ಸೆರೆಯವರ ಪ್ರಲಾಪ 
 ೧೩೭
(2 ಪೂರ್ವ. 36) 
 ೧ ನಾವು ಬಾಬೆಲ್ ದೇಶದ ನದಿಗಳ ಬಳಿಯಲ್ಲಿ ಕುಳಿತುಕೊಂಡು, 
ಚೀಯೋನನ್ನು ನೆನಪುಮಾಡಿಕೊಂಡು ಅತ್ತೆವು. 
 ೨ ಆ ದೇಶದ ನೀರವಂಜಿ ಮರಗಳಿಗೆ ನಮ್ಮ ಕಿನ್ನರಿಗಳನ್ನು ತೂಗುಹಾಕಿದೆವು. 
 ೩ ನಮ್ಮನ್ನು ಸೆರೆಹಿಡಿದು ಪೀಡಿಸುತ್ತಿದ್ದವರು ನಮಗೆ, 
“ಚೀಯೋನಿನ ಗೀತೆಗಳಲ್ಲಿ ಒಂದನ್ನು ನಮ್ಮ ವಿನೋದಕ್ಕಾಗಿ ಹಾಡಿರಿ” ಎಂದು ಹೇಳುತ್ತಿದ್ದರು. 
 ೪ ನಾವು ಪರದೇಶದಲ್ಲಿ ಯೆಹೋವನ ಗೀತೆಗಳನ್ನು ಹಾಡುವುದು ಹೇಗೆ? 
 ೫ ಯೆರೂಸಲೇಮೇ, ನಾನು ನಿನ್ನನ್ನು ಮರೆತುಬಿಟ್ಟರೆ 
ನನ್ನ ಬಲಗೈಯು ತನ್ನ ಕೌಶಲ್ಯವನ್ನು ಮರೆತು ಹೋಗಲಿ. 
 ೬ ಯೆರೂಸಲೇಮೇ, ನಾನು ನಿನ್ನನ್ನು ನೆನಪು ಮಾಡಿಕೊಳ್ಳದಿದ್ದರೆ, 
ಎಲ್ಲಾದಕ್ಕಿಂತ ಹೆಚ್ಚಾಗಿ ನಾನು ನಿನ್ನಲ್ಲಿ ಆನಂದಿಸದಿದ್ದರೆ, 
ನನ್ನ ನಾಲಿಗೆಯು ಬತ್ತಿಹೋಗಲಿ. 
 ೭ ಯೆಹೋವನೇ, ಎದೋಮ್ಯರ ಹಾನಿಗಾಗಿ, 
ಯೆರೂಸಲೇಮಿನ ನಾಶನದ ದಿನವನ್ನು ನೆನಪುಮಾಡಿಕೋ. 
ಅವರು, “ಅದನ್ನು ಹಾಳುಮಾಡಿರಿ, ಅಸ್ತಿವಾರ ಸಹಿತ ಹಾಳುಮಾಡಿರಿ” ಎಂದು ಹೇಳಿದರಲ್ಲಾ. 
 ೮ ಹಾಳಾಗುವುದಕ್ಕಿರುವ ಬಾಬೆಲ್ ಪಟ್ಟಣವೇ, 
ನೀನು ನನಗೆ ಮಾಡಿದ್ದಕ್ಕೆ ಮುಯ್ಯಿ ತೀರಿಸುವವನು ಧನ್ಯನು. 
 ೯ ನಿನ್ನ ಮಕ್ಕಳನ್ನು ಹಿಡಿದು ಬಂಡೆಗೆ ಅಪ್ಪಳಿಸುವವನು ಭಾಗ್ಯಹೊಂದಲಿ.