15
ಮೋವಾಬಿನ ಕುರಿತು ದೈವಸಂದೇಶ
1 ಇದು ಮೋವಾಬನ್ನು ಕುರಿತ ದುಃಖಕರವಾದ ಸಂದೇಶ:
ಒಂದು ರಾತ್ರಿ ಮೋವಾಬಿನ ಆರ್ ಪಟ್ಟಣದಿಂದ ಸಂಪತ್ತನ್ನು ಸೈನ್ಯವು ಸೂರೆ ಮಾಡಿತು.
ಆ ರಾತ್ರಿ ನಗರವು ನಾಶಮಾಡಲ್ಪಟ್ಟಿತು.
ಒಂದು ರಾತ್ರಿ ಸೈನ್ಯವು ಮೋವಾಬಿನ ಕೀರ್ ಪಟ್ಟಣದಿಂದ ಸಂಪತ್ತನ್ನು ಸೂರೆ ಮಾಡಿತು.
ಆ ರಾತ್ರಿ ಪಟ್ಟಣವು ಕೆಡವಲ್ಪಟ್ಟಿತು.
2 ಅರಸನ ಪರಿವಾರದವರು ಮತ್ತು ದೀಬೋನಿನ ಜನರು ಪೂಜಾಸ್ಥಳಕ್ಕೆ ದುಃಖಿಸಲು ಹೋಗುತ್ತಿದ್ದಾರೆ.
ಮೋವಾಬಿನ ಜನರು ನೆಬೋ ಮತ್ತು ಮೇದೆಬದವರಿಗಾಗಿ ರೋಧಿಸುತ್ತಾರೆ.
ಜನರು ತಮ್ಮ ಗಡ್ಡಗಳನ್ನೂ ತಲೆಗಳನ್ನೂ ಬೋಳಿಸಿ ತಮ್ಮ ದುಃಖವನ್ನು ಪ್ರದರ್ಶಿಸುತ್ತಾರೆ.
3 ಮೋವಾಬಿನ ಎಲ್ಲಾ ಕಡೆಗಳಲ್ಲೂ ಮನೆಯ ಚಾವಣಿಯ ಮೇಲೂ ಬೀದಿಗಳಲ್ಲೂ
ಜನರು ಗೋಣಿತಟ್ಟುಗಳನ್ನು ಧರಿಸಿಕೊಂಡು ರೋಧಿಸುತ್ತಾರೆ.
4 ಹೆಷ್ಬೋನ್ ಮತ್ತು ಎಲೆಯಾಲೆಯಲ್ಲಿರುವ ಜನರು ಗಟ್ಟಿಯಾಗಿ ಅಳುತ್ತಿದ್ದಾರೆ.
ದೂರದಲ್ಲಿರುವ ಯಹಜ್ ಪಟ್ಟಣದವರಿಗೆ ಅವರ ರೋಧನವು ಕೇಳಿಸುತ್ತದೆ.
ಸೈನಿಕರೂ ಭಯಗೊಂಡಿದ್ದಾರೆ.
ಹೆದರಿಕೆಯಿಂದ ನಡುಗುತ್ತಿದ್ದಾರೆ.
5 ಮೋವಾಬಿನ ಬಗ್ಗೆ ನನ್ನ ಹೃದಯವು ಮರುಗುತ್ತಿದೆ.
ಜನರು ಸುರಕ್ಷತೆಗಾಗಿ ಅತ್ತಿತ್ತ ಓಡಾಡುತ್ತಿದ್ದಾರೆ. ಅವರು ಬಹುದೂರವಿರುವ ಚೋಯರಿಗೆ ಓಡುತ್ತಿದ್ದಾರೆ.
ಎಗ್ಲತ್ ಶೆಲಿಶೀಯಕ್ಕೂ ಓಡುತ್ತಾರೆ.
ಪರ್ವತಮಾರ್ಗವಾಗಿ ಲೂಹೀಥ್ ಗೆ
ಹೋಗುತ್ತಿರುವಾಗ ಜನರು ಅಳುತ್ತಾ ಹೋಗುತ್ತಾರೆ.
ಹೊರೊನಯಿಮಿಗೆ ಹೋಗುವ ಮಾರ್ಗದಲ್ಲಿ
ಜನರು ಜೋರಾಗಿ ಅಳುತ್ತಾ ಹೋಗುತ್ತಿದ್ದಾರೆ.
6 ಆದರೆ ನಿಮ್ರೀಮ್ ಹಳ್ಳವು ಒಣಗಿಹೋಗಿ ಮರುಭೂಮಿಗೆ ಸಮಾನವಾಗಿದೆ.
ಹಸಿಹುಲ್ಲುಗಳೆಲ್ಲಾ ಬಾಡಿವೆ;
ಸಸಿಗಳೆಲ್ಲಾ ಸತ್ತಿವೆ;
ಎಲ್ಲಿಯೂ ಹಸಿರು ಕಾಣಿಸುವದಿಲ್ಲ.
7 ಆದಕಾರಣ ಜನರು ತಮ್ಮ ವಸ್ತುಗಳನ್ನು ಒಟ್ಟಾಗಿ ಸೇರಿಸಿ ಮೋವಾಬನ್ನು ಬಿಟ್ಟುಹೋಗುತ್ತಿದ್ದಾರೆ.
ಅವರು ತಮ್ಮ ವಸ್ತುಗಳನ್ನು ಹೊತ್ತುಕೊಂಡು ಪೊಪ್ಲಾರ್ ಹೊಳೆಯ ಬದಿಯಲ್ಲಿ ಗಡಿದಾಟುವರು.
8 ಮೋವಾಬ್ ದೇಶದಲ್ಲೆಲ್ಲಾ ಅಳುವ ಸದ್ದು ಕೇಳಿಸುತ್ತದೆ.
ದೂರದಲ್ಲಿರುವ ಎಗ್ಲಯಿಮಿನಲ್ಲೂ ಜನರು ಅಳುತ್ತಿದ್ದಾರೆ. ಬೆಯೇರ್ ಏಲೀಮ್ ಪಟ್ಟಣದಲ್ಲೂ ಜನರು ರೋಧಿಸುತ್ತಾರೆ.
9 ದೀಮೋನಿನ ನೀರು ರಕ್ತಮಯವಾಗಿದೆ.
ಮತ್ತು ಯೆಹೋವನಾದ ನಾನು ದೀಮೋನಿಗೆ ಇನ್ನೂ ಕೇಡುಗಳನ್ನು ಬರಮಾಡುವೆನು.
ಮೋವಾಬಿನಲ್ಲಿ ವಾಸಿಸುವ ಕೆಲವೇ ಜನರು ಶತ್ರುಗಳಿಂದ ಪಾರಾಗಿದ್ದಾರೆ.
ಆದರೆ ಅವರನ್ನು ಸಾಯಿಸಲು ನಾನು ಸಿಂಹಗಳನ್ನು ಕಳುಹಿಸುವೆನು.