98
ಯೆಹೋವರಾಜನ ರಕ್ಷಣೆಯನ್ನು ಕೊಂಡಾಡುವುದು 
ಕೀರ್ತ 67 
 1 ಯೆಹೋವನಿಗೆ ಹೊಸ ಕೀರ್ತನೆಯನ್ನು ಹಾಡಿರಿ; 
ಆತನು ಅದ್ಭುತಕೃತ್ಯಗಳನ್ನು ನಡೆಸಿದ್ದಾನೆ. 
ಆತನ ಬಲಗೈಯೂ, ಪರಿಶುದ್ಧಬಾಹುವೂ ಜಯವನ್ನು ಉಂಟುಮಾಡಿವೆ. 
 2 ಯೆಹೋವನು ತನ್ನ ರಕ್ಷಣೆಯನ್ನು ಪ್ರಕಟಿಸಿದ್ದಾನೆ; 
ಜನಾಂಗಗಳೆದುರಿಗೆ ತನ್ನ ನೀತಿಯನ್ನು ತೋರ್ಪಡಿಸಿದ್ದಾನೆ. 
 3 ಆತನು ಇಸ್ರಾಯೇಲನ ಮನೆತನದವರ ಬಗ್ಗೆ ಇದ್ದ, 
ತನ್ನ ಪ್ರೀತಿ, ಸತ್ಯತೆಗಳನ್ನು ನೆನಪುಮಾಡಿಕೊಂಡಿದ್ದಾನೆ. 
ಭೂಲೋಕದ ಎಲ್ಲಾ ಕಡೆಯವರೂ, 
ನಮ್ಮ ದೇವರ ರಕ್ಷಣಾಕಾರ್ಯವನ್ನು ನೋಡಿದ್ದಾರೆ. 
 4 ಸಮಸ್ತ ಭೂನಿವಾಸಿಗಳೇ, 
ಯೆಹೋವನಿಗೆ ಜಯಘೋಷಮಾಡಿರಿ; 
ಹರ್ಷಿಸಿರಿ, ಉತ್ಸಾಹಧ್ವನಿಮಾಡಿ ಹಾಡಿರಿ. 
 5 ಕಿನ್ನರಿಯೊಡನೆ ಯೆಹೋವನನ್ನು ಸ್ತುತಿಸಿರಿ; 
ಕಿನ್ನರಿಯನ್ನು ನುಡಿಸುತ್ತಾ ಭಜಿಸಿರಿ. 
 6 ತುತ್ತೂರಿಗಳನ್ನೂ, ಕೊಂಬನ್ನೂ ಊದುತ್ತಾ, 
ಯೆಹೋವರಾಜನಿಗೆ ಜಯಘೋಷಮಾಡಿರಿ. 
 7 ಯೆಹೋವನ ಮುಂದೆ ಸಮುದ್ರವೂ, ಅದರಲ್ಲಿರುವುದೆಲ್ಲವೂ, 
ಭೂಮಿಯೂ, ಅದರ ನಿವಾಸಿಗಳೂ ಘೋಷಿಸಲಿ. 
 8 ನದಿಗಳು ಚಪ್ಪಾಳೆ ಹೊಡೆಯಲಿ; 
ಪರ್ವತಗಳೆಲ್ಲಾ ಉತ್ಸಾಹಧ್ವನಿಮಾಡಲಿ. 
 9 ಆತನು ಭೂನಿವಾಸಿಗಳಿಗೆ ನ್ಯಾಯತೀರಿಸಲಿಕ್ಕೆ ಬರುತ್ತಾನೆ; 
ಆತನು ಲೋಕಕ್ಕೆ ನೀತಿಗನುಸಾರವಾಗಿಯೂ, 
ಜನಾಂಗಗಳಿಗೆ ಯಥಾರ್ಥವಾಗಿಯೂ ತೀರ್ಪುಕೊಡುವನು.