೨೫
 ೧ ಆ ಮೇಲೆ ಶೂಹ್ಯನಾದ ಬಿಲ್ದದನು ಹೀಗೆಂದನು, 
 ೨ “ಆತನಲ್ಲಿ ಪ್ರಭುತ್ವವೂ ಭೀಕರತ್ವವೂ ಉಂಟು, 
ತನ್ನ ಉನ್ನತ ಲೋಕದಲ್ಲಿ ಸಮಾಧಾನವನ್ನು ಸ್ಥಾಪಿಸಿದವನು ಆತನೇ. 
 ೩ ಆತನ ಸೈನ್ಯಗಳಿಗೆ ಲೆಕ್ಕವಿದೆಯೋ? 
ಆತನ ತೇಜಸ್ಸು ಯಾರಲ್ಲಿಯೂ ಮೂಡುವುದಿಲ್ಲ? 
 ೪ ಮನುಷ್ಯನು ದೇವರ ಎಣಿಕೆಯಲ್ಲಿ ನೀತಿವಂತನಾಗಿರುವುದು ಹೇಗೆ? 
ಮಾನವನಾಗಿ ಹುಟ್ಟಿದವನು ಪರಿಶುದ್ಧನಾಗಿರುವುದು ಸಾಧ್ಯವೋ? 
 ೫ ನೋಡಿರಿ, ಆತನ ದೃಷ್ಟಿಯಲ್ಲಿ ಚಂದ್ರನಿಗಾದರೂ ಕಳೆಯಿಲ್ಲ, 
ನಕ್ಷತ್ರಗಳೂ ಶುದ್ಧವಲ್ಲ. 
 ೬ ಹೀಗಿರುವಲ್ಲಿ ನರ ಹುಳವು ಅಶುದ್ಧವಾದದ್ದು! 
ನರ ಕ್ರಿಮಿಯು ಎಷ್ಟೋ ಅಪವಿತ್ರವಾಗಿದ್ದಾನೆ!”