೮
 ೧ ನೀನು ನನ್ನ ತಾಯಿಯ ಹಾಲನ್ನು ಕುಡಿದ ನನ್ನ ಅಣ್ಣನ ಹಾಗಿದ್ದರೆ ಎಷ್ಟೋ ಚೆನ್ನಾಗಿತ್ತು! 
ನಾನು ನಿನ್ನನ್ನು ಹೊರಗೆ ಕಂಡೊಡನೆ ಮುದ್ದಿಟ್ಟರೂ ಯಾರೂ ಹೀನೈಸುತ್ತಿರಲಿಲ್ಲ. 
 ೨ ನಿನ್ನನ್ನು ನನ್ನ ತಾಯಿಯ ಮನೆಗೆ ಕರೆದುಕೊಂಡು ಹೋಗುತ್ತಿದ್ದೆನು, 
ಅಲ್ಲಿ ನೀನು ನನಗೆ ಉಪದೇಶ ಮಾಡಬಹುದಾಗಿತ್ತು; 
ದ್ರಾಕ್ಷೆಯ ಮಿಶ್ರಪಾನವನ್ನು ಕೊಡುತ್ತಿದ್ದೆ, 
ನನ್ನ ದಾಳಿಂಬೆಯ ಸವಿರಸವನ್ನು ನಿನಗೆ ಕುಡಿಸುತ್ತಿದ್ದೆನು. 
 ೩ ಆಗ ನಿನ್ನ ಎಡಗೈ ನನಗೆ ತಲೆದಿಂಬಾಗಿ ಬಲಗೈ ನನ್ನನ್ನು ತಬ್ಬುತ್ತಿತ್ತು. 
 ೪ ಯೆರೂಸಲೇಮಿನ ಮಹಿಳೆಯರೇ, 
ಆತನು ತಾನಾಗಿ ಎಚ್ಚರಗೊಳ್ಳುವವರೆಗೆ ಯಾರೂ ನನ್ನ ಪ್ರಿಯನನ್ನು ಎಚ್ಚರಿಸದಿರಿ, 
ಆತನ ವಿಶ್ರಾಂತಿಗೆ ಯಾರೂ ಭಂಗ ಮಾಡದಿರಿ ಎಂದು 
ವನದ ಜಿಂಕೆ ಹರಿಣಗಳ ಮೇಲೆ ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ. 
ಭಾಗ ಆರು 
 ೫ ನಲ್ಲನನ್ನು ಒರಗಿಕೊಂಡು ಅಡವಿಯಿಂದ ಬರುವ ಇವಳು ಯಾರು? 
ಎಬ್ಬಿಸಿದೆನಲ್ಲಾ ನಿನ್ನನ್ನು ಆ ಸೇಬಿನ ಮರದಡಿಯಲ್ಲಿ 
ಇಗೋ, ಅಲ್ಲಿ ನಿನ್ನ ತಾಯಿ ನಿನ್ನನ್ನು ಗರ್ಭಧರಿಸಿದ್ದು, ಅಲ್ಲೇ ನಿನ್ನನ್ನು ಪ್ರಸವವೇದನೆಯಿಂದ ಹೆತ್ತಳು. 
 ೬ ನಿನ್ನ ಕೈಯಲ್ಲಿನ ಮುದ್ರೆಯ ಹಾಗೆ ನಿನ್ನ ಹೃದಯದ ಮೇಲೆ ನನ್ನನ್ನು ಧರಿಸಿಕೋ. 
ಪ್ರೀತಿ ಮೃತ್ಯುವಿನಷ್ಟು ಶಕ್ತಿಶಾಲಿ, 
ಪ್ರೀತಿದ್ರೋಹದಿಂದ ಹುಟ್ಟುವ ಮತ್ಸರವು ಪಾತಾಳದಷ್ಟು ಕ್ರೂರ, 
ಅದರ ಜ್ವಾಲೆಯು ಬೆಂಕಿಯ ಉರಿ, ಧಗಧಗಿಸುವ ಕೋಪಾಗ್ನಿ. 
 ೭ ನಂದಿಸಲಾರವು ಪ್ರೀತಿಯನ್ನು ಜಲರಾಶಿಗಳು, 
ಮುಣುಗಿಸಲಾರವು ಅದನು ಪ್ರವಾಹಗಳು. 
ಪ್ರೀತಿಯನ್ನು ಗಳಿಸಲು ಮನೆಮಾರುಗಳನ್ನು ಮಾರಿದರೂ ಸಿಗುವುದು ಅವನಿಗೆ ತಿರಸ್ಕಾರ. 
 ೮ ಸ್ತನಬಾರದ ತಂಗಿಯು ನಮಗುಂಟು; 
ಅವಳನ್ನು ವರಿಸಲು ಯಾರಾದರು ಬಂದರೆ ಅವಳ ಹಿತಕ್ಕೆ ಏನು ಮಾಡೋಣ? 
 ೯ ಅವಳು ಕೋಟೆಯಾದರೆ ಅದರ ಮೇಲೆ ಬೆಳ್ಳಿಯ ಬುರುಜನ್ನು ಕಟ್ಟುವೆವು, 
ಬಾಗಿಲಾದರೆ ದೇವದಾರು ಹಲಗೆಗಳಿಂದ ಭದ್ರಪಡಿಸುವೆವು. 
 ೧೦ ನಾನು ಕೋಟೆ; ನನ್ನ ಸ್ತನಗಳು ಅದರ ಬುರುಜುಗಳು, 
ಹೀಗಿದ್ದು ಅವನ ದೃಷ್ಟಿಯಲ್ಲಿ ಜಯಶಾಲಿನಿಯಾಗಿ ಸಮಾಧಾನ ಹೊಂದಿದೆನು. 
 ೧೧ ಸೊಲೊಮೋನನು ಬಾಲ್ಹಾಮೋನಿನಲ್ಲಿ ಇದ್ದ ತನ್ನ ದ್ರಾಕ್ಷೇ ತೋಟವನ್ನು ಗುತ್ತಿಗೆಗೆ ಕೊಟ್ಟನು, 
ಪ್ರತಿಯೊಬ್ಬ ಗುತ್ತಿಗೆದಾರ ತೆರಬೇಕಾಗಿತ್ತು ಸಾವಿರ ಬೆಳ್ಳಿ ನಾಣ್ಯಗಳನ್ನು. 
 ೧೨ ಸೊಲೊಮೋನನೇ, ಆ ಸಾವಿರ ಬೆಳ್ಳಿ ನಾಣ್ಯ ನಿನಗಿರಲಿ, 
ಅದರ ಮೇಲ್ವಿಚಾರಕರಿಗೆ ಇನ್ನೂರು ನಾಣ್ಯ ಸೇರಲಿ; 
ನನ್ನದೇ ಆಗಿರುವ ನನ್ನ ತೋಟವು ನನ್ನ ವಶದಲ್ಲಿಯೇ ಇದೆ. 
 ೧೩ ಉದ್ಯಾನದಲ್ಲಿ ವಾಸಿಸುವವಳೇ 
ಗೆಳೆಯರು ನಿನ್ನ ಧ್ವನಿ ಕೇಳಬೇಕೆಂದಿದ್ದಾರೆ, 
ನನಗೂ ಆ ಧ್ವನಿ ಕೇಳಿಸಲಿ. 
 ೧೪ ಸುಗಂಧಸಸ್ಯದ ಪರ್ವತಗಳಲ್ಲಿ ಜಿಂಕೆಯಂತೆಯೂ, 
ಪ್ರಾಯದ ಹರಿಣಿಯಂತೆಯೂ ತ್ವರೆಮಾಡಿ ಬಾ ನನ್ನಿನಿಯನೇ.