3
ಯೆಹೂದ್ಯರನ್ನು ನಿರ್ಮೂಲ ಮಾಡಲು ಹಾಮಾನನ ಸಂಚು
ಇದಾದ ಬಳಿಕ ರಾಜನಾದ ಅಹಷ್ವೇರೋಷನು ಹಾಮಾನನನ್ನು ಗೌರವಿಸಿದನು. ಹಾಮಾನನು ಹಮ್ಮೆದಾತನೆಂಬವನ ಮಗನು. ಇವನು ಅಗಾಗನ ವಂಶಕ್ಕೆ ಸೇರಿದವನಾಗಿದ್ದನು. ಅರಸನು ಹಾಮಾನನನ್ನು ಉನ್ನತಸ್ಥಾನಕ್ಕೆ ನೇಮಿಸಿ ಬೇರೆ ಅಧಿಕಾರಿಗಳಿಗಿಂತ ವಿಶೇಷವಾದ ಗೌರವವನ್ನು ಕೊಡಿಸಿದನು. ರಾಜ್ಯದ ಎಲ್ಲಾ ಅಧಿಕಾರಿಗಳೂ ಅರಮನೆಯ ಹೆಬ್ಬಾಗಿಲ ಬಳಿಯಲ್ಲಿದ್ದವರೆಲ್ಲರೂ ಅವನಿಗೆ ಅಡ್ಡಬೀಳುತ್ತಿದ್ದರು. ಇದು ರಾಜಾಜ್ಞೆಯಾಗಿತ್ತು. ಆದರೆ ಮೊರ್ದೆಕೈ ಮಾತ್ರ ಅವನಿಗೆ ಅಡ್ಡಬೀಳಲೂ ಇಲ್ಲ ಗೌರವಿಸಲೂ ಇಲ್ಲ. ಅರಮನೆಯ ಹೆಬ್ಬಾಗಿಲ ಬಳಿಯಲ್ಲಿದ್ದ ಅಧಿಕಾರಿಗಳು, “ಮೊರ್ದೆಕೈ, ಅರಸನ ಆಜ್ಞೆಯ ಪ್ರಕಾರ ಹಾಮಾನನಿಗೆ ನೀನು ಏಕೆ ಬಗ್ಗಿ ನಮಸ್ಕರಿಸುವುದಿಲ್ಲ?” ಎಂದು ಪ್ರಶ್ನಿಸಿದರು.
ಪ್ರತಿದಿನ ಆ ಅಧಿಕಾರಿಗಳು ಮೊರ್ದೆಕೈಗೆ ಹೇಳಿದರೂ ಅವನು ಹಾಮಾನನಿಗೆ ಅಡ್ಡಬೀಳಲೂ ಇಲ್ಲ, ಗೌರವಿಸಲೂ ಇಲ್ಲ. ಈ ವಿಷಯವನ್ನು ಅಧಿಕಾರಿಗಳು ಹಾಮಾನನಿಗೆ ತಿಳಿಸಿದರು. ಮೊರ್ದೆಕೈಗೆ ಹಾಮಾನನು ಮಾಡುವದನ್ನು ನೋಡಲು ಕಾದಿದ್ದರು. ಮೊರ್ದೆಕೈ ಅವರಿಗೆ ತಾನು ಯೆಹೂದ್ಯನೆಂದು ತಿಳಿಸಿದ್ದನು. ಮೊರ್ದೆಕೈ ತನಗೆ ಅಡ್ಡಬೀಳದಿರುವುದರಿಂದ ಮತ್ತು ಗೌರವಿಸದಿರುವುದರಿಂದ ಹಾಮಾನನು ಬಹಳ ಕೋಪಗೊಂಡನು. ಮೊರ್ದೆಕೈ ಯೆಹೂದ್ಯ ಜನಾಂಗಕ್ಕೆ ಸೇರಿದವನೆಂದು ಹಾಮಾನನಿಗೆ ತಿಳಿದುಬಂತು. ಕೇವಲ ಮೊರ್ದೆಕೈಯನ್ನು ಮಾತ್ರವೇ ಕೊಲ್ಲದೆ ಅಹಷ್ವೇರೋಷನ ಸಾಮ್ರಾಜ್ಯದಲ್ಲಿರುವ ಎಲ್ಲಾ ಯೆಹೂದ್ಯರನ್ನು ಕೊಲ್ಲುವ ಉಪಾಯವನ್ನು ಹೂಡಿದನು.
ಅಹಷ್ವೇರೋಷನ ಆಳ್ವಿಕೆಯ ಹನ್ನೆರಡನೆಯ ವರ್ಷದ ಮೊದಲನೆ ತಿಂಗಳಾದ ನೀಸಾನ್ ತಿಂಗಳಲ್ಲಿ ಒಂದು ನಿರ್ದಿಷ್ಟ ದಿವಸಕ್ಕಾಗಿ ಹಾಮಾನನು ಚೀಟು ಹಾಕಿದನು. ಆಗ ಹನ್ನೆರಡನೆ ತಿಂಗಳಾದ ಆದಾರ್ ಮಾಸವು ಆರಿಸಲ್ಪಟ್ಟಿತು. (ಆ ದಿವಸಗಳಲ್ಲಿ ಚೀಟು ಹಾಕುವದಕ್ಕೆ “ಪೂರ್” ಎಂದು ಅನ್ನುತ್ತಿದ್ದರು.) ಹಾಮಾನನು ಅರಸನಾದ ಅಹಷ್ವೇರೋಷನ ಬಳಿಗೆ ಬಂದು, “ಅರಸನೇ, ನಿನ್ನ ಸಾಮ್ರಾಜ್ಯದ ಎಲ್ಲಾ ಸಂಸ್ಥಾನಗಳಲ್ಲಿ ಒಂದು ಜನಾಂಗದವರು ಹಬ್ಬಿರುತ್ತಾರೆ. ಇವರು ಇತರ ಎಲ್ಲಾ ಜನರಿಂದ ಪ್ರತ್ಯೇಕವಾಗಿ ಇರುತ್ತಾರೆ. ಅವರ ನೀತಿರೀತಿಗಳೆಲ್ಲಾ ಬೇರೆ ಜನರಿಗಿಂತ ವಿಭಿನ್ನವಾಗಿರುತ್ತದೆ. ಅವರು ರಾಜನ ಕಟ್ಟಳೆಗೆ ವಿಧೇಯರಾಗುವುದಿಲ್ಲ. ನಿನ್ನ ರಾಜ್ಯದಲ್ಲಿ ಅವರು ಹೀಗೆಯೇ ಇರುವದು ಒಳ್ಳೆಯದಲ್ಲ.
“ರಾಜನೇ, ನೀನು ಸಮ್ಮತಿಸುವದಾದರೆ ನನ್ನ ಸಲಹೆ ಏನೆಂದರೆ, ಆ ಜನರನ್ನು ನಿರ್ಮೂಲ ಮಾಡಲು ಅಪ್ಪಣೆ ಕೊಡು. ನಾನು ಹತ್ತು ಸಾವಿರ ಬೆಳ್ಳಿನಾಣ್ಯಗಳನ್ನು ರಾಜ ಖಜಾನೆಯಲ್ಲಿ ಹಾಕುವೆನು. ಆ ಹಣವನ್ನು ಆ ಕಾರ್ಯ ಮಾಡುವ ಜನರ ಸಂಬಳಕ್ಕಾಗಿ ವಿನಿಯೋಗಿಸಬಹುದು” ಎಂದು ಹೇಳಿದನು.
10 ಆಗ ಅರಸನು ತನ್ನ ಮುದ್ರೆಯುಂಗುರವನ್ನು ಬೆರಳಿನಿಂದ ತೆಗೆದು ಹಾಮಾನನಿಗೆ ಕೊಟ್ಟನು. ಹಾಮಾನನು ಅಗಾಗನ ವಂಶದವನಾದ ಹಮ್ಮೆದಾತನ ಮಗನು. ಈ ಹಾಮಾನನು ಯೆಹೂದ್ಯರ ಕಡುವೈರಿಯಾಗಿದ್ದನು. 11 ಅರಸನು ಹಾಮಾನನಿಗೆ, “ನಿನ್ನ ಹಣವು ನಿನ್ನ ಹತ್ರವೇ ಇರಲಿ. ಆ ಜನರನ್ನು ನಿನಗೆ ಇಷ್ಟ ಬಂದ ಹಾಗೆ ಮಾಡಬಹುದು” ಅಂದನು.
12 ಮೊದಲನೆ ತಿಂಗಳಿನ ಹದಿಮೂರನೇ ದಿವಸದಂದು ರಾಜಲೇಖಕರನ್ನು ಕರೆಯಿಸಿ ಹಾಮಾನನ ಆಜ್ಞೆಯನ್ನು ಆಯಾಭಾಷೆಗಳಲ್ಲಿ ಬರೆಯಿಸಿದನು. ರಾಜನ ಸಂಸ್ಥಾನಾಧಿಕಾರಿಗಳಿಗೆ, ರಾಜ್ಯಪಾಲರಿಗೆ ಮತ್ತು ವಿವಿಧ ಜನಾಂಗದ ಅಧಿಕಾರಿಗಳಿಗೆ ಅರಸನಾದ ಅಹಷ್ವೇರೋಷನ ಹೆಸರಿನಲ್ಲಿ ಬರೆದು ಅದಕ್ಕೆ ರಾಜನ ಮುದ್ರೆಯನ್ನೊತ್ತಲಾಯಿತು.
13 ರಾಜಾಜ್ಞೆಯನ್ನು ಹೊತ್ತ ಸಂದೇಶವಾಹಕರು ದೇಶದ ಎಲ್ಲಾ ಕಡೆಗಳಲ್ಲಿ ಹೊತ್ತುಕೊಂಡು ಬಂದರು. ಆ ಪತ್ರದಲ್ಲಿ ಹನ್ನೆರಡನೇ ತಿಂಗಳಿನ ಹದಿಮೂರನೇ ದಿವಸದಂದು ಆಯಾ ಪ್ರಾಂತ್ಯಗಳಲ್ಲಿರುವ ಎಲ್ಲಾ ಯೆಹೂದ್ಯರನ್ನು ಚಿಕ್ಕವರು ದೊಡ್ಡವರು ಎನ್ನದೆ ಕೊಂದು ಅವರ ವಸ್ತುಗಳನ್ನೆಲ್ಲ ಸೂರೆ ಮಾಡಬೇಕೆಂಬದಾಗಿ ಬರೆದಿತ್ತು.
14 ಈ ಪತ್ರದ ಒಂದೊಂದು ಪ್ರತಿಯು ಪ್ರತಿಯೊಂದು ಸಂಸ್ಥಾನದಲ್ಲಿ ರಾಜವಿಧಿಯೆಂದು ಎಲ್ಲಾ ಜನರಲ್ಲಿ ಪ್ರಕಟಿಸಲ್ಪಡಬೇಕು ಅಲ್ಲದೆ ಆ ದಿನಕ್ಕಾಗಿ ಎಲ್ಲಾ ಜನರೂ ಸಿದ್ಧರಾಗಿರಬೇಕೆಂಬುದಾಗಿ ಬರೆದಿತ್ತು. 15 ರಾಜನ ಆಜ್ಞೆಯ ಪ್ರಕಾರ ಸಂದೇಶವಾಹಕರು ದೇಶದೇಶಗಳಿಗೆ ಚದರಿದರು. ರಾಜಧಾನಿಯಾದ ಶೂಷನ್ ನಗರದಲ್ಲೂ ಆ ಸಂದೇಶವನ್ನು ಪ್ರಕಟಿಸಲಾಯಿತು. ಅರಸನೂ ಹಾಮಾನನೂ ಮದ್ಯಪಾನ ಮಾಡಲು ಕುಳಿತರು. ಆದರೆ ರಾಜಧಾನಿಯಲ್ಲಿನ ಜನರು ಗಲಿಬಿಲಿಗೊಂಡಿದ್ದರು.