ಧರ್ಮೋಪದೇಶಕಾಂಡ
ಗ್ರಂಥಕರ್ತೃತ್ವ
ಮೋಶೆಯು ಧರ್ಮೋಪದೇಶಕಾಂಡ ಗ್ರಂಥವನ್ನು ಬರೆದನು, ಇದು ವಾಸ್ತವಿಕವಾಗಿ, ಯೊರ್ದನ್ ನದಿಯನ್ನು ದಾಟುವ ಮೊದಲು ಅವನು ಇಸ್ರಾಯೇಲರಿಗೆ ಬೋಧಿಸಿದ ಧರ್ಮೋಪದೇಶಗಳ ಸಂಗ್ರಹವಾಗಿದೆ. “ಮೋಶೆಯು ಇಸ್ರಾಯೇಲ್ಯರೆಲ್ಲರಿಗೆ ಮಾಡಿದ ಉಪನ್ಯಾಸಗಳು” (1:1). ಕೊನೆಯ ಅಧ್ಯಾಯವನ್ನು ಬೇರೊಬ್ಬರು (ಪ್ರಾಯಶಃ, ಯೆಹೋಶುವನು) ಬರೆದಿರಬಹುದು. ಸ್ವತಃ ಈ ಪುಸ್ತಕವೇ ಅದರ ಹೆಚ್ಚಿನ ವಿಷಯಗಳನ್ನು ಮೋಶೆಗೆ ಸೇರಿದವುಗಳು ಎಂದು ಹೇಳುತ್ತದೆ (1:1,5; 31:24). ಮೋವಾಬ್ನ ಪ್ರಾಂತ್ಯದಲ್ಲಿ ಅಂದರೆ ಯೊರ್ದನ್ ನದಿಯು ಲವಣ ಸಮುದ್ರಕ್ಕೆ ಹರಿಯುವ ಪ್ರದೇಶದಲ್ಲಿ ಮೋಶೆ ಮತ್ತು ಇಸ್ರಾಯೇಲರು ಇದ್ದರು ಎಂದು ಧರ್ಮೋಪದೇಶಕಾಂಡವು ಹೇಳುತ್ತದೆ (1:5). ಧರ್ಮೋಪದೇಶಕಾಂಡ ಎಂದರೆ “ಎರಡನೇ ಧರ್ಮಶಾಸ್ತ್ರ.” ಇದು ದೇವರ ಮತ್ತು ಆತನ ಜನರಾದ ಇಸ್ರಾಯೇಲರ ನಡುವಿನ ಒಡಂಬಡಿಕೆಯ ಕುರಿತು ಪುನರಾವರ್ತಿಸಿ ಹೇಳುವುದಾಗಿರುತ್ತದೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 1,446 - 1,405 ರ ನಡುವಿನ ಕಾಲದಲ್ಲಿ ಬರೆದಿರಬಹುದು.
ಇಸ್ರಾಯೇಲರು ವಾಗ್ದಾನ ದೇಶವನ್ನು ಪ್ರವೇಶಿಸುವುದಕ್ಕಿಂತ ಮುಂಚಿನ 40 ದಿನಗಳ ಅವಧಿಯಲ್ಲಿ ಈ ಪುಸ್ತಕವನ್ನು ಬರೆಯಲ್ಪಟ್ಟಿರುತ್ತದೆ.
ಸ್ವೀಕೃತದಾರರು
ಅವರ ತಂದೆತಾಯಿಗಳು ಐಗುಪ್ತದ ದಾಸತ್ವದಿಂದ ಪಾರಾದ 40 ವರ್ಷಗಳ ನಂತರ ವಾಗ್ದಾನ ದೇಶವನ್ನು ಪ್ರವೇಶಿಸಲು ಸಿದ್ಧರಿದ್ದ ಇಸ್ರಾಯೇಲ್ಯರ ಹೊಸ ತಲೆಮಾರಿನವರಿಗೆ ಮತ್ತು ಮುಂದಿನ ಎಲ್ಲಾ ಸತ್ಯವೇದದ ಓದುಗರಿಗೆ ಬರೆಯಲಾಗಿರುತ್ತದೆ.
ಉದ್ದೇಶ
ಧರ್ಮೋಪದೇಶಕಾಂಡವು ದೇಶವನ್ನು ಉದ್ದೇಶಿಸಿ ಮೋಶೆಯ ವಿದಾಯ ಸಂಬೋಧನೆಯಾಗಿದೆ. ಇಸ್ರಾಯೇಲರು ವಾಗ್ದಾನ ದೇಶವನ್ನು ಪ್ರವೇಶಿಸಲು ಸನ್ನದ್ಧರಾಗಿ ನಿಂತಿದ್ದರು. ಐಗುಪ್ತದಿಂದ ಬಿಡುಗಡೆಯಾಗಿ ಹೊರಟುಬಂದ ನಲವತ್ತು ವರ್ಷಗಳ ನಂತರ, ಕಾನಾನ್ ದೇಶವನ್ನು ವಶಪಡಿಸಿಕೊಳ್ಳಲು ಆ ಜನಾಂಗವು ಯೊರ್ದನ್ ನದಿಯನ್ನು ದಾಟುವುದಕ್ಕಿದ್ದರು. ಆದಾಗ್ಯೂ, ಮೋಶೆಯು ಸಾಯುವುದಕ್ಕಿದ್ದನು ಮತ್ತು ವಾಗ್ದಾನ ದೇಶದೊಳಗೆ ಪ್ರವೇಶಿಸುವ ಜನಾಂಗದೊಂದಿಗೆ ಹೋಗುವಂತಿಲ್ಲ. ಮೋಶೆಯ ವಿದಾಯ ಸಂಬೋಧನೆಯು ಅವರು ಅವರ ಹೊಸ ದೇಶದಲ್ಲಿ ಕ್ಷೇಮದಿಂದಿರುವಂತೆ ದೇವರ ಆಜ್ಞೆಗಳಿಗೆ ವಿಧೇಯರಾಗಬೇಕೆಂಬ ಕಳಕಳಿಯ ಮನವಿಯಾಗಿದ್ದಿತ್ತು. (6:1-3, 17-19). ಅವರ ದೇವರು ಯಾರು (6:4) ಮತ್ತು ಆತನು ಅವರಿಗೆ ಏನು ಮಾಡಿದ್ದಾನೆ ಎಂದು ಈ ಸಂಬೋಧನೆಯು ಆ ಜನರಿಗೆ ನೆನಪಿಸುತ್ತದೆ (6:10-12, 20-23). ಈ ಆಜ್ಞೆಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಲು ಮೋಶೆಯು ಜನರನ್ನು ಬೇಡಿಕೊಳ್ಳುತ್ತಾನೆ (6:6-9).
ಮುಖ್ಯಾಂಶ
ವಿಧೇಯತೆ
ಪರಿವಿಡಿ
1. ಐಗುಪ್ತದಿಂದ ಇಸ್ರಾಯೇಲ್ಯರ ಪ್ರಯಾಣ — 1:1-3:29
2. ದೇವರೊಂದಿಗಿನ ಇಸ್ರಾಯೇಲ್ಯರ ಸಂಬಂಧ — 4:1-5:33
3. ದೇವರೊಂದಿಗಿನ ನಿಷ್ಠೆಯ ಮಹತ್ವ — 6:1-11:32
4. ದೇವರನ್ನು ಪ್ರೀತಿಸುವುದು ಮತ್ತು ಆತನ ಆಜ್ಞೆಗಳನ್ನು ಅನುಸರಿಸುವುದು ಹೇಗೆ — 12:1-26:19
5. ಆಶೀರ್ವಾದಗಳು ಮತ್ತು ಶಾಪಗಳು — 27:1-30:20
6. ಮೋಶೆಯ ಮರಣ — 31:1-34:12
1
ಮೋಶೆಯು ಮೂರು ಉಪದೇಶಾತ್ಮಕ ಉಪನ್ಯಾಸಗಳನ್ನು ಮಾಡಿದ ಕಾಲ ಮತ್ತು ಸ್ಥಳ
* 1:1 ಯೊರ್ದನ್ ಹೊಳೆಯ ಪೂರ್ವದಿಕ್ಕಿನ ಕಡೆ.ಯೊರ್ದನ್ ನದಿಯ ಆಚೆ, ಪಾರಾನ್, ತೋಫೆಲ್, ಲಾಬಾನ್, ಹಚೇರೋತ್ ಮತ್ತು ದೀಜಾಹಾಬ್ ಎಂಬ ಸ್ಥಳಗಳ ನಡುವೆ, ಅರಣ್ಯದಲ್ಲಿ ಆರಾಬಾ ಎಂಬ ತಗ್ಗಾದ ಪ್ರದೇಶದಲ್ಲಿ ಸೂಫಿಗೆ ಎದುರಾಗಿ ಮೋಶೆಯು ಇಸ್ರಾಯೇಲರೆಲ್ಲರಿಗೆ ಮಾಡಿದ ಉಪದೇಶ ಮತ್ತು ಉಪನ್ಯಾಸಗಳು. ಹೋರೇಬಿನಿಂದ ಸೇಯೀರ್ ಬೆಟ್ಟಗಳ ಮಾರ್ಗವಾಗಿ ಕಾದೇಶ್‌ಬರ್ನೇಯದ ತನಕ ಹನ್ನೊಂದು ದಿನದ ಪ್ರಯಾಣ.
ಇಸ್ರಾಯೇಲರು ಐಗುಪ್ತದೇಶವನ್ನು ಬಿಟ್ಟ ನಲ್ವತ್ತನೆಯ ವರ್ಷದ, ಹನ್ನೊಂದನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಯೆಹೋವನು ತನಗೆ ಆಜ್ಞಾಪಿಸಿದ್ದನ್ನೆಲ್ಲಾ ಮೋಶೆಯು ಇಸ್ರಾಯೇಲರಿಗೆ ತಿಳಿಸಿದನು. ಯೆಹೋವನು ಹೆಷ್ಬೋನಿನಲ್ಲಿದ್ದ ಅಮೋರಿಯರ ಅರಸನಾದ ಸೀಹೋನನನ್ನೂ, ಅಷ್ಟಾರೋತ್, ಎದ್ರೈ ಎಂಬ ಪಟ್ಟಣಗಳಲ್ಲಿದ್ದ ಬಾಷಾನಿನ ಅರಸನಾದ ಓಗನನ್ನೂ ಜಯಿಸಿದ ತರುವಾಯವೇ ಮೋಶೆಯು ಇದನ್ನೆಲ್ಲಾ ತಿಳಿಸಿದನು.
ಮೋಶೆ ಮಾಡಿದ ಮೊದಲನೆಯ ಉಪನ್ಯಾಸ
ಯೊರ್ದನ್ ನದಿಯ ಆಚೆ ಮೋವಾಬ್ಯರ ದೇಶದಲ್ಲಿ ಮೋಶೆಯು ಈ ಮುಂದಣ ಧರ್ಮಶಾಸ್ತ್ರವನ್ನು ವಿವರಿಸುವುದಕ್ಕೆ ಪ್ರಾರಂಭಿಸಿ ಹೀಗೆ ಹೇಳಿದನು:
“ಹೋರೇಬಿನಲ್ಲಿ ನಮ್ಮ ದೇವರಾದ ಯೆಹೋವನು ನಮಗೆ, ‘ನೀವು ಈ ಬೆಟ್ಟದ ಬಳಿಯಲ್ಲಿ ವಾಸಿಸಿದ್ದು ಸಾಕು. ಈಗ ಹಿಂದಿರುಗಿ ಅಮೋರಿಯರು ಇರುವ ಬೆಟ್ಟದ ಸೀಮೆಗೂ ಮತ್ತು ಅದಕ್ಕೆ ಸೇರಿದ ಪ್ರದೇಶದ ಕಡೆಗೆ ಪ್ರಯಾಣಮಾಡಿರಿ. ಅವು ಯಾವುವೆಂದರೆ: ತಗ್ಗಾದ ಪ್ರದೇಶ, ಬೆಟ್ಟದ ಮೇಲಿನ ಪ್ರದೇಶ, ಇಳಕಲಿನ ಪ್ರದೇಶ, ದಕ್ಷಿಣಸೀಮೆ ಮತ್ತು ಸಮುದ್ರತೀರ ಎಂಬ ನಾಡುಗಳನ್ನು ಒಳಗೊಂಡಿರುವ ಕಾನಾನ್ಯರ ದೇಶ, ಲೆಬನೋನ್ ಪರ್ವತ ಮತ್ತು ಯೂಫ್ರೆಟಿಸ್ ಎಂಬ ಮಹಾನದಿಯ ವರೆಗೆ ವಿಸ್ತರಿಸಿಕೊಂಡಿರುವ ಪ್ರದೇಶಗಳಿಗೆ ಹೋಗಿರಿ. ಆ ದೇಶವನ್ನು ನಿಮಗೇ ಕೊಟ್ಟಿದ್ದೇನೆ. ಯೆಹೋವನೆಂಬ ನಾನು ನಿಮ್ಮ ಪೂರ್ವಿಕರಾದ ಅಬ್ರಹಾಮ್, ಇಸಾಕ್, ಯಾಕೋಬರಿಗೂ ಮತ್ತು ಅವರ ಸಂತತಿಯವರಿಗೂ ಆ ದೇಶವನ್ನು ಕೊಡುತ್ತೇನೆಂದು ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದೆನಲ್ಲಾ. ಅದರಲ್ಲಿ ಪ್ರವೇಶಮಾಡಿ ಸ್ವಾಧೀನಮಾಡಿಕೊಳ್ಳಿರಿ’ ” ಎಂದು ಅಜ್ಞಾಪಿಸಿದನು.
ನಾಯಕರನ್ನು ನೇಮಿಸಿದ್ದನ್ನು ನೆನಪಿಸಿದ್ದು
ಆ ಕಾಲದಲ್ಲಿ ನಾನು ನಿಮ್ಮ ಸಂಗಡ ಮಾತನಾಡಿ, “ನಿಮ್ಮ ಹೊಣೆಯನ್ನು ನಾನೊಬ್ಬನೇ ಹೊರುವುದು ಅಸಾಧ್ಯ. 10 ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಅಧಿಕ ಸಂಖ್ಯೆಯಲ್ಲಿ ಹೆಚ್ಚಿಸಿದ್ದರಿಂದ ನೀವು ಈಗ ಆಕಾಶದ ನಕ್ಷತ್ರಗಳಷ್ಟು ಅಸಂಖ್ಯರಾಗಿದ್ದೀರಿ. 11 ನೀವು ಈಗ ಇರುವುದಕ್ಕಿಂತಲೂ ಇನ್ನು ಸಾವಿರದಷ್ಟಾಗುವಂತೆ ನಿಮ್ಮ ಪೂರ್ವಿಕರ ದೇವರಾದ ಯೆಹೋವನು ನಿಮ್ಮನ್ನು ಹೆಚ್ಚಿಸಿ, ತಾನು ವಾಗ್ದಾನಮಾಡಿದ ಪ್ರಕಾರವೇ ನಿಮಗೆ ಶುಭಗಳನ್ನು ಅನುಗ್ರಹಿಸಲಿ. 12 ಆದರೆ ನಿಮ್ಮಿಂದಾಗುವ ತೊಂದರೆಗಳನ್ನೂ, ಹೊಣೆಯನ್ನು ಮತ್ತು ವ್ಯಾಜ್ಯಗಳನ್ನೂ ನಾನೊಬ್ಬನೇ ನಿಭಾಯಿಸುವುದು ಹೇಗೆ? 13 ಆದುದರಿಂದ ನೀವು ಪ್ರತಿಯೊಂದು ಕುಲದಿಂದ ಬುದ್ಧಿವಿವೇಕಗಳಿಂದ ಪ್ರಸಿದ್ಧರಾದ ಪುರುಷರನ್ನು ಆರಿಸಿಕೊಳ್ಳಿರಿ. ನಾನು ಅವರನ್ನು ನಿಮಗೆ ಅಧಿಪತಿಗಳನ್ನಾಗಿ ನೇಮಿಸುವೆನು” ಎಂದು ಹೇಳಿದೆನು. 14 ಅದಕ್ಕೆ ನೀವು, “ನಿನ್ನ ಆಲೋಚನೆಯಂತೆ ನಡೆಯುವುದು ಹಿತವಾದದ್ದೇ” ಎಂದು ಉತ್ತರಕೊಟ್ಟಿರಿ. 15 ಆಗ ನಾನು ನಿಮ್ಮಲ್ಲಿ ಪ್ರಸಿದ್ಧರಾದ, ಬುದ್ಧಿವಂತರನ್ನು ಆರಿಸಿಕೊಂಡು ಒಂದೊಂದು ಕುಲದಲ್ಲಿ ಸಾವಿರ ಜನರಿಗೆ ಒಬ್ಬರಂತೆ, ನೂರು ಜನರಿಗೆ ಒಬ್ಬರಂತೆ, ಐವತ್ತು ಜನರಿಗೆ ಒಬ್ಬರಂತೆ ಮತ್ತು ಹತ್ತು ಜನರಿಗೆ ಒಬ್ಬರಂತೆ ಅಧಿಕಾರಿಗಳನ್ನಾಗಿಯೂ ಮತ್ತು ಉಪ ಅಧಿಕಾರಿಗಳನ್ನಾಗಿಯೂ ನೇಮಿಸಿದೆನು. 16 ಆ ನ್ಯಾಯಾಧಿಪತಿಗಳಿಗೆ ನಾನು ಆ ಕಾಲದಲ್ಲಿ ಅಪ್ಪಣೆಮಾಡಿ, “ನೀವು ಸ್ವಕುಲದವರ ವ್ಯಾಜ್ಯಗಳನ್ನು ವಿಚಾರಿಸಬೇಕು. ಅವರು ಇಸ್ರಾಯೇಲರೊಡನೆ ವ್ಯಾಜ್ಯವಾಡಿದರೂ, ಅನ್ಯರೊಡನೆ ವ್ಯಾಜ್ಯವಾಡಿದರೂ ನೀವು ನ್ಯಾಯದ ಪ್ರಕಾರವೇ ತೀರ್ಪುಮಾಡಬೇಕು. 17 ನ್ಯಾಯವಿಚಾರಣೆ ಮಾಡುವಾಗ ಮುಖದಾಕ್ಷಿಣ್ಯಮಾಡದೆ, ಪ್ರಮುಖರನ್ನೂ ಹಾಗು ಅಲ್ಪರನ್ನೂ ಸಮಾನವಾಗಿ ಕಾಣಬೇಕು. ನೀವು ದೇವರ ಹೆಸರಿನಲ್ಲಿ ನ್ಯಾಯತೀರಿಸುವವರಾದ ಕಾರಣ ಮನುಷ್ಯರ ಮುಖವನ್ನು ನೋಡಿ ಹೆದರಬೇಡಿರಿ. ನೀವು ತೀರಿಸಲಿಕ್ಕೆ ಆಗದ ವ್ಯಾಜ್ಯಗಳನ್ನು ನನ್ನ ಬಳಿಗೆ ತರಬೇಕು; ನಾನೇ ಅವುಗಳನ್ನು ತೀರಿಸುವೆನು” ಎಂದು ಹೇಳಿದೆನು. 18 ಅದಲ್ಲದೆ ನೀವು ಮಾಡಬೇಕಾದ ಎಲ್ಲಾ ಕಾರ್ಯಗಳ ವಿಷಯದಲ್ಲಿಯೂ ನಾನು ಆ ಕಾಲದಲ್ಲಿ ನಿಮಗೆ ಆಜ್ಞೆಕೊಟ್ಟೆನು.
ಗೂಢಚಾರರನ್ನು ಕಳುಹಿಸಿದ್ದನ್ನು ನೆನಪಿಸಿದ್ದು
19 ನಾವು ಹೋರೇಬಿನಿಂದ ಹೊರಟು ನಮ್ಮ ದೇವರಾದ ಯೆಹೋವನು ಆಜ್ಞಾಪಿಸಿದಂತೆ ಅಮೋರಿಯರ ಬೆಟ್ಟದ ಸೀಮೆಯ ಮಾರ್ಗವನ್ನು ಹಿಡಿದು ನೀವು ನೋಡಿದ ಆ ಘೋರವಾದ ಮಹಾ ಅರಣ್ಯದಲ್ಲಿ ನಡೆದು ಕಾದೇಶ್‌ಬರ್ನೇಯಕ್ಕೆ ಸೇರಿದೆವು. 20 ಆಗ ನಾನು, “ನಮ್ಮ ದೇವರಾದ ಯೆಹೋವನು ನಮಗೆ ಕೊಡುವ ಅಮೋರಿಯರ ಬೆಟ್ಟದ ಸೀಮೆಯ ಹತ್ತಿರಕ್ಕೆ ಬಂದಿದ್ದೀರಿ. 21 ನಿಮ್ಮ ದೇವರಾದ ಯೆಹೋವನು ಆ ದೇಶವನ್ನು ನಿಮಗೇ ಕೊಟ್ಟಿದ್ದಾನೆ; ನಿಮ್ಮ ಪೂರ್ವಿಕರ ದೇವರಾದ ಯೆಹೋವನು ಹೇಳಿದಂತೆ ಆ ಬೆಟ್ಟವನ್ನು ಹತ್ತಿ ಸ್ವಾಧೀನಮಾಡಿಕೊಳ್ಳಿರಿ; ನೀವು ಭಯಪಡದೆ ಧೈರ್ಯವಾಗಿಯೇ ಇರಬೇಕು” ಎಂದು ಹೇಳಿದೆನು.
22 ಆಗ ನೀವೆಲ್ಲರೂ ನನ್ನ ಬಳಿಗೆ ಬಂದು, “ನಮಗಿಂತ ಮುಂದಾಗಿ ಜನರನ್ನು ಕಳುಹಿಸುವೆವು. ಅವರು ನಮಗೋಸ್ಕರ ಆ ದೇಶವನ್ನು ಪರೀಕ್ಷಿಸಿ ನೋಡಿ, ನಾವು ಹತ್ತಿ ಹೋಗಬೇಕಾದ ದಾರಿಯ ವಿಷಯದಲ್ಲೂ ಮತ್ತು ಸೇರಬೇಕಾದ ಊರುಗಳ ವಿಷಯದಲ್ಲೂ ನಮಗೆ ವರ್ತಮಾನ ತಿಳಿಸಲಿ” ಎಂದು ಹೇಳಿದಿರಿ. 23 ಅದು ಒಳ್ಳೆಯ ಆಲೋಚನೆಯೆಂದು ನಾನು ತಿಳಿದುಕೊಂಡು ನಿಮ್ಮಲ್ಲಿ ಕುಲಕ್ಕೆ ಒಬ್ಬೊಬ್ಬನಂತೆ ಹನ್ನೆರಡು ಜನರನ್ನು ಆರಿಸಿಕೊಂಡೆನು. 24 ಅವರು ಹೋಗಿ ಆ ಬೆಟ್ಟದ ಸೀಮೆಯನ್ನು ಹತ್ತಿ, ಎಷ್ಕೋಲ್ ಎಂಬ ತಗ್ಗಿನ ಬಳಿಗೆ ಬಂದು ಆ ಪ್ರದೇಶದಲ್ಲಿ ಸಂಚರಿಸಿ ನೋಡಿದರು. 25 ಅವರು ಅಲ್ಲಿನ ಹಣ್ಣುಗಳಲ್ಲಿ ಕೆಲವನ್ನು ತಂದು ತೋರಿಸಿ, “ನಮ್ಮ ದೇವರಾದ ಯೆಹೋವನು ನಮಗೆ ಕೊಡುವ ಆ ದೇಶವು ಒಳ್ಳೆಯ ದೇಶ” ಎಂದು ನಮಗೆ ತಿಳಿಸಿದರು.
ಕರ್ತನಿಗೆ ವಿರುದ್ಧ ದಂಗೆ ಎದ್ದದನ್ನು ನೆನಪಿಸಿದ್ದು
26 ಆದರೂ ನೀವು ಬೆಟ್ಟವನ್ನು ಹತ್ತಿ ನೋಡಲು ಇಷ್ಟಪಡದೆ ನಿಮ್ಮ ದೇವರಾದ ಯೆಹೋವನ ಆಜ್ಞೆಯನ್ನು ಉಲ್ಲಂಘಿಸಿದಿರಿ. 27 ನೀವು ನಿಮ್ಮ ಡೇರೆಗಳಲ್ಲಿ ಗುಣುಗುಟ್ಟುತ್ತಾ, “ಯೆಹೋವನು ನಮ್ಮನ್ನು ಐಗುಪ್ತದೇಶದಿಂದ ಬರಮಾಡಿದ್ದು ಹಗೆತನದಿಂದಲೇ; ಆತನು ನಮ್ಮನ್ನು ಸಂಹರಿಸಬೇಕೆಂದು ಅಮೋರಿಯರ ಕೈಗೆ ಒಪ್ಪಿಸುತ್ತಾನೆ. 28 ನಾವು ಹೋಗಬೇಕಾದ ಆ ಸೀಮೆ ಎಂಥದೆಂದು ಆಲೋಚಿಸಿರಿ; ಅಲ್ಲಿ ಹೋಗಿದ್ದ ನಮ್ಮ ಸಹೋದರರು ನಮಗೆ, ‘ಆ ದೇಶದ ಜನರು ನಮಗಿಂತ ಬಲಿಷ್ಠರಾಗಿಯೂ ಮತ್ತು ಎತ್ತರವಾಗಿಯೂ ಇದ್ದಾರೆ. ಅವರಿರುವ ಪಟ್ಟಣಗಳು ದೊಡ್ಡದಾಗಿಯೂ ಮತ್ತು ಆಕಾಶವನ್ನು ಮುಟ್ಟುವ ಕೋಟೆಕೊತ್ತಲುಗಳಿಂದ ಇವೆ. ಅಲ್ಲಿ ನಾವು ಎತ್ತರವಾದ ಪುರುಷರನ್ನು ಅಂದರೆ ಅನಾಕೀಮ್ ವಂಶಸ್ಥರ ಮಕ್ಕಳನ್ನು ನೋಡಿದ್ದೇವೆ’ ಎಂದು ಹೇಳಿ ನಮ್ಮ ಧೈರ್ಯವನ್ನು ಕೆಡಿಸಿದ್ದಾರೆ” ಅಂದುಕೊಳ್ಳುತ್ತಿದ್ದಿರಿ.
29 ಅದಕ್ಕೆ ನಾನು, “ಕಳವಳಪಡಬೇಡಿರಿ, ಅವರಿಗೆ ಭಯಪಡಬೇಡಿರಿ. 30 ನಿಮ್ಮ ಮುಂದೆ ಮಾರ್ಗದರ್ಶಕನಾಗಿ ಹೋಗುವ ನಿಮ್ಮ ದೇವರಾದ ಯೆಹೋವನು ಐಗುಪ್ತ ದೇಶದಲ್ಲಿಯೂ, ನೀವು ನೋಡಿದ ಅರಣ್ಯದಲ್ಲಿಯೂ ಪ್ರತ್ಯಕ್ಷನಾಗಿ ನಿಮಗೋಸ್ಕರ ಯುದ್ಧಮಾಡಿದಂತೆಯೇ ಈಗಲೂ ನಿಮ್ಮವನಾಗಿ ಯುದ್ಧಮಾಡುವನು. 31 ನೀವು ಈ ಸ್ಥಳಕ್ಕೆ ಸೇರುವ ತನಕ ನಿಮ್ಮ ಪ್ರಯಾಣದಲ್ಲೆಲ್ಲಾ ಒಬ್ಬ ತಂದೆ ತನ್ನ ಮಗನನ್ನು ಹೇಗೆ ಮುನ್ನಡೆಸುತ್ತಾನೋ ಹಾಗೆಯೇ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಹೊತ್ತನಲ್ಲವೇ?” ಎಂದು ನಿಮಗೆ ಹೇಳಿದೆನು.
32 ಆದರೂ ನೀವು ನಿಮ್ಮ ದೇವರಾದ ಯೆಹೋವನನ್ನು ನಂಬಲೇ ಇಲ್ಲ. 33 ನೀವು ಹೋಗಬೇಕಾದ ದಾರಿಯನ್ನು ತೋರಿಸುವುದಕ್ಕೂ, ದಂಡು ಇಳಿಯಬೇಕಾದ ಸ್ಥಳಗಳನ್ನು ಗೊತ್ತುಮಾಡುವುದಕ್ಕೂ ರಾತ್ರಿಯಲ್ಲಿ ಬೆಂಕಿಯೋಪಾದಿಯಲ್ಲಿಯೂ ಮತ್ತು ಹಗಲಿನಲ್ಲಿ ಮೇಘದೋಪಾದಿಯಲ್ಲಿಯೂ ನಿಮ್ಮ ಮಾರ್ಗದಲ್ಲಿ ನಿಮ್ಮನ್ನು ಮುನ್ನಡೆಸಿದ ದೇವರನ್ನು ನೀವು ನಂಬಲಿಲ್ಲ. 34 ಯೆಹೋವನು ನಿಮ್ಮ ಮಾತುಗಳನ್ನು ಕೇಳಿ ಕೋಪಗೊಂಡನು. 35 ಆತನು, “ನಿಮ್ಮ ಪೂರ್ವಿಕರಿಗೆ ವಾಗ್ದಾನಮಾಡಿದ ಆ ಒಳ್ಳೇ ದೇಶವನ್ನು ಈ ದುಷ್ಟ ಸಂತತಿಯವರಲ್ಲಿ ಯಾರೂ ನೋಡುವುದಿಲ್ಲ” ಎಂದು ಪ್ರಮಾಣಮಾಡಿದನು. 36 ಮತ್ತು ಯೆಹೋವನು “ಯೆಫುನ್ನೆಯ ಮಗನಾದ ಕಾಲೇಬನೊಬ್ಬನೇ ಯೆಹೋವನನ್ನು ಮನಃಪೂರ್ವಕವಾಗಿ ಅನುಸರಿಸಿದ್ದರಿಂದ, ಅವನೇ ಅದನ್ನು ನೋಡುವನು. ಅವನು ಸಂಚರಿಸಿದ ಪ್ರದೇಶವನ್ನು ಅವನಿಗೂ ಮತ್ತು ಅವನ ಸಂತತಿಯವರಿಗೂ ಕೊಡುವೆನು” ಎಂದು ಹೇಳಿದನು. 37 ಅದು ಮಾತ್ರವಲ್ಲದೆ ಯೆಹೋವನು ನಿಮ್ಮಿಂದ ನನ್ನ ಮೇಲೆಯೂ ಕೋಪಗೊಂಡು, “ನೀನೂ ಆ ದೇಶಕ್ಕೆ ಸೇರುವುದಿಲ್ಲ; 38 ಆದರೆ ನಿನ್ನ ಮುಂದೆ ನಿಂತಿರುವ ನಿನ್ನ ಸೇವಕನು, ನೂನನ ಮಗನೂ ಆದ ಯೆಹೋಶುವನು ಅಲ್ಲಿಗೆ ಸೇರುವನು. ಅವನೇ ಇಸ್ರಾಯೇಲರಿಗೆ ಆ ದೇಶವನ್ನು ಸ್ವಾಧೀನಪಡಿಸುವನು. ಆದುದರಿಂದ ಅವನನ್ನು ಧೈರ್ಯಗೊಳಿಸು. 39 ಆದರೆ ಪರರ ಪಾಲಾಗುವರೆಂದು ನೀವು ಹೇಳಿದ ನಿಮ್ಮ ಮನೆಯವರೂ ಹಾಗು ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ಅರಿಯದ ನಿಮ್ಮ ಮಕ್ಕಳೂ ಅಲ್ಲಿಗೆ ಸೇರುವರು. ಅವರಿಗೇ ಆ ದೇಶವನ್ನು ಕೊಡುವೆನು; ಅವರು ಅದನ್ನು ಸ್ವಾಧೀನಮಾಡಿಕೊಳ್ಳುವರು. 40 ನೀವಾದರೋ ಹಿಂದಿರುಗಿ ಕೆಂಪು ಸಮುದ್ರದ ಮಾರ್ಗವನ್ನು ಹಿಡಿದು ಅರಣ್ಯಕ್ಕೆ ಹೊರಟುಹೋಗಿರಿ” ಎಂದು ಆಜ್ಞಾಪಿಸಿದನು.
41 ಅದಕ್ಕೆ ನೀವು, “ನಾವು ಯೆಹೋವನಿಗೆ ದ್ರೋಹಿಗಳಾದೆವು. ಆದರೂ ನಮ್ಮ ದೇವರಾದ ಯೆಹೋವನು ಆಜ್ಞಾಪಿಸಿದಂತೆ ನಾವೇ ಈಗ ಆ ಬೆಟ್ಟದ ಸೀಮೆಯನ್ನು ಹತ್ತಿ ಯುದ್ಧಮಾಡುವೆವು” ಎಂದು ಉತ್ತರಕೊಟ್ಟಿರಿ. ಮತ್ತು ನೀವೆಲ್ಲರೂ ನಿಮ್ಮ ನಿಮ್ಮ ಆಯುಧಗಳನ್ನು ತೆಗೆದುಕೊಂಡು, ಆ ಬೆಟ್ಟದ ಸೀಮೆಯನ್ನು ಹತ್ತಿ ಜಯಿಸುವುದು ಅಲ್ಪಕಾರ್ಯವೆಂದು ಭಾವಿಸಿ ಹೊರಡುವುದಕ್ಕಿದ್ದಿರಿ. 42 ಆದರೆ ಯೆಹೋವನು ನನಗೆ, “ನಾನು ಇವರ ಮಧ್ಯದಲ್ಲಿ ಇರುವುದಿಲ್ಲವಾದುದರಿಂದ ಇವರು ಸೋತುಹೋಗುವರು. ಇವರು ಯುದ್ಧಮಾಡಲೂ ಬಾರದು, ಆ ಬೆಟ್ಟದ ಸೀಮೆಗೆ ಹೋಗಲೂ ಬಾರದು ಎಂದು ಇವರಿಗೆ ಆಜ್ಞಾಪಿಸು” ಎಂದು ಹೇಳಿದನು.
43 ನಾನು ಆ ಮಾತನ್ನು ನಿಮಗೆ ತಿಳಿಸಿದರೂ, ನೀವು ಕಿವಿಗೊಡದೆ ಯೆಹೋವನ ಆಜ್ಞೆಯನ್ನು ತಾತ್ಸಾರಮಾಡಿ ಸೊಕ್ಕಿನಿಂದ ಆ ಬೆಟ್ಟವನ್ನು ಹತ್ತಿದಿರಿ. 44 ಆಗ ಬೆಟ್ಟದಲ್ಲಿದ್ದ ಅಮೋರಿಯರು ನಿಮಗೆ ವಿರುದ್ಧವಾಗಿ ಹೊರಟು ಜೇನುಹುಳಗಳಂತೆ ನಿಮ್ಮನ್ನು ಮುತ್ತಿ ಸೇಯೀರಿನಲ್ಲಿ ಹೊರ್ಮದ ವರೆಗೂ ಬೆನ್ನಟ್ಟಿ ಸಂಹರಿಸಿದರು. 45 ನೀವು ಹಿಂದಿರುಗಿ ಬಂದು ಯೆಹೋವನ ಮುಂದೆ ಗೋಳಾಡಿದಾಗ ಆತನು ನಿಮ್ಮ ಮೊರೆಯನ್ನು ಕೇಳಲೂ ಇಲ್ಲ ಮತ್ತು ರಕ್ಷಿಸಲೂ ಇಲ್ಲ.
46 ಆ ಮೇಲೆ ನೀವು ಕಾದೇಶಿನಲ್ಲಿ ಬಹುಕಾಲ ವಾಸವಾಗಿದ್ದಿರಿ ಎಂದು ಹೇಳಿದನು.

*1:1 1:1 ಯೊರ್ದನ್ ಹೊಳೆಯ ಪೂರ್ವದಿಕ್ಕಿನ ಕಡೆ.