2
ಮರಣದಿಂದ ಜೀವಕ್ಕೆ
ಮೊದಲು ನಿಮ್ಮ ಆತ್ಮಿಕ ಜೀವಿತಗಳು, ನಿಮ್ಮ ಪಾಪಗಳ ಮತ್ತು ನೀವು ದೇವರಿಗೆ ವಿರುದ್ಧವಾಗಿ ಮಾಡಿದ ಕೆಟ್ಟಕಾರ್ಯಗಳ ದೆಸೆಯಿಂದ ಸತ್ತುಹೋಗಿದ್ದವು. ಹೌದು, ಮೊದಲು ನೀವು ಆ ಪಾಪಗಳನ್ನೇ ಮಾಡುತ್ತಿದ್ದಿರಿ. ಈ ಲೋಕದ ಮಾರ್ಗಗಳಿಗನುಸಾರವಾಗಿ ನೀವು ಜೀವಿಸಿದಿರಿ. ವಾಯುಮಂಡಲದಲ್ಲಿರುವ ದುಷ್ಟಶಕ್ತಿಗಳ ಅಧಿಪತಿಯನ್ನು ನೀವು ಅನುಸರಿಸಿದಿರಿ. ದೇವರಿಗೆ ಅವಿಧೇಯರಾದ ಜನರಲ್ಲಿ ಈಗ ಕಾರ್ಯಮಾಡುತ್ತಿರುವುದು ಅದೇ ಆತ್ಮ. ಮೊದಲು ನಾವೆಲ್ಲರೂ ಆ ಜನರಂತೆಯೇ ಜೀವಿಸುತ್ತಿದ್ದೆವು. ಶರೀರಭಾವದ ನಮ್ಮ ಇಚ್ಛೆಗಳನ್ನು ಪೂರೈಸಲು ನಾವು ಪ್ರಯತ್ನಿಸುತ್ತಿದ್ದೆವು. ನಮ್ಮ ದೇಹ, ಮನಸ್ಸುಗಳು ಬಯಸಿದ್ದನ್ನೆಲ್ಲಾ ನಾವು ಮಾಡಿದೆವು. ನಾವು ದುಷ್ಟಜನರಾಗಿದ್ದೆವು. ನಮ್ಮ ಆ ಜೀವಿತದ ದೆಸೆಯಿಂದ ನಾವು ಆಗಲೇ ದೇವರ ಕೋಪಕ್ಕೆ ಗುರಿಯಾಗಬೇಕಿತ್ತು. ನಮಗೂ ಇತರ ಜನರಿಗೂ ಯಾವ ವ್ಯತ್ಯಾಸವೂ ಇರಲಿಲ್ಲ.
ಆದರೆ ಕರುಣಾನಿಧಿಯಾಗಿರುವ ದೇವರು ನಮ್ಮನ್ನು ಬಹಳವಾಗಿ ಪ್ರೀತಿಸಿದನು. ನಾವು ದೇವರಿಗೆ ವಿರುದ್ಧವಾಗಿ ಮಾಡಿದ ಕಾರ್ಯಗಳ ದೆಸೆಯಿಂದ ಸತ್ತವರಾಗಿದ್ದೆವು. ಆದರೆ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದನು. ನೀವು ದೇವರ ಕೃಪೆಯಿಂದ ರಕ್ಷಣೆ ಹೊಂದಿದವರಾಗಿದ್ದೀರಿ. ದೇವರು ನಮ್ಮನ್ನು ಕ್ರಿಸ್ತನೊಂದಿಗೆ ಎಬ್ಬಿಸಿ ಆತನೊಂದಿಗೆ ಪರಲೋಕದಲ್ಲಿ ಸಿಂಹಾಸನದ ಮೇಲೆ ಕುಳ್ಳಿರಿಸಿದ್ದಾನೆ. ಕ್ರಿಸ್ತ ಯೇಸುವಿನಲ್ಲಿರುವ ನಮಗಾಗಿ ದೇವರು ಇದನ್ನು ಮಾಡಿದನು. ದೇವರು ತನ್ನ ಮಹಾತಿಶಯವಾದ ಕೃಪೆಯನ್ನು ಮುಂದಿನ ಕಾಲದಲ್ಲೆಲ್ಲಾ ತೋರಿಸಬೇಕೆಂದು ಹೀಗೆ ಮಾಡಿದ್ದಾನೆ. ದೇವರು ಈ ಕೃಪೆಯನ್ನು ತನ್ನ ಕರುಣೆಯ ಮೂಲಕ ನಮಗೆ ಕ್ರಿಸ್ತ ಯೇಸುವಿನಲ್ಲಿ ತೋರಿಸುತ್ತಾನೆ.
ಆದ್ದರಿಂದ ನೀವು ನಂಬಿಕೆಯ ಮೂಲಕ ದೇವರ ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದ ಉಂಟಾದದ್ದಲ್ಲ, ಅದು ದೇವರ ವರ. ನಿಮಗೆ ರಕ್ಷಣೆ ದೊರೆತದ್ದು ನಿಮ್ಮ ಒಳ್ಳೆಯ ಕಾರ್ಯಗಳಿಂದಲ್ಲ. ಆದ್ದರಿಂದ ತನ್ನನ್ನು ತಾನೇ ರಕ್ಷಿಸಿಕೊಂಡಿರುವುದಾಗಿ ಯಾರೂ ಹೊಗಳಿಕೊಳ್ಳಲು ಸಾಧ್ಯವಿಲ್ಲ. 10 ನಾವು ದೇವರ ನಿರ್ಮಾಣ. ನಾವು ಒಳ್ಳೆಯ ಕಾರ್ಯಗಳನ್ನು ಮಾಡಬೇಕೆಂದು ದೇವರು ನಮ್ಮನ್ನು ಕ್ರಿಸ್ತಯೇಸುವಿನಲ್ಲಿ ಹೊಸ ಜನರನ್ನಾಗಿ ಮಾಡಿದನು. ದೇವರು ನಮಗೋಸ್ಕರವಾಗಿ ಆ ಒಳ್ಳೆಯ ಕಾರ್ಯಗಳನ್ನು ಮೊದಲೇ ಯೋಜನೆ ಮಾಡಿದನು. ನಾವು ಆ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಜೀವಿಸಬೇಕೆಂಬುದು ದೇವರ ಯೋಜನೆಯಾಗಿತ್ತು.
ಕ್ರಿಸ್ತನ ಮೂಲಕ ಸಮಾನತ್ವ
11 ನೀವು ಹುಟ್ಟಿದಂದಿನಿಂದ ಅನ್ಯಜನರಾಗಿದ್ದೀರಿ. ನಿಮ್ಮನ್ನು “ಸುನ್ನತಿಯಿಲ್ಲದವರು” ಎಂದು ಯೆಹೂದ್ಯರು ಕರೆಯುತ್ತಾರೆ. ನಿಮ್ಮನ್ನು “ಸುನ್ನತಿಯಿಲ್ಲದವರು” ಎಂದು ಕರೆಯುವ ಯೆಹೂದ್ಯರು ತಮ್ಮ ಬಗ್ಗೆ “ಸುನ್ನತಿಯವರು” ಎಂದು ಹೇಳಿಕೊಳ್ಳುತ್ತಾರೆ. (ಅವರ ಸುನ್ನತಿಯು ಶರೀರದಲ್ಲಿ ಕೈಯಿಂದ ಮಾಡಲ್ಪಡುತ್ತದೆ.) 12 ಪೂರ್ವಕಾಲದಲ್ಲಿ ನೀವು ಕ್ರಿಸ್ತನಿಲ್ಲದವರಾಗಿದ್ದಿರಿ ಎಂಬುದನ್ನು ಜ್ಞಾಪಿಸಿಕೊಳ್ಳಿರಿ. ನೀವು ಇಸ್ರೇಲಿನ ಪ್ರಜೆಗಳಾಗಿರಲಿಲ್ಲ. ದೇವರು ತನ್ನ ಜನರೊಂದಿಗೆ ಮಾಡಿಕೊಂಡಿದ್ದ ವಾಗ್ದಾನಗಳಿಗೆ ಸಂಬಂಧಪಟ್ಟ ಒಡಂಬಡಿಕೆಗಳನ್ನು ನೀವು ಹೊಂದಿರಲಿಲ್ಲ. ನಿಮಗೆ ನಿರೀಕ್ಷೆಯಿರಲಿಲ್ಲ ಮತ್ತು ನೀವು ದೇವರನ್ನು ತಿಳಿದಿರಲಿಲ್ಲ. 13 ಹೌದು, ಒಂದು ಕಾಲದಲ್ಲಿ ನೀವು ದೇವರಿಗೆ ಬಹು ದೂರವಾಗಿದ್ದಿರಿ. ಆದರೆ ಈಗ ನೀವು ಕ್ರಿಸ್ತ ಯೇಸುವಿನ ರಕ್ತದ ಮೂಲಕ ದೇವರಿಗೆ ಸಮೀಪಸ್ಥರಾದಿರಿ.
14 ಕ್ರಿಸ್ತನಿಂದ ಈಗ ನಮಗೆ ಸಮಾಧಾನ ದೊರೆತಿದೆ. ಕ್ರಿಸ್ತನು ಯೆಹೂದ್ಯರನ್ನೂ ಯೆಹೂದ್ಯರಲ್ಲದವರನ್ನೂ ಒಂದೇ ಜನಾಂಗವನ್ನಾಗಿ ಮಾಡಿದ್ದಾನೆ. ಯೆಹೂದ್ಯರೂ ಯೆಹೂದ್ಯರಲ್ಲದವರೂ ತಮ್ಮ ಮಧ್ಯೆ ಒಂದು ಅಡ್ಡಗೋಡೆಯಿದೆಯೋ ಎಂಬಂತೆ ಬೇರ್ಪಟ್ಟಿದ್ದರು. ಅವರು ಒಬ್ಬರನ್ನೊಬ್ಬರು ದ್ವೇಷಿಸಿದರು. ಆದರೆ ಕ್ರಿಸ್ತನು ತನ್ನ ದೇಹವನ್ನೇ ಅರ್ಪಿಸುವುದರ ಮೂಲಕ ದ್ವೇಷವೆಂಬ ಆ ಗೋಡೆಯನ್ನು ಕೆಡವಿದನು. 15 ಯೆಹೂದ್ಯರ ಧರ್ಮಶಾಸ್ತ್ರವು ಅನೇಕ ಆಜ್ಞೆಗಳನ್ನೂ ನಿಯಮಗಳನ್ನೂ ಹೊಂದಿತ್ತು. ಆದರೆ ಕ್ರಿಸ್ತನು ಆ ಧರ್ಮಶಾಸ್ತ್ರವನ್ನು ಅಂತಿಮಗೊಳಿಸಿದನು. ಯೆಹೂದ್ಯರನ್ನು ಮತ್ತು ಯೆಹೂದ್ಯರಲ್ಲದವರನ್ನು ತನ್ನಲ್ಲಿ ಒಂದು ಜನಾಂಗವನ್ನಾಗಿ ಮಾಡಿ ಶಾಂತಿಯನ್ನು ಸ್ಥಾಪಿಸಬೇಕೆಂಬುದೇ ಕ್ರಿಸ್ತನ ಉದ್ದೇಶವಾಗಿತ್ತು. 16 ಈ ಎರಡು ಜನಾಂಗಗಳ ನಡುವೆ ಇದ್ದ ದ್ವೇಷವನ್ನು ಕ್ರಿಸ್ತನು ಶಿಲುಬೆಯ ಮೂಲಕ ಕೊನೆಗೊಳಿಸಿದನು. ಈ ಜನಾಂಗಗಳು ಒಂದೇ ದೇಹವಾದ ಬಳಿಕ ಅವರನ್ನು ದೇವರ ಬಳಿಗೆ ನಡೆಸಬೇಕೆಂಬುದು ಕ್ರಿಸ್ತನ ಬಯಕೆಯಾಗಿತ್ತು. ಶಿಲುಬೆಯ ಮೇಲೆ ಪ್ರಾಣಕೊಡುವುದರ ಮೂಲಕ ಕ್ರಿಸ್ತನು ತನ್ನ ಈ ಬಯಕೆಯನ್ನು ಪೂರೈಸಿದನು. 17 ದೇವರಿಗೆ ದೂರವಾಗಿದ್ದ ನಿಮ್ಮ ಬಳಿಗೂ ಸಮೀಪಸ್ಥರಾಗಿದ್ದವರ ಬಳಿಗೂ ಕ್ರಿಸ್ತನು ಬಂದು ಸಮಾಧಾನದ ಕುರಿತು ಉಪದೇಶಿಸಿದನು. 18 ಹೌದು, ಕ್ರಿಸ್ತನ ಮೂಲಕ ನಾವೆಲ್ಲರೂ ಒಬ್ಬ ಆತ್ಮನಿಂದ ನಮ್ಮ ತಂದೆಯಾದ ದೇವರ ಬಳಿಗೆ ಬರಲು ಶಕ್ತರಾಗಿದ್ದೇವೆ.
19 ಆದ್ದರಿಂದ ಯೆಹೂದ್ಯರಲ್ಲದವರಾದ ನೀವು ಈಗ ವಿದೇಶಿಯರಲ್ಲ ಮತ್ತು ಅನ್ಯಜನರಲ್ಲ. ಈಗ ನೀವು ದೇವರ ಪರಿಶುದ್ಧ ಜನರೊಂದಿಗೆ ಪ್ರಜೆಗಳಾಗಿದ್ದೀರಿ. ನೀವು ದೇವರ ಕುಟುಂಬಕ್ಕೆ ಸೇರಿದವರಾಗಿದ್ದೀರಿ. 20 ವಿಶ್ವಾಸಿಗಳಾದ ನೀವು ದೇವರ ಸ್ವಂತ ಕಟ್ಟಡವಾಗಿದ್ದೀರಿ. ಅಪೊಸ್ತಲರೂ ಪ್ರವಾದಿಗಳೂ ಎಂಬ ಅಸ್ತಿವಾರದ ಮೇಲೆ ಆ ಕಟ್ಟಡವು ಕಟ್ಟಲ್ಪಟ್ಟಿದೆ. ಕ್ರಿಸ್ತನೇ ಆ ಕಟ್ಟಡಕ್ಕೆ ಮೂಲೆಗಲ್ಲಾಗಿದ್ದಾನೆ. 21 ಇಡೀ ಕಟ್ಟಡವು ಕ್ರಿಸ್ತನಲ್ಲಿ ಒಂದಾಗಿ ಸೇರಿಕೊಂಡಿದೆ. ಕ್ರಿಸ್ತನೇ ಅದನ್ನು ಬೆಳೆಯಿಸಿ ಪ್ರಭುವಿನಲ್ಲಿ ಪರಿಶುದ್ಧವಾದ ದೇವಾಲಯವನ್ನಾಗಿ ಮಾಡುತ್ತಾನೆ. 22 ನೀವು ಕ್ರಿಸ್ತನಲ್ಲಿ ಇತರ ಜನರೊಂದಿಗೆ (ಯೆಹೂದ್ಯರೊಂದಿಗೆ) ಕಟ್ಟಲ್ಪಡುತ್ತಿದ್ದೀರಿ. ದೇವರು ತನ್ನ ಆತ್ಮನ ಮೂಲಕ ವಾಸಿಸತಕ್ಕ ನಿವಾಸಸ್ಥಾನವಾಗಿ ನಿರ್ಮಿತರಾಗುತ್ತಿದ್ದೀರಿ.