೧೮
ಯೇಸು ಪ್ರಾರ್ಥನೆಯ ವಿಷಯದಲ್ಲಿ ಅನ್ಯಾಯಗಾರನಾದ ನ್ಯಾಯಾಧಿಪತಿಯ ಸಾಮ್ಯದ ಮೂಲಕ ಉಪದೇಶಮಾಡಿದ್ದು 
 ೧ ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥನೆ ಮಾಡುತ್ತಿರಬೇಕೆಂಬುದಕ್ಕೆ ಆತನು ಅವರಿಗೆ ಒಂದು ಸಾಮ್ಯನ್ನು ಹೇಳಿದನು.  ೨ ಅದೇನಂದರೆ - ಒಂದು ಊರಿನಲ್ಲಿ ಒಬ್ಬ ನ್ಯಾಯಾಧಿಪತಿ ಇದ್ದನು; ಅವನು ದೇವರಿಗೆ ಹೆದರದೆ ಮನುಷ್ಯರನ್ನು ಲಕ್ಷ್ಯಮಾಡದೆ ಇದ್ದವನು.  ೩ ಅದೇ ಊರಿನಲ್ಲಿ ಒಬ್ಬ ವಿಧವೆ ಇದ್ದಳು. ಆಕೆಯು ಅವನ ಬಳಿಗೆ ಬಂದು - ನ್ಯಾಯವಿಚಾರಣೆಮಾಡಿ ನನ್ನ ವಿರೋಧಿಯಿಂದ ನನ್ನನ್ನು ಬಿಡಿಸು ಎಂದು ಕೇಳಿಕೊಳ್ಳುತ್ತಿದ್ದಳು.  ೪ ಅವನು ಸ್ವಲ್ಪ ಕಾಲ ಮನಸ್ಸುಕೊಡಲಿಲ್ಲ. ಆ ಮೇಲೆ ಅವನು-ನಾನು ದೇವರಿಗೆ ಹೆದರುವವನಲ್ಲ, ಮನುಷ್ಯರನ್ನು ಲಕ್ಷ್ಯ ಮಾಡುವವನಲ್ಲ;  ೫ ಆದರೂ ಈ ವಿಧವೆ ನನ್ನನ್ನು ಕಾಡುತ್ತಾ ಬರುತ್ತಿರುವುದರಿಂದ ಈಕೆಯ ನ್ಯಾಯವನ್ನು ವಿಚಾರಿಸಿ ತೀರ್ಪುಮಾಡುವೆನು; ಇಲ್ಲವಾದರೆ ಈಕೆ ಪದೇಪದೇ ಬಂದು ನನ್ನ ತಲೆ ಕೆಡಿಸಿಬಿಟ್ಟಾಳು, ಎಂದು ತನ್ನೊಳಗೆ ಅಂದುಕೊಂಡನು.  ೬ ಸ್ವಾಮಿಯು ಈ ಸಾಮ್ಯವನ್ನು ಹೇಳಿದ ಮೇಲೆ - ಅನ್ಯಾಯಗಾರನಾದ ಈ ನ್ಯಾಯಾಧಿಪತಿ ಅಂದುಕೊಂಡದ್ದನ್ನು ಆಲೋಚಿಸಿಕೊಳ್ಳಿರಿ.  ೭ ದೇವರಾದುಕೊಂಡವರು ಆತನಿಗೆ ಹಗಲುರಾತ್ರಿ ಮೊರೆಯಿಡುವಲ್ಲಿ ಆತನು ಅವರ ವಿಷಯದಲ್ಲಿ ತಡಮಾಡಿದರೂ ಅವರ ನ್ಯಾಯವನ್ನು ತೀರಿಸದೆ ಇರುವನೇ? ಅವರಿಗೆ ಬೇಗ ನ್ಯಾಯವನ್ನು ತೀರಿಸದೆ ಇರುವನೇ? ಅವರಿಗೆ ಬೇಗ ನ್ಯಾಯತೀರಿಸುವನೆಂದು ನಿಮಗೆ ಹೇಳುತ್ತೇನೆ.  ೮ ಹೀಗಿದ್ದರೂ ಮನುಷ್ಯಕುಮಾರನು ಬರುವಾಗ ಭೂಮಿಯ ಮೇಲೆ ನಂಬಿಕೆಯನ್ನು ಕಾಣುಲು ಸಾಧ್ಯವೋ? ಅಂದನು. 
ಪ್ರಾರ್ಥನೆಮಾಡುವದಕ್ಕಾಗಿ ದೇವಾಲಯಕ್ಕೆ ಹೋದ ಫರಿಸಾಯನನ್ನೂ ಸುಂಕದವನನ್ನೂ ಕುರಿತದ್ದು 
 ೯ ಇದಲ್ಲದೇ ತಾವೇ ನೀತಿವಂತರೆಂದು ತಮ್ಮಲ್ಲಿ ಭರವಸವಿಟ್ಟುಕೊಂಡು ಉಳಿದವರನ್ನು ತಿರಸ್ಕಾರಮಾಡುವಂತಹ ಕೆಲವರಿಗೆ ಒಂದು ಸಾಮ್ಯವನ್ನು ಹೇಳಿದನು.  ೧೦ ಅದೇನಂದರೆ - ಪ್ರಾರ್ಥನೆಮಾಡಬೇಕೆಂದು ಇಬ್ಬರು ಮನುಷ್ಯರು ದೇವಾಲಯಕ್ಕೆ ಹೋದರು; ಒಬ್ಬನು ಫರಿಸಾಯನು, ಒಬ್ಬನು ಸುಂಕದವನು.  ೧೧ ಫರಿಸಾಯನು ನಿಂತುಕೊಂಡು ಪ್ರಾರ್ಥಿಸುವಾಗ ತನ್ನೊಳಗೆ - ದೇವರೇ, ದರೋಡೆಕೋರರು, ಅನ್ಯಾಯಗಾರರೂ, ಹಾದರಮಾಡುವವರೂ ಆಗಿರುವ ಉಳಿದ ಜನರಂತೆ ನಾನಲ್ಲ, ಈ ಸುಂಕದವನಂತೆಯೂ ಅಲ್ಲ; ಆದದರಿಂದ ನಿನಗೆ ಸ್ತೋತ್ರಮಾಡುತ್ತೇನೆ.  ೧೨ ವಾರಕ್ಕೆ ಎರಡಾವರ್ತಿ ಉಪವಾಸಮಾಡುತ್ತೇನೆ; ನಾನು ಸಂಪಾದಿಸಿದ ಎಲ್ಲಾದರಲ್ಲಿಯೂ ಹತ್ತರಲ್ಲೊಂದು ಪಾಲು ಕೊಡುತ್ತೇನೆ ಎಂದು ಹೇಳಿಕೊಂಡು ಪ್ರಾರ್ಥಿಸಿದನು.  ೧೩ ಆದರೆ ಆ ಸುಂಕದವನು ದೂರದಲ್ಲಿ ನಿಂತು ಆಕಾಶದ ಕಡೆಗೆ ಕಣ್ಣೆತ್ತಿ ನೋಡುವದಕ್ಕೂ ಮನಸ್ಸಿಲ್ಲದೆ ಎದೆಯನ್ನು ಬಡಿದುಕೊಳ್ಳುತ್ತಾ - ದೇವರೇ, ಪಾಪಿಯಾದ ನನ್ನನ್ನು ಕರುಣಿಸು ಅಂದನು.  ೧೪ ಇವನು ನೀತಿವಂತನೆಂದು ನಿರ್ಣಯಿಸಲ್ಪಟ್ಟವನಾಗಿ ತನ್ನ ಮನೆಗೆ ಹೋದನು, ಆ ಫರಿಸಾಯನು ಅಂಥವನಾಗಿ ಹೋಗಲಿಲ್ಲ ಎಂದು ನಿಮಗೆ ಹೇಳುತ್ತೇನೆ. ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು; ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು ಅಂದನು. 
ಯೇಸು ಚಿಕ್ಕ ಮಕ್ಕಳನ್ನು ಆಶೀರ್ವದಿಸಿದ್ದು. 
(ಮತ್ತಾಯನು 19:13-15; ಮಾರ್ಕ 10:13-16) 
 ೧೫ ಕೆಲವರು ತಮ್ಮ ಕೂಸುಗಳನ್ನು ಯೇಸುವಿನಿಂದ ಮುಟ್ಟಿಸಬೇಕೆಂದು ಆತನ ಬಳಿಗೆ ತರಲು ಶಿಷ್ಯರು ಕಂಡು ಅವರನ್ನು ಗದರಿಸಿದರು.  ೧೬ ಆದರೆ ಯೇಸು ಆ ಕೂಸುಗಳನ್ನು ತನ್ನ ಬಳಿಗೆ ಕರತರಿಸಿ-ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ; ಅವುಗಳಿಗೆ ಅಡ್ಡಿಮಾಡಬೇಡಿರಿ; ದೇವರ ರಾಜ್ಯವು ಇಂಥವರದೇ.  ೧೭ ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾರು ಶಿಶುಭಾವದಿಂದ ದೇವರ ರಾಜ್ಯವನ್ನು ಅಂಗೀಕರಿಸುವುದಿಲ್ಲವೋ ಅವನು ಅದರಲ್ಲಿ ಸೇರುವದೇ ಇಲ್ಲ ಅಂದನು. 
ನಿತ್ಯಜೀವವನ್ನು ಹೇಗೆ ಪಡೆಯಬೇಕೆಂದು ಒಬ್ಬ ಐಶ್ವರ್ಯವಂತನು ಕೇಳಿದ್ದಕ್ಕೆ ಯೇಸು ಹಣದ ಭ್ರಾಂತಿಯಿಂದಾಗುವ ಕೇಡನ್ನು ತೋರಿಸಿದ್ದು. 
(ಮತ್ತಾಯನು 19:16-29; ಮಾರ್ಕ 10:17-30) 
 ೧೮ ಒಬ್ಬ ಅಧಿಕಾರಿಯು ಬಂದು - ಒಳ್ಳೇ ಬೋಧಕನೇ, ನಾನು ನಿತ್ಯಜೀವಕ್ಕೆ ಬಾಧ್ಯನಾಗುವಂತೆ ಏನು ಮಾಡಬೇಕು ಎಂದು ಆತನನ್ನು ಕೇಳಲಾಗಿ  ೧೯ ಯೇಸು ಅವನಿಗೆ - ನನ್ನನ್ನು ಒಳ್ಳೆಯವನೆಂದು ಯಾಕೆ ಹೇಳುತ್ತೀ? ದೇವರೊಬ್ಬನೇ ಹೊರತು ಮತ್ತಾವನೂ ಒಳ್ಳೆಯವನಲ್ಲ.  ೨೦ ವ್ಯಭಿಚಾರ ಮಾಡಬಾರದು; ನರಹತ್ಯ ಮಾಡಬಾರದು; ಕದಿಯ ಬಾರದು; ಸುಳ್ಳುಸಾಕ್ಷಿ ಹೇಳಬಾರದು; ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು ಎಂಬ ದೇವರಾಜ್ಞೆಗಳು ನಿನಗೆ ಗೊತ್ತಿವೆಯಷ್ಟೆ, ಎಂದು ಹೇಳಿದನು.  ೨೧ ಅದಕ್ಕವನು - ನಾನು ಚಿಕ್ಕಂದಿನಿಂದಲೂ ಇವೆಲ್ಲಕ್ಕೂ ಸರಿಯಾಗಿ ನಡಕೊಂಡು ಬಂದಿದ್ದೇನೆ ಎಂದು ಹೇಳಲು  ೨೨ ಯೇಸು ಅದನ್ನು ಕೇಳಿ ಅವನಿಗೆ - ಇನ್ನೂ ನಿನಗೆ ಒಂದು ಕೊರತೆಯಿದೆ; ನಿನಗಿರುವದೆಲ್ಲ ಮಾರಿ ಬಡವರಿಗೆ ಹಂಚಿಕೊಡು; ಪರಲೋಕದಲ್ಲಿ ನಿನಗೆ ಸಂಪತ್ತುಂಟಾಗುವುದು; ನೀನು ಬಂದು ನನ್ನನ್ನು ಹಿಂಬಾಲಿಸು ಎಂದು ಹೇಳಿದನು.  ೨೩ ಅವನು ಬಹಳ ಐಶ್ವರ್ಯವಂತನಾಗಿದ್ದದರಿಂದ ಇದನ್ನು ಕೇಳಿ ಬಹಳ ದುಃಖಪಟ್ಟನು.  ೨೪ ಆಗ ಯೇಸು ಅವನನ್ನು ನೋಡಿ - ಹಣವಂತರು ದೇವರ ರಾಜ್ಯದಲ್ಲಿ ಸೇರುವದು ಎಷ್ಟೋ ಕಷ್ಟ.  ೨೫ ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವುದಕ್ಕಿಂತ ಒಂಟೆಯು ಸೂಜಿಯಕಣ್ಣಿನಲ್ಲಿ ನುಗ್ಗುವುದು ಸುಲಭ ಅಂದನು.  ೨೬ ಈ ಮಾತನ್ನು ಕೇಳಿದವರು - (ಹೀಗಿದ್ದರೆ) ಯಾರಿಗೆ ರಕ್ಷಣೆಯಾದೀತು ಎಂದು ಕೇಳಲು  ೨೭ ಆತನು - ಮನುಷ್ಯರಿಗೆ ಅಸಾಧ್ಯವಾದ ಕಾರ್ಯಗಳು ದೇವರಿಗೆ ಸಾಧ್ಯವಾಗಿವೆ ಅಂದನು.  ೨೮ ಆಗ ಪೇತ್ರನು - ಇಗೋ, ನಾವು ನಮ್ಮ ನಮ್ಮ ಮನೆ ಮಾರುಗಳನ್ನು ಬಿಟ್ಟು ನಿನ್ನ ಹಿಂದೆ ಬಂದೆವು ಎಂದು ಹೇಳಲು  ೨೯ ಆತನು ಅವರಿಗೆ - ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾವನು ದೇವರ ರಾಜ್ಯಕ್ಕಾಗಿ ಮನೆಯನ್ನಾಗಲಿ, ಹೆಂಡತಿಯನ್ನಾಗಲಿ, ಅಣ್ಣತಮ್ಮಂದಿರನ್ನಾಗಲಿ, ತಂದೆತಾಯಿಗಳನ್ನಾಗಲಿ, ಮಕ್ಕಳನ್ನಾಗಲಿ ತ್ಯಜಿಸುತ್ತಾನೋ,  ೩೦ ಅವನಿಗೆ ಈ ಲೋಕದಲ್ಲಿ ಅನೇಕ ಪಾಲು ಹೆಚ್ಚಾಗಿ ಸಿಕ್ಕೇ ಸಿಕ್ಕುತ್ತವೇ; ಮತ್ತು ಮುಂದಣ ಲೋಕದಲ್ಲಿ ನಿತ್ಯಜೀವವು ದೊರೆಯುವದು ಎಂದು ಹೇಳಿದನು. 
ಯೇಸು ತನ್ನ ಮರಣ ಪುನರುತ್ಥಾನಗಳನ್ನು ಮೂರನೆಯ ಸಾರಿ ಮುಂತಿಳಿಸಿದ್ದು 
(ಮತ್ತಾಯನು 20:17-19; ಮಾರ್ಕ 10:32-34) 
 ೩೧ ಆತನು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಕರೆದುಕೊಂಡು ಅವರಿಗೆ - ನೋಡಿರಿ, ನಾವು ಯೆರುಸಲೆಮಿಗೆ ಹೋಗುತ್ತಾ ಇದ್ದೇವೆ; ಮತ್ತು ಮನುಷ್ಯಕುಮಾರನ ವಿಷಯದಲ್ಲಿ ಪ್ರವಾದಿಗಳು ಬರೆದದ್ದೆಲ್ಲಾ ಅವನಲ್ಲಿ ನೆರವೇರುವದು.  ೩೨ ಹೇಗಂದರೆ - ಅವನನ್ನು ಅನ್ಯರ ಕೈಗೆ ಒಪ್ಪಿಸುವರು, ಅವರು ಅವನನ್ನು ಅಪಹಾಸ್ಯ ಮಾಡುವರು, ಬೈಯುವರು, ಉಗುಳುವರು, ಕೊರಡೆಗಳಿಂದ ಹೊಡೆಯುವರು, ಕೊಂದುಹಾಕುವರು;  ೩೩ ಮತ್ತು ಮೂರನೆಯ ದಿನದಲ್ಲಿ ಅವನು ಜೀವಿತನಾಗಿ ಎದ್ದು ಬರುವನು ಎಂದು ಹೇಳಿದನು.  ೩೪ ಅವರು ಈ ಸಂಗತಿಗಳಲ್ಲಿ ಒಂದನ್ನಾದರೂ ಗ್ರಹಿಸಲಿಲ್ಲ, ಈ ಮಾತುಗಳು ಅವರಿಗೆ ಮರೆಯಾಗಿದ್ದವು, ಅವುಗಳ ಅರ್ಥ ಅವರಿಗೆ ತಿಳಿಯಲಿಲ್ಲ. 
ಯೇಸುವು ಒಬ್ಬ ಕುರುಡನನ್ನು ಸ್ವಸ್ಥಮಾಡಿದ್ದು 
(ಮತ್ತಾಯನು 20:29-34; ಮಾರ್ಕ 10:46-52) 
 ೩೫ ಆತನು ಯೆರಿಕೋವಿನ ಸಮೀಪಕ್ಕೆ ಬಂದಾಗ ದಾರಿಯ ಬಳಿಯಲ್ಲಿ ಕೂತು ಭಿಕ್ಷೆಬೇಡುತ್ತಿದ್ದ ಒಬ್ಬ ಕುರುಡನು  ೩೬ ಗುಂಪಾಗಿ ಹೋಗುತ್ತಿದ್ದ ಜನರ ಶಬ್ದವನ್ನು ಕೇಳಿ ಇದೇನು ಎಂದು ವಿಚಾರಿಸಿದನು.  ೩೭ ಅವರು ಅವನಿಗೆ - ನಜರೇತಿನ ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾನೆಂದು ತಿಳಿಸಿದಾಗ  ೩೮ ಅವನು - ಯೇಸುವೇ, ದಾವೀದನ ಕುಮಾರನೇ, ನನ್ನನ್ನು ಕರುಣಿಸು ಎಂದು ಕೂಗಿಕೊಂಡನು.  ೩೯ ಮುಂದೆ ಹೋಗುತ್ತಿದ್ದವರು ಸುಮ್ಮನಿರು ಎಂದು ಅವನನ್ನು ಗದರಿಸಲು ಅವನು - ದಾವೀದನ ಕುಮಾರನೇ, ನನ್ನನ್ನು ಕರುಣಿಸು ಎಂದು ಮತ್ತಷ್ಟು ಬೇಡಿಕೊಂಡನು.  ೪೦ ಆಗ ಯೇಸು ನಿಂತು ಅವನನ್ನು ತನ್ನ ಬಳಿಗೆ ಕರೆದುಕೊಂಡು ಬರುವುದಕ್ಕೆ ಅಪ್ಪಣೆಕೊಟ್ಟನು.  ೪೧ ಅವನು ಹತ್ತಿರಕ್ಕೆ ಬಂದನು. ಆತನು ಅವನಿಗೆ - ನಾನು ನಿನಗೆ ಏನು ಮಾಡಬೇಕೆಂದು ಕೋರುತ್ತೀ? ಎಂದು ಕೇಳಲು ಅವನು - ನನಗೆ ಕಣ್ಣುಕಾಣುವಂತೆ ಮಾಡಬೇಕು ಕರ್ತನೇ ಅಂದನು.  ೪೨ ಯೇಸು ಅವನಿಗೆ - ನಿನಗೆ ಕಣ್ಣುಕಾಣುವಂತಾಗಲಿ ಎಂದೋ ಹೇಳಿ; ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿದೆ ಎಂದು ಹೇಳಿದನು.  ೪೩ ತಕ್ಷಣವೇ ಅವನಿಗೆ ಕಣ್ಣು ಕಾಣಿಸಿದವು; ಅವನು ದೇವರನ್ನು ಕೊಂಡಾಡುತ್ತಾ ಆತನ ಹಿಂದೆ ಹೋದನು. ಜನರೆಲ್ಲರು ನಡೆದ ಸಂಗತಿಯನ್ನು ನೋಡಿ ದೇವರನ್ನು ಸ್ತುತಿಸಿದರು.