2
ನಾನು ಕಾವಲುಗಾರನಾಗಿ ನಿಲ್ಲುವೆನು.
ಕಾವಲು ಗೋಪುರವನ್ನೇ ಹತ್ತಿ ನಿಂತುಕೊಳ್ಳುವೆನು.
ಯೆಹೋವ ದೇವರು ನನಗೆ ಏನು ಹೇಳುವರೋ,
ಯಾವ ಉತ್ತರ ಕೊಡುವರೋ, ಎಂದು ಎದುರು ನೋಡುವೆನು.
ಯೆಹೋವ ದೇವರ ಉತ್ತರ
ಆಗ ಯೆಹೋವ ದೇವರು ನನಗೆ ಉತ್ತರಕೊಟ್ಟರು.
ಪ್ರಕಟನೆಯನ್ನು ಬರೆ.
ಅದನ್ನು ಓದುವವನು ಶೀಘ್ರವಾಗಿ ಓದುವಂತೆ,
ಅದನ್ನು ಹಲಗೆಗಳ ಮೇಲೆ ಕೆತ್ತು.
ಏಕೆಂದರೆ ಪ್ರಕಟನೆಯು ಇನ್ನೂ ನೇಮಕವಾದ ಕಾಲಕ್ಕಾಗಿ ಎದುರು ನೋಡುವುದು.
ಅದು ಅಂತ್ಯದ ಬಗ್ಗೆ ಮಾತಾಡುವುದು.
ಅದು ಸುಳ್ಳಾಗದು. ಅದು ತಡವಾದರೂ,
ಅದಕ್ಕೆ ಕಾದುಕೊಂಡಿರು.
ಏಕೆಂದರೆ ಅದು ತಡಮಾಡದೆ
ನಿಶ್ಚಯವಾಗಿ ಬರುವುದು.
 
 
ಇಗೋ, ಹೆಚ್ಚಿಸಿಕೊಂಡವನ ಆತ್ಮವು ತನ್ನಲ್ಲಿ ಯಥಾರ್ಥವಲ್ಲ.
ಆದರೆ ನೀತಿವಂತನು ತನ್ನ ನಂಬಿಕೆಯಿಂದಲೇ ಬದುಕುವನು.
ಇದಲ್ಲದೆ ದ್ರಾಕ್ಷಾರಸವು ಮೋಸಕರ.
ಅವನು ಅಹಂಕಾರಿ, ಎಂದಿಗೂ ವಿಶ್ರಾಂತಿ ಹೊಂದನು.
ಪಾತಾಳದ ಹಾಗೆ ತನ್ನ ಆಶೆಯನ್ನು ದೊಡ್ಡದಾಗಿ ಮಾಡಿಕೊಳ್ಳುತ್ತಾನೆ.
ಮರಣದ ಹಾಗಿದ್ದಾನೆ, ತೃಪ್ತಿಯಾಗುವುದಿಲ್ಲ;
ಎಲ್ಲಾ ಜನಾಂಗಗಳನ್ನು ತನಗಾಗಿ ಕೂಡಿಸುತ್ತಾನೆ;
ಎಲ್ಲಾ ಜನರನ್ನು ತನ್ನ ಸೆರೆಯಾಳುಗಳಾಗಿ ಮಾಡಿಕೊಳ್ಳುತ್ತಾನೆ.
ಅವರೆಲ್ಲರೂ ಅವನನ್ನು ಅಪಹಾಸ್ಯದ ಮಾತುಗಳಿಂದ ಅವಮಾನ ಮಾಡುವುದಿಲ್ಲವೋ?
ಕದ್ದುಕೊಂಡ ವಸ್ತುಗಳನ್ನು ರಾಶಿಯಾಗಿ ಕೂಡಿಸಿಟ್ಟುಕೊಳ್ಳುವವನಿಗೆ
ಅಕ್ರಮ ಮಾರ್ಗದಿಂದ ಐಶ್ವರ್ಯವಂತನಾಗಿರುವವನಿಗೆ ಕಷ್ಟ.
ಇದೆಷ್ಟರವರೆಗೆ ಮುಂದುವರಿಯಬೇಕು?
ನಿನ್ನ ಸಾಲಗಾರರು ಕ್ಷಣಮಾತ್ರದಲ್ಲಿ ಏಳರೋ?
ಅವರು ಎಚ್ಚರಗೊಂಡು ನಿನಗೆ ಬೆದರಿಕೆ ಹಾಕುವರೋ?
ಆಗ ನೀನು ಅವರಿಗೆ ಸುಲಿಗೆಯಾಗುವೆ.
ನೀನು ಅನೇಕ ಜನಾಂಗಗಳನ್ನು ಸೂರೆ ಮಾಡಿದ್ದರಿಂದ,
ಜನರಲ್ಲಿ ಉಳಿದವರೆಲ್ಲಾ ನಿನ್ನನ್ನು ಸೂರೆ ಮಾಡುವರು.
ಏಕೆಂದರೆ ನೀನು ಮಾನವರ ರಕ್ತ ಸುರಿಸಿದ್ದಿ.
ನಾಡುಗಳನ್ನು, ಪಟ್ಟಣಗಳನ್ನು, ಅವುಗಳಲ್ಲಿ ಇರುವುದೆಲ್ಲವನ್ನು ನಾಶಮಾಡಿದ್ದೀ.
 
ಅನ್ಯಾಯದ ಲಾಭದಿಂದ ತನ್ನ ನಿವಾಸ ಕಟ್ಟಿಕೊಳ್ಳುವವನಿಗೂ,
ತನ್ನ ಗೂಡನ್ನು ಉನ್ನತದಲ್ಲಿಡುವವನಿಗೂ,
ನಾಶದ ಹಿಡಿತದಿಂದ ತಪ್ಪಿಸಿಕೊಳ್ಳಬಯಸುವವನಿಗೂ ಕಷ್ಟ!
10 ನೀನು ಬಹು ಜನಾಂಗಗಳನ್ನು ನಿರ್ಮೂಲ ಮಾಡಿದ್ದು,
ನಿನ್ನ ಕುಲಕ್ಕೆ ಅವಮಾನವನ್ನೇ ಆಲೋಚಿಸಿಕೊಂಡ ಹಾಗಾಯಿತು.
ನಿನಗೆ ನೀನೇ ಕೆಡುಕು ಮಾಡಿಕೊಂಡಿದ್ದೀ.
11 ಗೋಡೆಯೊಳಗಿಂದ ಕಲ್ಲು ಕೂಗುತ್ತದೆ.
ಮರದ ತೊಲೆ ಅದಕ್ಕೆ ಉತ್ತರ ಕೊಡುತ್ತದೆ.
 
12 ಊರನ್ನು ನರಹತ್ಯದಿಂದ ಕಟ್ಟಿ, ಪಟ್ಟಣವನ್ನು
ಅನ್ಯಾಯದಿಂದ ಸ್ಥಾಪಿಸುವವನಿಗೆ ಕಷ್ಟ!
13 ಜನರ ಶ್ರಮೆಯು ಬೆಂಕಿಗೆ ತುತ್ತಾಗುವುದು.
ಜನಾಂಗಗಳು ವ್ಯರ್ಥವಾಗಿ ದಣಿದುಕೊಳ್ಳುತ್ತವೆ.
ಇದು ಸೇನಾಧೀಶ್ವರ ಯೆಹೋವ ದೇವರ ಚಿತ್ತವಷ್ಟೆ.
14 ಸಮುದ್ರವು ನೀರಿನಿಂದ ತುಂಬಿಕೊಂಡಿರುವಂತೆ,
ಯೆಹೋವ ದೇವರ ಮಹಿಮೆಯ ತಿಳುವಳಿಕೆಯು ಭೂಮಿಯಲ್ಲಿ ತುಂಬಿಕೊಂಡಿರುವುದು.
 
15 ನಿನ್ನ ರೋಷವನ್ನು ಪಾನಕಕ್ಕೆ ಬೆರಸಿ, ನಿನ್ನ ನೆರೆಯವರಿಗೆ ಕುಡಿಸಿ,
ಅವರ ಬೆತ್ತಲೆತನವನ್ನು ನೋಡಬೇಕೆಂದು ಅವರನ್ನು ಅಮಲೇರಿಸಿದವನೇ,
ಅಯ್ಯೋ, ನಿನ್ನ ಗತಿಯನ್ನು ಏನು ಹೇಳಲಿ!
16 ಮಹಿಮೆಯ ಬದಲಾಗಿ ನಾಚಿಕೆಯಿಂದ ನೀನು ತುಂಬಿರುವೆ.
ಈಗ ನಿನ್ನ ಸರದಿ, ಕುಡಿದು ಬೆತ್ತಲೆಯಾಗು.
ಯೆಹೋವ ದೇವರ ಬಲಗೈಯಲ್ಲಿನ ಪಾತ್ರೆ ನಿನ್ನ ಕಡೆಗೆ ತಿರುಗುವುದು.
ನಿನ್ನ ಘನತೆಯನ್ನು ಅವಮಾನವು ಮುಚ್ಚುವುದು.
17 ಲೆಬನೋನಿನ ಮೇಲೆ ಮಾಡಿದ ಬಲಾತ್ಕಾರವು ನಿನ್ನನ್ನು ಚಕಿತಗೊಳಿಸುವುದು.
ಮೃಗಗಳ ನಾಶವು ನಿನ್ನನ್ನು ಹೆದರಿಸುವುದು.
ಏಕೆಂದರೆ ನೀನು ಮನುಷ್ಯರ ರಕ್ತ ಸುರಿಸಿದ್ದೀ;
ನೀನು ನಾಡುಗಳನ್ನು, ಪಟ್ಟಣಗಳನ್ನು, ಅವುಗಳಲ್ಲಿರುವ ಎಲ್ಲವುಗಳನ್ನು ನಾಶಮಾಡಿದ್ದೀ.
 
18 “ಮನುಷ್ಯನು ಕೆತ್ತಿ ರೂಪಿಸಿದ ವಿಗ್ರಹದಿಂದ ಪ್ರಯೋಜನವೇನು?
ಸುಳ್ಳನ್ನು ಬೋಧಿಸುವಂಥ ಪ್ರತಿಮೆಯ ಬೆಲೆಯೇನು?
ಅದನ್ನು ರೂಪಿಸಿದವನು, ತನ್ನ ಸ್ವಂತ ಸೃಷ್ಟಿಯನ್ನು ನಂಬುತ್ತಾನೆ.
ಮಾತನಾಡದಂಥ ಮೂರ್ತಿಗಳನ್ನು ಅವನು ಮಾಡುತ್ತಾನೆ.
19 ಮರಕ್ಕೆ, ‘ಎಚ್ಚರವಾಗು!’ ಮೂಕವಾದ ಕಲ್ಲಿಗೆ, ‘ಎದ್ದೇಳು!’ ಎಂದು ಹೇಳುವವನಿಗೆ ಕಷ್ಟ!
ಅದು ಮಾರ್ಗದರ್ಶನ ನೀಡುವುದೇ?
ಅದು ಬಂಗಾರ, ಬೆಳ್ಳಿಯಿಂದ ಹೊದಿಸಿದ್ದಾರೆ.
ಆದರೆ ಅದರಲ್ಲಿ ಉಸಿರು ಎಷ್ಟು ಮಾತ್ರವೂ ಇಲ್ಲ.”
 
20 ಆದರೆ ಯೆಹೋವ ದೇವರು ತಮ್ಮ ಪರಿಶುದ್ಧ ಮಂದಿರದಲ್ಲಿ ಇದ್ದಾರೆ.
ಅವರ ಮುಂದೆ ಭೂಮಿಯೆಲ್ಲಾ ಮೌನವಾಗಿರಲಿ.