳು ನಡೆದ ಮೇಲೆ ಅಬ್ರಾಮನಿಗೆ ದರ್ಶನದಲ್ಲಿ ಯೆಹೋವನ ವಾಕ್ಯವುಂಟಾಗಿ ಹೇಳಿದೇನೆಂದರೆ, “ಅಬ್ರಾಮನೇ, ಭಯಪಡಬೇಡ, ನಾನು ನಿನಗೆ ಗುರಾಣಿಯಾಗಿದ್ದೇನೆ ಮತ್ತು ನಿನಗೆ ಅತ್ಯಧಿಕ ಬಹುಮಾನವು ದೊರೆಯುವುದು.” 
 2 ಅದಕ್ಕೆ ಅಬ್ರಾಮನು, “ಕರ್ತನಾದ ಯೆಹೋವನೇ, ನನಗೆ ಏನು ಕೊಟ್ಟರೇನು? ನಾನು ಸಂತಾನವಿಲ್ಲದವನು. ಮತ್ತು ನನ್ನ ಆಸ್ತಿಯೆಲ್ಲಾ, ದಮಸ್ಕದವನಾದ ಎಲೀಯೆಜರನ ಪಾಲಾಗುತ್ತದೆಯಲ್ಲಾ?” ಎಂದನು.  3 ಪುನಃ ಅಬ್ರಾಮನು ಹೇಳಿದ್ದೇನೆಂದರೆ, “ನೀನು ನನಗೆ ಸಂತಾನ ಕೊಡಲಿಲ್ಲವಾದ್ದರಿಂದ, ನೋಡು, ನನ್ನ ಮನೆಯಲ್ಲಿ ಹುಟ್ಟಿದವನೇ ನನಗೆ ಬಾಧ್ಯಸ್ಥನಾಗಬೇಕಾಯಿತು” ಎಂದು ಹೇಳಿದನು. 
 4 ಯೆಹೋವನ ವಾಕ್ಯವು ಅವನ ಸಂಗಡ ಮಾತನಾಡಿ, “ಈ ಮನುಷ್ಯನು ನಿನಗೆ ಬಾಧ್ಯಸ್ಥನಾಗುವುದಿಲ್ಲ; ಆದರೆ ನಿನ್ನ ಹೊಟ್ಟೆಯಲ್ಲಿ ಹುಟ್ಟುವವನೇ ನಿನಗೆ ಬಾಧ್ಯಸ್ಥನಾಗುವನು” ಎಂದು ಹೇಳಿ ಅಬ್ರಾಮನನ್ನು ಹೊರಗೆ ಕರೆದುಕೊಂಡು ಬಂದು,  5 “ಆಕಾಶದ ಕಡೆಗೆ ನೋಡು, ನಕ್ಷತ್ರಗಳನ್ನು ಲೆಕ್ಕಿಸುವುದು ನಿನ್ನಿಂದಾದರೆ ಲೆಕ್ಕಿಸು.” ನಂತರ ಯೆಹೋವನು ಅಬ್ರಾಮನಿಗೆ, “ನಿನ್ನ ಸಂತಾನವು ನಕ್ಷತ್ರಗಳಷ್ಟಾಗುವುದು” ಎಂದು ಹೇಳಿದನು. 
 6 ಅಬ್ರಾಮನು ಯೆಹೋವನನ್ನು ನಂಬಿದನು; * 15:6 ಗಲಾತ್ಯ. 3:6, ರೋಮಾ. 4:3, ಯಾಕೋಬ 3:26.ಯೆಹೋವನು ಅವನ ನಂಬಿಕೆಯನ್ನು ಅವನ ಲೆಕ್ಕಕ್ಕೆ ನೀತಿಯೆಂದು ಪರಿಗಣಿಸಿದನು. 
 7 ನಂತರ ಆತನು ಅಬ್ರಾಮನಿಗೆ, “ಈ ದೇಶವನ್ನು ನಿನಗೆ ಬಾಧ್ಯಸ್ಥವಾಗಿ ಕೊಡುವುದಕ್ಕೋಸ್ಕರ ನಿನ್ನನ್ನು ಊರ್ ಎಂಬ ಕಲ್ದೀಯರ ಪಟ್ಟಣದಿಂದ ಬರಮಾಡಿದ ಯೆಹೋವನು ನಾನೇ” ಎಂದು ಹೇಳಿದನು. 
 8 “ಕರ್ತನಾದ ಯೆಹೋವನೇ, ನಾನು ಇದನ್ನು ಬಾಧ್ಯವಾಗಿ ಹೊಂದುವೆನೆಂದು ತಿಳಿದುಕೊಳ್ಳುವುದು ಹೇಗೆ?” ಎಂದು ಕೇಳಿದನು. 
 9 ಅದಕ್ಕೆ ಆತನು ಯೆಹೋವನಿಗೆ, “ನೀನು ಮೂರು ವರ್ಷದ ಮಣಕ, ಒಂದು ಆಡು, ಒಂದು ಟಗರು, ಒಂದು ಬೆಳವಕ್ಕಿ, ಒಂದು ಪಾರಿವಾಳದ ಮರಿಯನ್ನೂ ತೆಗೆದುಕೊಂಡು ಬಾ” ಎಂದನು. 
 10 ಅವನು ಇವುಗಳನ್ನೆಲ್ಲಾ ತೆಗೆದುಕೊಂಡು ಬಂದು ಮೃಗಗಳನ್ನು ಎರಡಾಗಿ ಸೀಳಿ, ಒಂದು ತುಂಡನ್ನು ಇನ್ನೊಂದರ ಎದುರಾಗಿ ಇಟ್ಟನು; ಪಕ್ಷಿಗಳನ್ನು ಮಾತ್ರ ಸೀಳಲಿಲ್ಲ.  11 ಆ ಪಶುಗಳ ಮೇಲೆ ಹದ್ದುಗಳು ಎರಗಲು ಅಬ್ರಾಮನು ಅವುಗಳನ್ನು ಓಡಿಸಿಬಿಟ್ಟನು. 
 12 ಹೊತ್ತು ಮುಣುಗುತ್ತಿರುವಾಗ ಅಬ್ರಾಮನಿಗೆ ಗಾಢನಿದ್ರೆ ಹತ್ತಿತು; ಕಾರ್ಗತ್ತಲು ಅವನ ಮೇಲೆ ಕವಿಯಿತು; ಅವನು ಮಹಾಭೀತಿಯಿಂದ ಭಯಭ್ರಾಂತನಾದನು.  13 ಆಗ ಯೆಹೋವನು ಅಬ್ರಾಮನಿಗೆ, “ನೀನು ಚೆನ್ನಾಗಿ ತಿಳಿಯತಕ್ಕದ್ದೇನೆಂದರೆ, ನಿನ್ನ ಸಂತತಿಯವರು ಅನ್ಯದೇಶದಲ್ಲಿ ಪ್ರವಾಸಿಯಾಗಿ ವಾಸವಾಗಿದ್ದು ಆ ದೇಶದವರಿಗೆ ದಾಸರಾಗುವರು. ನಾನೂರು ವರ್ಷ ಆ ದೇಶದವರಿಂದ ಬಾಧೆಪಡುವರು.  14 ಅವರನ್ನು ದಾಸರನ್ನಾಗಿ ಮಾಡಿಸಿಕೊಂಡ ಜನಾಂಗವನ್ನು ನಾನು ದಂಡಿಸಿದ ನಂತರ ಅವರು ಬಹಳ ಸಂಪತ್ತುಳ್ಳವರಾಗಿ ಆ ದೇಶದಿಂದ ಬಿಡುಗಡೆಯಾಗಿ ಹೊರಟು ಬರುವರು.  15 ನೀನಂತೂ ಸಮಾಧಾನದೊಡನೆ ಪೂರ್ವಿಕರ ಬಳಿಗೆ ಸೇರುವಿ, ಬಹಳ ವೃದ್ಧನಾಗಿ ಉತ್ತರಕ್ರಿಯೆಯನ್ನು ಹೊಂದುವಿ.  16 ನಿನ್ನ ಸಂತತಿಯ ನಾಲ್ಕನೆಯ ತಲೆಮಾರಿನವರು ಇಲ್ಲಿಗೆ ತಿರುಗಿ ಬರುವರು, ಅಮೋರಿಯರ ಅಪರಾಧವು ಇನ್ನೂ ಪೂರ್ಣಸ್ಥಿತಿಗೆ ಬರಲಿಲ್ಲ” ಎಂದು ಹೇಳಿದನು. 
 17 ಹೊತ್ತು ಮುಳುಗಿ ಕಾರ್ಗತ್ತಲಾದಾಗ, ಇಗೋ, ಹೊಗೆ ಹಾಯುವ ಒಲೆಯೂ ಉರಿಯುವ ದೀಪವೂ ಕಾಣಿಸಿ ಆ ತುಂಡುಗಳ ಮಧ್ಯದಲ್ಲಿ ಹಾದು ಹೋದವು. 
 18 ಆ ದಿನದಲ್ಲಿ ಯೆಹೋವನು ಅಬ್ರಾಮನ ಸಂಗಡ ಒಡಂಬಡಿಕೆ ಮಾಡಿಕೊಂಡು, “ಐಗುಪ್ತ ದೇಶದ ನದಿಯಿಂದ ಯೂಫ್ರೆಟಿಸ್ ಮಹಾ ನದಿಯವರೆಗೂ ಇರುವ ಈ ದೇಶವನ್ನೆಲ್ಲಾ ನಿನ್ನ ಸಂತತಿಯವರಿಗೆ ಕೊಟ್ಟಿದ್ದೇನೆ.  19 ಕೇನಿಯರೂ, ಕೆನಿಜೀಯರೂ, ಕದ್ಮೋನಿಯರೂ,  20 ಹಿತ್ತಿಯರೂ, ಪೆರಿಜೀಯರೂ, ರೆಫಾಯರೂ,  21 ಅಮೋರಿಯರೂ, ಕಾನಾನ್ಯರೂ, ಗಿರ್ಗಾಷಿಯರೂ, ಯೆಬೂಸಿಯರೂ ವಾಸವಾಗಿರುವ ದೇಶವನ್ನು ನಾನು ನಿನ್ನ ಸಂತತಿಗೆ ಕೊಟ್ಟಿದ್ದೇನೆ,” ಎಂದು ವಾಗ್ದಾನ ಮಾಡಿದನು.